ಇದು ಕನ್ನಡ ವಿ.ವಿ. ವಿಚಾರ ಸಂಕಿರಣ ಒಂದರಲ್ಲಿ ಮಂಡಿಸಿದ ಪ್ರಬಂಧ
ಇಂಗ್ಲಿಶ್ ಶಿಕ್ಷಣ ಪದ್ಧತಿ ಆರಂಭಗೊಂಡ ಬೆನ್ನಲ್ಲೆ ನಮ್ಮಲ್ಲಿ ಹಲವು ಶಿಕ್ಷಣ ವಿಷಯಗಳು ರೂಪಗೊಳ್ಳಲು ತೊಡಗಿದವು. ಇದನ್ನು ಶೈಕ್ಷಣಿಕ ಶಿಸ್ತೀಕರಣ ಪ್ರಕ್ರಿಯೆ ಎಂದು ಕರೆಯಬಹುದು. ಇದರ ಅಂಗವಾಗಿ ಹಲವಾರು ಶೈಕ್ಷಣಿಕ ಶಿಸ್ತುಗಳು 19-20ನೆ ಶತಮಾನದಲ್ಲಿ ಹುಟ್ಟಿದವು. ಸಾಹಿತ್ಯ ವಿಮರ್ಶೆ ಕೂಡ ಇಂತಹ ಚಾರಿತ್ರಿಕ ಒತ್ತಡದಲ್ಲಿ ರೂಪಗೊಂಡ ಒಂದು ಶಿಸ್ತು. ಆಧುನಿಕ ಪೂರ್ವ ಸಂದರ್ಭದಲ್ಲಿ ಇದು ಒಂದು ಸಾಹಿತ್ಯದ ಅನುಸಂಧಾನವಾಗಿ ಚಾಲ್ತಿಯಲ್ಲಿತ್ತು. ಟೀಕು, ಸಂಪಾದನೆ, ಹರಿಕತೆ, ತಾಳಮದ್ದಲೆ, ಗಮಕ, ವಾಚನ, ಅಧ್ಯಯನ, ಪಾರಾಯಣ, ಕೇಳಿಕೆ (ತತ್ವಕ್ಕೆ ಹಾಕುವುದು) ಹೀಗೆ ಹತ್ತು ಹಲವು ರೀತಿಗಳಲ್ಲಿದ್ದ ಸಾಹಿತ್ಯದ ಅನುಸಂಧಾನಗಳು ತಮ್ಮ ಪಾತ್ರವನ್ನು ಕ್ರಮೇಣ ತಗ್ಗಿಸಿಕೊಳ್ಳತೊಡಗಿದವು. 19-20ನೆ ಶತಮಾನಗಳಲ್ಲಿ ನಿಧಾನವಾಗಿ ಸಾಹಿತ್ಯದ ಅನುಸಂಧಾನ ಚಟುವಟಿಕೆಗಳು ಅಲಕ್ಷ್ಯಕ್ಕೆ ಸಲ್ಲತೊಡಗಿದವು. ವಿಮರ್ಶೆಯು ಒಂದು ಎಲಿಟಿಸ್ಟ್ ಮತ್ತು ಅಕಡೆಮಿಕ್ ಶಿಸ್ತಾಗಿ ಸ್ಥಾನ ಪಡೆದುಕೊಳ್ಳತೊಡಗಿತು. ಪಂಡಿತರ ದಲ್ಲಾಳಿತನ ಹೆಚ್ಚಾಯಿತು. ಸಾಹಿತ್ಯವು ಶಿಷ್ಟ-ಜಾನಪದವೆಂದು ಒಡೆದುಹೋಯಿತು. ಇಂದು ಗದ್ಯಪ್ರಬಂಧ ರೂಪಿಯಾಗಿ ಚಾಲ್ತಿಯಲ್ಲಿರುವ ಸಾಹಿತ್ಯ ವಿಮರ್ಶೆ ಮಾತ್ರವೆ ವಿಮರ್ಶೆ ಅಲ್ಲ. ನಮ್ಮ ವಿಮರ್ಶೆ ಎನ್ನುವುದು ಸಾಹಿತ್ಯದ ಅನುಸಂಧಾನವಾಗಿ, ಸಂಸ್ಕೃತಿ ಕಥನವಾಗಿ ಹಲವು ರೂಪಗಳಲ್ಲಿ ಹಿಂದೆಯೂ ಇತ್ತು ಈಗಲೂ ಇದೆ. ಆಗುತ್ತಿದೆ.2 ಆದರೆ ಇದನ್ನು ಅಕಡೆಮಿಕ್ ಎಲಿಟಿಸ್ಟ್ ಚಟುವಚಟಿಕೆ ಮಾತ್ರ ಆಗುವುದನ್ನು ತಪ್ಪಿಸಿ, ಸಾಮಾನ್ಯರ ಅನುಸಂಧಾನ ಆಗುವಂತೆ ಮಾಡಬೇಕಿದೆ.
ನಮ್ಮ ವಿಮರ್ಶೆಯ ಮುಖ್ಯವಾದ ಒಂದು ಚಹರೆಯೆಂದರೆ ಇದು ಯಾವುದೇ ಒಂದು ನಿರ್ಧಿಷ್ಟ ಸಿದ್ಧಾಂತ ಅಥವಾ ಮಾನದಂಡದ ಚಟುವಟಿಕೆ ಅಲ್ಲ ಎನ್ನುವುದು. ಹಲವು ಸಿದ್ಧಾಂತ, ಹಲವು ಮಾನದಂಡ, ಹಲವು ದೃಷ್ಟಿಕೋನಗಳನ್ನು ಯಾದೃಚ್ಛಿಕವಾಗಿ ಬಳಸುತ್ತಾ ತಮ್ಮದೇ ನಿರ್ಣಯ, ಅಭಿಪ್ರಾಯ, ರುಚಿ ಮಂಡನೆಗಳಿಗೆ ತೊಡಗುವುದೇ ನಮ್ಮ ವಿಮಶರ್ೆಯ ಬಹು ಮುಖ್ಯ ಚಹರೆಯಾಗಿದೆ. ಸಿದ್ಧಾಂತಗಳ ಪ್ರಯೋಗ-ಪರೀಕ್ಷೆ-ಪ್ರಾತ್ಯಕ್ಷಿಕೆಗಳಾಗಿ ಒಂದೊ ಎರಡೊ ಸಿದ್ಧಾಂತವಾದಿ ವಿಮಶರ್ೆಗಳು ನಮ್ಮಲ್ಲಿ ನಡೆದಿರಬಹುದಾದರೂ ಯಾವುದೇ ಒಂದು ಸಿದ್ಧಾಂತ, ಮಾರ್ಗಕ್ಕೆ ಕಟ್ಟುಬಿದ್ದ ಪಂಥವಾದಿ ವಿಮರ್ಶೆ ಎಂಬುದು ನಮ್ಮಲ್ಲಿಲ್ಲ. ಹಾಗೆ ಇದ್ದರೂ ಅವು ಕೇವಲ ನಾಮಕೇವಾಸ್ತೆ ಎಂಬಂತೆ ಶೀರ್ಶಿಕೆವಾಸ್ತೆ ಇವೆ.ವಿಮರ್ಶೆಗಾಗಿ ಹುಟ್ಟಿದ ವಿಮರ್ಶೆಗಳಾಗಿ ಇವೆ.
ಇಂದಿನ ನಮ್ಮ ವಿಮರ್ಶೆಯು ಹಲವು ಸಾಹಿತ್ಯ ಪ್ರಕಾರಗಳಂತೆ ತಾನೂ ಒಂದು ಸಾಹಿತ್ಯ ಪ್ರಕಾರವೋ? ಇದು ಪ್ರಕಾರ ಅಷ್ಟೆ ಅಲ್ಲ, ಇಂದು ಇದು ಹಲವು ಸಾಹಿತ್ಯ ಪ್ರಕಾರಗಳನ್ನೂ ಮತ್ತು ತನ್ನದೇ ಹಲವು ಕವಲುಗಳನ್ನೂ ಹೊಂದಿರುವ ಒಂದು ಅಧ್ಯಯನ ಶಿಸ್ತಾಗಿ, ಜ್ಞಾನಶಿಸ್ತಾಗಿ ಕೂಡ ಬೆಳೆದಿದೆ. ಮತ್ತು ಬೆಳೆಯುತ್ತಿದೆ.
ವಿಮರ್ಶೆ ಎಂದರೆ ಏನು? ವಿಮರ್ಶೆಯ ಕಾರ್ಯ ಯಾವುದು? ಎಂಬ ಪ್ರಶ್ನೆಗಳೆಲ್ಲ 'ಒಟ್ಟಾರೆ'ಯಾದ 'ಒಂದು ಅಂತಿಮ' ವ್ಯಾಖ್ಯೆಯನ್ನು ಅಪೇಕ್ಷಿಸುವ ಪ್ರಶ್ನೆಗಳು. ಆದರೆ ಹೀಗೆ ಅವನ್ನು ಒಂದು ವ್ಯಾಖ್ಯೆಯಲ್ಲಿ ಕಟ್ಟಿಕೊಳ್ಳಲು ಆಗುವುದಿಲ್ಲ. ಯಾವ 'ಒಂದು' ವ್ಯಾಖ್ಯೆಯೂ ಅದು ವಿಮರ್ಶೆಯ ಆಂಶಿಕ ವ್ಯಾಖ್ಯೆಯೆ ಆಗಿರುತ್ತದೆ. ಹಾಗಾಗಿ ವಿಮರ್ಶೆಯ ಕಾರ್ಯಗಳು ಮತ್ತು ಸ್ವರೂಪಗಳನ್ನು ಅದು ಸಂಭವಿಸುತ್ತ ಬಂದಿರುವ ಚರಿತ್ರೆಯನ್ನು ಅವಲೋಕಿಸುವ ಮೂಲಕವೆ ನಿರ್ವಚಿಸಿಕೊಳ್ಳಬೇಕಾಗಿದೆ. ಇದೂ ಕೂಡ ಅಂತಿಮವಲ್ಲ. ತತ್ಕಾಲದ್ದು. ವಿಮರ್ಶೆಯು ನಿತ್ಯನಿರಂತರವಾಗಿ ಜರುಗುತ್ತಿರುವ ಕಾರ್ಯವಾದ್ದರಿಂದ, ಸಾಹಿತ್ಯವು ನಿರಂತರ ಚಲಶೀಲ ಆದುದರಿಂದ ವಿಮರ್ಶೆಯ ಸ್ವರೂಪಗಳು ಮತ್ತು ಕಾರ್ಯಗಳು ಕೂಡ ನಿತ್ಯ ಚಲನಶೀಲವೆ ಆಗಿವೆ. ವಿಮರ್ಶೆ ಎಂಬುದು ಆಚರಣೆಗಳ ಮೂಲಕವೆ ಮತ್ತೆ ಮತ್ತೆ ತನ್ನನ್ನು ತಾನು ಮರುನಿರ್ವಚಿಸಿಕೊಳ್ಳುತ್ತ ಇರುತ್ತದೆ.
ಸಮಾಜವು ಹೇಗೆ ನಿತ್ಯ ಚಲನಶೀಲವಾದುದೋ ಹಾಗೆಯೆ ವಿಮರ್ಶೆಯು ಕೂಡ ನಿತ್ಯ ಚಲನಶೀಲವಾದುದು. ಸಾಹಿತ್ಯವು ಹೊಸಹೊಸತಾಗಿ ಸಂಭವಿಸುವಂತೆಯೆ ಅದರ ಅನುಸಂಧಾನವೂ ಹೊಸತಾಗುತ್ತಿರುತ್ತದೆ. ಇದರಿಂದ ವಿಮರ್ಶೆವಿಮರ್ಶೆಯಲ್ಲಿ ಹೊಸ ಹೊಸ ಪರಿಭಾಷೆ-ವಿಧಾನಗಳು ಹುಟ್ಟುತ್ತಲೆ ಇರುತ್ತವೆ. ಹಳೆಯ ವಿಧಾನ-ಪರಿಕಲ್ಪನೆ-ಪರಿಬಾಷೆಗಳು ರೂಪಾಂತರಗೊಳ್ಳುತ್ತ ಇರುತ್ತವೆ. ಹಳೆಯವು ಸಂಪೂರ್ಣ ಇಲ್ಲವಾಗುವುದಿಲ್ಲವಲ್ಲ! ಇದರಿಂದ ಪರಿಭಾಷೆಯ-ಸಿದ್ಧಾಂತಗಳ ಕಗ್ಗಾಡೊಂದೆ ಸೃಷ್ಟಿಯಾಗುತ್ತದೆ. ಕಗ್ಗಾಡಿಗೆ ಹೊಸದಾಗಿ ಪ್ರವೇಶಿಸುವವರಿಗೆ ಭಯವಾಗುವುದು ಸಹಜ. ಹಳೆಯದೆಲ್ಲ ಚಿನ್ನವೆಂದು ಭಾವಿಸುವ ಚಾಳಿಯೊಂದು ನಮ್ಮ ಸಾಹಿತ್ಯ ಶಿಕ್ಷಾವಲಯದಲ್ಲಿ ಇದೆ. ಅದರಲ್ಲು ಕನ್ನಡ ಸಾಹಿತ್ಯವನ್ನು ಶಿಕ್ಷಣದ ಪಠ್ಯವಾಗಿ ಕಲಿಸುವಲ್ಲಿ ನಮ್ಮವರು ಹಳೆಯದನ್ನು ಬಿಟ್ಟುಕೊಡಲು ಯಾವಾಗಲು ಸಿದ್ಧರಿಲ್ಲ. (ಹಾಗಾಗಿಯೆ ಪಠ್ಯಕ್ರಮದಲ್ಲಿ ಕೇಶೀರಾಜ ಇಲ್ಲವೆಂದರೆ ನಮ್ಮವರಿಗೆ ಬಹಳ ದುಃಖವಾಗುತ್ತದೆ.) ವಿಮರ್ಶೆ-ಕಾವ್ಯಮೀಮಾಂಸೆಗಳ ವಿಚಾರದಲ್ಲಂತು ಇದು ಅಪ್ಪಟ ನಿಜ. ಸಾಹಿತ್ಯಕ್ಕೆ ಬೇಕಾದ ಹೊಸ ಅನುಸಂಧಾನ ಕ್ರಮಗಳನ್ನು ಸೃಜಿಸಿಕೊಳ್ಳುವ ಕೌಶಲ್ಯಕ್ಕಿಂತ ಸಿದ್ಧಗೊಂಡ ವಿಮರ್ಶೆಯ ಪರಿಭಾಷೆ-ವಿಧಾನ-ಸಿದ್ಧಾಂತಗಳನ್ನು ವಿದ್ಯಾರ್ಥಿಯು ಉರುಹೊಡೆದು ಅರಗಿಸಿಕೊಳ್ಳಬೇಕಾದ ವಾತಾವರಣ ನಮ್ಮಲ್ಲಿದೆ. ಹೊಸತನ್ನು ಸೃಷ್ಟಿಸುವ ಸ್ವಾತಂತ್ರ್ಯಕ್ಕಿಂತ ಚರಿತ್ರೆಯನ್ನು ಹೊರುವ, ಹಳತನ್ನೆ ಕಲಿತು ಅನ್ವಯಿಸುವ ನಿರ್ಬಂಧಗಳು ನಮ್ಮಲ್ಲಿವೆ. ಹೀಗಾಗಿ ನಮ್ಮ ತರುಣ ಪೀಳಿಗೆ ವಿಮರ್ಶೆವಲಯಕ್ಕೆ ಬಂದ ಕೂಡಲೆ ಭಯಬೀಳುತ್ತದೆ. ಈ 'ಬಿದ್ದಬೀಳು' ತೆಗೆಯುವ ಕೆಲಸ ಇಂದು ಅಗತ್ಯವಾಗಿ ಆಗಬೇಕಾಗಿದೆ.
ಪರಿಭಾಷೆ-ಸಿದ್ಧಾಂತಗಳ ಭಯೋತ್ಪಾದನೆಯಿಂದ (ಖಿಜಡಿಡಿಠಡಿ ಠಜಿ ಣಜಡಿಟ ಚಿಟಿಜ ಟ) ನಮ್ಮ ವಿಮರ್ಶೆ ಬಿಡುಗಡೆ ಪಡೆಯಬೇಕಿದೆ. ಅಪಾರವಾದ ಶೈಕ್ಷಣಿಕ ಅರ್ಥಹಿಂಸೆಯು (ಊಜಡಿಟಚಿಟಿಣಣಛಿಚಿಟ ತಠಟಜಟಿಛಿಜ) ನಮ್ಮಲ್ಲಿಂದು ಸೃಷ್ಟಿಯಾಗಿದೆ. ಸೃಷ್ಟಿಯಾಗುತ್ತಾ ಇದೆ. ಆತ್ಮಸಿದ್ಧ ಓದಿಗಿಂತ ರೆಡಿಮೇಡ್ ಓದುಗಳೇ ತುಂಬಿಕೊಂಡುಬಿಟ್ಟಿವೆ. ಇದರಿಂದಲು ನಮ್ಮ ತರುಣ ಪೀಳಿಗೆಗೆ ಬಿಡುಗಡೆ ಬೇಕಿದೆ. ವಿಮರ್ಶೆಯನ್ನು ಪಂಡಿತಮಾನ್ಯ ಚಟುವಟಿಕೆ ಎಂಬ ಹಣೆಪಟ್ಟಿಯಿಂದ ಬಿಡುಗಡೆ ಮಾಡಬೇಕಾಗಿದೆ. ಸಾಹಿತ್ಯದ ವಿಮರ್ಶೆಯನ್ನು ಬೌದ್ಧಿಕ ಅರ್ಥವ್ಯಖ್ಯಾನದಿಂದ ಸಾಹಿತ್ಯಕ ಅನುಸಂಧಾನವನ್ನಾಗಿ ಬದಲಿಸಬೇಕಾಗಿದೆ. ನಮ್ಮ ಹಳೆ ಸಂಪಾದನೆ, ತಾಳಮದ್ದಲೆ, ಟೀಕು, ಗಮಕ, ಹರಿಕತೆ, ಕೇಳಿಕೆ, ಪಾರಾಯಣ, ಅಧ್ಯಯನ, ಪಠಣ ಇತ್ಯಾದಿಗಳಿಂದ ಸ್ಪೂರ್ತಗೊಂಡು ಇಂದಿನ ಅಗತ್ಯಗಳಿಗೆ ತಕ್ಕಂತೆ ನವೀನ ಅನುಸಂಧಾನಗಳನ್ನು ಹುಟ್ಟಿಸಿಕೊಳ್ಳಬೇಕಿದೆ. ನಮ್ಮ ವಿಮರ್ಶೆ ಎದುರಿಸಬೇಕಿರುವ ಬಹು ತುರ್ತಾದ ಸವಾಲುಗಳಲ್ಲಿ ಇದು ಒಂದು.
* * *
ಇನ್ನು ಪೀಠಿಕೆ ಸಾಕು; ಪ್ರಕಾರವಿಮಶರ್ೆಗೆ ಬರೋಣ. ಬರೆಯಲು ಹೊರಡುವ ಲೇಖಕ ತಾನು ಬರೆಯುವ ಪ್ರಕಾರದ ಬಗ್ಗೆ ಸದಾ ಜಾಗ್ರತನಾಗಿ ಇರುತ್ತಾನೆ. ಪ್ರಕಾರದ ಆಯ್ಕೆ ಮತ್ತು ನಿರ್ವಹಣೆ, ಹೊಸ ಪ್ರಕಾರದ ಸೃಷ್ಟಿ ಇಲ್ಲೆಲ್ಲ ಲೇಖಕ ಜಾಗ್ರತನಾಗಿ ಇರಲೇಬೇಕಾಗುತ್ತದೆ. ಅವನು ಏನಾದರೂ ಬರೆಯಲಿ ಆಮೇಲೆ ಅದು ಒಂದು ಪ್ರಕಾರವಾಗಿಯೆ ನಿರ್ವಚಿತಗೊಳ್ಳುತ್ತದೆ. ಅಲ್ಲದೆ ಯಾವುದೇ ಸಾಹಿತ್ಯ ಕೃತಿಯನ್ನು ನಾವು ಓದಲು ಕೈಗೆತ್ತಿಕೊಂಡಾಗ ನಮ್ಮ ಆಂತರ್ಯದಲ್ಲಿ ನಾವು ಕಾವ್ಯವನ್ನು ಓದುತ್ತಿದ್ದೇವೆ, ಕಾದಂಬರಿಯನ್ನು, ಕತೆಯನ್ನು, ವಿಮರ್ಶೆಯನ್ನು ಓದುತ್ತಿದ್ದೇವೆ ಎಂಬ ಪ್ರಾಥಮಿಕ ಅರಿವಿನಿಂದಲೆ ಓದಲು ತೊಡಗುತ್ತೇವೆ. ಹೀಗಾಗಿ ಪ್ರತಿ ಓದಿನಲ್ಲೂ ಪ್ರಕಾರ ಪ್ರಜ್ಞೆ ಜಾಗ್ರತವಾಗಿ ಇದ್ದೇ ಇರುತ್ತದೆ. ಅಷ್ಟೆ ಅಲ್ಲ ಸಾಹಿತ್ಯ ಪಠ್ಯದ ಪ್ರತಿಯೊಂದು ಓದಿನಲ್ಲಿಯೂ ಅದರ ಪ್ರಕಾರವು ಭಂಗಗೊಳ್ಳುತ್ತಿರುತ್ತದೆ. ಅನುಭವವಾಗಿಯೊ, ಅರ್ಥವಾಗಿಯೊ, ಕಥನ, ಆನಂದ, ನಾದದ ಆಟ, ತತ್ವ, ವಿಚಾರದರ್ಶನ ಹೀಗೆ ಏನಾದರೊಂದಾಗಿ ಅಥವ ಈ ಹಲವಾಗಿ ಓದಿನಲ್ಲಿ ಪ್ರಕಾರವು ರೂಪಾಂತರಗೊಳ್ಳುತ್ತಿರುತ್ತದೆ. ಹಾಗಾಗಿ ಪ್ರಕಾರ ಕೂಡ ನಿರಚಿಸಲೆಂದೆ ಇರುವ ಒಂದು ಆಕೃತಿ. ಆಕೃತಿಯೆಂದರೆ ಅದು ಆಶಯದ ಅವಳಿ ವೈರುಧ್ಯವಲ್ಲ. ಅದು ಪ್ರಕಾರವು ಪ್ರಕಟ ಆಗಬಹುದಾದ, ಹಲವು ಆಶಯಗಳನ್ನು ಧರಿಸಬಹುದಾದ ರೂಪಸಾಧ್ಯತೆ. ಹಾಗಾಗಿ ಸಾಹಿತ್ಯದ ರೂಪ ಮತ್ತು ಪ್ರಕಾರದ ನಡುವೆ ಒಂದು ಅನೋನ್ಯವಾದ ಸಂಬಂಧವಿದೆ.
ಪ್ರಕಾರವನ್ನೆ ಆಧರಿಸಿ ನಮ್ಮಲ್ಲಿ ಸಾಕಷ್ಟು ವಿಮರ್ಶೆ ಸಂಭವಿಸಿದೆ. ಪ್ರಕಾರ ಕೇಂದ್ರಿತ ವಿಮರ್ಶೆಯು ನಮ್ಮಲ್ಲಿ ಒಂದು ಸ್ವತಂತ್ರ ಪಂಥವಾಗಿ ಇನ್ನೂ ಕ್ರೋಡೀಕರಣಗೊಂಡಿಲ್ಲ. ಇದು ಒಂದು ವ್ಯಾಪಕವಾದ ದೃಷ್ಟಿಕೋನವಾಗಿ ನಮ್ಮಲ್ಲಿ ಬಳಕೆಯಲ್ಲಿದೆ. ತೌಲನಿಕ ಪಂಥ, ಅಧ್ಯಯನ ಪಂಥ (ಸಂಶೋಧನೆ), ಚರಿತ್ರೆ ಪಂಥ ಹೀಗೆ ಹತ್ತು ಹಲವು ವಿಮಶರ್ಾ ಪಂಥಗಳಲ್ಲಿ ಅಂತಸ್ತ ದೃಷ್ಟಿಯಾಗಿ ಪ್ರಕಾರದೃಷ್ಟಿಯು ಬಳಕೆಯಾಗುತ್ತ ಬಂದಿದೆ.3 ಕನ್ನಡ ವಿಮಶರ್ೆಯ ಒಂದು ಮುಖ್ಯ ಪಂಥವಾಗಿ ಪ್ರಕಾರಕೇಂದ್ರಿತ ವಿಮರ್ಶೆಯು ನಮ್ಮಲ್ಲಿ ಈಗಾಗಲೇ ಸಿದ್ಧಗೊಂಡ ರೂಪದಲ್ಲಿ ಇಲ್ಲ. ಆದರೆ ಈ ದೃಷ್ಟಿಯಲ್ಲಿ ಸಂಭವಿಸಿರುವ ಎಲ್ಲ ವಿಮರ್ಶೆ ಚಟುವಟಿಕೆಗಳನ್ನು ನಾವು ಕಟ್ಟಿಕೊಂಡು ಅದನ್ನೆ ಪ್ರಕಾರಕೇಂದ್ರಿತ ಪಂಥ ಎಂದು ಕರೆದುಕೊಳ್ಳಬಹುದು.
ಬೇಂದ್ರೆಯವರು ಕನ್ನಡ ಸಾಹಿತ್ಯದ ನಾಲ್ಕು ನಾಯಕರತ್ನಗಳ ಬಗೆಗೆ ಮಾತನಾಡುತ್ತ, ಲಕ್ಷ್ಮೀಶನ ಜೈಮಿನಿಭಾರತ ವಿಮರ್ಶಿಸುವಾಗ ಅದನ್ನು ಒಂದು ಪೌರಾಣಿಕ ಕಾದಂಬರಿ ಎಂದು ಕರೆಯುತ್ತಾರೆ. 'ಕುತೂಹಲದ ಸಂಗತಿಯೆಂದರೆ ಮಾಸ್ತಿಯವರು ಶ್ರೀರಾಮ ಪಟ್ಟಾಭಿಷೇಕದಲ್ಲಿ ಪೌರಾಣಿಕ ಕಥನವನ್ನು ಬಿಟ್ಟುಕೊಟ್ಟು ಕಾದಂಬರಿ ತಂತ್ರವನ್ನೆ ಬಳಸಿಕೊಂಡಿದ್ದಾರೆ. ತಂತ್ರದ ವಿಷಯದಲ್ಲಿ ಕಾರಂತರ ಅಳಿದಮೇಲೆಯಂಥ ಕಾದಂಬರಿಗಳನ್ನು ಹೋಲುವ ಈ ಕೃತಿಯನ್ನು ಪದ್ಯರೂಪದ ಕಾದಂಬರಿ (ನಾವೆಲ್ ಇನ್ ವರ್ಸ್) ಎಂದು ಕರೆಯಬಹುದು' ಎಂದು ಆಮೂರರು ಹೇಳುತ್ತಾರೆ.4 'ಶ್ರೀ ರಾಮಾಯಣ ದಿವ್ಯಶಿಲ್ಪಿ' ವಾಲ್ಮೀಕಿಯ ಬಗ್ಗೆ ಬರೆಯುತ್ತ ಕುವೆಂಪು 'ಅದರ ಸೂತ್ರ ಭಾವಗೀತೆಯದ್ದು ಗಾತ್ರ ಪುರಾಣದ್ದು' ಎಂದು ಹೇಳುತ್ತಾರೆ. ಶ್ಲೋಕಗಳ ಸ್ವರೂಪ ವಿಶ್ಲೇಷಣೆ ಮಾಡುತ್ತ ಕುವೆಂಪು ಈ ಮಾತು ಆಡುತ್ತಾರೆ. ಆಧುನಿಕ ಪ್ರಕಾರಪ್ರಜ್ಞೆ ಅಷ್ಟರ ಮಟ್ಟಿಗೆ ನಮ್ಮವರಲ್ಲಿ ತುಂಬಿಕೊಂಡಿದೆ ಎಂಬುದಕ್ಕೆ ಇದು ಸಾಕ್ಷಿ. ಅಂದರೆ ಒಂದಿಲ್ಲೊಂದು ರೀತಿಯಲ್ಲಿ ನಮ್ಮ ವಿಮರ್ಶನ ಪ್ರಜ್ಞೆಯಲ್ಲಿ ಪ್ರಕಾರ ಪ್ರಜ್ಞೆಯೊಂದು ಸದಾ ಜಾಗ್ರತವಾಗಿ ಇರುತ್ತ ಇದೆ. ಪ್ರಕಾರದ ಸ್ವರೂಪದ ಕುರಿತಾದ ಅವರವರ ತಿಳುವಳಿಕೆ ಅವರವರ ವಿಮರ್ಶೆಯಲ್ಲಿ ಸದಾ ಕೆಲಸ ಮಾಡುತ್ತ ಬಂದಿರುವುದನ್ನು ವಿಮರ್ಶೆಯ ಚರಿತ್ರೆಯುದ್ದಕ್ಕು ನಾವು ಕಾಣಬಹುದು.
ಈ ಪ್ರಕಾರಕೇಂದ್ರಿತ ವಿಮರ್ಶೆ ಎನ್ನುವುದೇ ಮೂಲತಃ ಕನ್ನಡ ವಿಮರ್ಶೆಯ ಒಂದು ಸಾಧ್ಯತೆ ಮತ್ತು ಮಿತಿ. ಇದು ಸಾಹಿತ್ಯವನ್ನು ನೋಡುವ ಒಂದು ವಿಮಶರ್ಾ ದೃಷ್ಟಿ ಹೇಗೋ ಹಾಗೆಯೆ ವಿಮರ್ಶೆ ಚರಿತ್ರೆಯನ್ನು ಅವಲೋಕಿಸಬಹುದಾದ ಒಂದು ದೃಷ್ಟಿಯೂ ಹೌದು. ಈ ಪ್ರಬಂಧದಲ್ಲಿ ಇದರ ಸ್ವರೂಪ, ಸಾಧ್ಯತೆ ಹಾಗೂ ಮಿತಿಗಳನ್ನು ಒಟ್ಟಿಗೆ ಕಂಡುಕೊಳ್ಳಲು ಯತ್ನಿಸಲಾಗುವುದು. ಈ ಲೇಖನದ ಉದ್ದಕ್ಕು ಆಚರಣೆಯ ತಾತ್ವೀಕರಣ ವಿಧಾನವನ್ನು ಬಳಸಲು ಉದ್ದೇಶಿಸಲಾಗಿದೆ. ಹಾಗಾಗಿ ಇಲ್ಲಿ ಕೆಲವೊಮ್ಮೆ ಬಿಡಿಯನ್ನು ಇಡಿಗೆ ಅನ್ವಯಿಸಿ ಸಾಮಾನ್ಯೀಕರಿಸುವ, ಇಡಿಯನ್ನು ಬಿಡಿ ನೆಲೆಯಲ್ಲಿ ಸಾರಾಂಶೀಕರಿಸುವ ಎರಡೂ ಅಂಚುಗಳು ವ್ಯಾಯಾಮಗೊಳ್ಳಬಹುದು. (ಸಾರಾಂಶೀಕರಣ ಮತ್ತು ಸಾಮಾನ್ಯೀಕರಣಗಳು ಕನ್ನಡ ವಿಮಶರ್ೆಯ ಯಾವತ್ತಿನ ಸಮಸ್ಯೆಗಳು ಎಂಬ ಅರಿವೂ ಈ ಲೇಖನದ ಬೆನ್ನಿಗಿದೆ)
ಪ್ರಕಾರ-ಲೇಖಕ-ಕೃತಿ ಮುಪ್ಪುರಿ ಬಂಧ
ನಮ್ಮ ವಿಮರ್ಶೆಯಲ್ಲಿ ಲೇಖಕ ಕೇಂದ್ರಿತ ವಿಮರ್ಶೆ, ಕೃತಿ ಕೇಂದ್ರಿತ ವಿಮರ್ಶೆ, ಮತ್ತು ಪ್ರಕಾರ ಕೇಂದ್ರಿತ ವಿಮರ್ಶೆಗಳಲ್ಲಿ ಒಂದು ಅನ್ಯೋನ್ಯವಾದ ಅಂತಃಸಂಬಂಧ ಇದೆ. ವೀಸೀ ಅವರ ಸಾಹಿತ್ಯ ಸಂಪ್ರದಾಯ ಹೊಸ ಮಾರ್ಗ ಎಂಬ ಕೃತಿಯಲ್ಲಿ ಪ್ರಕಾರಕೇಂದ್ರಿತ ಸಾಹಿತ್ಯ ಚಿಂತನೆಯೆ ಇದ್ದರೂ ಅಲ್ಲಿ ಲೇಖಕ ಮತ್ತು ಕೃತಿ ಹಾಗೂ ಸಂವೇದನಾಕೇಂದ್ರಿತ ದೃಷ್ಟಿಗಳೂ ಮಿಳಿತಗೊಂಡಿವೆ. ಹಾಗೇ ಕುರ್ತಕೋಟಿಯವರ ಯುಗಧರ್ಮ ಹಾಗೂ ಸಾಹಿತ್ಯ ದರ್ಶನ ಪ್ರಕಾರ ಕೇಂದ್ರಿತ ಸಾಹಿತ್ಯ ಚರಿತ್ರೆಯ ಅವಲೋಕನವಾದರೂ ಆಂತರ್ಯದಲ್ಲಿ ಅದು ಲೇಖಕ ಕೇಂದ್ರಿತ ಮತ್ತು ಕೃತಿಕೇಂದ್ರಿತ ದೃಷ್ಟಿಗಳನ್ನು ಮೇಳೈಸಿಕೊಂಡೇ ಬೆಳೆದಿದೆ. ಆಮೂರರ ಅಭಿನಂದನಾ ಗ್ರಂಥ 'ಸಹೃದಯ ಸಂವಾದ' ಕನ್ನಡ ವಿಮಶರ್ೆಯ ಪರಂಪರೆಯನ್ನು ಶೋಧಿಸುವ ಗ್ರಂಥವಾದರೂ ಇಲ್ಲಿ ಲೇಖಕ ಕೇಂದ್ರಿತ ದೃಷ್ಟಿ ಪ್ರಧಾನವಾಗಿದೆ. ಅಂದರೆ ಇದು ನಮ್ಮ ಪ್ರಕಾರಕೇಂದ್ರಿತ ವಿಮಶರ್ೆಯ ದೌರ್ಬಲ್ಯವಲ್ಲ; ಸ್ವರೂಪ. ಪ್ರಕಾರವನ್ನು ಚರ್ಚಿ ಸುವಾಗ ಅದರಲ್ಲೂ ಪ್ರಕಾರದ ಪರಂಪರೆ, ಇತಿಹಾಸಗಳನ್ನು ಚರ್ಚಿಸುವಾಗ ಆಯಾ ಪ್ರಕಾರಗಳಲ್ಲಿನ ಮುಖ್ಯ ಲೇಖಕರ ಮತ್ತು ಮುಖ್ಯ ಕೃತಿಗಳ ಅಜಮಾಸು ಮೌಲ್ಯಮಾಪನ ಸಹಜವೆಂಬಂತೆ ಇಲ್ಲಿ ಜರುಗುತ್ತದೆ. ಹಾಗಾಗಿಯೆ ನಮ್ಮ ಬಹುಪಾಲು ಸಾಹಿತ್ಯ ಚರಿತ್ರೆ ರಚನೆಗಳು ಪ್ರಕಾರ-ಲೇಖಕ-ಕೃತಿ ಈ ಮೂರರ ಮುಪ್ಪುರಿ ವಿಮರ್ಶೆಗಳೇ ಆಗಿವೆ.
ಆರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ಪ್ರಬುದ್ಧ ಕರ್ನಾಟಕ ಪತ್ರಿಕೆಗಳು ಗ್ರಂಥ ಪರೀಕ್ಷಣ, ಗ್ರಂಥ ವಿಮರ್ಶೆ ಎಂಬ ಖಾಯಂ ಪುಸ್ತಕಾವಲೋಕನಕ್ಕೆ ಸಾಕಷ್ಟು ಪ್ರಾಶಸ್ತ್ಯ ನೀಡಿದ್ದುವು. ಈ ಗ್ರಂಥ ವಿಮರ್ಶೆಗಳೆಲ್ಲ ಬಹುಪಾಲು ಪ್ರಕಾರಕೇಂದ್ರಿತ ಕೃತಿಪರೀಕ್ಷೆಗಳೇ ಆಗಿದ್ದುವು. ಕೃತಿಕೇಂದ್ರಿತ, ಕತರ್ೃ ಕೇಂದ್ರಿತ, ಪ್ರಕಾರಕೇಂದ್ರಿತ ಈ ಮೂರೂ ದೃಷ್ಟಿಗಳೂ ಇಲ್ಲಿ ಮುಪ್ಪುರಿಗೊಂಡೇ ಇರುತ್ತಿದ್ದವು. ಈಗಿನ ಬಹುತೇಕ ಪುಸ್ತಕ ವಿಮರ್ಶೆಗಳೂ ಹೀಗೇ ಇವೆ.
ಪ್ರಕಾರಗಳ ತರತಮ ಶ್ರೇಣೀಕರಣ
ಪ್ರಕಾರಗಳ ತರತಮ ಶ್ರೇಣೀಕರಣ ಕೂಡ ನಮ್ಮಲ್ಲಿ ಇದೆ. ಎಲ್ಲ ಪ್ರಕಾರಗಳಿಗಿಂತ ಕಾವ್ಯ ಶ್ರೇಷ್ಠ ಪ್ರಕಾರ ಎಂಬ ಅಲಿಖಿತ ನಂಬಿಕೆಯೊಂದು ನಮ್ಮಲ್ಲಿ ಇದೆ. ಗೋಕಾಕರು ಮಹಾಕಾವ್ಯವೇ ಆಧುನಿಕ ಯುಗದಲ್ಲಿ ಕಾದಂಬರಿ ಆಗಿದೆಯೆಂದು ಹೇಳುತ್ತಾರೆ. ಹಾಗೇ ಮುಂದುವರಿದು ಕಾದಂಬರಿಗಳನ್ನು ಹಿಮಗಿರಿಯ ಗೌರಿಶಂಕರಕ್ಕು ಮಹಾಕಾವ್ಯಗಳನ್ನು ಕೈಲಾಸ ಶಿಖರಕ್ಕು ಹೋಲಿಸುತ್ತಾರೆ.5 ಕಾವ್ಯ ಅದರಲ್ಲು ಮಹಾಕಾವ್ಯ ಬೇರೆಲ್ಲ ಪ್ರಕಾರಗಳಿಗಿಂತ ಶ್ರೇಷ್ಠವಾದುದು ಎಂಬ ಪ್ರಕಾರ ತರತಮತೆ ಇವರಲ್ಲಿ ಇದೆ. ನಮ್ಮ ವಿಮರ್ಶೆಯ ಹಲವು ಶ್ರೇಣೀಕೃತ ನಂಬಿಕೆಗಳಲ್ಲಿ ಇದೂ ಒಂದು. ಕವಿ ಮತ್ತು ವಿಮರ್ಶಕರ ನಡುವೆ ಕೂಡ ಇದೇ ರೀತಿಯ ತರತಮ ಶ್ರೇಣೀಕೃತ ನಂಬಿಕೆ ನಮ್ಮಲ್ಲಿ ಚಾಲ್ತಿಯಲ್ಲಿದೆ.
ಚರಿತ್ರೆ ಪಂಥ ಮತ್ತು ಪ್ರಕಾರ ಪ್ರಜ್ಞೆ
ಚರಿತ್ರೆ ಪಂಥಕ್ಕು ಮತ್ತು ಪ್ರಕಾರಪ್ರಜ್ಞೆಗು ನಮ್ಮಲ್ಲಿ ಒಂದು ಅನ್ಯೋನ್ಯವಾದ ಸಂಬಂಧವಿದೆ. ರಂ.ಶ್ರೀ ಮುಗಳಿಯವರ ಸಾಹಿತ್ಯೋಪಾಸನೆ, ಹೊಸಗನ್ನಡ ಸಾಹಿತ್ಯ ರೂಪಗಳು, ವಿ.ಸೀ.ಯವರ ಸಂಪ್ರದಾಯ ಮತ್ತು ಹೊಸ ಮಾರ್ಗ, ಮನೋಹರ ಗ್ರಂಥ ಮಾಲೆಯ ನಡೆದು ಬಂದ ದಾರಿ, ಕುರ್ತಕೋಟಿಯವರ ಯುಗಧರ್ಮ ಹಾಗೂ ಸಾಹಿತ್ಯ ದರ್ಶನ, ಎಲ್.ಎಸ್.ಎಸ್. ಅವರ ಹೊಸಗನ್ನಡ ಸಾಹಿತ್ಯ ಚರಿತ್ರೆ ಹೀಗೆ ಇದಕ್ಕೆ ಒಂದು ದೊಡ್ಡ ವಲಯವೇ ಇದೆ. ಈ ಎಲ್ಲ ಕೃತಿಗಳಲ್ಲಿಯೂ ಪ್ರಕಾರದೃಷ್ಟಿಯಿಂದಲೆ ಚರಿತ್ರೆ ಕಟ್ಟಲಾಗಿದೆ. ಹಾಗಾಗಿ ನಮ್ಮ ಚರಿತ್ರೆ ರಚನಾಶಾಸ್ತ್ರಕ್ಕು ಪ್ರಕಾರ ದೃಷ್ಟಿಗು ಅನ್ಯೋನ್ಯ ಸಂಬಂಧ ಇದ್ದೇ ಇದೆ.
ಯಾವುದೇ ಪ್ರಕಾರವು ಇನ್ನಿತರ ಪ್ರಕಾರಗಳಿಂದ ಸ್ವಯಂಭೂ ಆಗಿ ಇರುವುದಿಲ್ಲ. ಹಾಗೆಯೆ ಯಾವುದೇ ಪ್ರಕಾರಕ್ಕು ಅದರದ್ದೇ ಆದ ಪರಂಪರೆಯ ಸಾತತ್ಯ ಬಹುಶಃ ಇರಲಾರದು. ಅಂದರೆ ಸಾಹಿತ್ಯ ಪರಂಪರೆ ಎನ್ನುವುದು ಬೇರು, ಕಾಂಡ, ಚಿಗುರಿನ ಹಾಗೆ ಸಂಪೂರ್ಣ ಸಾತತ್ಯವನ್ನು ಹೊಂದಿ ಏಕಾಕಾರಿಯಾಗಿ ಇರುವುದಿಲ್ಲ. ಯಾವುದೋ ಕಾಂಡದ ಬೇರು ಎಲ್ಲೊ ಇರಬಹುದು, ಯಾವುದೋ ಕಾಯಿಯ ಬೀಜ ಎಲ್ಲೋ ಇರಬಹುದು, ಯಾವುದೋ ಚಿಗುರು ಹಾಗೆ ಸ್ವಯಂ ಸಮಾಜದಿಂದ ಸ್ಪೂರ್ತಗೊಂಡೆ ಜನಿಸಿರಬಹುದು. ಹಾಗಾಗಿ ಆಯಾ ಪ್ರಕಾರಗಳಿಗೆ ಪರಂಪರೆಗಳನ್ನು ಕಟ್ಟುವುದು ಸಂಶೋಧಿಸಿ ಲಗತ್ತಿಸುವುದು ಅಗತ್ಯವಿಲ್ಲದ ಕೆಲಸ. ಆದರೆ ನಮ್ಮ ಪ್ರಕಾರ ವಿಮರ್ಶೆಯಲ್ಲಿ ಇದು ಜರುಗಿದೆ.
ಬೆಂಗಳೂರು ವಿಶ್ವವಿದ್ಯಾಲಯದವರ ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ಮಾಲಿಕೆ ಪ್ರಕಾರವನ್ನು ಆಧರಿಸಿಯೆ ರಚಿಸಲ್ಪಟ್ಟಿದೆ. ಆಧುನಿಕ ಸಾಹಿತ್ಯ ಪ್ರಕಾರಗಳನ್ನು ಗಮನದಲ್ಲಿ ಇರಿಸಿಕೊಂಡು ಪ್ರಾಚೀನ ಕನ್ನಡ ಸಾಹಿತ್ಯ ಪ್ರಭೇದಗಳನ್ನು ವರ್ಗೀಕರಿಸುವ ಕೆಲಸವನ್ನು ಇಲ್ಲಿ ಮಾಡಲಾಗಿದೆ. ಷಟ್ಪದಿ, ವಚನ, ಕೀರ್ತನೆ, ಸಾಂಗತ್ಯ, ಚಂಪು, ಶಾಸ್ತ್ರ ಸಾಹಿತ್ಯ ಹೀಗೆ ಬೇರೆ ಬೇರೆ ಸಾಹಿತ್ಯ ಪ್ರಭೇದಗಳ ಮೂಲಕ ಸಾಹಿತ್ಯ ಚರಿತ್ರೆಯನ್ನು ವರ್ಗೀಕರಿಸಿ ಕಟ್ಟಿಕೊಳ್ಳುವಾಗ ಪ್ರಕಾರಗಳ ಪರಂಪರೆಗಳನ್ನು ಕಟ್ಟಲು ಯತ್ನಿಸಲಾಗಿದೆ. ಸಾಹಿತ್ಯ ಪರಂಪರೆಯನ್ನು ಧರ್ಮದ, ಕವಿಯ, ಕಾಲಘಟ್ಟದ, ಸಂವೇದನೆಯ ಈ ಯಾವುದೇ ನೆಲೆಯಿಂದ ವಗರ್ೀಕರಿಸಿ ಅಧ್ಯಯನ ಮಾಡಿದಾಗಲೂ ಅವುಗಳೆಲ್ಲಕ್ಕು ಅವುಗಳದ್ದೆ ಆದ ಮಿತಿ ಇರುವಂತೆ ಪ್ರಕಾರಕೇಂದ್ರಿತ ಚರಿತ್ರೆ ರಚನೆಗೂ ಅದರದೇ ಮಿತಿ ಇದೆ. ಹಾಗೆಯೆ ಅದೊಂದು ಸಾಧ್ಯತೆಯೂ ಹೌದು. ಧರ್ಮಕೇಂದ್ರಿತ, ಕವಿಕೇಂದ್ರಿತ, ಯುಗಕೇಂದ್ರಿತ, ಅಧ್ಯಯನಗಳಿಗಿಂತ ಭಿನ್ನವಾದ ಒಳನೋಟಗಳನ್ನು ನೀಡಬಲ್ಲ ಸಾಧ್ಯತೆ ಈ ಪ್ರಕಾರಕೇಂದ್ರಿತ ದೃಷ್ಟಿಗೆ ಇದೆ. ಕಾಲಾನುಸಾರಿ, ಧರ್ಮ, ಯುಗ, ಪ್ರಧಾನ ಕವಿ, ಭಾಷಾರೂಪ ಅನುಸಾರಿ ಮೊದಲಾದ ವರ್ಗೀಕರಣಗಳೆಲ್ಲಕ್ಕಿಂತ ಹೆಚ್ಚು ಪ್ರಜಾಸತ್ತಾತ್ಮಕವಾದ ಒಂದು ವಿಧಾನವಾಗಿ ಪ್ರಕಾರ ದೃಷ್ಟಿಯ ವರ್ಗೀಕರಣವು ಕಾಣುತ್ತದೆ. ಆದರೆ ನಿಜಕ್ಕೂ ಎಲ್ಲ ವರ್ಗೀಕರಣ ಮಾರ್ಗಗಳಿಗಿಂತ ಇದು ಪ್ರಜಾಸತ್ತಾತ್ಮಕವೆ? ಖಂಡಿತ ಇಲ್ಲ. ಯಾಕೆಂದರೆ ಇಲ್ಲಿ ಮೌಖಿಕ ಮಹಾಕಾವ್ಯಗಳು, ಜಾನಪದ, ತತ್ವಪದ-ಸ್ವರಪದ, ಸಂಪಾದನೆ, ಟೀಕು ಈ ರೀತಿಯ ಹಲವಾರು ವಲಯಗಳು ಕತ್ತಲೆಗೆ ಸಂದಿವೆ. ಪ್ರಧಾನ-ಅಧೀನ; ಮುಖ್ಯ-ಅಮುಖ್ಯವೆಂಬ ಸಾಹಿತ್ಯ ವಲಯಗಳು ನಿರ್ಮಾಣವಾಗಿವೆ. ಹಾಗಾಗಿ ಈ ವಿಧಾನವನ್ನು ಪರಿಷ್ಕೃತ ಎನ್ನಬಹುದೇ ವಿನಾ ಪ್ರಜಾಸತ್ತಾತ್ಮಕ ಎನ್ನಲಾಗದು. ಪ್ರಧಾನ-ಅಧೀನ, ಮುಖ್ಯ-ಅಮುಖ್ಯವೆಂಬಂತೆ ಚರಿತ್ರೆಯನ್ನು ಕಟ್ಟುವುದು ನಮ್ಮ ಸಾಹಿತ್ಯ ಚರಿತ್ರೆ ರಚನಾ ಶಾಸ್ತ್ರದ ಒಂದು ಬಹು ದೊಡ್ಡ ಬಿಕ್ಕಟ್ಟಾಗಿದೆ.
ಪ್ರತಿಯೊಂದು ಹೊಸ ಸಾದ್ಯತೆಯು ಮತ್ತೊಂದು ಹೊಸ ಸಾಧ್ಯತೆ ಗೋಚರಿಸಿದಾಗ ಹಳತಾಗಿಯು, ತಂತಾನೆ ಮಿತಿಯಾಗಿಯು ಕಾಣತೊಡಗುತ್ತದೆ ತಾನೆ?
ವಗರ್ೀಕರಣ-ನಾಮಕರಣದ ಸಮಸ್ಯೆ
ನಮ್ಮಲ್ಲಿ ಸೃಜನ-ಸೃಜನೇತರವೆಂಬಂತೆ ಸಾಹಿತ್ಯವನ್ನು (ಪ್ರಕಾರಗಳನ್ನು) ವರ್ಗೀಕರಣ ಮಾಡುವ ಪರಿಪಾಟವಿದೆ. ಇದು ಆಧುನಿಕವಾದ ಒಂದು ರೋಗ. ಶ್ರೀಯವರ ಗದಾಯುದ್ಧ ನಾಟಕ ಹಳೆಗನ್ನಡ ಸಾಹಿತ್ಯದ ಮೂಲದ್ರವ್ಯವನ್ನು ಬಳಸಿಕೊಂಡು ಪಾಶ್ಚಾತ್ಯ ಸಾಹಿತ್ಯ ದರ್ಶನದ ಪಡಿಯಚ್ಚಿನಲ್ಲಿ ಎರಕಹೊಯ್ದ ಅರ್ಧ ಸಾಹಿತ್ಯಕ ಅರ್ಧ ವಿಮರ್ಶಕ ಕೃತಿಯಾಗಿದೆ6 ಅಂದರೆ ಇಲ್ಲಿ ಕುರ್ತಕೋಟಿಯವರು ವಿಮರ್ಶೆ ಪ್ರಕಾರವನ್ನು ಸೃಜನೇತರ ಅಥವಾ ಪ್ರಬಂಧ ರೂಪಿ ಎಂದು ತಿಳಿಯುತ್ತಾರೆ. ಹಾಗೇ ಸಾಹಿತ್ಯ ಮತ್ತು ವಿಮರ್ಶೆಗಳನ್ನು ಸೃಜನಶೀಲ-ಸೃಜನೇತರಗಳೆಂದು ತಿಳಿಯುತ್ತಾರೆ. ಈಗಾಗಲೆ ನಾವು ಈ ವರ್ಗೀಕರಣಗಳಿಂದ ಬಹಳ ದೂರ ಸಾಗಿ ಬಂದಿದ್ದೇವೆ. ಆದರೆ ನಮ್ಮ ಪ್ರಕಾರದೃಷ್ಟಿ ಇಂತಹ ವರ್ಗೀಕರಣಗಳನ್ನು ನಂಬಿ, ಒಪ್ಪಿ ಕೆಲಸ ಮಾಡಿದೆ. ಸಾಹಿತ್ಯ-ವಿಮರ್ಶೆಯನ್ನು ಎಲ್ಲಾದರೂ ಸೃಜನ ಸೃಜನೇತರ ಎಂದು ಇಬ್ಬಗೆಯಲ್ಲಿ ನೋಡಲಾದೀತೆ!
ಸಾಹಿತ್ಯ ಚರಿತ್ರೆ ರಚನಾಶಾಸ್ತ್ರದಲ್ಲಿ ವಗರ್ೀಕರಣ-ನಾಮಕರಣ ವಿಧಾನವು ಹಲವು ರೀತಿಯ ಇತಿಮಿತಿಗಳಲ್ಲಿ ಆಪರೇಟಾಗಿದೆ. ಸಾಹಿತ್ಯ ಚರಿತ್ರೆಯ ವಿಭಾಗೀಕರಣದ ಚರಿತ್ರೆಯನ್ನು ಗಮನಿಸಿದರೆ ಇದು ಕಾಣುತ್ತದೆ. ಧರ್ಮದ ಆಧಾರದಲ್ಲಿ, ಯುಗಧರ್ಮ ಅಥವಾ ಸಂವೇದನೆಯ ಆಧಾರದಲ್ಲಿ, ಪ್ರಮುಖ ಕವಿಯ ಮೂಲಕ, ಕಾಲಘಟ್ಟದ ಆಧಾರದಲ್ಲಿ, ಭಾಷಾಸ್ವರೂಪದ ಆಧಾರದಲ್ಲಿ ಹೀಗೆ ಹತ್ತು ಹಲವು ಕ್ರಮಗಳಲ್ಲಿ ಸಾಹಿತ್ಯ ಚರಿತ್ರೆಯನ್ನು ಅಧ್ಯಯನದ ಅನುಕೂಲಕ್ಕಾಗಿ ವಿಭಾಗೀಕರಿಸಿಕೊಳ್ಳುವ ನೆಲೆಗಳನ್ನು ಮೀರಿ ಕುರ್ತಕೋಟಿಯವರು 'ಕನ್ನಡ ಸಾಹಿತ್ಯ ಸಂಗಾತಿ' ಕೃತಿಯಲ್ಲಿ ಕವಿಕೇಂದ್ರಿತ, ಕೃತಿಕೇಂದ್ರಿತ, ಮತ್ತು ಪ್ರಕಾರಕೇಂದ್ರಿತ ದೃಷ್ಟಿಗಳನ್ನೆಲ್ಲ ಬೆರೆಸಿದ ಸಾಹಿತ್ಯ ಚರಿತ್ರೆ ರಚನಾ ವಿಧಾನವೊಂದನ್ನು ಸೃಷ್ಟಿಸಲು ಯತ್ನಿಸಿದ್ದಾರೆ. ಯಾವುದಾದರು ವಿಧಾನವೊಂದನ್ನು ಮಾತ್ರವೆ ನೆಚ್ಚಿದರೆ ಅದರಿಂದ ಅರೆಕೊರೆಯಾಗಬಹುದೆಂಬ ನಂಬಿಕೆ ಇಲ್ಲಿದೆ. ಇಲ್ಲಿ ಬೇರೆಯದೇ ರೀತಿಯ ಸಮಸ್ತೆ ಉಂಟಾಗಿದೆ. ಸಾಹಿತ್ಯ ಚರಿತ್ರೆಯ ಎತ್ತರಗಳನ್ನು ಮಾತ್ರವೆ ಇಲ್ಲಿ ಪರಿಚಯಿಸಲು ಯತ್ನಿಸಲಾಗಿದೆ. ಇದರಿಂದ 1.ಶ್ರೇಷ್ಠತೆಯ ನಿರ್ವಚನ, 2.ಮುಖ್ಯ- ಅಮುಖ್ಯತೆಯ ಪ್ರತಿಪಾದನೆ, 3.ಆಯ್ಕೆ ಮತ್ತು ಅಲಕ್ಷ್ಯದ ರಾಜಕಾರಣ ಹೀಗೆ ಈ ಮೂರೂ ರೀತಿಯ ಸಮಸ್ಯೆಗಳು ತಲೆದೋರಿವೆ. ಕುರ್ತಕೋಟಿಯವರ ಸಾಹಿತ್ಯ ಸಂಗಾತಿ ರಚನೆ ನಿಜಕ್ಕು ಈ ಮೊದಲಿನ ಎಲ್ಲ ಸಾಹಿತ್ಯ ಚರಿತ್ರೆಗಳಿಗಿಂತ ಭಿನ್ನವಾದ ರಚನೆಯಾದರೂ ಅದರಲ್ಲೂ ಮಿತಿಗಳಿವೆ. (ಆದರೆ ಆಧುನಿಕ ಸಾಹಿತ್ಯ ಚರಿತ್ರೆಯನ್ನು ಕಟ್ಟುವ ಅವರ ಯುಗಧರ್ಮ ಮತ್ತು ಸಾಹಿತ್ಯ ದರ್ಶನ ಕೃತಿಯಲ್ಲಿ, ಎಲ್.ಎಸ್.ಎಸ್. ಅವರ ಆಧುನಿಕ ಸಾಹಿತ್ಯ ಚರಿತ್ರೆ, ಮುಗಳಿಯವರ ಹೊಸಗನ್ನಡ ಸಾಹಿತ್ಯ ರೂಪಗಳು ಮೊದಲಾದ ಕೃತಿಗಳಲ್ಲಿ ಚರಿತ್ರೆಯನ್ನು ಪ್ರಧಾನವಾಗಿ ಪ್ರಕಾರಕೇಂದ್ರಿತವಾಗಿ ಕಟ್ಟುವ ಯತ್ನಗಳಿರುವುದನ್ನು ಈಗಾಗಲೆ ಗಮನಿಸಲಾಗಿದೆ; ನೋಡಿ ಚರಿತ್ರೆ ಪಂಥ)
ಒಡೆದು ಆಳುವ ನೀತಿಯ ಸಾಂಸ್ಕೃತಿಕ ವಿಸ್ತರಣೆಯೇನೊ ಎಂಬಂತೆ ನಮ್ಮ ಸಾಹಿತ್ಯವನ್ನು ಶಿಷ್ಟ-ಜಾನಪದ, ಗಂಭೀರ-ಜನಪ್ರಿಯ, ಸೃಜನಶೀಲ-ಸೃಜನೇತರ ಇತ್ಯಾದಿಯಾಗಿ ಒಡೆಯಲಾಗಿದೆ. ಇದು ಸಾಹಿತ್ಯದ ಶ್ರೇಷ್ಠತೆಯ ಮತ್ತು ಅನನ್ಯತೆಯ ನಿರ್ವಚನದ ಭಾಗವಾಗಿಯೂ ನಡೆಯುವ ಚಟುವಟಿಕೆ. ಸಾಹಿತ್ಯದ ಯಾಜಮಾನೀಯ ನೆಲೆಯನ್ನು ಮಾತ್ರವೆ ಸಾಹಿತ್ಯವೆಂದು ಅಂಗೀಕರಿಸುವ ಮತ್ತು ಮಿಕ್ಕದ್ದನ್ನು ಆ ಪಟ್ಟಕ್ಕೆ ನಿರಾಕರಿಸುವ ತರತಮ ನಿರ್ವಚನದ ಚಟುವಟಿಕೆ ಇದು. ಇದನ್ನು ನಮ್ಮ ಆಧುನಿಕ ವಿಮರ್ಶೆಯು ಯಶಸ್ವಿಯಾಗಿ ನಿರ್ವಹಿಸುತ್ತ ಬಂದಿದೆ. (ಸಾಹಿತ್ಯ, ಸಿನೆಮಾ, ಚಿತ್ರಕಲೆ ಹೀಗೆ ಎಲ್ಲ ಕಡೆಗು ಈ ಗಂಭೀರ-ಜನಪ್ರಿಯ(ಕಮರ್ಷಿಯಲ್) ಎಂಬ ಒಡಕುಗಳಿವೆ.
ಮೂಲವ್ಯಾಧಿ
ನಮ್ಮ ವಿಮರ್ಶೆಯಲ್ಲಿ ಪ್ರತಿಯೊಂದು ಪ್ರಕಾರಗಳಿಗೂ, ಕಾಲಘಟ್ಟ, ಸಂವೇದನೆಗಳಿಗೂ ಮೂಲವನ್ನು ಹುಡುಕುವ ಮೂಲವ್ಯಾಧಿ ಬಹುವಾಗಿ ವ್ಯಾಪಿಸಿದೆ. ವಸಾಹತುಶಾಹಿ ಚರಿತ್ರೆ ಕಟಾಣಿಕೆಯ ಒಂದು ಮುಖ್ಯ ಸಂವೇದನೆ ಎಂದರೆ ಪರಂಪರೆಯ ಸಾತತ್ಯವನ್ನು ಗುರ್ತಿಸಿಕೊಳ್ಳುವುದು. ಯಾವುದೇ ಪ್ರಕಾರದ ಸಾಹಿತ್ಯ ಮಾರ್ಗದ ಉಗಮ ಮತ್ತು ವಿಕಾಸಗಳನ್ನು ಕಟ್ಟಿಕೊಳ್ಳುವುದು. ಪ್ರತಿ ಪ್ರಕಾರಗಳ ಮೂಲ-ಉಗಮಗಳನ್ನು ನಿರ್ಧರಿಸಲೇಬೇಕೆ? ಈ ಉಗಮ ಮತ್ತು ವಿಕಾಸಗಳನ್ನು ಕಟ್ಟಿಕೊಳ್ಳುವುದು ನಮ್ಮ ಪ್ರಕಾರ ಕೇಂದ್ರಿತ ಚರಿತ್ರೆ ಕಟ್ಟಾಣಿಕೆಯ ಒಂದು ಸಾಧ್ಯತೆಯೂ ಸಮಸ್ಯೆಯೂ ಆಗಿದೆ. ಚಿದಾನಂದಮೂರ್ತಿ ಮತ್ತು ಎಲ್.ಬಸವರಾಜು ಅವರ ನಡುವೆ ವಚನಗಳ ಮೂಲಕ್ಕೆ ಸಂಬಂಧಿಸಿದಂತೆ ದೊಡ್ಡ ವಾಗ್ವಾದವೇ ನಡೆದಿದೆ. ಹಾಗೆ ಯಾವುದೆ ಸಾಹಿತ್ಯ ಪ್ರಕಾರವು ಅನ್ಯ ಪ್ರೇರಣೆಯಿಂದಲೆ ಬಂದಿರುತ್ತದೆ ಪ್ರತಿಯೊಂದಕ್ಕು ಮೂಲವೆಂಬುದು ಇದ್ದೇ ಇರುತ್ತದೆ ಎಂಬುದು ಬಾಲಿಶ ನಂಬಿಕೆ. ಯಾವುದೇ ಪ್ರಕಾರ, ಕೃತಿ ಸ್ವಯಂಭೂ ಅಲ್ಲ ಎಂಬುದು ಎಷ್ಟು ನಿಜವೋ ಹಾಗೆಯೆ ಎಲ್ಲ ಪ್ರಕಾರಗಳೂ ಅನ್ಯಪ್ರೇರಣೆಯಿಂದಲೆ ಒಡಮೂಡುವುದಿಲ್ಲ ಎಂಬುದೂ ಅಷ್ಟೆ ನಿಜ. ಆಧುನಿಕ ಪ್ರಕಾರಗಳೆಲ್ಲ ಇಂಗ್ಲಿಶಿನಿಂದ ಬಂದುವು ಮತ್ತು ಎಲ್ಲ ಪ್ರಾಚೀನ ಪ್ರಕಾರಗಳೂ ಸಂಸ್ಕೃತದಿಂದ ಬಂದುವು ಎಂಬುದೂ ಶುದ್ಧ ಸುಳ್ಳು. ಈ ಮೂಲ ಶೋಧನೆಯ ವ್ಯಾಧಿಯು ನಿಜಕ್ಕು ಸ್ವಂತಿಕೆಯ ನಿರಾಕರಣೆಯ ಕಡೆಗೆ ಚಲಿಸುತ್ತದೆ. ಹಾಗಾಗಿ ಎಲ್ಲಕ್ಕು ಪ್ರಕಾರಪರಂಪರೆ ಶೋಧಿಸುವ, ಮೂಲವನ್ನು ಹಡುಕುವ ಅಗತ್ಯವಿಲ್ಲ. ಪ್ರಕಾರಕೇಂದ್ರಿತ ಚರಿತ್ರೆ ರಚನೆಯ ಇನ್ನೊಂದು ಬಿಕ್ಕಟ್ಟೆಂದರೆ ಸಾತತ್ಯದ ವಿಕಾಸದ ಕಟ್ಟಿಕೊಳ್ಳುವಿಕೆ.
ಇಲ್ಲಮೆಗಳ ಹುಡುಕಾಟ
ಲಿಖಿತ ಪರಂಪರೆಯಲ್ಲಿನ ಮಹಾಕಾವ್ಯಗಳನ್ನು ಮೌಖಿಕಪರಂಪರೆಗಳಲ್ಲಿ ನಾವಿಂದು ಹುಡುಕಿಕೊಂಡಿದ್ದೇವೆ. ಗ್ರೀಕ್ ಟ್ರಾಜಿಡಿಗಳನ್ನು (ದುರಂತಪ್ರಜ್ಞೆ) ಕನ್ನಡದಲ್ಲಿ ನಾವು ಹುಡುಕಿಕೊಂಡದ್ದಕ್ಕು ಈ ಮೌಖಿಕ ಮಹಾಕಾವ್ಯಗಳನ್ನು ಹುಡುಕಿಕೊಂಡದ್ದಕ್ಕು ತಾತ್ವಿಕವಾಗಿ ಅಂತಹ ವ್ಯತ್ಯಾಸವೇನೂ ಇಲ್ಲ. ಹಾಗೆ ನೋಡಿದರೆ ಇದು ಏಕಕಾಲಕ್ಕೆ ತೌಲನಿಕತೆಯ ಪ್ರವೃತ್ತಿಯೂ ಹೌದು, ಪ್ರಕಾರಕೇಂದ್ರಿತ ದೃಷ್ಟಿಕೋನದ ದೋಷವೂ ಹೌದು. ಇದನ್ನು ಸಮಸ್ಯೆ ಎಂದು ಕರೆಯುವುದಕ್ಕಿಂತ ದೃಷ್ಟಿದೋಷ ಎಂದು ಕರೆಯುವುದೇ ಸರಿ. ಹಾಲುಮತ ಕಾವ್ಯಗಳನ್ನು, ಮಂಟೆಕಾವ್ಯವನ್ನು ನಾವು ಮಹಾಕಾವ್ಯವೆಂದು ಕರೆಯುತ್ತೇವೆ. ಆದರೆ ಅದರ ವಾರಸುದಾರರು ಅಸಲಿಗೆ ಅವನ್ನು ಕಾವ್ಯಗಳೆಂದೆ ಕರೆಯುವುದಿಲ್ಲ. ಕತೆಗಳೆಂದೆ ಕರೆಯುತ್ತಾರೆ. ಅವರು ಏನಾದರೂ ಕರೆದುಕೊಳ್ಳಲಿ, ನಾವು ಪ್ರಕಾರಗಳನ್ನು ಹುಡುಕಲು ಹೊರಟರೆ ಹೀಗೆ ನಾವೆ ನಮಗೆ ಬೇಕಾದ ಹೆಸರನ್ನು ಇಟ್ಟು 'ಸಂಶೋಧಿಸಿ'ಕೊಳ್ಳುತ್ತೇವೆ. ಹಾಗೆ ಇಲ್ಲಮೆಗಳನ್ನು ಕಂಡುಹಿಡಿಯುವ ಪ್ರವೃತ್ತಿಯೊಂದು ನಮ್ಮಲ್ಲಿ ಜನಿಸಲು ಈ ಪ್ರಕಾರಪ್ರಜ್ಞೆಯೂ ಕಾರಣವಿರಬಹುದೇ?
ಕನ್ನಡದಲ್ಲಿ ದುರಂತ ನಾಟಕ-ದುರಂತಪ್ರಜ್ಞೆಗಳನ್ನು ಸೃಷ್ಟಿಸುವ ಕೆಲಸದಲ್ಲಿ ನಮ್ಮವರು ತಮ್ಮ ಬಹಳಷ್ಟು ಸಮಯವನ್ನು ವ್ಯಯ ಮಾಡಿದ್ದಾರೆ. ಈಗಾಗಲೆ ಹೇಳಿರುವಂತೆ ಇದೊಂದು ತೌಲನಿಕತೆಯ ಬಿಕ್ಕಟ್ಟು ಮತ್ತು ಪ್ರಕಾರಕೇಂದ್ರಿತ ದೃಷ್ಟಿಯ ಬಿಕ್ಕಟ್ಟು. ಅಲ್ಲದೆ ರುದ್ರತೆಯ ಲಕ್ಷಣಗಳನ್ನು ರುದ್ರನಾಟಕದ ಲಕ್ಷಣಗಳೆಂದು ನಮ್ಮವರು ತಪ್ಪು ತಿಳಿದು ತೌಡು ಕುಟ್ಟಿದ್ದಾರೆ.7 ನಾಟಕಗಳು ಪ್ರಾಚೀನ ಸಾಹಿತ್ಯದಲ್ಲಿ ಯಾಕೆ ಹುಟ್ಟಲಿಲ್ಲ? ಎಂಬ ಬಹು ಸೋಜಿಗದ ಪ್ರಶ್ನೆಯನ್ನು ನಮ್ಮ ವಿಮಶರ್ೆಯಲ್ಲಿ ಸಾಕಷ್ಟು ಕೇಳಿಕೊಳ್ಳಲಾಗಿದೆ. ಅದಕ್ಕೆ ಸಂವಾದಿಯಾಗಿ ನಮ್ಮಲ್ಲಿ ನಾಟಕೀಯ ಸನ್ನಿವೇಶಗಳು ಬೇಕಾದಷ್ಟು ಇವೆ ಎಂದು ತೋರಿಸಲು ಯತ್ನಿಸಲಾಗಿದೆ. ಈ ಹುಡುಕಾಟ ಕೂಡ ಪ್ರಕಾರಕೇಂದ್ರಿತ ದೃಷ್ಟಿಯಿಂದ ಉಂಟಾಗಿರುವ ದೃಷ್ಟಿದೋಷವೆ ಆಗಿದೆ. ಸಂಸ್ಕೃತದಲ್ಲಿ, ಇಂಗ್ಲಿಶಿನಲ್ಲಿ ನಾಟಕಗಳು ಇದ್ದರೆ ಅದೇ ರೀತಿ ನಾಟಕಗಳು ಕನ್ನಡದಲ್ಲೂ ಯಾಕೆ ಇರಬೇಕು ಹೇಳಿ? ಕನ್ನಡ ಮೌಖಿಕ ಜಗತ್ತಿನಲ್ಲಿ ಅನೇಕ ನಾಟಕಗಳು ಅನಾದಿಯಿಂದಲೂ ಇದ್ದವು. ಈಗಲೂ ಇವೆ. ಲಿಪಿಕ ಛಂದಸ್ಸಿನ ಉಡುಗೆ ತೊಟ್ಟ ನಾಟಕಗಳು ಪ್ರಾಚೀನ ಕಾಲದಲ್ಲಿ ಸಿಕ್ಕಿಲ್ಲವೆಂದ ಮಾತ್ರಕ್ಕೆ ನಮ್ಮಲ್ಲಿ ನಾಟಕಗಳೇ ಇರಲಿಲ್ಲವೆಂದೇನೂ ತಿಳಿಯಬೇಕಾಗಿಲ್ಲ. ಅಥವಾ ಅವುಗಳನ್ನು ಹುಡುಕಲೂ ಬೇಕಿಲ್ಲ. ನಮ್ಮ ಲಿಖಿತ ಪರಂಪರೆಯಲ್ಲಿ ಇರುವುದು ಕಾವ್ಯ ಮಾತ್ರ. ಪದ್ಯಕಾವ್ಯ, ಗದ್ಯಕಾವ್ಯಗಳು ಮಾತ್ರ. ಇನ್ನೇನೂ ಅಲ್ಲ. ಇದು ಕೀಳರಿಮೆಯ ಸಂಗತಿಯೂ ಅಲ್ಲ. ಮೇಲರಿಮೆಯ ಸಂಗತಿಯೂ ಅಲ್ಲ.
ಇನ್ನು ಟ್ರಾಜಿಡಿ, ಕಾಮಿಡಿ, ಬ್ಲಾಕ್ ಕಾಮಿಡಿ, ಟ್ರಾಜಿಕ್ ಕಾಮಿಡಿ ಇಂತಹ ನಾಟಕಗಳ ವರ್ಗೀಕರಣಗಳು ಕನ್ನಡ ಪರಂಪರೆಯಲ್ಲಿ ಅಪ್ರಸ್ತುತವಾದುವು. ನಾಟಕ ಪ್ರಕಾರವನ್ನು ಮಾತ್ರವೆ ವಿಮರ್ಶಿಸುವ-ವರ್ಗೀಕರಿಸುವ ಇವು ಇನ್ನಿತರ ಸಾಹಿತ್ಯ ಪ್ರಕಾರಗಳ ವಿಶ್ಲೇಷಣೆಯಲ್ಲಿ ಬಳಸಬಹುದಾದ ಹತಾರಗಳಲ್ಲ. ಹಾಗಾಗಿ ಕೆಲವು ವಿಮಶರ್ಾ ದೃಷ್ಟಿಗಳು ಪ್ರಕಾರಬದ್ಧವಾಗಿಯೆ ಇರುತ್ತವೆ. ಅವನ್ನು ಪ್ರಕಾರಾತೀತವಾಗಿ ಬಳಸಲು ಸಾಧ್ಯವಾಗುವುದಿಲ್ಲ. ಹಾಗೊಂದು ವೇಳೆ ಬಳಸಿದರೆ ತಪ್ಪು ನಿರ್ಣಯಗಳಿಗೆ ಬರಬೇಕಾಗುತ್ತದೆ. ಇದೊಂದು ಪ್ರಕಾರದೃಷ್ಟಿಯ ದೌರ್ಬಲ್ಯವೂ ಹೌದು, ಲಕ್ಷಣವೂ ಹೌದು. (ಮುಂದೆ ಇದನ್ನು ಪ್ರತ್ಯೇಕ ಚಚರ್ಿಸಲಾಗಿದೆ)
ಪರಿಭಾಷೆಯ ಬಹುಳತೆ-ಗೊಂದಲ
ಟ್ರಾಜಿಡಿ ಕಾಮಿಡಿಗಳನ್ನು ಕನ್ನಡದಲ್ಲಿ ಹುಡುಕಹೊರಟ ನಮ್ಮವರು ಟ್ರಾಜಿಡಿಗೆ ರುದ್ರನಾಟಕ, ಗಂಭೀರ ನಾಟಕ, ದುರಂತನಾಟಕ, ಶೋಕನಾಟಕ, ಶೋಕಾತ್ಮಿಕ ನಾಟಕ ಹೀಗೆ ಹಲವು ಹೆಸರುಗಳನ್ನು ಬಳಸಿದ್ದಾರೆ. ಹಾಗೆಯೆ ಕಾಮಿಡಿಗೆ ಸುಖಾತ್ಮಿಕಾ, ಹಾಸ್ಯ ನಾಟಕ, ಹರ್ಷ ನಾಟಕ, ವೈನೋದಿಕ, ಸುಖಾಂತ ನಾಟಕ ಹೀಗೆ ಹಲವು ಹೆಸರುಗಳನ್ನು ಬಳಸಿದ್ದಾರೆ.8 ಬೇಂದ್ರೆಯವರು ಇವುಗಳನ್ನೆ ಸಂಸ್ಕೃತದ ಹೆಸರುಗಳಾದ ಸುಕುಮಾರ ಮತ್ತು ಅವಿದ್ಧ ಎಂಬ ಹೆಸರುಗಳಲ್ಲು ಚಚರ್ಿಸಿದ್ದಾರೆ. ಸಂಭವಕಾಲೀನ ಸಂದರ್ಭದಲ್ಲಿ ಕಾದಂಬರಿ ಪ್ರಕಾರವನ್ನು ಉಪನ್ಯಾಸ, ನಾವೆಲ, ವಚನಗದ್ಯ, ವಚನಪ್ರಬಂಧ ಇವೆಲ್ಲ ಹೆಸರುಗಳಿಂದಲೂ ಕರೆಯುತ್ತಿದ್ದರು. ಮೀಮಾಂಸೆಯ ರಸಸಿದ್ಧಾಂತವನ್ನು ರಸಚಿಂತನೆ, ರಸಪ್ರಸ್ಥಾನ, ರಸಪ್ರಕರಣ ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಕರೆದಿದ್ದಾರೆ. ಇದು ಆಯಾ ಕ್ಷೇತ್ರದ ಶೈಶವದ ಸೂಚಕ. ಹೊಸ ಪ್ರಕಾರಗಳು ರೂಪಗೊಳ್ಳುವ ಸಂದರ್ಭದಲ್ಲಿ ಇಂತಹ ಪಾರಿಭಾಷಿಕ ಬಹುಲತೆ ಸಹಜವಾದುದು. ಆದರೆ ಆನಂತರವೂ ಈ ಬಹುಲತೆ ಉಳಿದುಕೊಂಡರೆ ಅದು ಗೊಂದಲದ ಸ್ಥಿತಿಯೆ ತಾನೆ? ಒಂದೇ ಸಂಗತಿಗೆ ಹತ್ತು ಹಲವು ರೀತಿಯ ನಾಮಕರಣ, ಪರಿಭಾಷೆಗಳನ್ನು ತರುವುದು ನಿಜಕ್ಕು ಆ ಕ್ಷೇತ್ರದಲ್ಲಿನ ಗೊಂದಲದ ಲಕ್ಷಣವೆ ಹೌದು. ಅನ್ಯ ಸಾಹಿತ್ಯ ಪರಂಪರೆಯ ಪ್ರಕಾರಗಳನ್ನು ನೆಚ್ಚಿ ಅವನ್ನು ನಮ್ಮ ಪರಂಪರೆಯಲ್ಲಿ ಹುಡುಕಹೊರಟಾಗ ಹುಟ್ಟುವ ಸಮಸ್ಯೆಯೂ ಹೌದು. ಇದು ಸ್ವೀಕಾರ ತತ್ವದ ಸಮಸ್ಯೆಯೂ ಭಾಷಾಂತರ ವಲಯದ ಸಮಸ್ಯೆಯೂ ಆಗಿದೆ. ಈ ಎಲ್ಲ ಕಡೆಯು ಈ ಸಮಸ್ಯೆಗೆ ಮೂಲ ಪ್ರಕಾರ ದೃಷ್ಟಿ.
ವಿಮಶರ್ೆಯ ಕ್ಷೇತ್ರದಲ್ಲು ಕೂಡ ಈ ಪರಿಬಾಷೆಯ ಬಹುಲತೆ-ಗೊಂದಲ ಇಂದು ಇದೆ. ಸಾಹಿತ್ಯ ಮೀಮಾಂಸೆ (ರಹಮತ್), ಸಾಹಿತ್ಯಾಧ್ಯಯನ (ಶ್ರೀಮತಿ), ಸಾಹಿತ್ಯ ವಿಮಶರ್ೆ (ಸಿ.ಎನ್ನಾರ್), ವಿಶ್ಲೇಷಣೆ (ಎಚ್ಚೆಸ್ಸಾರ್), ಸಾಹಿತ್ಯ ಕಥನ-ಸಂಸ್ಕೃತಿ ಕಥನ (ಡಿ.ಆರ್) ಹೀಗೆ ಹಲವು ಪ್ರಯೋಗಗಳು ವಿಮಶರ್ೆಗೆ ಸಂವಾದಿಯಾಗಿ ಬಳಕೆಯಾಗಿವೆ. ಆಗುತ್ತಿವೆ. ಹೀಗಾಗಿ ಇದು ಈ ಕ್ಷೆತ್ರವು ಇನ್ನೂ 'ಆಗು'ತ್ತಿರುವುದರ ಲಕ್ಷಣವಾಗಿದೆ.ವಿಮರ್ಶೆಯ ಭಾಷೆ-ಪರಿಭಾಷೆ ಮತ್ತು ಪ್ರಕಾರಪ್ರಜ್ಞೆ ವಿಮರ್ಶೆಯ ಭಾಷೆ-ಪರಿಭಾಷೆ ಮತ್ತು ಅದರ ನಿರೂಪಣಾ ಕ್ರಮಗಳು ಕೆಲವೊಮ್ಮೆ ಸಾಹಿತ್ಯ ಕೃತಿಯ ಭಾಷೆ ನಿರೂಪಣಾ ಕ್ರಮಗಳಿಂದ ಪ್ರಭಾವಕ್ಕೆ ಒಳಗಾಗುವುದುಂಟು. ಕೆಲವೊಮ್ಮೆ ಅನುಕರಣೆಗೆ ಗುರಿಯಾಗುವುದುಂಟು. ವಿಮರ್ಶಕನು ಕಾವ್ಯದ ಬಗ್ಗೆ ಬರೆಯುವಾಗ ರೂಪಕ, ಪ್ರತಿಮೆಗಳ ಮೂಲಕ, ಕಥನದ ಬಗ್ಗೆ ಬರೆಯುವಾಗ ಕಥನಾತ್ಮಕ ದೃಷ್ಟಾಂತಗಳ ಮೂಲಕ ತನ್ನ ಪ್ರಮೇಯ ಮಂಡಿಸುವ ಸಾಧ್ಯತೆಯುಂಟು. ಡಿ.ಆರ್. ನಾಗರಾಜರ ವಿಮರ್ಶೆಯಲ್ಲಿ ಹೀಗೆ ಹಲ ವೇಳೆ ಆಗಿದೆ. ಕಾವ್ಯದ ಪ್ರತಿಮೆಗಳನ್ನೆ ಉದಾ. ಶಕ್ತಿ ಶಾರದೆಯ ಮೇಳ, ಅಮೃತ ಮತ್ತು ಗರುಡ ಹೀಗೆ ಬಳಸುವ ಮೂಲಕ ವಿಮರ್ಶಕ ವಿಮರ್ಶೆಯನ್ನು ಕಟ್ಟಬಹುದು. ಕಾವ್ಯದ ಕುರಿತು ಬರೆಯುವಾಗ ವಿಮರ್ಶೆಯ ನಿರೂಪಣಾ ಕ್ರಮವೆ ಕಾವ್ಯಾತ್ಮಕವಾಗುವ, ಕಾದಂಬರಿಯ ಬಗೆಗೆ ಬರೆಯುವಾಗ ಕಥನಾತ್ಮಕವಾಗುವ ಸಾಧ್ಯತೆ ಇರುತ್ತದೆ. ಇದು ವಿಮರ್ಶೆಯ ದುರ್ಬಲತೆಯ ಲಕ್ಷಣ. ಸಮೀಕ್ಷೆ, ವರ್ಣನಾತ್ಮಕ ವಿಮರ್ಶೆ, ರಿವ್ಯೂಗಳ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಹೀಗಾಗುವುದುಂಟು. ಸಿ.ಪಿ.ಕೆ., ಎಸ್.ವಿ.ಪರೇಶ್ವರಭಟ್ಟ ಮೊದಲಾದವರ ಕುವೆಂಪು ಕುರಿತ ವಿಮಶರ್ೆಯನ್ನು ನೋಡಿದರೆ ಇದನ್ನು ಕಾಣಬಹುದು. ಭಟ್ಟರಂತೂ ಕುವೆಂಪು ಸಾಹಿತ್ಯ ಕೃತಿಗಳನ್ನೆ ಸಾರಾಂಶೀಕರಿಸುವ ಮತ್ತು ಗದ್ಯರೂಪದಲ್ಲಿ ಮರುನಿರೂಪಿಸುವ ಕೆಲಸಗಳನ್ನು ಸಾಕಷ್ಟು ಮಾಡಿದ್ದಾರೆ. ರಸಋಷಿ ಕುವೆಂಪು ಎಂಬ ಇವರ ಸೀರೀಸ್ಗಳನ್ನು ನೋಡಿದರೆ ಇದು ಎದ್ದು ಕಾಣುತ್ತದೆ.15 ಕೃತಿಯ ಭಾಷೆಯಲ್ಲಿ ಸಾಮಾಜಿಕ ಶ್ರೇಣಿಯು ವ್ಯಕ್ತವಾಗುತ್ತಿದ್ದರೆ ವಿಮರ್ಶೆಯಲ್ಲೂ ಅದು ಕೆಲವೊಮ್ಮೆ ಕ್ಯಾರಿಯಾಗುತ್ತಿರುತ್ತದೆ. ಹೀಗೆ ಪ್ರಕಾರ ಭಾಷೆಯು ವಿಮಶರ್ೆಯ ಭಾಷೆಯನ್ನು ಪ್ರೇರಿಸುವುದು ಏಕಕಾಲಕ್ಕೆ ಪ್ರಕಾರದೃಷ್ಟಿಯ ಸಮಸ್ಯೆಯು ಹೌದು, ವಿಮರ್ಶಕನ ಚಹರೆಯೂ ಹೌದು.
ಪ್ರಕಾರತತ್ವಗಳ ಪ್ರಕಾರಾತೀತ ಅನ್ವಯ
ಒಂದು ಪ್ರಕಾರದ ಮಾನದಂಡಗಳನ್ನು ಇನ್ನೊಂದು ಪ್ರಕಾರದ ಮೌಲ್ಯಮಾಪನಕ್ಕೆ ಬಳಸುವ ಪ್ರವೃತ್ತಿಗಂತೂ ನಮ್ಮಲ್ಲಿ ಒಂದು ದೊಡ್ಡ ಪರಂಪರೆಯೆ ಇದೆ. ಪ್ರಕಾರ ವಿಮರ್ಶೆಯ ಒಂದು ಬಹು ದೊಡ್ಡ ಸಮಸ್ಯೆ ಇದು. ಈ ಸಮಸ್ಯೆಯನ್ನು ಈಗಾಗಲೇ ರಾಜೆಂದ್ರ ಚೆನ್ನಿ, ಜಿ.ಎಸ್.ಸದಾಶಿವ, ರಹಮತ್ ತರೀಕೆರೆ, ಜಿ.ಎಸ್.ಆಮೂರ ಹೀಗೆ ಹಲವರು ಚರ್ಚಿಸಿದ್ದಾರೆ.
ಕುವೆಂಪು ವಿಮಶರ್ೆಯ ಬಗ್ಗೆ ಕುರ್ತಕೋಟಿ ಹೇಳುವ ಮಾತುಗಳನ್ನು ಇಲ್ಲಿ ಗಮನಿಸಬಹುದು. ಕವಿಕೋಕಿಲ ವಾಲ್ಮೀಕಿಯ ಹೈಮಾಚಲ ಸಂಗೀತದಲ್ಲಿ ಸರೋವರದ ಸೌಂದರ್ಯವಿದೆ. ಸರಸ್ವತಿಯ ಗಾಂಭೀರ್ಯವಿದೆ.... ಬಸವಣ್ಣನವರ ಕಾವ್ಯೋದ್ದೇಶ ಭಾವಲೋಕಕ್ಕೆ ಅನುಭವಲೋಕವನ್ನು ತರುವ ಗುರುತರ ಕಾರ್ಯ,.. ಕುವೆಂಪುರವರ ವಿಮರ್ಶಾತ್ಮಕ ಲೇಖನಗಳೆಲ್ಲ ಇಂತಹ ಥಳಥಳಿಸುವ ಆರ್ಭಟಿಸುವ ಪದಗುಚ್ಛಗಳಿಂದ ಮಾತ್ರ ತುಂಬಿಕೊಂಡಿವೆ. ಇವುಗಳಿಂದ ಯಾವ ವಿಮರ್ಶಕ ಪ್ರಯೋಜನವೂ ಇಲ್ಲವೆಂದು ನಿಷ್ಠುರವಾಗಿ ಹೇಳಬೇಕಾಗಿದೆ. ಅಲ್ಲದೆ ಇಂತಹ ಭಾಷೆಯ ಉಪಯೋಗ ಅನೇಕ ಸಾರೆ ಅರ್ಥದ ಗೊಂದಲಕ್ಕೆ ಕಾರಣವಾಗುತ್ತದೆ. ಓದುಗನಿಗೆ ಇದರಿಂದ ದಿಗ್ಭ್ರಮೆಯಲ್ಲದೆ ಬೇರೆ ಲಾಭವೇನೂ ಆಗುವುದಿಲ್ಲ9 ಅಂದರೆ ವಿಮರ್ಶೆಯ ಭಾಷೆ ಹೀಗೇ ಇರಬೇಕೆಂಬ ಕುರ್ತಕೋಟಿಯವರ ನಂಬಿಕೆಯು ಕುವೆಂಪುವನ್ನಿಲ್ಲಿ ದೂಷಿಸುತ್ತಿದೆ. ಸ್ಥಾಪಿತ ಪ್ರಕಾರತತ್ವದ ಕುರಿತ ತನ್ನದೇ ಶ್ರದ್ಧೆಯಿಂದ ವಿಮರ್ಶಕ ಇತರರನ್ನು ತೂಗಲು ಹೊರಟಾಗ ಈ ಸಮಸ್ಯೆ ಉಂಟಾಗುತ್ತದೆ.
ನವ್ಯದ ಕೃತಿನಿಷ್ಟ ವಿಮರ್ಶೆಗೂ ನಮ್ಮ ಪ್ರಕಾರಕೇಂದ್ರಿತ ದೃಷ್ಟಿಗೂ ಅಂತಹ ವ್ಯತ್ಯಾಸವಿಲ್ಲ. ಕೃತಿನಿಷ್ಟವಾಗಿ ಲೀವೀಸಿಯನ್ ಮಾರ್ಗದಲ್ಲಿ ವಿಮಶರ್ಿಸುವಾಗೆಲ್ಲ ಎಂ.ಜಿ.ಕೆಯವರ ವಿಮರ್ಶೆಯಲ್ಲಿ ಪ್ರಕಾರಕೇಂದ್ರಿತ ದೃಷ್ಟಿ ಕೆಲಸ ಮಾಡುತ್ತಲೆ ಬಂದಿದೆ. ಇವರ ವಿಮರ್ಶೆಯು ಕೃತಿನಿಷ್ಟ ಮತ್ತು ಪ್ರಕಾರಕೇಂದ್ರಿತ ದೃಷ್ಟಿಗಳೆರಡರ ಸಂಯುಕ್ತ ದೃಷ್ಟಿಯೆ ಆಗಿದೆ. ಕೃತಿ ವಿಶ್ಲೇಷಣೆಯು ಧ್ವನಿ, ಪ್ರಕಾರತತ್ವ, ಬಂಧ/ಶಿಲ್ಪ, ಕೇಂದ್ರ ಮುಂತಾದ ನೆಲೆಯಲ್ಲಿ ನಡೆಯುತ್ತಲೆ ಇವರಲ್ಲಿ ಕೃತಿಯ ಮೌಲ್ಯನಿರ್ಣಯವಾಗಿ ಬೆಳೆಯುತ್ತದೆ. ಪ್ರಕಾರದೃಷ್ಟಿ ಮತ್ತು ಕೃತಿನಿಷ್ಠತೆಗಳು ಸಾಹಿತ್ಯಕೃತಿಯ ಮೌಲ್ಯನಿರ್ಣಯಕ್ಕೆ ಚಲಿಸುವಾಗ ಎಂ.ಜಿ.ಕೆಯವರಲ್ಲಿ ಬಳಕೆಯಾಗುವ ಇನ್ನೊಂದು ದೃಷ್ಟಿಯೆಂದರೆ ಅದು ತೌಲನಿಕ ದೃಷ್ಟಿ. ಪ್ರೇಮಚಂದರ ಮಗು ಕತೆಯನ್ನು ಚರ್ಚಿಸುವಾಗ ಅದನ್ನು ಮಾಸ್ತಿಯವರ ಮೊಸರಿನ ಮಂಗಮ್ಮ ಕತೆಯೊಂದಿಗೆ ಹೋಲಿಸುತ್ತಾರೆ. ಕುವೆಂಪು ಅವರ ಕಾನೂರು ಹೆಗ್ಗಡಿತಿ ಬಗ್ಗೆ ಚರ್ಚಿಸುತ್ತ ಅದನ್ನು ಗ್ರಾಮಾಯಣದ ಜೊತೆ ಹೋಲಿಸುತ್ತಾರೆ. ಹೀಗೆ ಹೋಲಿಸುವಾಗ ತರತಮ ತುಲನೆಯಿಂದ ಕೃತಿಯ ಮೌಲ್ಯನಿರ್ಣಯಕ್ಕೆ ಬರುತ್ತಾರೆ. ಇದೊಂದು ನಮ್ಮ ಕನ್ನಡ ತೌಲನಿಕತೆ ಎದುರಿಸಿರುವ ಬಹು ಮುಖ್ಯವಾದ ಬಿಕ್ಕಟ್ಟು.
ತೌಲನಿಕತೆಯು ಸ್ಥಳೀಯವಾಗಲೀ ಪರಸ್ಥಳೀಯವಾಗಲೀ ಭಿನ್ನಾಭಿನ್ನತೆಯ ತುಲನೆಯಾಗಬೇಕೋ ಅಥವಾ ತರತಮ ಶ್ರೇಣೀಕರಣದ ತುಲನೆಯಾಗಬೇಕೋ? ನಮ್ಮಲ್ಲಿ ತುಲನೆಯು ಸಾಕಷ್ಟು ಕಡೆ ತರತಮ ತುಲನೆಯಾಗಿ ಚಲಿಸಿ ತರತಮ ಸ್ಥಾನೀಕರಣವಾಗಿ ಪರಿಣಮಿಸಿದೆ. ಪ್ರೇರಣೆ-ಸ್ವೀಕರಣೆಯ ಸಂದರ್ಭದ ಚರ್ಚೆಯಲ್ಲು ಕೂಡ ಕನ್ನಡ ವಿಮರ್ಶೆಯಲ್ಲಿ ಸ್ವಂತಿಕೆಯೆ ಪ್ರಶ್ನಿತಗೊಂಡಿದೆ.10 ಕೆಲವೊಮ್ಮೆ ಕನ್ನಡದ್ದು ಏನೂ ಇಲ್ಲ. ಎಲ್ಲ ಸಂಸ್ಕೃತ-ಇಂಗ್ಲಿಶುಗಳ ಅನುಕರಣೆ ಮಾತ್ರ ಎಂಬ ತೀರ್ಪುಗಳೂ ಇಲ್ಲಿ ಬಂದಿವೆ. ತೌಲನಿಕ ದೃಷ್ಟಿಯು ಪ್ರಕಾರದೃಷ್ಟಿಯಲ್ಲಿ ಹೇಗೆಲ್ಲ ವತರ್ಿಸಬಹುದು ಎಂಬುದಕ್ಕೆ ಎಂ.ಜಿ.ಕೆಯವರ ಕುವೆಂಪು ಕಾದಂಬರಿಗಳ ಕುರಿತ ವಿಮಶರ್ೆಯೆ ಸಾಕ್ಷಿ. ಕಾದಂಬರಿಯ ಬಂಧ, ಶಿಲ್ಪ, ಕೇಂದ್ರಪ್ರಜ್ಞೆ, ಸಂಕ್ಷಿಪ್ತತೆ (ಬ್ರೀವಿಟಿ) ಮೊದಲಾದುವುಗಳನ್ನು ಚರ್ಚಿಸುತ್ತ ಎಂ.ಜಿ.ಕೆ ಕುವೆಂಪು ಕಾದಂಬರಿಗಳನ್ನು ದೂಷಿಸುತ್ತಾರೆ. ಕಾದಂಬರಿ ಪ್ರಕಾರವು ಹೇಗಿರಬೇಕೆಂಬ ತಮ್ಮದೇ ಆದ ಪ್ರಕಾರತತ್ವಗಳ ಮೂಲಕ ಕುವೆಂಪು ಕಾದಂಬರಿಗಳನ್ನು ಮೌಲ್ಯಮಾಪನ ಮಾಡಲು ಹೊರಡುವ ಎಂ.ಜಿ.ಕೆ. ತಮ್ಮ ನಂಬಿಕೆಗಳಂತೆ ಆ ಪ್ರಕಾರಗಳು ರಚಿತವಾಗಿಲ್ಲ ಎಂಬ ಕಾರಣಕ್ಕೆ ಅವನ್ನು ದೂಷಿಸುತ್ತಾರೆ.11 ಎರಡು ರೀತಿಯಿಂದ ಇದನ್ನು ಗ್ರಹಿಸಬಹುದು. 1.ಅಡಿಗ ಪ್ರಣೀತ ನವ್ಯ ಕಾವ್ಯವನ್ನು ಅಳತೆಯ ಮಾನದಂಡವನ್ನಾಗಿ ಇಟ್ಟುಕೊಂಡು ಎಂ.ಜಿ.ಕೆ. ಕುವೆಂಪು ಕಾದಂಬರಿಗಳನ್ನು (ಬಂಧ, ಶಿಲ್ಪ, ಕೇಂದ್ರಪ್ರಜ್ಞೆಗಳ ಮೂಲಕ) ವಿಮರ್ಶಿಸುತ್ತಾರೆ. ಮೂಲತಃ ಈ ಪ್ರಕಾರಾತೀತ ತೌಲನಿಕ ದೃಷ್ಟಿಯೆ ಅಸಮರ್ಪಕವಾದುದು. 2.ಯಾವುದೇ ಸಾಹಿತ್ಯ ಪ್ರಕಾರದ ಸ್ವರೂಪವು ಸ್ಥಾಪಿತ ಪ್ರಕಾರತತ್ವಗಳ ಚೌಕಟ್ಟಿನಲ್ಲೆ ರಚಿತವಾಗಬೇಕು ಎಂಬ ನಂಬಿಕೆಯೆ ಪ್ರಾಥಮಿಕವಾಗಿ ಅಸಾಧುವಾದುದು. ಅಂದರೆ ಒಳ್ಳೆಯ ಕಾದಂಬರಿ ಅಂದರೆ ಹೀಗೆ ಹೀಗೇ ಇರಬೇಕು ಎಂಬ ಕ್ಯಾನನಿಕಲ್ ನಿಯಮಗಳನ್ನೆ ಎಲ್ಲರು ಬಳಸಬೇಕು ಎಂಬ ತಿಳುವಳಿಕೆಯೆ ಅಸಾಧುವಾದುದು. ವಿಮರ್ಶಕನು ತಾನು ಹೇಳುವ ನಿಯಮಗಳೆ ಅಂತಿಮವೆಂದಾದರೂ ಯಾಕೆ ಭಾವಿಸಬೇಕು? ಅಂತಿಮವೆಂಬ ಪ್ರಕಾರತತ್ವಗಳು ಎಲ್ಲಾದರೂ ಇರಲು ಸಾಧ್ಯವೆ?
ಪ್ರಕಾರಕೇಂದ್ರಿತ ದೃಷ್ಟಿಯಲ್ಲಿ ತೌಲನಿಕತೆ, ಪ್ರಕಾರತತ್ವಗಳ ಬಿಕ್ಕಟ್ಟುಗಳ ಮೂಲಕ ಹುಟ್ಟಿದ ಕುವೆಂಪು ಮೌಲ್ಯಮಾಪನವು ಎಂ.ಜಿ.ಕೆರವರಲ್ಲಿ ಮಾತ್ರವೆ ಅಲ್ಲ ಅವರಿಗು ಮೊದಲೆ ಕುರ್ತಕೋಟಿಯವರಲ್ಲಿ (ಬೇಂದ್ರೆ-ಕುವೆಂಪು ತುಲನೆಯಲ್ಲಿ) ಇತ್ತು. ಆನಂತರದಲ್ಲಿ ಗಿರಡ್ಡಿ, ಜಿ.ಎಚ್.ನಾಯಕ. ಯು.ಆರ್.ಅನಂತಮೂತರ್ಿ ಮೊದಲಾದವರಲ್ಲಿ (ಅಡಿಗ-ಕುವೆಂಪು ತುಲನೆಯಲ್ಲಿ) ಇದು ಬೆಳೆಯಿತು. ದುರಂತವೆಂದರೆ ತೌಲನಿಕತೆ ಮತ್ತು ಪ್ರಕಾರದೃಷ್ಟಿಗಳ ಅಪದೃಷ್ಟಿಗಳು ಕುವೆಂಪು ಸಂದರ್ಭದ ಕನ್ನಡ ವಿಮರ್ಶೆಯಲ್ಲಿ ಜಾತಿಯ ಬಣ್ಣಗಳನ್ನು ಬಳಿದುಕೊಂಡವು.
ಇಲ್ಲೆ ಇನ್ನೊಂದು ಅಂಶವನ್ನು ಗಮನಿಸಬೇಕು. ಸಾಹಿತ್ಯ ಕೃತಿಯೊಂದನ್ನು ಕೃತಿನಿಷ್ಠ ಇಲ್ಲವೆ ಪ್ರಕಾರನಿಷ್ಠವಾಗಿ ವಿಮರ್ಶಿಸುವಾಗ ಅದನ್ನು ಅದರ ತಾಂತ್ರಿಕ ವಿವರಗಳ ಮೂಲಕ; ಪ್ರಕಾರ ತತ್ವಗಳ ಮೂಲಕ ಮಾತ್ರ ವ್ವಿಮರ್ಶಿಸಿದರೆ ಸಾಹಿತ್ಯದ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ಲಕ್ಷಿಸಿದಂತೆಯೆ ಸರಿ. ಕೃತಿಯ ಬಂಧ, ಶಿಲ್ಪ, ಸಾವಯವ ಶಿಲ್ಪದ ಸಮಗ್ರೀಕರಣ, ಭಾಷೆ, ಕೇಂದ್ರಪ್ರಜ್ಞೆ, ಆಕೃತಿ ಈ ಅಂಶಗಳೇ ಕೃತಿಯ ಮೌಲ್ಯಮಾಪನದ ಮಾನದಂಡಗಳಾದಾಗ, ಕೇವಲ ಸೌಂದಯರ್ಾತ್ಮಕ ಅಥವಾ ಕಟ್ಟಾಣಿಕೆಯ ಅಂಶಗಳಿಗೆ ಮಾತ್ರ ಗಮನ ಕೊಟ್ಟಂತ ಆಗುತ್ತದೆ. ಸಾಹಿತ್ಯವು ಎತ್ತಿ ಹಿಡಿಯಬಹುದಾದ ಸಾಂಸ್ಕೃತಿಕ ಮೌಲ್ಯ, ಸಾಮಾಜಿಕ ನ್ಯಾಯಗಳ ಬಗ್ಗೆ ವಿಮರ್ಶೆ ಮಾತಾಡಿದಂತೆಯೇ ಆಗುವುದಿಲ್ಲ. ಇಂತಲ್ಲಿ ಹೂರಣವು ಹಿನ್ನೆಲೆಗೆ ಸರಿದು ಸಿಪ್ಪೆ ಮಾತ್ರವೆ ಮುನ್ನೆಲೆಗೆ ಬರುತ್ತದೆ. ಸಾಮಾಜಿಕ ಅಸಮಾನತೆ, ದುಃಖ, ಶೋಷಣೆ, ಪ್ರತಿರೋಧದ ಪ್ರತಿನಿಧೀಕರಣಗಳೆಲ್ಲ ಗೌಣವಾಗುತ್ತವೆ. ಸಾಮಾಜಿಕ ಕ್ರೌರ್ಯದ ಬಗೆಗಿನ ಚಿಂತನೆ ಹಿನ್ನೆಲೆಗೆ ಸರಿದು ಸಾಹಿತ್ಯದ ಸೌಂದರ್ಯ ಮಾತ್ರವೆ ಮುನ್ನೆಲೆಗೆ ಬರುತ್ತದೆ. ಪ್ರಕಾರನಿಷ್ಠ ವಿಮಶರ್ೆಯ ಬಹು ದೊಡ್ಡ ಅಪಾಯಗಳಲ್ಲಿ ಇದೂ ಒಂದು.
ಮುನ್ನುಡಿ ಬೆನ್ನುಡಿ-ಪ್ರಸ್ತಾವನೆ-ಪ್ರಕಾರದೃಷ್ಟಿ
ನಮ್ಮಲ್ಲಿ ಸಾಕಷ್ಟು ಮುನ್ನುಡಿ, ಪೀಠಿಕೆ, ಪ್ರಸ್ತಾವನೆಗಳು ರಚನೆಯಾಗಿವೆ. ಆಧುನಿಕ ಸಂದರ್ಭದಲ್ಲಿ ಇವುಗಳಿಗೆ ಒಂದು ವಿಮಶರ್ಾ ಪರಂಪರೆಯೆ ನಮ್ಮಲ್ಲಿ ನಿರ್ಮಾಣವಾಗಿದೆ. ಲೇಖಕರು ಸ್ವತಃ ತಾವು ಬರೆದ ಮುನ್ನುಡಿ ಪ್ರಸ್ತಾವನೆಗಳನ್ನು ಹೊರತುಪಡಿಸಿದರೆ ಇತರರು ಬರೆದಿರುವ ಮುನ್ನುಡಿ, ಪ್ರಸ್ತಾವನೆ, ಪೀಠಿಕೆಗಳು ಬಹುಪಾಲು ಪ್ರಕಾರಕೇಂದ್ರಿತ ದೃಷ್ಟಿಯಿಂದ ರೂಪಗೊಂಡಿವೆ. ಪ್ರಕಾರ ಪರಂಪರೆಯ ಸಾತತ್ಯ ಗುತರ್ಿಸುವಿಕೆ, ಆಯಾ ಪ್ರಕಾರಪರಂಪರೆಯ ಮುಖ್ಯ ಕವಿ-ಚಹರೆಗಳೊಂದಿಗೆ ಸದರಿ ಕೃತಿ-ಕೃತಿಕಾರರ ತುಲನೆ, ಇವು ಈ ದೃಷ್ಟಿಯ ವಿಮಶರ್ೆಯ ಮುಖ್ಯ ಲಕ್ಷಣಗಳು. ಹರಕೆ, ಪ್ರಮಾಣಪತ್ರ ನೀಡಿಕೆ, ಶಾಪ, ಸ್ವಜನಪಕ್ಷಪಾತ, ಮುಲಾಜು, ಕರುಣೆ ಇತ್ಯಾದಿಗಳು ಈ ದೃಷ್ಟಿಯ ಇನ್ನು ಕೆಲವು ಲಕ್ಷಣಗಳು. ಒಂದು ಪ್ರಕಾರದ ಲಕ್ಷಣಗಳನ್ನು ಇನ್ನೊಂದು ಪ್ರಕಾರಕ್ಕೆ ಅನ್ವಯಿಸಿ ನೋಡುವ ಅವಘಡಗಳೂ ಇಲ್ಲಿ ಸಂಭವಿಸಿರುವುದುಂಟು.
ನವ್ಯ ಮಾರ್ಗದ ಪ್ರವರ್ತಕರಾದ ಅಡಿಗರು ಕವಿಯಾದ್ದರಿಂದ ಮತ್ತು ಪಶ್ಚಿಮದಲ್ಲಿ ಕೂಡ ನವ್ಯ ವಿಮರ್ಶೆ ಕಾವ್ಯದ ಸಂದರ್ಭದಲ್ಲಿಯೆ ಹೆಚ್ಚು ಪ್ರಭಾವಿಯಾಗಿ ಉಪಯೋಗಕ್ಕೆ ಬಂದದ್ದರಿಂದ ಕತೆ, ಕಾದಂಬರಿಗಳನ್ನು ಕೂಡ ಕವಿತೆಗಳೆಂದೇ ಪರಿಗಣಿಸುವ ವಿಮರ್ಶಾ ವಿಧಾನ ರೂಡಿಗೆ ಬಂದಿತು. ಇದಕ್ಕೆ ಉತ್ತಮ ಉದಾಹರಣೆ ಅಡಿಗರು ಚಿತ್ತಾಲರ 'ಆಟ'ಕ್ಕೆ ಬರೆದ ಮುನ್ನುಡಿ. 'ಈ ಸಣ್ಣ ಕತೆಗಳಿಂದ ಆಗುವ ಪರಿಣಾಮ ಒಂದು ಕಾವ್ಯದಿಂದ ಆಗುವ ಪರಿಣಾಮಗಳಿಗಿಂತ ಬೇರೆಯಲ್ಲ. ಕಾವ್ಯ ಗದ್ಯರೂಪವಾಗಿಯೂ ಇರಬಹುದು' ಇದು ಅಡಿಗರ ಮುನ್ನುಡಿಯ ತಾತ್ವಿಕ ಭೂಮಿಕೆ. ಈ ಭೂಮಿಕೆಯಿಂದ ಹೊರಟೆ ಅಡಿಗರು ಆಟ ಮತ್ತು ಛಲಗಳು ಅಷ್ಟೊಂದು ಯಶಸ್ವಿಯಾದ ಕತೆಗಳಲ್ಲ ಎಂಬ ನಿರ್ಣಯಕ್ಕೆ ಬರುತ್ತಾರೆ. ಯಾಕೆಂದರೆ ಇಡೀ ಕತೆಯೆ ಒಂದು ರೂಪಕವಾಗಿ ಅರಳುವ ಪವಾಡ ಸಿದ್ಧಿಸುವುದಿಲ್ಲ ಅದಕ್ಕೆ.12 ಅಂದರೆ ಇಡೀ ಕತೆಯೆ ಒಂದು ರೂಪಕವಾಗುವ ಪವಾಡ ನಡೆಯದಿದ್ದರೆ ಅದು ಕತೆಯೇ ಅಲ್ಲವೊ? ಪ್ರಕಾರ ತತ್ವಗಳು ಪ್ರಕಾರಾತೀತವಾಗಿ ಅನ್ವಯಗೊಂಡಾಗ ಆಗುವ ಸಮಸ್ಯೆಯಿದು.
ಚಿತ್ತಾಲರ ಕತೆಗಳು ಸಂಕಲನಕ್ಕೆ ಚಿತ್ತಾಲರು ತಮ್ಮ ಲೇಖಕರ ಮಾತು ಬರೆಯುವಾಗ ಆಟ ಸಂಕಲನದ ಕತೆಗಳಿಗೆ ತಕ್ಕುದಾದ ವಿಮಶರ್ೆಯ ಬೆಂಬಲ ಸಿಗದೇ ಹೋದ ಕಾರಣಕ್ಕೆ ನಾನು ಬರೆಯಬೇಕಾದ ಕಾದಂಬರಿ 'ಸಾವು' ಬರೆಯುದೆ ಹೋಗುವಂತಾಯ್ತು ಎಂದು ವಿಷಾದಿಸುತ್ತಾರೆ.13 ಈ ವಿಷಾದಕ್ಕೆ ಕಾರಣವಾದ ಬೀಜ ಅಡಿಗರು 'ಆಟ'ಕ್ಕೆ ಬರೆದ ಮುನ್ನುಡಿಯಲ್ಲೆ ಇದೆ. ಹುಟ್ಟಲಿದ್ದ ಕನ್ನಡ ಕಾದಂಬರಿಯ ಭ್ರೂಣವೊಂದನ್ನು ಹುಟ್ಟುವ ಮೊದಲೆ ಕೊಂದ ಕೀತರ್ಿ ಅಡಿಗರಿಗೆ ಸಲ್ಲಬೇಕು. ಶಂಖದಿಂದ ಬಂದ ತೀರ್ಥವಿಮರ್ಶೆಯಿಂದಾಗಿ ಬಹುಕಾಲದವರೆಗೆ ಆಟದ ಕತೆಗಳ ಕುರಿತು ಒಳ್ಳೆಯ ವಿಮರ್ಶೆ ಬರಲೇ ಇಲ್ಲ. ಇದರಿಂದ ಚಿತ್ತಾಲರಿಗೆ ನಿಜವಾಗಿಯು ಅನ್ಯಾಯವಾಗಿದೆ. (ಲೇಖಕ ಯಾಕಾದರೂ ವಿಮರ್ಶೆಗೆ ಸೊಪ್ಪು ಹಾಕಬೇಕು ಹೇಳಿ? ಇದು ಚಿತ್ತಾಲರ ದೌರ್ಬಲ್ಯವೂ ಹೌದು) ಪ್ರಕಾರ ದೃಷ್ಟಿಕೋನಗಳ ಪ್ರಕಾರಾತೀತ ಅನ್ವಯದಿಂದ ಆಗುವ ದುರಂತಗಳಿವು.
ಪ್ರಕಾರಾಂತರದ ಸಾಧ್ಯತೆಗಳು, ಸಮಸ್ಯೆಗಳು
ಪ್ರಕಾರಾಂತರ ನಮ್ಮಲ್ಲಿ ಬಹು ಕಾಲದಿಂದ ನಡೆಯುತ್ತ ಬಂದಿದೆ. ನಮ್ಮ ಪ್ರಾಚೀನರು ಕಾವ್ಯವನ್ನು ಗದ್ಯವಾಗಿ, ಗದ್ಯವನ್ನು ಕಾವ್ಯವಾಗಿ ಪ್ರಕಾರಾಂತರ ಮಾಡಿದ್ದಾರೆ. ಬಾಣನ ಕಾದಂಬರಿಯನ್ನು ನಮ್ಮ ನಾಗವರ್ಮನು ಕಾವ್ಯವನ್ನಾಗಿ ಪ್ರಕಾರಾಂತರ ಮಾಡಿದ್ದಾನೆ. ಇಂದಿಗೂ ಇದು ನಡೆಯುತ್ತಿದೆ. ಕಾವ್ಯನಾಟಕಗಳನ್ನು ರಂಗನಾಟಕಗಳನ್ನಾಗಿ, ಜೀವನ ಚರಿತ್ರೆ, ಕತೆ, ಕಾದಂಬರಿಗಳನ್ನು ರಂಗನಾಟಕಗಳನ್ನಾಗಿ ಪ್ರಕಾರಾಂತರಿಸುವ ಕೆಲಸ ನಮ್ಮಲ್ಲಿ ಸಾಕಷ್ಟು ಆಗಿದೆ. ಆಗುತ್ತಿದೆ. ಇದನ್ನು ರೂಪಾಂತರ ಎಂದು ಕರೆಯುವುದಕ್ಕಿಂತ ಪ್ರಕಾರಾಂತರ ಎಂದೇ ಕರೆಯುವುದು ಸೂಕ್ತ. ಆಕರದ ಬದ್ಧತೆ ಮತ್ತು ನವಪಠ್ಯನಿಮರ್ಾಣದ ನಡುವಿನ ಕರ್ಷಣ ಇಲ್ಲಿನ ಒಂದು ಮುಖ್ಯ ಬಿಕ್ಕಟ್ಟು. ಪ್ರಕಾರಾಂತರವೆಂಬುದು ಕೇವಲ ಆಕರದ ಪ್ರಕಾರವನ್ನು ಬದಲಿಸುವ ಕೆಲಸ ಮಾತ್ರ ಆಗಿರುವುದಿಲ್ಲ. ಅದು ಇನ್ನೊಂದೇ ಪಠ್ಯದ ನಿಮರ್ಾಣ ಊಡ ಆಗಿರುತ್ತದೆ. ಹಾಗಾಗಿ ಪ್ರಕಾರಾಂತರಗಳು ಸಂಭವಿಸಿದ ಕೂಡಲೆ ಆಕರದೊಂದಿಗೆ ಅದರ ತುಲನೆ ಏರ್ಪಟ್ಟು ತರತಮ ಸ್ಥಾನೀಕರಣವೊಂದು ಸ್ಥಾಪಿಸಲ್ಪಡುತ್ತದೆ. ಕಾದಂಬರಿಯೊಂದು ಸಿನೆಮಾ ಆದಾಗ ಕಾದಂಬರಿ ಅದ್ಭುತವಾಗಿದೆ, ಆದರೆ ಸಿನೆಮಾ ತೋಪಾಗಿದೆ ಎಂಬ ಪ್ರತಿಕ್ರಿಯೆ ಬರಬಹುದು. ಇಂತಹ ಯಾವುದೆ ಪ್ರತಿಕ್ರಿಯೆಗಳು ಆಕರದ ಬದ್ಧತೆ ಮತ್ತು ನವಪಠ್ಯ ನಿರ್ಮಾಣದ ನಡುವಿನ ಕರ್ಷಣಗಳಾಗಿರುತ್ತವೆ.
ಲೇಖಕ ಕೇಂದ್ರಿತವಾಗಿ ಯೋಚಿಸಲಿ, ಪ್ರಕಾರಕೇಂದ್ರಿತವಾಗಿ ಯೋಚಿಸಲಿ ಬಹುತೇಕ ನಮ್ಮ ವಿಮರ್ಶೆಯು ಕರ್ತ್ರು ಮತ್ತು ಲೇಖಕನನ್ನು (ಆಥರ್ ಅಂಡ್ ದಿ ರೈಟರ್) ಸಮೀಕರಿಸಿಯೆ ನೋಡುತ್ತದೆ. ವಿಮರ್ಶೆಯಲ್ಲಿ ಲೇಖಕನನ್ನು ಉದ್ದೇಶಿಸಿಯೆ ನಮ್ಮ ವಿಮರ್ಶೆಯು ಸದಾ ಮಾತನಾಡುತ್ತಿರುತ್ತದೆ. ಸಾಹಿತ್ಯವನ್ನು ಜೀವನಚರಿತ್ರೆಯ ಆಕರ ಸಾಮಗ್ರಿ ಎಂದು ಎಷ್ಟೋ ವೇಳೆ ಇದರಿಂದ ಭಾವಿಸುವಂತಾಗುತ್ತದೆ. ಇದರಿಂದ ಹುಟ್ಟಬಹುದಾದ ಇನ್ನೊಂದು ಬಿಕ್ಕಟ್ಟೆಂದರೆ ಅದು ಲೇಖಕನ ಬದುಕು ಮತ್ತು ಬರಹಗಳ ನಡುವಣ ಸಮೀಕರಣ. ಸಾಹಿತ್ಯವನ್ನೆ ಸಾಹಿತಿಯ ಜೀವನ ಚರಿತ್ರೆಯನ್ನಾಗಿ ಬಾವಿಸುವ ಅಪಾಯ ಇಲ್ಲಿರುತ್ತದೆ. ಕುವೆಂಪು, ಕೆ.ಎಸ್.ನ., ದೇವನೂರು, ಅನಂತಮೂತರ್ಿ ಇವರ ಬರಹಗಳನ್ನು ಆಧರಿಸಿ ಮಾಡಿರುವ ನಾಟಕಗಳಲ್ಲಿ ಈ ಸಮಸ್ಯೆ ಎದ್ದು ಕಾಣುತ್ತದೆ. ಸಾಹಿತ್ಯಕ ವಾಸ್ತವ ಮತ್ತು ಚಾರಿತ್ರಿಕ ವಾಸ್ತವಗಳು ಇಲ್ಲಿ ಕಲಸಿಕೊಂಡು ಹೋಗುತ್ತವೆ. ಇದನ್ನು ಸಾಧ್ಯತೆಯೆನ್ನಬೇಕೊ, ಬಿಕ್ಕಟ್ಟೆನ್ನಬೇಕೊ?
ಹಾಗೆ ನೋಡಿದರೆ ಸಾಹಿತ್ಯ, ರಂಗಭೂಮಿ, ಸಿನಿಮಾ, ಇವೆಲ್ಲ ಭಿನ್ನ ಭಿನ್ನವಾದ ಮಾದ್ಯಮಗಳು. ಈ ಒಂದೊಂದೂ ಮಾದ್ಯಮಗಳಿಗು ತಮ್ಮದೇ ಆದ ಸಾಧ್ಯತೆಗಳು ಮತ್ತು ಮಿತಿಗಳು ಇವೆ. ಸಾಹಿತ್ಯಕ್ಕೆ ಹೋಲಿಸಿದರೆ ರಂಗಭೂಮಿಗೆ, ಇವೆರಡಕ್ಕಿಂತ ಸಿನಿಮಾಗೆ ಹೆಚ್ಚು ಸಂವಹನದ ಸಾಧ್ಯತೆಗಳಿವೆ. ಹಾಗಾಗಿ ಸಾಹಿತ್ಯ ಪ್ರಕಾರವು ರಂಗರೂಪ, ಚಲನಚಿತ್ರರೂಪವಾಗಿ ಪ್ರಕಾರಾಂತರ ಆದಾಗ ಅದರ ಜನಸಾಮಿಪ್ಯದ ಸಾಧ್ಯತೆಗಳೂ ವಿಸ್ತಾರಗೊಳ್ಳುತ್ತವೆ. ಚಿತ್ರಕತೆ, ನಾಟಕಗಳು ಪ್ರಾಥಮಿಕವಾಗಿ ಸಾಹಿತ್ಯ ಪಠ್ಯಗಳು. ಆದರೆ ಅವು ಪ್ರದರ್ಶನ ಸಂದರ್ಭದಲ್ಲಿ ಮಾತ್ರ ರಂಗ-ಚಿತ್ರ ಪಠ್ಯಗಳಾಗಿ ಬದಲಾಗುತ್ತವೆ. ಹಾಗಾದಾಗ ಅವುಗಳಿಗೆ ಹೊಸ ಸಂವಹನ ಸಾಧ್ಯತೆಗಳು ಒದಗುವುದು ಅವುಗಳ ಜಾನರ್ನಿಂದ ಅಲ್ಲ, ಅವು ಪ್ರವೇಶಿಸುವ ಮಾದ್ಯಮಗಳಿಂದ. ಅಂದರೆ ಗದ್ಯವನ್ನು ಕಾವ್ಯವಾಗಿ ಕಾವ್ಯವನ್ನು ಗದ್ಯವಾಗಿ ಪ್ರಕಾರಾಂತರಿಸಿದಾಗ ಒದಗದ ಪಲ್ಲಟಗಳು ರಂಗಪಠ್ಯ, ಚಿತ್ರಪಠ್ಯವಾದಾಗ ಒದಗುತ್ತವೆ. ಆದ್ದರಿಂದಲೆ ರಂಗಭೂಮಿ, ಚಿತ್ರರಂಗದ ಸಾಧ್ಯತೆಗಳನ್ನು ಸಾಹಿತ್ಯ ಪ್ರಕಾರದ ಸಾಧ್ಯತೆಗಳೊಂದಿಗೆ ಹೋಲಿಸಲಾಗದು. ಅಲ್ಲದೆ ಸಿನಿಮಾಗೆ ಇರುವ ಬೃಹತ್ ವಾಣಿಜ್ಯ ರಾಜಕಾರಣದ ಸ್ಪೇಸು ಸಾಹಿತ್ಯಕ್ಕೆ ಇಲ್ಲವಲ್ಲ!
ಪ್ರಕಾರ ಮೀಮಾಂಸೆ
ಆಮೂರ, ಗಿರಡ್ಡಿ ಇವರು ನಿರ್ಧಿ ಷ್ಟವಾಗಿ ಕಾದಂಬರಿ ಮತ್ತು ಸಣ್ಣ ಕತೆಗಳ ಪ್ರಕಾರ ತತ್ವಗಳನ್ನು, ಪ್ರಕಾರಕೇಂದ್ರಿತ ಮೀಮಾಂಸೆಯನ್ನು ಶೋಧಿಸಲು ಯತ್ನಿಸುತ್ತಿದ್ದಾರೆ. ಕನ್ನಡ ಕಥನ ಸಾಹಿತ್ಯ: ಕಾದಂಬರಿ, ಕನ್ನಡ ಕಥನ ಸಾಹಿತ್ಯ: ಸಣ್ಣ ಕತೆ, ಕನ್ನಡ ಸಣ್ಣ ಕತೆಯ ಹೊಸ ಒಲವುಗಳು, ಕನ್ನಡ ಕಾದಂಬರಿಯ ಸ್ವರೂಪ ಮೊದಲಾದ ಗ್ರಂಥಗಳಲ್ಲಿ ಈ ಪ್ರಕಾರ ಮೀಮಾಂಸೆಯ ಶೋಧವನ್ನು ನಾವು ಕಾಣಬಹುದು. ಚರಿತ್ರೆ ರಚನೆ, ಮೌಲ್ಯಮಾಪನ ಮತ್ತು ಒಳನೋಟವಾದಿ ವಿಶ್ಲೇಷಣೆ ಹಾಗೂ ಪ್ರಕಾರತತ್ವಗಳ ಮಂಡನೆ ಇದೆಲ್ಲವು ಇಲ್ಲಿ ಏಕಕಾಲಕ್ಕೆ ಮಂಡಿತವಾಗುತ್ತಿದೆ. ನಮ್ಮ ಕಾವ್ಯಮೀಮಾಂಸೆಯು ತನ್ನ ಹೆಸರಿನಲ್ಲಿ ಕಾವ್ಯಕ್ಕೆ ಮಾತ್ರ ಸೀಮಿತವಾಗಿದೆ ಎಂದು ತಿಳಿದು ರಹಮತ್ ಅವರು ಕನ್ನಡ ಸಾಹಿತ್ಯ ಮೀಮಾಂಸೆ ಎಂಬ ಸಂಕಲನವನ್ನು ಪ್ರಕಟಿಸಿದ್ದಾರೆ. ಏಕಕಾಲಕ್ಕೆ ಮೀಮಾಂಸೆ ಮತ್ತು ವಿಶರ್ೆಗಳೆರಡನ್ನು ಸಮ್ಮೇಳಗೊಳಿಸುವ ಯತ್ನ ಇದಾಗಿದೆ. ಆದರೆ ಇದಕ್ಕೆ ಕನ್ನಡ ವಿದ್ವತ್ ಲೋಕದಲ್ಲಿ ಅಷ್ಟಾಗಿ ಇನ್ನೂ ಅಂಗೀಕಾರ ಸಿಕ್ಕಂತೆ ಕಾಣುತ್ತಿಲ್ಲ. ಕನ್ನಡಕ್ಕೆ ಬೇಕು ಕನ್ನಡದ್ದೆ ವ್ಯಾಕರಣ ಎಂಬ ಕಲಹವೇದಿಕೆಯನ್ನು ಡಿ.ಎನ್.ಶಂಕರಭಟ್ಟರು ನಿಮರ್ಿಸಿಕೊಟ್ಟ ನಂತರದಲ್ಲಿ ಕನ್ನಡದ್ದೆ ಮೀಮಾಂಸೆಯ ಚರ್ಚೆಯು ಭಟ್ಟಪೂರ್ವ ಚರ್ಚೆಗಳನ್ನೂ ಒಳಗೊಂಡಂತೆ ಸಾಕಷ್ಟು ಗರಿಗೆದರಿಕೊಂಡಿದೆ. ಕನ್ನಡದ್ದೆ ತನವನ್ನು ಮೀಮಾಂಸೆ, ವ್ಯಾಕರಣ, ಛಂದಸ್ಸು, ಸ್ತ್ರೀವಾದ ಮೊದಲಾದ ವಲಯಗಳಲ್ಲು ನಂತರದಲ್ಲಿ ಕಂಡುಕೊಳ್ಳುವ ಯತ್ನಗಳೂ ನಡೆಯುತ್ತ ಬಂದಿವೆ. ಭಟ್ಟೋತ್ತರ ಕಾಲದಲ್ಲಂತು ಇವು ಹೆಚ್ಚು ಹೆಚ್ಚು ಪ್ರಕಾರ ಕೇಂದ್ರಿತ ಆಗುತ್ತಿವೆ. ವಿಮರ್ಶೆಯ ತತ್ವ, ಕಾವ್ಯ ತತ್ವ, ಪ್ರಬಂಧ, ಕಾದಂಬರಿ, ಕತೆಯ ತತ್ವಗಳು ಹೀಗೆ ಆಧುನಿಕವಾದ ಮುಖ್ಯ ಪ್ರಕಾರಗಳ ಬಗ್ಗೆ ಈಗಾಗಲೇ ಸಾಕಷ್ಟು ತತ್ವಜಿಜ್ಞಾಸೆ ನಡೆದಿದೆ. ಜಾನಪದ ಮತ್ತು ಪ್ರಾಚೀನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಜಿ.ಎಸ್.ಎಸ್., ಸಬರದ, ವೀರಣ್ಣ ದಂಡೆ ಮೊದಲಾದವರು ಕನ್ನಡದ್ದೆ ಮೀಮಾಂಸೆಯ ಕ್ರೋಡೀಕರಣದ ನೆಲೆಯಲ್ಲಿ ಈಗಾಗಲೆ ಸ್ವಲ್ಪ ಕೆಲಸ ಮಾಡಿದ್ದಾರೆ.14ಸಂಸ್ಕೃತ ಮತ್ತು ಇಂಗ್ಲಿಶಿನ ಹಲವು ತತ್ವಗಳ ಹಿನ್ನೆಲೆಯಲ್ಲೆ ಈ ಮೀಮಾಂಸೆಯ ಜಿಜ್ಞಾಸೆ ನಡೆಯುತ್ತ ಬಂದಿದೆ. ಆದರೆ ಕನ್ನಡದ ದೃಷ್ಟಾಂತಗಳ ಮೂಲಕ ಇಲ್ಲಿನವೆ ತತ್ವಗಳನ್ನು ಕಂಡುಕೊಳ್ಳುವ ಅಥವಾ ಕನ್ನಡ ಸಾಹಿತ್ಯ ಪ್ರಕಾರಗಳಿಂದಲೇ ಹೊರಡುವ ಪ್ರಕಾರ ತತ್ವಗಳನ್ನು ಕ್ರೋಡೀಕರಿಸಿಕೊಳ್ಳುವ ಕೆಲಸ ಇನ್ನೂ ಆಗಬೇಕಾಗಿದೆ. ಕೆಲಮಟ್ಟಿಗೆ ರಹಮತರ 'ಇಲ್ಲಿ ಯಾರೂ ಮುಖ್ಯರಲ'್ಲ ಕೃತಿ ಈ ಕಡೆಗೆ ಪ್ರಯತ್ನ ಮಾಡಿದೆ.
ನಮ್ಮ ಆಧುನಿಕ ವಿಮರ್ಶೆ-ಮೀಮಾಂಸೆಗಳ ಚಿಂತನಾ ಪ್ರಸ್ಥಾನದುದ್ದಕ್ಕು ಇರುವ ಎರಡು ಮಗ್ಗುಲುಗಳನ್ನು ನಾವು ಗಮನಿಸಬಹುದು. ಇವುಗಳನ್ನು ಬಿಕ್ಕಟ್ಟುಗಳೆಂದೂ ಕರೆಯಬಹುದು. 1. ವಿಮರ್ಶೆ ಮತ್ತು ಮೀಮಾಂಸೆಗಳ ಪರಸ್ಪರ ಕರ್ಷಣ. ಇವುಗಳನ್ನು ಬೇರೆ ಬೇರೆಯಾಗಿ ನೋಡಬೇಕು ಮತ್ತು ಒಟ್ಟಾಗಿ ನೋಡಬೇಕು ಎಂಬ ಎರಡೂ ತಿಳುವಳಿಕೆ ನಮ್ಮಲ್ಲಿದೆ. ಇವೆರಡೂ ಒಂದೇ ಪ್ರಕಾರದ ಕವಲುಗಳು, ಇವು ಎರಡು ಪ್ರತ್ಯೇಕ ಪ್ರಕಾರಗಳು ಎಂಬ ಎರಡೂ ತಿಳುವಳಿಕೆಗಳೂ ಇವುಗಳ ಸುತ್ತ ಇವೆ. ಈ ತಿಳುವಳಿಕೆಗೆ ಹೊಂದಿಕೊಂಡಂತೆ ಇರುವ ಇನ್ನೊಂದು ಮಗ್ಗುಲೆಂದರೆ 2. ತತ್ವ ಮತ್ತು ಆಚರಣೆಗಳ ನಡುವಿನ ಕರ್ಷಣ. ಈ ಹಿನ್ನೆಲೆಯಲ್ಲಿ ಯಾವುದು ತತ್ವ, ಯಾವುದು ಆಚಾರ ಎಂಬ ಗೊಂದಲವೂ ನಮ್ಮಲ್ಲಿದೆ. ಹಾಗಾಗಿ ಮೀಮಾಂಸೆಯನ್ನೆ ವಿಮರ್ಶೆಯ ಕವಲೆಂದೂ, ವಿಮಶರ್ೆಯನ್ನು ಮೀಮಾಂಸೆಯ ಒಂದು ಟಿಸಿಲೆಂದೂ ನಮ್ಮಲ್ಲಿ ಭಾವಿಸಲಾಗಿದೆ. ಅಲ್ಲದೆ ಮೀಮಾಂಸೆಯು ತತ್ವವಾದರೆ ಅದರ ಆಚಾರವೇ ವಿಮರ್ಶೆಎಂಬ ಖಚಿತ ತಿಳುವಳಿಕೆಯೂ ನಮ್ಮಲ್ಲಿದೆ. (ಕುರ್ತಕೋಟಿಯವರು ತಮ್ಮ ವಿಮರ್ಶೆಯಲ್ಲಿ ಸಂಸ್ಕೃತ ಮೀಮಾಂಸೆಯ ತತ್ವಗಳನ್ನು ಕನ್ನಡ ವಿಮರ್ಶೆವಲಯದಲ್ಲಿ ಅನ್ವಯಿಸಿ ಬಳಸಿ ಆಚಾರಗಳನ್ನಾಗಿಸಲು ಯತ್ನಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು) ಹೀಗಾಗಿ ನಮ್ಮಲ್ಲಿ ವಿಮರ್ಶೆಮತ್ತು ಮೀಮಾಂಸೆಗಳ ನಡುವಣ ಕರ್ಷಣ ಮತ್ತು ತತ್ವ ಮತ್ತು ಆಚಾರಗಳ ನಡುವಣ ಕರ್ಷಣವು ಒಂದೆ ನಾಣ್ಯದ ಎರಡು ಮುಖಗಳಂತೆ-ಬಿಕ್ಕಟ್ಟುಗಳಂತೆ ನಮ್ಮ ವಿಮರ್ಶೆಯ ಪರಂಪರೆಯಲ್ಲಿ ಇರುವುದನ್ನು ಕಾಣಬಹುದು. ಪ್ರಕಾರಗಳನ್ನು ನಾವು ಕಲಸಿಕೊಂಡಾಗ ಅಥವಾ ಪ್ರಕಾರಗಳೇ ಕಾಲಾನಂತರದಲ್ಲಿ ಫ್ಯೂಶನ್ನಿಗೆ ಗುರಿಯಾದಾಗ ಉಂಟಾಗುವ ತೊಡಕು ಇದು.
ಭಾರತೀಯ ಕಾವ್ಯ ಮೀಮಾಂಸೆಯ ತತ್ವಗಳನ್ನು ಮತ್ತು ಇಂಗ್ಲಿಶ್ ವಿಮರ್ಶೆಯ ತತ್ವಗಳನ್ನು ಕನ್ನಡದಲ್ಲಿ ಅನ್ವಯಿಸುವ ಕೆಲಸಗಳು ನಮ್ಮ ವಿಮರ್ಶೆಯುದ್ದಕ್ಕು ಆಗುತ್ತ ಬಂದಿವೆ. ಅನ್ಯದ ಬಗ್ಗೆ ಪ್ರತಿರೋಧಗಳೂ ವ್ಯಕ್ತವಾಗುತ್ತ ಬಂದಿವೆ. ವಿಚಾರಗಳಿಗೆ ರಾಜಕೀಯ ಗಡಿಗಳು ಇರುವುದಿಲ್ಲ; ಹಾಗಾಗಿ ವಿಚಾರಗಳನ್ನು ಸ್ವೀಕರಿಸುವುದರಲ್ಲಿ ತಪ್ಪಿಲ್ಲ ಎಂಬ ವಾದವೂ ನಮ್ಮಲ್ಲಿದೆ. ಅನ್ಯ ಸಂಸ್ಕೃತಿಯ ವಿಚಾರಗಳನ್ನು ಹಾಗೆ ಹಾಗೆ ಹಸಿಯಾಗಿ ಅನ್ವಯಿಸಬಾರದು, ಅವನ್ನು ಕನ್ನಡಕ್ಕೆ ತಕ್ಕಂತೆ ರೂಪಾಂತರಿಸಿಕೊಂಡು ಸ್ವೀಕರಿಸಬೇಕು ಎಂಬ ವಿಚಾರವೂ ನಮ್ಮಲ್ಲಿದೆ. ಸಾಂಸ್ಕೃತಿಕ ಜಾಗತೀಕರಣವನ್ನು ಯಾರು ತಾನೆ ತಡೆಯಲು ಸಾಧ್ಯ? ಸಾಹಿತ್ಯ ವಿಮರ್ಶೆಯ ವಿಧಾನಗಳನ್ನು ಓದಿನ ಸಂದರ್ಭದ ಅಗತ್ಯಕ್ಕೆ ಮತ್ತು ಪಠ್ಯದ ಅಗತ್ಯಕ್ಕೆ ಅನುಗುಣವಾಗಿ ಸೃಷ್ಟಿಸಿಕೊಳ್ಳಬೇಕೋ? ಈಗಾಗಲೇ ಇರುವ ತತ್ವ-ಸಿದ್ಧಾಂತ-ವಿಧಾನಗಳನ್ನೆ ಅನ್ವಯಿಸಬೇಕೋ? ಸಾಹಿತ್ಯ ಹೇಗೆ ಚಲನಶೀಲವಾದುದೊ ಹಾಗೆಯೆ ಆ ಸಾಹಿತ್ಯದ ಅನುಸಂಧಾನವೂ ಚಲನಶೀಲವಾಗಬೇಕಲ್ಲವೆ?
ಸಂಗ್ರಹ ಸಂಪಾದನಾ ಮಾರ್ಗ ಮತ್ತು ಪ್ರಕಾರ ದೃಷ್ಟಿ
ನಮ್ಮ ಪ್ರಾಚೀನರ ಸಾಹಿತ್ಯ ವಿಮರ್ಶೆಯ ಒಂದು ಬಹು ಮುಖ್ಯವಾದ ವಲಯವೆಂದರೆ ಸಂಪಾದನೆಯ ವಲಯ. ಇಂದು ಕೂಡ ಇದು ಒಂದು ವಿಮರ್ಶೆಯ ಪಂಥವಾಗಿ ಚಾಲ್ತಿಯಲ್ಲಿದೆ. ಮಲ್ಲಿಕಾಜರ್ುನ, ಮಲ್ಲಕವಿ, ಅಭಿನವ ವಾದಿವಿದ್ಯಾನಂದ ಇವರುಗಳ ಕಾವ್ಯಸಾರಗಳು ಮತ್ತು ಹಲಗೆಯಾರ್ಯ, ಸಿದ್ಧವೀರ, ಸಿದ್ಧಲಿಂಗಯತಿ, ಶಿವಗಣಪ್ರಸಾದಿ ಮಹದೇವಯ್ಯ ಮೊದಲಾದವರ ಶೂನ್ಯಸಂಪಾದನೆಗಳು ನಮ್ಮ ಪ್ರಾಚೀನರ ಪ್ರಕಾರಬದ್ಧತೆಗೆ ಸಾಕ್ಷಿಯಾಗಿವೆ. ನಮ್ಮವರು ಯಾವುದೆ ಸಾಹಿತ್ಯಬರವಣಿಗೆ ಇರಲಿ ಅದನ್ನು ಪದ್ಯಕಾವ್ಯ ಇಲ್ಲವೆ ಗದ್ಯಕಾವ್ಯಗಳಲ್ಲಿ ಬರೆಯುವ ಇವೆರಡೂ ಅಲ್ಲದಿದ್ದರೆ ಚಂಪೂಕಾವ್ಯ ಪ್ರಕಾರದಲ್ಲಿ ಬರೆಯುವ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದಾರೆ. (ಈ ಪ್ರಕಾರಬದ್ಧತೆಯನ್ನು ಏಕಕಾಲಕ್ಕೆ ಪ್ರಕಾರಾಂಧತೆ ಎಂದೂ ಅಖಂಡತೆ ಎಂದೂ ಕರೆಯಬಹುದು.) ಈ ಕಾರಣಕ್ಕಾಗಿಯೆ ನಮ್ಮಲ್ಲಿ ಪ್ರತಿಯೊಂದು ಬರವಣಿಗೆಯೂ ಕಾವ್ಯಪ್ರಕಾರದಲ್ಲಿಯೇ ಅಬಿವ್ಯಕ್ತವಾಗಿದೆ. ಪ್ರಾಚೀನ ವಿಮಶರ್ೆಯೂ ಕೂಡ ಕಾವ್ಯಪ್ರಕಾರದಲ್ಲೆ ಪ್ರಕಟವಾಗಿದೆ. ಆಧುನಿಕ ಸಂದರ್ಭದಲ್ಲು ಸಹಿತ ಇದು ಮುಂದುವರೆದಿದೆ. ನಾಟಕ ಕಾವ್ಯ, ಕಾದಂಬರಿ, ಒಡನಾಟಕಥನ ಹೀಗೆ ಹಲವು ಪ್ರಕಾರಗಳಲ್ಲಿ ಆಧುನಿಕ ವಿಮರ್ಶೆಸಂಭವಿಸಿದೆ. ಸಂಭವಿಸುತ್ತಿದೆ. ಈ ನೆಲೆಯಲ್ಲಿ ವಿಮರ್ಶೆಯ ಸ್ವರೂಪದ ಮರುವ್ಯಾಖ್ಯಾನವೂ ಆಗಬೇಕಾಗಿದೆ. ವಿಮರ್ಶೆಯೆಂದರೆ ಅದು ಗದ್ಯರೂಪಿ ಬರವಣಿಗೆ ಮಾತ್ರ ಅಲ್ಲ; ಅದು ಒಂದು ಸಾಹಿತ್ಯ ಪ್ರಕಾರ ಮಾತ್ರ ಅಲ್ಲ. ಅದು ಹಲವು ಪ್ರಕಾರಗಳು ಪಂಥಗಳು ಇರುವ ಒಂದು ವಿರಾಟ್ ಜ್ಞಾನವಲಯ, ಹತ್ತು ಹಲವು ಪ್ರಕಾರಗಳಲ್ಲಿ ಅಭಿವ್ಯಕ್ತಗೊಳ್ಳುತ್ತಿರುವ ಒಂದು ಸಾಹಿತ್ಯ ಕ್ಷೇತ್ರ ಎಂಬ ತಿಳುವಳಿಕೆಗೆ ನಾವು ಬರಬೇಕಾಗಿದೆ.
ಆಯ್ಕೆ ಮತ್ತು ಅಲಕ್ಷ್ಯತೆಯ ರಾಜಕಾರಣ
ಸಂಗ್ರಹ-ಸಂಪಾದನಾ ಮಾರ್ಗದಲ್ಲಿ ಪ್ರಕಟಗೊಂಡಿರುವ ಒಂದು ಮುಖ್ಯ ರಾಜಕಾರಣವೆಂದರೆ ಅದು ಆಯ್ಕೆ ಮತ್ತು ಅಲಕ್ಷ್ಯತೆಯ ರಾಜಕಾರಣ. ಆಯ್ಕೆ ಮತ್ತು ಸಂಯೋಜನೆಗಳು ಸಂಪಾದನೆಯ ಮುಖ್ಯ ಕಾರ್ಯಗಳು. ಆಯ್ಕೆಯ ಕ್ರಿಯೆ ನಡೆಯುವಾಗಲೇ ಅಲಕ್ಷಿಸುವ ಕ್ರಿಯೆಯೂ ನಡೆಯುತ್ತಲೇ ಇರುತ್ತದೆ. ಹಾಗಾಗಿ ಸಂಗ್ರಹ-ಸಂಪಾದನಾ ಮಾರ್ಗದಲ್ಲಿ ಆಯ್ಕೆ ಮತ್ತು ಅಲಕ್ಷ್ಯದ ರಾಜಕಾರಣವೆ ವಿಮರ್ಶೆಯನ್ನು ನಿರ್ವಹಿಸುತ್ತದೆ. ಒಂದೊಂದು ಆಯ್ಕೆ ಸಂಯೋಜನೆಗಳೂ ಒಂದೊಂದು ಓದಿನ ಪ್ರಸ್ತುತಿ ಆಗಿರುತ್ತವೆ. ನಮ್ಮಲ್ಲಿ ಮಲ್ಲಿಕಾರ್ಜುನನಿಂದ ಆರಂಭವಾದ ಈ ಪರಂಪರೆಯು 19ನೆ ಶತಮಾನದ ಸಂಗ್ರಹ ಸಂಪಾದನಾ ಕಾರ್ಯದಿಂದ ಸಮೃದ್ಧವಾಗಿ ಬೆಳೆದಿದೆ. ಸಾಹಿತ್ಯ ಚರಿತ್ರೆ ರಚನೆಯು ಹೇಗೆ ನಮ್ಮಲ್ಲಿ ಪ್ರಕಾರ ಕೇಂದ್ರಿತವಾಗಿ ಮತ್ತು ಲೇಖಕಕೇಂದ್ರಿತವಾಗಿ ನಡೆದಿದೆಯೋ ಅದೇ ರೀತಿಯಲ್ಲಿ ಸಂಗ್ರಹ-ಸಂಪಾದನ ಧಾರೆಯೂ ಕೂಡ ಹೆಚ್ಚು ಪ್ರಕಾರಕೇಂದ್ರಿತವಾಗಿ, ಲೇಖಕ ಕೇಂದ್ರಿತವಾಗಿಯೆ ನಡೆದಿದೆ. ಇಂದಿನ ಅಕಾಡೆಮಿಯ ಶತಮಾನದ ಸಾಹಿತ್ಯ ಸಂಗ್ರಹಗಳು, ಸಂಸ್ಕೃತಿ ಇಲಾಖೆಯ ಸುವರ್ಣ ಸಾಹಿತ್ಯ ಮಾಲೆಯ ಸಂಕಲನಗಳು, ಅಕ್ಷರ ಹೊಸ ಕಾವ್ಯ, ಆಧುನಿಕ ಕನ್ನಡ ಸಣ್ಣಕತೆಗಳು, ಹೀಗೆ ಈ ಪಂಥಕ್ಕೆ ನೂರಾರು ಉದಾಹರಣೆಗಳನ್ನು ನೀಡಬಹುದು. ಇಲ್ಲೆಲ್ಲ ಆಯ್ಕೆ ಮತ್ತು ಅಲಕ್ಷ್ಯವು ತನ್ನದೆ ರೀತಿಯಲ್ಲಿ ಕೆಲವನ್ನು ಹೊರಗಿಡುವ ಮತ್ತು ಕೆಲವನ್ನು ಪುರಸ್ಕರಿಸುವ ಕೆಲಸ ಮಾಡುತ್ತಿರುತ್ತದೆ. ಪ್ರಧಾನ-ಅಧೀನತೆಯ ನಿರ್ವಚನವನ್ನು ಮಾಡುತ್ತಿರುತ್ತದೆ.
ಇಂದು ಪ್ರಕಟವಾಗುತ್ತಿರುವ ಅನೇಕ ವಿಮಶರ್ಾ ಸಂಕಲನಗಳು, ವಿಚಾರಸಂಕಿರಣ ಉತ್ಪಾದಿತ ಸಂಕಲನಗಳು, ಸಾಮುದಾಯಿಕ ಸಂಗ್ರಹ-ಸಂಪಾದನೆಗಳು ಈ ಹೊತ್ತಿನ ಪ್ರಿಂಟ್ ಕ್ಯಾಪಿಟಲಿಸಮ್ಮಿನ ಭಾಗವಾಗಿಯೆ ಪ್ರಕಟಗೊಳ್ಳುತ್ತಿವೆ. ಹೀಗಾಗಿ ಇವುಗಳ ಹಿಂದೆ ವಾಣಿಜ್ಯ ರಾಜಕಾರಣವೂ ಇದೆ. ಆಯ್ಕೆ ಮತ್ತು ಅಲಕ್ಷ್ಯತೆಯ ರಾಜಕಾರಣದ ಹಿಂದಿನ ಒಂದು ಮುಖ್ಯ ನಿಯಂತ್ರಕವಾಗಿ ಈ ವಾಣಿಜ್ಯದ ರಾಜಕಾರಣ ಇದೆ. ವಯಕ್ತಿಕ ಸಂಕಲನಗಳನ್ನು ಹೊರತುಪಡಿಸಿದಂತೆ ಇತರೆಡೆ ಶ್ರೇಷ್ಠತೆಯ ಕಲ್ಪನೆ, ಮತ್ತು ಪ್ರಾತಿನಿದಿಕತೆಯ ಸಮಸ್ಯೆಗಳು ಈ ರಾಜಕಾರಣದಲ್ಲಿ ಸಾಮಾನ್ಯವೆಂಬಂತೆ ಇವೆ. ಪ್ರಾದೇಶಿಕ ಪ್ರಾತಿನಿಧ್ಯ, ಸಂವೇದನೆಗಳ ಪ್ರಾತಿನಿಧ್ಯ, ಜನಾಂಗೀಯ ಪ್ರಾತಿನಿಧ್ಯ, ಲಿಂಗಾಧಾರಿತ ಪ್ರಾತಿನಿಧ್ಯ ಹೀಗೆ ಹಲವು ರೀತಿಯ ಪ್ರಾತಿನಿಧಿಕತೆಯ ಇಕ್ಕಟ್ಟುಗಳನ್ನು ನಾವಿಂದು ಸಂಗ್ರಹ, ಸಂಪಾದನೆಗಳಲ್ಲಿ ಎದುರಿಸುತ್ತಿದ್ದೇವೆ. ಇದರ ಜೊತೆಗೇ ಇರುವ ಇನ್ನೊಂದು ಬಿಕ್ಕಟ್ಟೆಂದರೆ ಸೋ ಕಾಳ್ಡ್ ಶ್ರೇಷ್ಠತೆಯ ವ್ಯಸನ.
ಪತ್ರಿಕೆಗಳು ಕೂಡ ಇಂದು ಸಾಹಿತ್ಯ ಪ್ರಸರಣದಲ್ಲಿ ತಮ್ಮದೇ ಪಾತ್ರ ವಹಿಸುತ್ತಿವೆ. ಇಲ್ಲು ಆಯ್ಕೆ ಮತ್ತು ಅಲಕ್ಷ್ಯದ ರಾಜಕಾರಣ ಇದ್ದೇ ಇದೆ. ಸಾಹಿತ್ಯದ (ವಿಮಶರ್ೆಯ) ಭಾಷೆಯನ್ನೆ, ಆಕೃತಿಯನ್ನೆ (ಕೆಲವೊಮ್ಮೆ ಪದಮಿತಿ ಹೇರುವ ಮೂಲಕವು) ಪತ್ರಿಕೆಗಳು ನಿಯಂತ್ರಿಸುತ್ತಿವೆ. ಏನನ್ನು ಬರೆಯಬೇಕು? ಯಾರನ್ನು ಕುರಿತು ಬರೆಯಬೇಕು? ಹೇಗೆ ಬರೆಯಬೇಕು? ಇತ್ಯಾದಿ ಸಂಗತಿಗಳನ್ನು ಇಂದು ಪತ್ರಿಕೆಗಳು ನಿರ್ಧರಿಸುತ್ತಿವೆ. ಇಂದು ಕಾವ್ಯಕ್ಕೆ ಒಳ್ಳೆಯ ಮಾರುಕಟ್ಟೆ ಇಲ್ಲ. (ವಿತರಣಾ ವ್ಯವಸ್ಥೆ?) ಹಾಗಾಗಿ ಪ್ರಿಂಟ್ ಕ್ಯಾಪಿಟಲಿಸಮ್ಮು ಕಾವ್ಯವನ್ನು ಅಲಕ್ಷಿಸುತ್ತಿದೆ. ವಿಮರ್ಶೆ-ವಿಚಾರ ಸಾಹಿತ್ಯಗಳಿಗೆ ಮಾರುಕಟ್ಟೆ ಇದೆ. ಹಾಗಾಗಿ ಅವು ಪ್ರಿಂಟಾಗುತ್ತವೆ. ಜನಾಬಿರುಚಿಯನ್ನು ನಿರ್ಮಿಸುವ-ತಿದ್ದುವ ಜವಾಬ್ದಾರಿಗಿಂತ ಮುದ್ರಣ ಬಂಡವಾಳಶಾಹಿಗೆ ವ್ಯಾಪಾರ ಮಾಡುವುದು ಮಾತ್ರ ಮುಖ್ಯವಾಗಿದೆ. ಹೀಗಾಗಿ ಅದರ ತಾಳಕ್ಕೆ ತಕ್ಕಂತೆ ಸಾಹಿತ್ಯ ಉತ್ಪಾದನೆಯಾಗಬೇಕಾಗಿದೆ. ಇಂದು ಸಾಹಿತಿಗಳಿಗಿಂತ ಪ್ರಕಾಶಕರೆ ಹೆಚ್ಚು ತೂಕವಾದ ವ್ಯಕ್ತಿಗಳಾಗಿದ್ದಾರೆ!
ಪ್ರಕಾರಗಳ ಕರ್ಷಣ
ಎಲ್ಲವೂ ನಮ್ಮಲ್ಲಿ ಪ್ರಕಾರಗಳಾಗಿಯೆ ಸಂಭವಿಸುವುದಿಲ್ಲ. ಕೆಲವು ಮಿಶ್ರಿತ ಪ್ರಕಾರಗಳಾಗಿಯು, ಕೆಲವು ಅಪ್ರಕಾರಗಳಾಗಿಯು ಸಂಭವಿಸುತ್ತವೆ. ಕೆಲವು ಬರಹಗಳನ್ನು ಇರುವ ಯಾವ ಪ್ರಕಾರಗಳಿಗು ಸೇರಿಸಲು ಆಗುವುದಿಲ್ಲ. ಹೊಸ ಪ್ರಕಾರಗಳಾಗಿಯೆ ಅವನ್ನು ನಾಮಕರಣ ಮಾಡಬೇಕಾಗುತ್ತದೆ. ಸಾಹಿತ್ಯದ ಚಲನಶೀಲತೆಯ ಲಕ್ಷಣ ಇದು. ದೇವನೂರರ ಕುಸುಮಬಾಲೆಯು ಕಾವ್ಯ ಮತ್ತು ಕಾದಂಬರಿಯ ಅಂಶಗಳೆರಡನ್ನು ಒಳಗೊಂಡಿದೆ. ತೇಜಸ್ವಿಯವರ ಮಾಯಾಲೋಕವನ್ನು ಅವರು ಕಾದಂಬರಿ ಎಂದು ಕರೆದಿಲ್ಲ, ಕಂಬಾರರು ತಮ್ಮ ಚಕೋರಿಯನ್ನು ಮಹಾಕಾವ್ಯವೆಂದು ಕರೆದುಕೊಂಡಿದ್ದಾರೆ, ಆದರೆ ನಾವು ಅದನ್ನು ಕಾದಂಬರಿಯೆಂದು ಗುತರ್ಿಸಿದ್ದೇವೆ. ಅಂಕಣ ಬರಹಗಳು, ದೂರದರ್ಶನ ಕಾರ್ಯಕ್ರಮಗಳ ರಿವ್ಯೂಗಳು, ರೇಡಿಯೊ ಚಿಂತನೆಗಳು ಹೀಗೆ ಹಲವು ಹೊಸ ಪ್ರಕಾರಗಳು ಈಗೀಗ ಹುಟ್ಟುತ್ತಿವೆ. ಕೆಲವರು ಕಿರುಗತೆ, ಒಡನಾಟಕಥನ, ಕವಿತೆ, ವಿಶ್ಲೇಷಣೆಗಳನ್ನೆಲ್ಲ ಒಟ್ಟಿಗೆ ಸೇರಿಸಿ ಮಿಶ್ರಣಗಳನ್ನು (ಫ್ಯೂಶನ್) ಹುಟ್ಟಿಸುತ್ತಿದ್ದಾರೆ. ಇಂತಹ ಕಡೆ ಪ್ರಕಾರ ದೃಷ್ಟಿಕೋನವೆ ಬಿಕ್ಕಟ್ಟಿಗೆ ಸಿಲುಕುತ್ತದೆ. ಈ ದೃಷ್ಟಿಯೆ ನಾವು ಮೀರಬೇಕಾದ ಮಿತಿಯಾಗಿಬಿಡುತ್ತದೆ.
ಅಲ್ಲದೆ ನಮ್ಮಲ್ಲಿ ವಿಮರ್ಶೆ, ಸಂಶೋಧನೆ, ಅಧ್ಯಯನಗಳು ಪ್ರತ್ಯೇಕ ಪ್ರಕಾರಗಳಾಗಿ ಇಂದು ಉಳಿದಿಲ್ಲ, ಇವೆಲ್ಲ ಕಲಸಿಕೊಂಡಿವೆ. ಸಂಶೋಧನೆ, ಅಧ್ಯಯನಗಳ ಹೆಸರಿನಲ್ಲಿ ವಿಮರ್ಶೆಗಳೇ ಹುಟ್ಟುತ್ತಿವೆ. ಇವುಗಳ ನಡುವಣ ಅಂತಃಸಂಬಂಧವನ್ನು ನಾವಿನ್ನೂ ನಿರ್ವಚಿಸಿಕೊಳ್ಳಬೇಕಾಗಿದೆ. ಹಾಗೆಯೆ ಮೀಮಾಂಸೆ ಮತ್ತು ವಿಮರ್ಶೆಗಳ ನಡುವೆ ಕೂಡ ಒಂದು ಅಂತಃಸಂಬಂಧ ಏರ್ಪಡುತ್ತಿದೆ. ತತ್ವಗಳು ಅನ್ವುಯಕ್ಕೆ ಗುರಿಯಾಗುತ್ತಲೆ; ಆಚರಣೆಯಿಂದ ತತ್ವಗಳನ್ನು ಕ್ರೋಡೀಕರಿಸಿಕೊಳ್ಳುವ ಕೆಲಸಗಳೂ ನಡೆಯುತ್ತಿವೆ. ಹೀಗಾಗಿ ತತ್ವ ಮತ್ತು ಆಚಾರಗಳ ನಡುವೆ ಅಂದರೆ ವಿಮರ್ಶೆ ಮತ್ತು ಮೀಮಾಂಸೆಗಳ ನಡುವೆ ಆದಾನ ಪ್ರದಾನ ನಡೆಯುತ್ತಿದೆ. ಇಂದು ಇವೆರಡೂ ಭಿನ್ನ ಪ್ರಕಾರಗಳಾಗಿ ಉಳಿದಿಲ್ಲ. ಕಲಸಿಕೊಳ್ಳುತ್ತಿವೆ. ಸಾಹಿತ್ಯ ವಿಮರ್ಶೆ ಸಾಹಿತ್ಯ ಮೀಮಾಂಸೆ, ಸಾಹಿತ್ಯ ಅಧ್ಯಯನ, ಸಾಹಿತ್ಯ ಸಂಶೋಧನೆಗಳೆಲ್ಲವೂ ಇಂದು ತಮ್ಮ ನಡುವಣ ಗೆರೆಗಳನ್ನು ಅಳಿಸಿಕೊಳ್ಳುತ್ತಿವೆ. ಒಂದು ಇನ್ನೊಂದೆ ಆಗುವ ಕ್ರಿಯೆ ಜರುಗುತ್ತಿದೆ. ಇದು ನಮ್ಮ ವಿಮರ್ಶೆಯ ಸಮಸ್ಯೆಯಲ್ಲ, ನಡಿಗೆ.
ಕಾಲಘಟ್ಟ ಸಂವೇದನೆಗಳ ಪ್ರಾಕಾರಿಕ ಅನ್ವಯೀಕರಣ
ಭಾರತೀಯ ಕಾವ್ಯಮೀಮಾಂಸೆ ಎಂಬ ಕಲ್ಪಿತ ರಚನೆಯು ನಮ್ಮನ್ನು ಸುಮಾರು ಒಂದು ಶತಮಾನ ಕಾಲ ಆಳಿದೆ. ಇಂದಿಗೂ ಇದರಿಂದ ನಾವು ಹೊರಬರುವ ದಾರಿಗಳು ಸ್ಪಷ್ಟವಾಗಿ ಕಾಣುತ್ತಿಲ್ಲ. 20ನೆ ಶತಮಾನದಲ್ಲಿ ನಮ್ಮ ವಿಮರ್ಶೆಯಲ್ಲಿ ಉಂಟಾದ ಇನ್ನೊಂದು ಕಲ್ಪಿತ ರಚನೆ ಎಂದರೆ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯವೆಂಬ ವರ್ಗೀಕರಣ ಮೀಮಾಂಸೆ. ಈ ಕಾಲಘಟ್ಟ-ಸಂವೇದನೆ ಆಧಾರಿತವಾದ ವರ್ಗೀಕರಣಗಳನ್ನು ಸಾಹಿತ್ಯಪ್ರಕಾರಗಳೆಂದೆ ತಪ್ಪು ತಿಳಿಯುವ ಕೆಲಸ ಆಗಿಹೋಗಿದೆ. ನವೋದಯ ಎನ್ನುವ ಒಂದು ಬಗೆಯ ವಿಮರ್ಶೆ ನಮ್ಮಲ್ಲಿ ಇದೆಯೆ? ನವ್ಯ ಬಂಡಾಯವೆಂಬ ವಿಮರ್ಶೆಗಳು ನಮ್ಮಲ್ಲಿ ಇವೆಯೆ? ಲಕ್ಷಣಗಳನ್ನು ಸ್ಪಷ್ಟವಾಗಿ ಹೇಳುವಂತೆ ಇವು ರೂಪಗೊಂಡಿವೆಯೆ? ನವ್ಯ ಕಾಲಘಟ್ಟದ ವಿಮರ್ಶಕರೆಲ್ಲ ಸೃಷ್ಟಿಸಿದ ವಿಮಶರ್ೆಯು ನವ್ಯವೆ? ನವ್ಯ ಕಾಲಘಟ್ಟದ ವಿಮರ್ಶಕರೆಂದು ನಾವು ಗುತರ್ಿಸುವ ವಿಮರ್ಶಕರು ನವ್ಯದ ಕಾಲಘಟ್ಟಕ್ಕೆ ಮಾತ್ರ ಸೀಮಿತವಾದ ವಿಮರ್ಶಕರೆ? ಇಂತಹ ಪ್ರಶ್ನೆಗಳನ್ನು ಕೇಳಿಕೊಂಡರೆ ಆಗ ನಾವು ಎದುರಿಸುತ್ತಿರುವ ಸಮಸ್ಯೆ ಸ್ಪಷ್ಟವಾಗುತ್ತದೆ.
ದುರಂತ ಪ್ರಜ್ಞೆಯ ಲಕ್ಷಣಗಳನ್ನೆ ದುರಂತನಾಟಕದ ಲಕ್ಷಣಗಳೆಂದು ನಾವು ತಪ್ಪು ತಿಳಿದ ಹಾಗೆ ನವೋದಯ, ನವ್ಯಾದಿ ಸಂವೇದನೆಯ ಲಕ್ಷಣಗಳನ್ನೆ ಸಾಹಿತ್ಯ ಧಾರೆಯ, ವಿಮರ್ಶೆಯ ಧಾರೆಯ ಲಕ್ಷಣಗಳೆಂದು ತಪ್ಪು ತಿಳಿದಿದ್ದೇವೆ. ಸಾಹಿತ್ಯ ಸಂವೇದನೆಗಳನ್ನೆ ಪ್ರಕಾರಗಳನ್ನಾಗಿಯೂ ತಿಳಿಯುತ್ತಿದ್ದೇವೆ. ವಚನ ಸಾಹಿತ್ಯ, ಕೀರ್ತನ ಸಾಹಿತ್ಯ, ಚಂಪೂ ಸಾಹಿತ್ಯ ಹೀಗೆ ಗುರ್ತಿಸಬಹುದಾದ ಚಹರೆಗಳು ಈ ಆಧುನಿಕ ಸಂವೇದನೆಗಳಿಗೆ ಇವೆಯೇ?
ನವೋದಯ, ನವ್ಯ, ಪ್ರಗತಿಶೀಲ, ಬಂಡಾಯಗಳೆಂಬ ವಿಮರ್ಶೆಯ ಪಂಥಗಳು ನಮ್ಮಲ್ಲಿ ಇಲ್ಲ. ಇವು ಲೇಖಕ ಸಮುದಾಯಗಳು. ಇವನ್ನು ವಿಮರ್ಶೆಯ ದೃಷ್ಟಿಕೋನಗಳೆಂದು ಕರೆಯಬಹುದಾದರೂ ವಿಮರ್ಶೆಯ ಪಂಥಗಳೆಂದು ಕರೆಯಲು ಆಗುವುದಿಲ್ಲ. ಇವು ಸಾಹಿತ್ಯಸಂವೇದನೆಗಳು ನಿಜ. ವಿಮಶರ್ೆಯ ಸಂವೇದನೆಗಳು ನಿಜ. ಆದರೆ ಇವು ವಿಮಶರ್ೆಯ ಧಾರೆಗಳಲ್ಲ. ಲೇಖಕ ಕೇಂದ್ರಿತ, ಕೃತಿ ಕೇಂದ್ರಿತ, ಪ್ರಕಾರ ಕೇಂದ್ರಿತವೆಂಬ ದೃಷ್ಟಿಗಳು ಈ ಎಲ್ಲ ಕಾಲಘಟ್ಟಗಳಲ್ಲು ಪ್ರಯೋಗವಾಗಿವೆ. ಈ ಲೇಖಕ, ಕೃತಿ (ಪಠ್ಯ), ಪ್ರಕಾರಕೇಂದ್ರಿತಗಳೆಲ್ಲ ಕೂಡ ದೃಷ್ಟಿಗಳೇ ವಿನಾ ಪಂಥಗಳಲ್ಲ. ಆದರೆ ಇವುಗಳನ್ನೆಲ್ಲ ನಮ್ಮ ವಿಮರ್ಶೆಯ ಪಂಥಗಳೆಂದು ತಿಳಿದಿರುವುದೇ ನಮ್ಮ ವಿಮರ್ಶೆಯ ಒಂದು ಸಮಸ್ಯೆಯಾಗಿದೆ. ವಿಮರ್ಶೆಯ ದೃಷ್ಟಿಗಳು ಮತ್ತು ಪಂಥಗಳ ನಡುವೆ; ವಿಧಾನಗಳು ಮತ್ತು ಪಂಥಗಳ ನಡುವೆ; ಪ್ರಜ್ಞೆಗಳು ಮತ್ತು ಪಂಥಗಳ ನಡುವೆ ಇರುವ ವ್ಯತ್ಯಾಸಗಳನ್ನು ಗ್ರಹಿಸದಿರುವುದೇ ನಮ್ಮ ವಿಮಶರ್ೆಯ ಒಂದು ಸಮಸ್ಯೆಯಾಗಿದೆ. ಪರಿಭಾಷೆ, ಪ್ರಕಾರ, ಸಂವೇದನೆ, ಕಾಲಘಟ್ಟ, ದೃಷ್ಟಿಕೋನ-ವಿಧಾನ, ಪಂಥಗಳನ್ನೆಲ್ಲ ನಮ್ಮಲ್ಲಿ ಕಲಸಿಕೊಳ್ಳಲಾಗಿದೆ. ಇದರಿಂದ ಕನ್ನಡ ವಿಮರ್ಶೆಬಿಡಿಸಿಕೊಳ್ಳಬೇಕಾಗಿದೆ. ಇವುಗಳನ್ನೆಲ್ಲ ಸ್ಪಷ್ಟಪಡಿಸಿಕೊಂಡ ವಿಮರ್ಶಾ ಚರಿತ್ರೆಯೊಂದರ ಕಟ್ಟುವಿಕೆ ಇಂದಿನ ಅಗತ್ಯವಾಗಿದೆ.
ಹಳೆಯ ಪ್ರಕಾರಗಳು ಎಂದಿಗೂ ಇಲ್ಲವಾಗುವುದಿಲ್ಲ. ಹೊಸ ಪ್ರಕಾರಗಳು ಹುಟ್ಟುವುದು ನಿಲ್ಲುವುದಿಲ್ಲ. ಹಾಗಾಗಿ ಈ ಪ್ರಕಾರದೃಷ್ಟಿಯು ನಿರಂತರವಾಗಿ ಇದ್ದೇ ಇರುತ್ತದೆ. ಎರಡು ಕಾರಣಗಳಿಗಾಗಿ ಪ್ರಕಾರವಿಮರ್ಶೆ ಇಂದಿಗೂ ಪ್ರಸ್ತುತವಾಗಿದೆ. ಮೊದಲನೆಯದಾಗಿ ಈ ಪ್ರಕಾರಗಳು ಐತಿಹಾಸಿಕ ವಾಸ್ತವದ ಭಾಗಗಳಾಗಿರುವುದರಿಂದ ಹಾಗೂ ಅನೇಕ ಕೃತಿಗಳು ಪ್ರಕಾರಗಳಲ್ಲಿ ಲಭ್ಯವಿರುವುದರಿಂದ ಅವುಗಳನ್ನು ಕಡೆಗಣಿಸುವಂತಿಲ್ಲ. ಇನ್ನೊಂದು ಕಾರಣವೆಂದರೆ ಲ್ಯುಕ್ಯಾಚ್ ಹೇಳಿದಂತೆ ಅವು ಬದುಕಿನ ಲಯಗಳನ್ನೆ ಪ್ರತಿನಿದಿಸುತ್ತಿರುವುದು. (ಲ್ಯುಕಾಚ್, 1970: 210, ರೈಟರ್ ಅಂಡ್ ಕ್ರಿಟಿಕ್, ಗ್ರಾಸೆತ್ ಅಂಡ್ ಡನ್ಲಪ್) ಸುಸಾನ್ ಲ್ಯಾಂಗರ್, ನಾಥರ್ಾಫ್ ಪ್ರಾಯ್ ಮೊದಲಾದ ಚಿಂತಕರಲ್ಲಿಯೂ ಇಂತಹ ಅರಿವನ್ನು ಕಾಣಬಹುದು16
ಆಕರಗಳು-ಟಿಪ್ಪಣಿಗಳು
1. 'ಸಂಭವಕಾಲ' ಎಂದರೆ ವಿಮರ್ಶೆಯಾದಿಯಾಗಿ ಶೈಕ್ಷಣಿಕ ಶಿಸ್ತುಗಳು ಸಂಭವಿಸುತ್ತಿದ್ದ ಕಾಲ, 1800-1950ರ ಕಾಲ.
2. ನೋಡಿ: ಕನ್ನಡ ವಿಮರ್ಶೆ ಸಂಸ್ಕೃತಿ ವಿನ್ಯಾಸ ಮತ್ತು ತಾತ್ವಿಕತೆ-ರಾಮಲಿಂಗಪ್ಪ.ಟಿ.ಬೇಗೂರು, ಅಪ್ರಕಟಿತ ಪಿಎಚ್.ಡಿ. ಪ್ರಬಂಧ, ಕನ್ನಡ ವಿ.ವಿ. ಹಂಪಿ, 2009.
3. ಸುಮ್ಮನೆ ಉದಾಹರಣೆಗೆ ಸಂಶೋಧನೆ(ಅಧ್ಯಯನ) ಪಂಥದಲ್ಲಿನ ಕೆಲವು ಪ್ರಬಂಧಗಳನ್ನು ಗಮನಿಸಿದರೂ ಇದು ತಿಳಿಯುತ್ತದೆ. ಭಾವಗೀತೆ(ಪ್ರಭುಶಂಕರ), ಕುವೆಂಪು ಕಾದಂಬರಿಗಳ ಸಾಂಸ್ಕೃತಿಕ ಅಧ್ಯಯನ (ಮರಿಗುದ್ದಿ), ಆಧುನಿಕ ಕನ್ನಡ ಮಹಾಕಾವ್ಯಗಳು (ಶ್ರೀಧರ ಹೆಗಡೆ), ಆಧುನಿಕ ಕನ್ನಡ ಕಾವ್ಯ (ಲೋಕೇಶ ಅಗಸನಕಟ್ಟೆ) ಹೀಗೆ ಆದಿಯಿಂದ ಇಂದಿನವರೆಗೆ ಅಧ್ಯಯನ ಕ್ಷೇತ್ರದಲ್ಲಿನ ಒಂದು ಪ್ರಮುಖ ದೃಷ್ಟಿಯು ಪ್ರಕಾರ ಕೇಂದ್ರಿತ ದೃಷ್ಟಿಯಾಗಿದೆ.
4. ಆಧುನಿಕ ಕನ್ನಡ ವಿಮರ್ಶೆ-ಜಿ.ಎಸ್.ಆಮೂರ: ಸಪ್ನ ಬುಕ್ ಹೌಸ್, ಬೆಂಗಳೂರು, 2008, 172,73
5. ಸಾಹಿತ್ಯ ವಿಮರ್ಶೆಯ ಕೆಲವು ತತ್ವಗಳು-ವಿ.ಕೃ. ಗೋಕಾಕ, ಐ.ಬಿ.ಎಚ್.ಪ್ರಕಾಶನ, ಬೆಂಗಳೂರು, ಪು.215,16, 1988:
6. ಯುಗಧರ್ಮ ಮತ್ತು ಸಾಹಿತ್ಯ ದರ್ಶನ- ಕೀತರ್ಿನಾಥ ಕುರ್ತಕೋಟಿ, ಮನೋಹರ ಗ್ರಂಥಮಾಲಾ, ಧಾರವಾಡ, ಪು. 401, 1991.
7. ಇದನ್ನು ಈಗಾಗಲೇ ಎಂ.ಜಿ.ಕೆ. ಆಮೂರ, ಗಿರಡ್ಡಿ ಇವರೆಲ್ಲ ಚರ್ಚಿಸಿರುವುದರಿಂದ ಅದನ್ನಿಲ್ಲಿ ಲಂಬಿಸುವ ಅಗತ್ಯವಿಲ್ಲ.
8. ಜಿ.ಎಸ್. ಆಮೂರರು ಕೂಡ ಇದನ್ನು ಚರ್ಚಿಸಿದ್ದಾರೆ. ನೋಡಿ: ಆಮೂರ, 2008, ಪುಟ 05
9. ಯುಗಧರ್ಮ ಮತ್ತು ಸಾಹಿತ್ಯ ದರ್ಶನ- ಕೀತರ್ಿನಾಥ ಕುರ್ತಕೋಟಿ, ಮನೋಹರ ಗ್ರಂಥಮಾಲಾ, ಧಾರವಾಡ, ಪು. 398-400, 1991.
10. ಆಮೂರರ 'ಡಿ.ಆರ್.ನಾಗರಾಜರ ವಿಮರ್ಶೆ-ಮಾರ್ಕ್ಸ್ ಅಲ್ಲಮರ ಮೇಳ' ಲೇಖನವನ್ನು ನಿಕಟ ಓದಿಗೆ ಗುರಿಪಡಿಸಿದರೆ ಅಲ್ಲಿ ಕಾಣುವುದು ಸ್ವಂತಿಕೆಯ ನಿರಾಕರಣೆ ಮತ್ತು ಈರ್ಷೆಗಳು. ಪ್ರೇರಣೆಯ ಅನ್ವೇಷಣೆಯು ಸ್ವಂತಿಕೆಯ ನಿರಾಕರಣೆಯಾಗಿ ಬೆಳೆಯುವುದು ನಮ್ಮ ವಿಮರ್ಶೆಯ ಒಂದು ಸಾಮಾನ್ಯ ರೋಗ. ಇದು ಆಮೂರರನ್ನೂ ಬಿಟ್ಟಿಲ್ಲ. ಡಿ.ಆರ್. ಅವರ ಪ್ರತಿಯೊಂದು ತಾತ್ವಿಕತೆ, ರೂಪಕದೃಷ್ಟಿ, ವಿಮರ್ಶಾ ವಿಧಾನಗಳಿಗೂ ಮೂಲ ಪ್ರೇರಣೆಗಳನ್ನು ಅನ್ವೇಷಿಸುವ ಆಮೂರರ ವಿಮರ್ಶೆಯು ಈಷರ್ೆಗಳನ್ನು ತಾತ್ವಿಕ ಚೌಕಟ್ಟಿನಲ್ಲಿ ಪರಿಕಲ್ಪಿಸಿ ಮಂಡಿಸುತ್ತದೆ. ವಿಮರ್ಶೆಯು ಲೇಖಕ ಕೇಂದ್ರಿತ ಆದಾಗ ಒದಗುವ ಸಮಸ್ಯೆಯಿದು. ಕುವೆಂಪು ವಿಮರ್ಶೆಯನ್ನು ಕುರಿತು ಬರೆಯುವಾಗ ಕುರ್ತಕೋಟಿ ಆಡುವ ಮಾತುಗಳು ಕೂಡ ಇದೇ ದೃಷ್ಟಿಯಿಂದ ಕೂಡಿವೆ. ಪ್ರೇರಣೆಯ ಅನ್ವೇಷಣೆಯು ಸ್ವಂತಿಕೆಯ ನಿರಾಕರಣೆಯ ನಿರ್ಣಯವಾಗಿಯೆ ಇಲ್ಲಿ ಬೆಳೆದಿದೆ. ನೋಡಿ: ಯುಗಧರ್ಮ ಮತ್ತು ಸಾಹಿತ್ಯ ದರ್ಶನ- ಕೀರ್ತಿನಾಥ ಕುರ್ತಕೋಟಿ, ಮನೋಹರ ಗ್ರಂಥಮಾಲಾ, ಧಾರವಾಡ, ಪು. 399, 1991.
11. ಆಧುನಿಕ ಭಾರತೀಯ ಸಾಹಿತ್ಯ-ಎಂ.ಜಿ.ಕೃಷ್ಣಮೂರತಿ , ಅಕ್ಷರ ಪ್ರಕಾಶನ, ಸಾಗರ: 1970 ಮತ್ತು ಕೃತಿ ಸಂಸ್ಕೃತಿ-ಎಂ.ಜಿ.ಕೆ. ಋಜುವಾತು ಪ್ರಕಾಶನ, ಮೈಸೂರು: 1994.
12. ನೋಡಿ: ಆಮೂರ 2008, ಪು.257-58 ಇಲ್ಲಿ ಉದ್ಧೃತ
13. ಅದೇ, ಪು.೨೫೧
14. ನೋಡಿ: ಕನ್ನಡ ವಿಮರ್ಶಾ ಸಂಸ್ಕೃತಿ ವಿನ್ಯಾಸ ಮತ್ತು ತಾತ್ವಿಕತೆ-ಡಾ.ರಾಮಲಿಂಗಪ್ಪ.ಟಿ.ಬೇಗೂರು, ಅಪ್ರಕಟಿತ ಪಿಎಚ್.ಡಿ. ಪ್ರಬಂಧ, ಕನ್ನಡ ವಿ.ವಿ. ಹಂಪಿ, 2009.
15. ನೋಡಿ: ರಸಋಷಿ ಕುವೆಂಪು: 5 ಸಂಪುಟಗಳು-ಎಸ್.ವಿ.ಪಿ. ಪ್ರಸಾರಾಂಗ, ಮೈಸೂರು ವಿ.ವಿ. 1995ರಿಂದ 2001)
16. ಆಧುನಿಕ ಕನ್ನಡ ವಿಮರ್ಶೆ -ಜಿ.ಎಸ್.ಆಮೂರ, ಸಪ್ನ, ಬೆಂಗಳೂರು. ಪು.4, 2008.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ