* ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಚಾರಸಂಕಿರಣದಲ್ಲಿ ಮಂಡಿಸಿದ ಪ್ರಬಂಧ
ಈ ತಲೆಬರಹವೇ ಸ್ವಯಂ ಹಲವು ಮಿತಿಗಳನ್ನು ಹೊಂದಿದೆ. ಇದೆ ಅಥವಾ ಇಲ್ಲ ಎಂದು ಚರ್ಚಾಸ್ಪರ್ಧೆಯ ರೀತಿ ವಾದಿಸುವಂತೆ ಇದು ನಮ್ಮನ್ನು ಆಹ್ವಾನಿಸುತ್ತದೆ. ಕನ್ನಡ ಸಾಹಿತ್ಯದ ಮೊದಲ ಬಂಡಾಯ ಕವಿ ಪಂಪ ಎಂಬ ಬೀಸು ಹೇಳಿಕೆಗಳಿಗೂ ಇದು ಪ್ರಚೋದಿಸುತ್ತದೆ. ಇವತ್ತಿನ ನಮ್ಮ ಪ್ರತಿಭಟನೆಯ ಮಾದರಿಗಳನ್ನು ಪಂಪನಲ್ಲಿ ಹುಡುಕುವಂತೆಯೂ ಇದು ಪ್ರಚೋದಿಸುತ್ತದೆ.
ಒಂದೊಂದು ಸಾಹಿತ್ಯ ಸಂದರ್ಭಕ್ಕೂ-ಶಕ್ತ ಕವಿಗೂ ತಮ್ಮದೇ ಆದ ವಿಮರ್ಶೆಯ ಮಾನದಂಡಗಳನ್ನು ರೂಪಿಸುವ ಶಕ್ತಿ ಇರುತ್ತದೆ. ಹಾಗೇ ಕೆಲವೊಮ್ಮೆ ನಾವು ಯಾವ ಅಪ್ರೋಚಿನ ಮೂಲಕ ಸಾಹಿತ್ಯ ಪ್ರವೇಶ ಮಾಡುತ್ತೇವೆ ಎಂಬುದು ನಮ್ಮ ನಿಲುವುಗಳನ್ನು ಬಹುಪಾಲು ನಿರ್ಧರಿಸುತ್ತಿರುತ್ತದೆ. ನಮ್ಮ ಸಾಹಿತ್ಯ ಪರಂಪರೆಯನ್ನು ಪ್ರತಿಭಟನೆಯ ಕನ್ನಡಕ ಹಾಕಿಕೊಂಡು ನೋಡಿದರೆ ಬಸವ, ಅಲ್ಲಮ, ಕನಕ, ಕುವೆಂಪುಗಳು ಬೃಹಾದಾಕಾರವಾಗಿಯೂ ಪಂಪ, ರನ್ನ, ಲಕ್ಷ್ಮೀಶ, ಕುಮಾರವ್ಯಾಸಾದಿಗಳು ಕಿರಿದಾಗಿಯೂ ಕಾಣುತ್ತಾರೆ. ಹೀಗೆ ಕಾಣಿಸುವುದು ಕನ್ನಡಕದ ಮಹಿಮೆಯೇ ವಿನಾ ಸಾಹಿತ್ಯದ ಸ್ವರೂಪವೇ ಇದಲ್ಲ. ಬಂಡಾಯ ಸಂದರ್ಭಕ್ಕೆ ಹುಟ್ಟಿದ ಈ (ಪ್ರತಿಭಟನೆ ಎಂಬ) ಪರಿಬಾಷೆ ನಮ್ಮ ಪರಂಪರೆಯ ಎಲ್ಲ ಕವಿಗಳನ್ನು ಪರಿಶೀಲಿಸುವ ಮಾನದಂಡವಾಗುವುದು ತರವಲ್ಲ. ಆದರೂ ಕೊಟ್ಟ ಕುದುರೆಯನ್ನು ಏರಬಯಸುತ್ತೇನೆ.*
ಪಂಪನ ಎರಡೂ ಕಾವ್ಯಗಳಲ್ಲಿ ವರ್ತಮಾನದ ತಲ್ಲಣಗಳನ್ನು ಮತ್ತು ಕಾಲಾತೀತ ಮೌಲ್ಯಗಳೆರಡನ್ನು ಪುರಾಣ ರೂಪದಲ್ಲಿ ಕಾಣಬಹುದು. ಕನ್ನಡ ಕಾವ್ಯ, ಭಾಷೆ, ಮತ್ತು ಸಂಸ್ಕೃತಿಯು ಎದುರಿಸಿದ ಬಿಕ್ಕಟ್ಟುಗಳು ಮತ್ತು ಅವು ಕಂಡ ದಾರಿಗಳನ್ನು ಇಲ್ಲಿ ನಾವು ಕಾಣಬಹುದು. ಯುದ್ಧ, ಭೋಗ, ಅಧಿಕಾರ ಲಾಲಸೆ, ಸಾವು, ಬಿಡುಗಡೆ, ಇತ್ಯಾದಿ ಸಾರ್ವಕಾಲಿಕ ಪ್ರಶ್ನೆಗಳ ತತ್ವಜಿಜ್ಞಾಸೆಯ ವೇದಿಕೆಗಳಂತೆ ಈ ಕಾವ್ಯಗಳಿವೆ. ಹೀಗಾಗಿ ಇವನ ಕಾವ್ಯಗಳಲ್ಲಿ ಪ್ರತಿಭಟನೆಯೆಂಬುದು ಮಾನವ ವರ್ತನೆಗಳ ವಿಮರ್ಶೆಯಾಗಿಯೂ, ವ್ಯವಸ್ಥೆಯನ್ನು ಚಿಕಿತ್ಸೆ ಮಾಡುವ ಧೈರ್‍ಯವಂತಿಕೆಯಾಗಿಯೂ, ಸಾರ್ವಕಾಲಿಕ ಮೌಲ್ಯಗಳ ಕೈಪಿಡಿಯೊಂದನ್ನು ಸಿದ್ಧಪಡಿಸುವ ನೈತಿಕವಾದಿ ಕಥನಕಲೆಯಾಗಿಯೂ ಕಾಣುತ್ತದೆ. ಇವನಲ್ಲಿ ಪ್ರತಿಭಟನೆಯೆನ್ನುವುದು ಮಹಾಕಥನಕ್ಕೆ ಸಹಜವಾದ ಬಹುರೂಪಿ ಮಾದರಿಗಳನ್ನು ಹೊಂದಿದೆ. ‘ಜಿನಚರಣ ಕಮಲ ಭೃಂಗಂ ಪಂಪಂ’ (೧.೩೩. ಆ.ಪು.) ಎಂದು ತನ್ನನ್ನು ತಾನು ಜಿನಪೂಜಕನೆಂದೂ ‘ಪಂಪಂ ಧಾತ್ರೀವಳಯನಿಳಿಂಪಂ’ (೧೪.೪೯. ವಿ.ವಿ.) ಎಂದು ತನ್ನನ್ನು ತಾನು ಬ್ರಾಹ್ಮಣನೆಂದೂ ಪಂಪನು ಹೇಳಿಕೊಂಡಿದ್ದಾನೆ. ನಮಗೆಲ್ಲಾ ತಿಳಿದಂತೆ ಇವನ ಅಪ್ಪ ಕನ್ವರ್ಟೆಡ್ ಜೈನ. ಇಂಥವನ ಮಗನಾದ ಪಂಪ ಕವಿಯೂ ಕಲಿಯೂ ಆಗಿದ್ದವನು. ಅಲ್ಲದೆ ಅರಿಕೇಸರಿಯ ಅನ್ನದ ಋಣಕ್ಕೆ ಬಿದ್ದ ಆಶ್ರಿತ ಗೆಳೆಯನೀತ. ಜೊತೆಗೆ ಈತ ಸರಸ್ವತಿ ಮಣಿಹಾರ ಹೇಗೋ ಹಾಗೇ ಗಣಿಕಾಸ್ತನ ಮಣಿಹಾರನೂ ಹೌದು. ಅಲ್ಲದೆ ಈತ ಯುದ್ಧ, ಮೋಸ, ಭೋಗ ಎಲ್ಲವೂ ಇದ್ದ ರಾಜಕೀಯ ಅಸ್ಥಿರತೆಯ ಸಂದರ್ಭದಲ್ಲಿ ಬದುಕಿದ್ದವನು. ಹೀಗಾಗಿ ಇವನ ಕಾವ್ಯದಲ್ಲಿ ಧರ್ಮಪ್ರಚಾರ ಗುಣವೂ, ಬ್ರಾಹ್ಮಣಿಕೆಯೂ, ಮಾನವಧಾರ್ಮಿಕತೆಯೂ, ರಸಿಕತೆಯೂ, ಸ್ತುತಿಪಾಠಕತನವೂ, ಪ್ರತಿಭಟನೆ-ಪ್ರತಿರೋಧದ ನೆಲೆಗಳೂ ಬೆರೆತು ಹೋಗಿವೆ. ಇವನ ಸಂವೇದನೆಯನ್ನು ಇವೆಲ್ಲವುಗಳ ಮಿಶ್ರತಳಿ ಎಂದೇ ಭಾವಿಸಬೇಕು. ಇವು ಪರಸ್ಪರ ವೈರುಧ್ಯಗಳ ಹಾಗೆ ಕಂಡರೂ ಇವು ವೈರುಧ್ಯಗಳಲ್ಲ. ಒಬ್ಬ ವ್ಯಕ್ತಿಯಲ್ಲೇ ಇರಬಹುದಾದ ವಯುಕ್ತಿಕ ಚಹರೆಗಳು. ಹಾಗೆಯೇ ಒಂದು ವ್ಯವಸ್ಥೆಯಲ್ಲಿನ ಪರಪಸ್ಪರ ಸಂಕರ್ಷಣ ಉಳ್ಳ ವಾಸ್ತವದ ಬಹುಮುಖಗಳು. ವಾಸ್ತವದ ಬಹುತ್ವ ಎಂದೇ ಇದನ್ನು ಕರೆಯಬಹುದು. ಹೀಗಾಗಿ ಪಂಪ ವ್ಯವಸ್ಥೆಯ ಒತ್ತಡಕ್ಕೆ ಸಿಲುಕಿದ ಸಾಂಸ್ಕೃತಿಕ ಉತ್ಪನ್ನದಂತೆಯೂ, ವ್ಯವಸ್ಥೆಯ ಎದುರಿಗೆ ತನ್ನದೇ ಪ್ರತಿರೋಧಗಳನ್ನು ಒಡ್ಡಿದ ಕವಿ ಪ್ರತಿಭೆಯಂತೆಯೂ ಹೀಗೆ ಬಹುಮುಖವಾಗಿ ಏಕಕಾಲಕ್ಕೆ ಕಾಣುತ್ತಾನೆ.
ಬ್ರಾಹ್ಮಣ್ಯದ ಎದುರು ಜೈನವನ್ನು ಪ್ರತಿಪಾದಿಸಿದುದು; ಧರ್ಮದ ಜೊತೆಗೆ ಕಾವ್ಯಧರ್ಮವನ್ನು ಪ್ರತಿಪಾದಿಸಿದುದು; ಸಂಸ್ಕೃತದ ಎದುರು ಕನ್ನಡದಲ್ಲಿ ಮಹಾಕಾವ್ಯ ರಚಿಸಿದುದು; ಹಸ್ತಿನಾವತಿ ಕುರುಜಾಂಗಣಗಳ ಎದುರು ಬನವಾಸಿ ಸ್ಥಳೀಯ ಸಂಸ್ಕೃತಿಯನ್ನು ಬೆಸೆದುದು; ಭಾರತ ಕಥನದ ಮೆಯ್ ಕಿಡಲೀಯದೆ ಚರಿತ್ರೆ ಮತ್ತು ಚಾರಿತ್ರ್ಯಗಳನ್ನು ‘ಎನ್ನರಿವ ಮಾಳ್ಕೆ’ಯಿಂದಲೆ ಬರೆದುದು; ಛಿದ್ರ ಭಾರತ ಪ್ರಸಂಗಗಳನ್ನು ಸಮಸ್ತಗೊಳಿಸಿದುದು: ಮಾರ್ಗದೊಂದಿಗೆ ದೇಸಿಯನ್ನು ಬೆಸೆದು ಕನ್ನಡಕ್ಕೊಂದು ಅಂತಸ್ತನ್ನು, ಐಡೆಂಟಿಟಿಯನ್ನು ಕಟ್ಟಿಕೊಟ್ಟುದು ಇವೆಲ್ಲವೂ ಪಂಪನ ‘ಮಾರ್ಗಾಂತರ’ ಸಾಧನೆಗಳೇ. ಪ್ರತಿರೋಧ ಮನೋಧರ್ಮವಿಲ್ಲದೆ ಇವೆಲ್ಲ ಸಾಧ್ಯವಾಗುವುದಿಲ್ಲ. ವ್ಯವಸ್ಥೆಯ ನ್ಯೂನತೆಗಳನ್ನು ಸರಿಪಡಿಸುವ ಸುಧಾರಣಾವಾದಿತನ ಪಂಪನ ಬಹು ಮುಖ್ಯವಾದ ಮನೋಧರ್ಮ. ಇವನಿಗೆ ಪ್ರತಿಭಟನೆ ಕೂಡ ಸುಧಾರಣಾವಾದಿ ಆಶಯಗಳಿಂದಲೇ ಒದಗುತ್ತದೆ. ತನ್ನ ಎರಡೂ ಕಥನಗಳಲ್ಲಿ ಪಂಪ ಜನನಡಾವಳಿಯು ನೈತಿಕತೆಯನ್ನು ತಳಹದಿಯಾಗಿ ಹೊಂದಿರಬೇಕೆಂದು ಅಪೇಕ್ಷಿಸುತ್ತಾನೆ. ಹಾಗಾಗಿಯೆ ಇವನ ಕಾವ್ಯದಲ್ಲಿ ಪ್ರತಿರೋಧವೆಂಬುದು ನೀತಿಬೋಧನೆಯ ನೆಲೆಗೆ ಜಿಗಿತವನ್ನು ಪಡೆದುಬಿಡುತ್ತದೆ.
ಇವನಲ್ಲಿ ಹಲವು ಕಡೆ ನೇರವಾಗಿ ಮುಖಕ್ಕೆ ರಾಚುವಂತೆ ಪ್ರತಿರೋಧದ ಮಾತುಗಳಿವೆ. ‘ ಕವಿತೆಯೊಳ್ ಆಸೆಗೆಯ್ವ ಫಲಮಾವುದೋ ಪೆರರೀವುದೇಂ? ಪೆರರ ಮಾಡುವುದೇಂ, ಪೆರಿಂದಮಪ್ಪುದೇಂ’ (೧.೫೫ ಆ.ಪು.) ಎಂಬ ನೇರ ದಾಷ್ಟ್ಯದ
ಮಾತುಗಳನ್ನು ಪಂಪ ಆಡಿದ್ದಾನೆ. ‘ಕುಂದಕುಂದಾನ್ವಯ ನಂದನವನ ಶುಕ’ ಎಂದು ತನ್ನನ್ನು ತಾನು ಬಣ್ಣಿಸಿಕೊಳ್ಳುವ ಪಂಪ ಪೆರರೀವುದೇಂ ಎಂಬ ಮಾತಿನ ಮೂಲಕ ಪ್ರಭುತ್ವ ಮತ್ತು ಅಜೈನ ಲೋಕಕ್ಕೆ ದೊಡ್ಡ ಪ್ರತಿರೋಧವನ್ನು ತೋರುತ್ತಿದ್ದಾನೆ. ಆದಿಪುರಾಣದಲ್ಲಿ ಬಹುತೇಕ ಕಡೆ ಪ್ರಭುತ್ವಕ್ಕೆ ಪ್ರತಿರೋಧ ತೋರಲು ಧರ್ಮ ಪರಿವಲಯವು ಆಶ್ರಯವಾಗಿ ಇವನಿಗೆ ಒದಗಿ ಬಂದಿದೆ. ವಚನ ಕೀರ್ತನ ಕಾಲದಲ್ಲಿ ಪ್ರಭುತ್ವ ಮತ್ತು ವ್ಯವಸ್ಥೆಯ ಜಡತ್ವದ ಎದುರು ಪ್ರತಿರೋಧ ತೋರಲು ಭಕ್ತಿ ಆಶ್ರಯವಾಗಿ ಒದಗಿಬಂದರೆ ಪಂಪನಿಗೆ ಧರ್ಮ ಮತ್ತು ಆಧ್ಯಾತ್ಮಿಕತೆಗಳು ತನ್ನ ಪ್ರತಿರೋಧದ ಆಶ್ರಯಗಳಾಗಿ ಒದಗಿವೆ. ಕಚ್ಛ, ಮಹಾಕಚ್ಛ, ಮರೀಚ್ಯಾದಿಗಳ ಪ್ರಸಂಗ ಕೂಡ ಜೈನ ಧರ್ಮದ ಕರ್ಮಠತನಕ್ಕೆ ಹೊಡೆತ ನೀಡುವ ಪ್ರತಿರೋಧಿ ಪ್ರಸಂಗವಾಗಿದೆ. ಆದಿನಾಥನ ಸಾಧನೆಗಿಂತ ಕಚ್ಛ, ಮಹಾಕಚ್ಛರ ಸೋಲೇ ನಮಗೆ ವಾಸ್ತವಕ್ಕೆ ಹೆಚ್ಚು ಹತ್ತಿರವಾಗಿ ಕಾಣುತ್ತದೆ. ಇಲ್ಲಿ ಇವರು ಎತ್ತುವ ಕೆಲ ಪ್ರಶ್ನೆಗಳು ಬಹಳ ಜಿನೈಯಿನ್ ಆಗಿವೆ. ಆದಿನಾಥನು ಮೂರು ತಿಂಗಳು ಅನ್ನ ನೀರಿಲ್ಲದೆ ನಿಂತುಬಿಟ್ಟಾಗ ಅವನನ್ನು ಅನುಸರಿಸುತ್ತಿದ್ದ ಕಚ್ಛ ಮಹಾಕಚ್ಛಾದಿಗಳು ಆಡುವ ಮಾತು ನೋಡಿ;
‘ಒಂದು ದಿನ ಇಲ್ಲವೆ ಎರಡೋ ಮೂರೋ ದಿನ ಹೀಗೆ ಮೌನವಾಗಿ ನಿಲ್ಲಬಹುದು. ಆದರೆ ಇದೇನಿದು ಅಲುಗಾಡದೆ ಈ ಆದಿನಾಥನು ಹೀಗೆ ಮೂರು ತಿಂಗಳ ಕಾಲ ನಿಂತುಬಿಟ್ಟನಲ್ಲ! ಇಲ್ಲಿ ಶನಿ ನಿಂತ ಹಾಗೆ! ಹೀಗೆ ನಿಲ್ಲುವವನೂ ಇದ್ದಾನಾ?.. ಕೂಳು ನೀರು ಇಲ್ಲದೆ ಈ ಒಡಲನ್ನು ಹೇಗಾದರೂ ಕಾಪಾಡಿಕೊಳ್ಳೋಣ?’ (೯.೮೭ ಆ.ಪು.)
‘ಮಿಂದು ಉಂಡು ಕುಡಿದು ಮತ್ತೆ ಬಂದು ಇರಿ ಎಂದರೆ ಇರಬಹುದು. ಒಂದೂ ಇಲ್ಲದೆ ಗುರುಗುಮ್ಮೆಂದು ಹಸಿದುಕೊಂಡಿದ್ದು, ಬೆದಬೆದಬೆಂದು ಎಲ್ಲರೂ ಕಟ್ಟಿಕೊಳ್ಳುವ ಕಣಿಯಾದರೂ ಏನು ಹೇಳಿ! (೯.೮೮. ಆ.ಪು.) ಇವೆಲ್ಲ ಬಹಳ ಮುಖ್ಯವಾದ ಪ್ರಶ್ನೆಗಳು. ಕರ್ಮಠತನವನ್ನು ಪ್ರತಿಭಟಿಸುವ ಮತ್ತು ತಮ್ಮಲ್ಲೆ ಉತ್ತರಗಳನ್ನೂ ಹೊಂದಿರುವ ಪ್ರಶ್ನೆಗಳಿವು. ಸಾಧನಾಮಾರ್ಗಗಳ ಅನುಕರಣೆ ಎಲ್ಲರಿಂದಲೂ ಸಾಧ್ಯವಿಲ್ಲದಿರುವ ವಾಸ್ತವವಿದು. ಪಂಪ ಇಲ್ಲಿ ಇಂದ್ರಿಯ ನಿಗ್ರಹ-ಸ್ವಯಂ ನಿಗ್ರಹ ಸಾಧ್ಯವಾಗದ ಮಾನವ ಚಂಚಲತೆಯನ್ನು ವ್ಯಂಗ್ಯಕ್ಕೆ ಗುರಿಪಡಿಸಿದ್ದಾನಾದರೂ ಆತ್ಯಂತಿಕವಾಗಿ ಈ ಪ್ರಸಂಗ ಆಚರಣೆಗಳ ಅನುಕರಣೆಯನ್ನು ವಿಡಂಬಿಸುವ ಪ್ರಸಂಗವಾಗಿದೆ.
ಭರತ ಬಾಹುಬಲಿಯರ ಪ್ರಸಂಗ ಪಂಪನ ಪ್ರಭುತ್ವದ ಎದುರಿನ ಪ್ರತಿಭಟನೆಯ ಒಂದು ದೊಡ್ಡ ರೂಪಕ. ರಕ್ತಸಂಬಂಧ ಮತ್ತು ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರುವ ಅಧಿಕಾರ ದಾಹದ ಎದುರಿಗೆ ದೊಡ್ಡ ಪ್ರತಿರೋಧವನ್ನು ಈ ರೂಪಕದ ಮೂಲಕ ಪಂಪ ಒಡ್ಡುತ್ತಿದ್ದಾನೆ. ವೃಷಭಾಚಲದ ಎದುರಿನ ಭರತನ ಗರ್ವಭಂಗದ ಚಿತ್ರ ಮತ್ತು ಬಾಹುಬಲಿಯ ರಕ್ತರಹಿತ ಯುದ್ಧ ಇವುಗಳು ಪ್ರಭುತ್ವದ ಅಹಂಕಾರ, ಏಕಚಕ್ರಾಧಿಪತ್ಯದ ನಿರಂಕುಶತೆ, ಅಧಿಕಾರ ಕೇಂದ್ರೀಕರಣ, ಶ್ರೇಣೀಕರಣಗಳನ್ನೆಲ್ಲ ಪ್ರಶ್ನಿಸುವ ಚಿತ್ರಗಳಾಗಿವೆ.
ವಿಕ್ರಮಾರ್ಜುನ ವಿಜಯದಲ್ಲಿ ಪಂಪ ತನ್ನ ಮತ್ತು ಅರಿಕೇಸರಿಯ ಸ್ನೇಹ ಸಂಬಂಧ ಹೆಗಿತ್ತೆಂದು ಒಂದು ಪದ್ಯದಲ್ಲಿ ಹೀಗೆ ವಿವರಿಸುತ್ತಾನೆ. ‘ನಿತ್ಯವೂ ತೊಟ್ಟುಕೊಳ್ಳಲು ಆತ ಪಂಚರತ್ನಾಭರಣಗಳನ್ನು ನೀಡುತ್ತಾನೆ. ಹೊರಗೆ ಪ್ರವಾಸಕ್ಕೆಂದು ಹೊರಟರೆ ತಾನು ಉಡುವ ರಾಜಪೋಷಾಕನ್ನೆ ನನಗೂ ನೀಡುತ್ತಾನೆ. ಕಾಣಿಸಿಕೊಂಡಾಗೆಲ್ಲ ಪ್ರೀತಿಯಿಂದ ಪಕ್ಕದಲ್ಲೆ ಉನ್ನತಾಸನವನ್ನು ಹಾಕಿ ಕೂರಿಸಿಕೊಳ್ಳುತ್ತಾನೆ. ಊರುಗಳನ್ನೂ, ಗೋವುಗಳನ್ನೂ, ಹೆಣ್ಣುಗಳನ್ನೂ ಲೆಕ್ಕವಿಲ್ಲದಷ್ಟು ನೀಡುತ್ತಾನೆ’ (೧೪.೫೫. ವಿ.ವಿ.) ‘ಕವಿತೆಯೊಳ್ ಆಸೆಗೆಯ್ವ ಫಲಮಾವುದೋ.. ಪೆರರೀವುದೇಂ, ಪೆರರ ಮಾಡುವುದೇಂ ಪೆರರಿಂದಮಪ್ಪುದೇಂ’ ಎಂದು ಆದಿಪುರಾಣದಲ್ಲಿ ಪ್ರತಿಭಟಿಸಿದ ಪಂಪನಿಗೆ ವಿಕ್ರಮಾರ್ಜುನ ವಿಜಯದಲ್ಲಿ ಕವಿತೆಯಿಂದ ಆಸೆಪಡುವ ಫಲಗಳೇನು ಎಂಬುದು ರಾಜಾಶ್ರಯದಿಂದ ಗೊತ್ತಾಗಿದೆ. ಕವಿ ಮತ್ತು ದೊರೆಯ ನಡುವೆ ದಾನಿ ಮತ್ತು ಫಲಾನುಭವಿಯ ಸಂಬಂಧ ಇದ್ದಾಗ, ಅದರೊಟ್ಟಿಗೆ ಸ್ನೇಹ ಮತ್ತು ಪ್ರೀತಿಗಳು ಬೆರೆತರೆ ಪ್ರತಿಭಟನೆಯ ಸ್ವರೂಪ ಏನಾಗಬೇಡ! ಪೆರರೀವುದೇಂ ಎಂದು ಆದಿಪುರಾಣದಲ್ಲಿ ಕೇಳುವ ಪಂಪನೇ ಭಾರತ ಕಥೆಯಲ್ಲಿ ‘ಇಂತು ಉದಾತ್ತ ನಾರಾಯಣನಾದ ಅರಿಕೇಸರಿ ಎಂಬ ದೇವನು ನಮಗೆ ಸೌಖ್ಯ ಕೋಟಿಯನ್ನು ನೀಡಲಿ. ಉದಾರ ಮಹೇಶ್ವರನಾದ ಅರಿಕೇಸರಿಯು ನಮಗೆ ಭೋಗಗಳನ್ನು ನೀಡಲಿ’ ‘ಸಹಜ ಮನ್ಮಥ ಗುರುವೇ ಆದ ಅರಿಕೇಸರಿಯು ನಮಗೆ ಬಗೆಬಗೆಯ ರತಿಸುಖಗಳನ್ನು ಉಂಟುಮಾಡಲಿ ಎನ್ನುತ್ತಾನೆ. (೧.೧ರಿಂದ ೧.೪. ವಿ.ವಿ.) ದೊರೆಯೂ, ಪ್ರೀತಿಯ ಗೆಳೆಯನೂ ಆದ ಅರಿಕೇಸರಿಯನ್ನು ಅರ್ಜುನನ ಹೆಸರಿನಲ್ಲಿ ಪಂಪನು ಸೂರ್ಯ, ವಿಷ್ಣು, ಮಹೇಶ್ವರ ಎಂದೆಲ್ಲಾ ಹೊಗಳುತ್ತಾನೆ. ಹಾಗಾಗಿಯೇ ಬನವಾಸಿಯಲ್ಲಿ ಹುಟ್ಟುವುದಾದರೆ ಕೋಗಿಲೆಯಾಗಿ ಮೇಣ್ ಮರಿದುಂಬಿಯಾಗಿ ಹುಟ್ಟಬೇಕೆನ್ನುವ ಪಂಪನೇ; ಮಲ್ಲಿಗೆ ಮಾವುಗಳ ಪ್ರಕೃತಿಯೇ ನಿಜವಾದ ಸಂಸಾರ ಸಾರ ಎಂದು ಹೇಳುವ ಪಂಪನೇ ಪಶುಪಕ್ಷಿ ಗಿರಿಜನರಾದಿಯಾಗಿ ಕಾಡನ್ನೆಲ್ಲ ಸುಟ್ಟು ಧ್ವಂಸ ಮಾಡುವ ಅರ್ಜುನನ ದಹನ ಸಾಹಸವನ್ನು ಖಾಂಡವ ಪ್ರಸಂಗದಲ್ಲಿ ಗುಣಗಾನ ಮಾಡುತ್ತಾನೆ. ಒಂದು ಕಡೆ ಮತ್ತೆ ಹುಟ್ಟುವುದಾದರೆ ಮರಿದುಂಬಿಯಾಗಿ, ಕೋಗಿಲೆಯಾಗಿ ಹುಟ್ಟಬೇಕು ಎನ್ನುವ ಇವನೇ ಇನ್ನೊಂದು ಕಡೆ ಕಾಡನ್ನು ಜೀವಾಜೀವ ಸಮೇತ ದಹಿಸುವುದನ್ನು ಹೊಗಳಲು ಇನ್ನು ಹೇಗೆ ತಾನೆ ಮನಸ್ಸು ಮಾಡಿಯಾನುದಿದು ಕೇವಲ ಕಥನದ ಒತ್ತಡವಲ್ಲ. ಸ್ನೇಹ, ಪ್ರೀತಿ, ಜೋಳದ ಪಾಳಿ, ರಾಜಭಕ್ತಿ, ಕಥನದ ಒತ್ತಡ ಎಲ್ಲವೂ ಬೆರೆತ ‘ಕಾವ್ಯಧರ್ಮ’.
ಕಿರಾತಾರ್ಜುನೀಯ ಪ್ರಸಂಗದಲ್ಲಿ ಅರ್ಜುನನು ಪಂಪನಿಗೆ ಎಂಥ ಪರಾಕ್ರಮಿಯೆಂದರೆ ಯುದ್ಧದಲ್ಲಿ ಅರ್ಜುನನು ಶಿವನನ್ನೆ ನೆಲಕ್ಕೆ ಹಾಕಿ , ಅವನ ಕತ್ತಿನ ಮೇಲೆ ಕಾಲಿಕ್ಕಿ ತುಳಿಯುತ್ತಾನೆ. ವಿಕ್ರಮಾರ್ಜುನವಿಜಯದಲ್ಲಿ ಅರ್ಜುನ ಇಂಥಾ ಪರಾಕ್ರಮಿಯಂತೆ ಯಾಕೆ ಬಿಂಬಿತನಾಗಿದ್ದಾನೆಂದರೆ ಪಂಪನನ್ನು ಅರಿಕೇಸರಿ ಉನ್ನಾತಾಸನ ಹಾಕಿಸಿ, ಪಕ್ಕ ಕೂರಿಸಿಕೊಂಡು ಉಂಬಳಿ ಹಾಕಿಸಿಕೊಟ್ಟಿಂದರಿಂದ; ಸ್ನೇಹ, ಪ್ರೀತಿ ತೋರಿ ಬಗೆ ಬಗೆಯ ರತಿಸುಖಗಳನ್ನು ನೀಡುವ ಹೆಣ್ಣುಗಳನ್ನು ಲೆಕ್ಕವಿಲ್ಲದಂತೆ ನೀಡಿದ್ದರಿಂದ. ಇಂಥ ಪ್ರಸಂಗಗಳಲ್ಲಿ ಎಂಥ ಪ್ರತಿಭಟನೆ ಕಾಣುವುದು. ಇವೆಲ್ಲ ಬೇರೆಯೇ ತತ್ವಕ್ಕೆ ದುಡಿಯುವ ಪ್ರಸಂಗಗಳು.
ಕರ್ಣನ ಸಾರ್ರ್‍ಅಥ್ಯ ವಹಿಸಬೇಕಾದಾಗ ಶಲ್ಯ ಅಂಬಿಗನೊಬ್ಬನಿಗೆ ಸಾರಥಿಯಾಗುವುದು ತನ್ನ ಕ್ಷತ್ರಿಯ ಕುಲಕ್ಕೆ ಕುಂದು ಎಂದು ಭಾವಿಸುತ್ತಾನೆ. ಕ್ಷತ್ರಿಯರನ್ನು ಈತ ‘ಪರ್ವಿದವಿವೇಕತೆಯಿಂ ನೃಪಚಿತ್ತವೃತ್ತಿ ಸಂಚಲಂ ಅದರಿಂದಂ ಓಲಗಿಸಿ ಬಾಳ್ವುದೆ ಕಷ್ಟಂ ಈಳಾಧಿನಾಥರಾ’ (೧೨.೯೨. ವಿ.ವಿ.) ಎಂದು ದೂಶಿಸುತ್ತಾನೆ. ಶಲ್ಯನ ಮೂಲಕ ಪಂಪನು ಪ್ರಭುತ್ವಕ್ಕೆ ತೋರಿದ ಪ್ರತಿಭಟನೆ ಎಂಬಂತೆ ಇದನ್ನು ಕಾಣಲಾಗಿದೆ. ಇದೇ ಶಲ್ಯ ರಾಜರನ್ನು ‘ಇವರು ತೊತ್ತುಗಳ ಹಾಲು ಕುಡಿದು ಬೆಳೆದುದರಿಂದ ಅವಿವೇಕಿಗಳಾಗಿಯೂ ರಾಜಬೀಜ ಸಂಜಾತರಾದುದರಿಂದ ಮದವಂತರಾಗಿಯೂ ಇರುತ್ತಾರೆ. ನರೇಂದ್ರರ ಈ ಗುಣಗಳನ್ನು ಕೆಡಿಸುವವರಾದರೂ ಯಾರು?’ (೧೨.೯೩. ವಿ.ವಿ.) ಎಂದು ದೂಶಿಸುತ್ತಾನೆ. ಅಂದರೆ ರಾಜರು ತೊತ್ತುಗಳ ಹಾಲು ಕುಡಿಯದೆ ರಾಣಿಯರ ಹಾಲು ಕುಡಿದಿದ್ದರೆ ವಿವೇಕಿಗಳಾಗಿಬಿಡುತ್ತಿದ್ದರೋ? ಕರ್ಣನು ಅಂಬಿಗನೆಂಬ ಒಂದೇ ಕಾರಣಕ್ಕೆ ನಾನವನಿಗೆ ಸಾರಥಿ ಆಗಲಾರೆ ಎನ್ನುವ ಶಲ್ಯನೇ ಮೊದಲಿಗೆ ಅವಿವೇಕಿ. ಇಂತಹ ಕಥನ ಪ್ರಸಂಗಗಳಲ್ಲಿ ಪಂಪ ತನ್ನ ಕಾವ್ಯ ಧರ್ಮವನ್ನು (ಪೊಯೆಟಿಕ್ ಲೈಸೆನ್ಸನ್ನು) ಚೆನ್ನಾಗಿ ಬಳಸಿದ್ದಾನೆ.
ಇನ್ನು ಕುಲ ಜಾತಿಯ ವಿಚಾರಕ್ಕೆ ಬಂದರೆ ಪಂಪ ವಿಕ್ರಮಾರ್ಜುನ ವಿಜಯದಲ್ಲಿ ವ್ಯವಸ್ಥೆಯ ಎದುರು ತಕ್ಕ ಪ್ರತಿರೋಧವನ್ನೆ ತೋರಿದ್ದಾನೆ. ಕುಲಂ ಕುಲಮಲ್ತು ಛಲಂ ಕುಲಂ, ಅಭಿಮಾನಮೊಂದೆ ಕುಲಂ, ಅಣ್ಮು ಕುಲಂ..’ ಎಂದೆಲ್ಲ ಹೇಳಿದ್ದಾನೆ. ನಾಲಿಗೆ ಕುಲವನ್ನೆ ನುಡಿಯುತ್ತದೆ ಎನ್ನುವ ದ್ರೋಣನಿಗೆ ದುರ್‍ಯೋಧನನ ಮೂಲಕವೇ ಪಂಪ ‘ಕುಲವೆಂಬುದುಂಟೆ ವೀರವೆ ಕುಲವಲ್ಲದೆ.. ಕುಲವಿತ್ತೆ ನೀನು ಹುಟ್ಟಿದ ಕುಂಭದಲ್ಲಿ? ಕುಲವಿತ್ತೆ ನಿನ್ನ ಸಂಬಂಧಿ ಕೃಪನು ಹುಟ್ಟಿದ ಜೊಂಡಿನಲ್ಲಿ?’ ಎಂಬ ಪ್ರಶ್ನೆ ಕೇಳುತ್ತಾನೆ. ಮನುಷ್ಯ ಜಾತಿ ತಾನೊಂದೆ ವಲಂ ಎನ್ನತ್ತಾ ಪಂಪ ತನ್ನ ಕಾಲಕ್ಕೆ ಕುಲ ಜಾತಿಯ ವಿಚಾರದಲ್ಲಿ ಕ್ರಾಂತಿಕಾರಕವಾದ ಮಾತುಗಳನ್ನೆ ಆಡಿದ್ದಾನೆ.
ಕುಲದ ಬಗ್ಗೆ ಇಂಥ ಕ್ರಾಂತಿಕಾರಕವಾದ ಮಾತಾಡಿರುವ ಪಂಪ ವರ್ಣಾಶ್ರಮ ಧರ್ಮದ ಬಗ್ಗೆ ಯಾವ ನಿಲುವು ತಳೆಯುತ್ತಾನೆ? ವರ್ಣಾಶ್ರಮ ಧರ್ಮದ ಬಗ್ಗೆ ಪಂಪನಿಗೆ ತನ್ನದೇ ಆದ ನಿಲುವುಗಳೇನೂ ಇಲ್ಲ ಆದರೆ ಪೂರ್ವ ಪುರಾಣದಲ್ಲಿ ವ್ಯಕ್ತವಾಗಿರುವ ಮಾತುಗಳನ್ನು ತದ್ವತ್ ಅನುವಾದಿಸುತ್ತ ಪಂಪ ಅದನ್ನು ಪ್ರಶ್ನಿಸದೆ ಇದ್ದಾನೆ. (ಡಾ.ಎಲ್.ಬಸವರಾಜು ಅವರ ಸರಳ ಆದಿಪುರಾಣ ಪುಟ ೨೨೬ ನೋಡಿ) ಆದಿನಾಥನೇ ಕ್ಷತ್ರಿಯ ವಣಿಕ ಮತ್ತು ಶೂದ್ರರೆಂಬ ಮೂರು ವರ್ಣಗಳನ್ನು ಸೃಷ್ಟಿಸಿ ರಕ್ಷಣೆಯ ಹೊಣೆಯನ್ನು ಕ್ಷತ್ರಿಯರಿಗೂ, ಪಶುಪಾಲನೆ ಕೃಷಿ ಕ್ರಯ ವಿಕ್ರಯಗಳನ್ನು ವಣಿಕರಿಗೂ, ಈ ವರ್ಗಗಳ ಸೇವಾಕಾರ್‍ಯವನ್ನು ಸ್ಪೃಶ್ಯ ಮತ್ತು ಅಸ್ಪೃಶ್ಯ ಎಂಬ ಎರಡು ಶೂದ್ರ ಸಂತತಿಗಳಿಗೂ ನೀಡಿದನು. ಯಥಾಯೋಗ್ಯ ಉಪದೇಶವನ್ನು ಮಾಡಿ ವರ್ಣ ಸಂಕರವಾಗಲು ಅವಕಾಶ ನೀಡದೆ ತಮ್ಮ ತಮ್ಮ ಜಾತಿಗಳಲ್ಲಿಯೇ ನೆಂಟಸ್ತಿಕೆ ಮಾಡಲು, ಕೊಡುಕೊಳ್ಳಲು ನಿಯೋಜಿಸಿದನು’ (೮.೬೫. ಆ.ಪು.) ಎಂದು ಹೆಳುತ್ತಾನೆ. ಈ ಮೂರು ವರ್ಣಗಳು ಜೈನ ಮೂಲ ಎನ್ನುತ್ತಾ ಇವುಗಳ ಜೊತೆಗೆ ಭರತನೇ ವಿಪ್ರ ಜಾತಿಯನ್ನು ಸೃಷ್ಟಿಸಿದನೆಂದೂ ಹೇಳುತ್ತಾನೆ. ವರ್ಣಗಳನ್ನು ಜೈನ ತೀರ್ಥಂಕರನೇ ಸೃಷ್ಟಿಸಿ ಕಾರ್‍ಯ ನಿಯೋಜಿಸಿದ ಎಂದು ಹೇಳುತ್ತ ವರ್ಣ ಸಂಕರವನ್ನು ಮಾಡಕೂಡದೆಂದು ಹೇಳುವುದು ಇದು ಯಾವ ಸೀಮೆಯ ಪ್ರತಿಭಟನೆ?
ಜಡ-ಶೋಷಕ ವೈದಿಕ ವ್ಯವಸ್ಥೆಗೆ ಪ್ರತಿರೋಧ ತೋರಿಯೇ ಹುಟ್ಟಿದ ಜೈನ ಧರ್ಮೀಯರಿಗೂ ಈ ಕಥನವು ವರ್ಣ ವ್ಯವಸ್ಥೆಯನ್ನು ಒಪ್ಪಿಕೊಳ್ಳುವಂತೆ ಸಂದೇಶ ರವಾನಿಸುತ್ತಿದೆಯೋ? ವೈದಿಕದೊಂದಿಗೆ ಜೈನವು ಅಸ್ತಿತ್ಚಕ್ಕಾಗಿ ನಡೆಸಿದ ಹೋರಟಾಟದಲ್ಲಿ ರಾಜಿಗೆ ಬಂದಿರುವ ಸ್ಥಿತಿ ಇದೊ? ಜೈನರಲ್ಲೂ ವರ್ಣವ್ಯವಸ್ಥೆ-ವರ್ಗವ್ಯವಸ್ಥೆಯೊಂದು ಇದ್ದು ಅದು ಸಂಕರವಾಗದಿರುವಂತೆ ಕಾಯುವ ಕರ್ತವ್ಯ ರಾಜರದ್ದು ಎಂದು ಪಂಪ ಇಲ್ಲಿ ಹೇಳುತ್ತಿದ್ದಾನೆಯೋ? ಧರ್ಮವೊಂದು ಸಾಂಸ್ಥೀಕರಣಗೊಂಡಾಗ ಶ್ರೇಣೀಕರಣವು ಅನಿವಾರ್‍ಯ ಎಂಬುದನ್ನು ಈ ಮಾತುಗಳು ಹೇಳುತ್ತಿವೆಯೊ?
ಜಡ ವ್ಯವಸ್ಥೆಯ ಎದುರಿನ ಪ್ರತಿರೋಧ ಮತ್ತು ಬಲಿಷ್ಠ ವ್ಯವಸ್ಥೆಯ ಒತ್ತಡಗಳ ಎದುರಿನ ರಾಜಿ ಇವೆರಡೂ ಪಂಪನಲ್ಲಿವೆ. ಹೀಗಿರುವಾಗ ವರ್ಣಾಶ್ರಮ ವಿಭಜನೆ-ಅಸ್ಪೃಶ್ಯತೆಗಳನ್ನು ಪ್ರಶ್ನಿಸದೆ ಅವನ್ನು ಪ್ರತಿಪಾದಿಸುವ ಪಂಪ ಮನುಷ್ಯ ಜಾತಿ ತಾನೊಂದೆ ವಲಂ ಎಂದು ಹೇಳುವುದು ಕ್ರಾಂತಿಕಾರಕವೇ ಆದರೂ ಈ ಎರಡು ಮಾತುಗಳಲ್ಲಿ ನಮಗೆ ಯಾವುದು ಮುಖ್ಯವೆನ್ನಿಸುತ್ತದೋ ಅದನ್ನು ಅಂಗೀಕರಿಸಿ ನಮಗೆ ಬೇಡವಾದ ಮಾತನ್ನು ನಿರಾಕರಿಸಿ ಕಾವ್ಯದ ಇಮೇಜು ಕಟ್ಟುವುದು ಎಷ್ಟರ ಮಟ್ಟಿಗೆ ಸರಿ? ಬಿಡಿ ಮಾತುಗಳ ಮೂಲಕ ಕವಿಯ ನಿಲುವನ್ನು ಅಥವ ಇಡೀ ಕಾವ್ಯದ ಸ್ವರೂಪವನ್ನು ಸಮೀಕರಿಸಿ ಹೇಳುವ ವಿಧಾನವೆ ವಿಮರ್ಶೆಯ ಒಂದು ದೊಡ್ಡ ದುರ್ಬಲ ವಿಧಾನ.
ಕೊನೆಯಲ್ಲಿ ಪಂಪನ ಎರಡೂ ಕಾವ್ಯಗಳಲ್ಲಿ ತದ್ವತ್ ರಿಪೀಟಾಗಿರುವ ಒಂದು ಪದ್ಯದಿಂದ ಈ ಮಾತುಗಳನ್ನು ಮುಗಿಸೋಣ.
‘ಅಲ್ಲಲ್ಲೆ ಕುಳಿತುಕೊಳ್ಳಿರಿ ಸ್ವರ ಎತ್ತರಿಸಿ ಮಾತನಾಡದಿರಿ, ರಾಜ ಕೇಳಿದರೆ ಮಾತ್ರ ಮಾತನಾಡಿ, ನೀವು ಯಾವ ಯಾವ ಜಾಗದಲ್ಲಿ ಇರುವಿರೋ ಆಯಾ ಜಾಗದಲ್ಲೇ ಇರಿ. ಅಲುಗಾಡದಿರಿ. ಜೋರು ಮಾಡಿದಿರೋ ನಿಮಗೇ ಗೊತ್ತಾಗುತ್ತದೆ. ಎಂದು ಹೇಳುತ್ತಿದ್ದರು ಬೆತ್ತಧಾರಿ ದಂಡಧರ ವಿಭಾಗದವರು’ (೧೪.೨೨. ವಿ.ವಿ. ಮತ್ತು ೯.೬ ಆ.ಪು.) ರಾಜಾಸ್ಥಾನದಲ್ಲಿ ಯಾವ ವಾತಾವರಣವಿತ್ತು ಎಂಬುದನ್ನಿದು ಕನ್ನಡಿಸುತ್ತದೆ. ಈ ಪದ್ಯ ಪಂಪ ಬಾಳಿದ ರಾಜಾಶ್ರಯದ ಸ್ಥಿತಿ ಗತಿಗೆ ಒಡ್ಡಿದ ರೂಪಕವೂ ಹೌದು. (ಈ ಹೊತ್ತಿನ ಯಾರಾದರೂ ದೊಡ್ಡ ರಾಜಕಾರಣಿಯ ಓಲಗದ ವಾತಾವರಣವೂ ಬಹುಶಃ ಇದಕ್ಕಿಂತ ಭಿನ್ನವಿರಲಾರದು) ಇಂತಹ ವಾತಾವರಣದಲ್ಲಿ ರಾಜನ ಗೆಳೆಯನಾಗಿ, ಅವನ ಜೋಳದ ಪಾಳಿಗೂ-ರಾಜಗಣಿಕಾ ಸುಖದ ಮುಲಾಜಿಗೂ ಸಿಕ್ಕಂತಹ ಪಂಪ ಹೀಗಲ್ಲದೆ ಇನ್ನು ಹೇಗೆ ತಾನೆ ಪ್ರತಿರೋಧ ತೋರಬಲ್ಲ! ಹಾಗಾಗಿಯೆ ಇವನಲ್ಲಿ ಪ್ರತಿರೋಧವೆನ್ನುವುದು ಕಥನ ಪಾತ್ರ, ಪ್ರಸಂಗಗಳಿಂದ ನಿಯಂತ್ರಿಸಲ್ಪಟ್ಟು ಅಲ್ಲಲ್ಲಿ ಗರಿಕೆಯ ಚಿಗುರಿನಂತೆ ಒಡೆದು ಕಾಣುತ್ತಲೂ ಮಿಕ್ಕಂತೆ ಕಾವ್ಯದ ಒಡಲಿನಲ್ಲಿ ಬೇರುಗಳಂತೆ ಹೆಣೆದುಕೊಂಡೂ ವೇಷಾಂತರಿಯಾಗಿದೆ. ಆದರೆ ಪಂಪನಂತಹ ಪ್ರತಿಭಾವಂತ ಎಷ್ಟರ ಮಟ್ಟಿಗಿನ ಪೊಯೆಟಿಕ್ ಲೈಸೆನ್ಸನ್ನು ತೆಗೆದುಕೊಳ್ಳಬಹುದಾಗಿತ್ತೋ ಅಷ್ಟರ ಮಟ್ಟಿಗಿನ ಲೈಸೆನ್ಸನ್ನು ತೆಗೆದುಕೊಂಡಿಲ್ಲ ಎಂಬುದು ಮಾತ್ರ ನಿಜ. ಪಂಪನದೇ ಈ ಪಾಡಾದರೆ ಇನ್ನು ಮಿಕ್ಕ ಬಣಗು ಕವಿಗಳ ಮಾತು ಕೇಳುವಂತಿಲ್ಲ ಬಿಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ