ಪುಟಗಳು

ಭಾನುವಾರ, ಆಗಸ್ಟ್ 19, 2012

ನಮ್ಮ ಸುತ್ತಿನ ಗ್ರಾಮೀಣ ಕಲೆ-ಆಚರಣೆಗಳು





ನಮ್ಮ ಗ್ರಾಮೀಣ ಕಲೆಗಳು ನಿತ್ಯದ ಬದುಕಿನೊಂದಿಗೆ ಬೇರ್ಪಡಿಸಲಾಗದಂತೆ ಬೆರೆತುಹೋಗಿವೆ. ಅವು ಮನರಂಜನೆಗೆ ಜನಿಸಿದ ಶೋಪೀಸುಗಳಂತಲ್ಲ; ಜೀವನ ವಿಧಾನಗಳೆ ಆಗಿವೆ. ಅವುಗಳಿಗೆ ಒಂದೊಂದಕ್ಕು ವಿಶಿಷ್ಟವಾದ ಸಾಂದಭರ್ಿಕತೆಗಳಿವೆ. ಅವನ್ನು ಅಪಸಾಂದಭರ್ೀಕರಿಸಿದರೆ ಅಥವಾ ಬದುಕಿನಿಂದ ಬೇರ್ಪಡಿಸಿದರೆ ಅವು ನಮ್ಮ ಜೀವನದಿಂದ ಬೇರ್ಪಟ್ಟ ತುಣುಕುಗಳೆ ಆಗಿ ಕಾಣುತ್ತವೆ. ಅಂದರೆ ನಾವು ಹಳ್ಳಿಗಳಲ್ಲಿ ಕಲೆಗಳನ್ನು ಕೇವಲ ಇತರರಿಗಾಗಿ ಪ್ರದಶರ್ಿಸುವುದಿಲ್ಲ ನಮಗಾಗಿ ಬಾಳುತ್ತೇವೆ ಕೂಡ. ಜನಪದ ಸಾಹಿತ್ಯವೂ ಇದಕ್ಕೆ ಹೊರತಲ್ಲ. ಬದುಕಿನಿಂದ ಬೇರ್ಪಟ್ಟು ಅದು ರಚನೆಯಾಗುವುದಿಲ್ಲ, ಬದುಕಿನ ಅಂಗವಾಗಿ ಸಂಭವಿಸುತ್ತದೆ. ಹಾಗಾಗಿ ನಮ್ಮ ಗ್ರಾಮೀಣರಲ್ಲಿ ಕಲೆಗಾಗಿ ಕಲೆ, ಸಾಹಿತ್ಯಕ್ಕಾಗಿ ಸಾಹಿತ್ಯ ಎಂಬುದು ಇಲ್ಲ. ಬದುಕೆ ಕಲಾತ್ಮಕವಾದದ್ದು. ಸಾಹಿತ್ಯ, ಕಲೆಗಳು ಇರುವುದೇ ಬಾಳುವುದಕ್ಕೆ. ಅವೆಲ್ಲ ಸಂದರ್ಭಮುಕ್ತ ಪಠ್ಯಗಳಲ್ಲ. ಬಾಳಿನ ಭಿನ್ನ ವಿನ್ಯಾಸಗಳು.

ಬದುಕಿನ ಸಾಂದಭರ್ಿಕ ಅಗತ್ಯಗಳಿಗೆ ತಕ್ಕ ಹಾಗೆ ಆಚರಣೆಯ ಭಾಗವಾಗಿ ಕೆಲವೊಮ್ಮೆ ಆಚರಣೆಗಳೇ ಆಗಿ ಬರುವ ಗ್ರಾಮೀಣ ಕಲೆಗಳು ಸದಾ ಸಂದರ್ಭಬದ್ಧವಾಗೆ ಸಂಭವಿಸುತ್ತವೆ. ಕೆಲವೊಮ್ಮೆ ಇವು ಉಪಕಸುಬು, ಕುಲಸೇವೆ, ವಂಶಪಾರಂಪರ್ಯ ಕರ್ತವ್ಯಗಳಾಗಿಯೂ ವಿಧಿಸಲ್ಪಡುತ್ತವೆ. ಕಡ್ಡಾಯವಾಗಿ ಆಚರಿಸಲೇಬೇಕಾದ ವಿಧಿಕ್ರಿಯೆಗಳಾಗಿ, ಜವಾಬ್ದಾರಿಗಳಾಗಿ ವಹಿಸಲ್ಪಡುತ್ತವೆ. ಅಂದರೆ ಕೆಲವು ಕಲೆಗಳನ್ನು ಜನ ತಮ್ಮ ಇಚ್ಛೆಯಂತೆ ಆಯ್ಕೆ ಮಾಡಿಕೊಳ್ಳುವಂತಿಲ್ಲ. ಅವು ಅವರ ಕುಲಕಟ್ಟಿನ ಕರ್ತವ್ಯಗಳು. ಉದಾಹರಣೆಗೆ ನಮ್ಮ ಊರಿನಲ್ಲಿ ಪ್ರತಿ ವರ್ಷ ಕಾಮನ ಜಲ್ದಿಯಲ್ಲಿ ಪಾಳೇಗಾರನ ವೇಷ ಹಾಕುವುದು ಕಡ್ಡಾಯ. ನಾಯಕ ಜಾತಿಗೆ ಸೇರಿದ ಜನರ ಹಕ್ಕು ಮತ್ತು ಸೇವೆ ಅದು. ಬೇರೆ ಜನ ಆ ವೇಷ ಹಾಕುವಂತಿಲ್ಲ. ಆದರೆ ವೇಷ ಹಾಕುವುದೇ ಅವರ ಉದ್ಯೋಗವಲ್ಲ. ಕಾಮನ ಜಲ್ದಿಯ ಸಂದರ್ಭ ಬಂದಾಗ ಅವರು ಮಾಡಬೇಕಾದ ಕರ್ತವ್ಯ ಅದು. ಮಿಕ್ಕಂತೆ ಅವರು ಬೇಸಾಯವನ್ನು ತಮ್ಮ ಹೊಟ್ಟೆಪಾಡಿಗೆ ಅವಲಂಬಿಸಿದ್ದಾರೆ. ಹಾಗೆಯೆ ಮಾರಿ ಜಾತ್ರೆಯಲ್ಲಿ ನಡೆಮುಡಿ ಹಾಸುವುದು ಅಗಸರ ಕರ್ತವ್ಯ. ಕೊಂಡ ಮಾಡುವುದು ಹೊಲೆಯರ ಕರ್ತವ್ಯ. (ಬಿಟ್ಟಿ ಚಾಕರಿ!)

ಇಂದಿಗೂ ನಮ್ಮಲ್ಲಿ ತಮಟೆ ಬಾರಿಸುವವರು ಮಾದಿಗರು, ಚೌಡಿಕೆ ನುಡಿಸುತ್ತ ಆಸಾದಿ ಪದ ಹಾಡುವವರು ಮಾದಿಗರು. ಉರುಮೆ ಬಾರಿಸುವವರು ಹೊಲೆಯರು. ಪಂಜು ಹಿಡಿಯುವವರು, ನಡೆಮುಡಿ ಹಾಸುವವರು ಅಗಸರು. ಹೂವಿನ ಪಲ್ಲಕ್ಕಿ ಅಲಂಕಾರ ಮಾಡುವವರು ಹೂವಾಡಿಗರು. ಹೀಗೆ ಇವೆಲ್ಲ ಇವರ ಕುಲಕಟ್ಟಿನ ಸೇವೆ ಮತ್ತು ಹಕ್ಕುಗಳು. ಕರಕುಶಲ ಕಲೆಗಳಿಗು ಪ್ರದರ್ಶನ ಕಲೆಗಳಿಗು ಸಾಕಷ್ಟು ಆಂತರ ಇದೆಯಾದರೂ ಇಂತಹ ವಿಂಗಡಣೆಗಳ ಗೊಡವೆಯಿಲ್ಲದೆ ಇವೆಲ್ಲ ಕುಲಕಸುಬುಗಳಾಗಿ ಆಚರಣೆಗಳಲ್ಲಿ ಚಾಲ್ತಿಯಲ್ಲಿವೆ. ತಮಟೆ, ಚೌಡಿಕೆ, ಉರುಮೆ ಮೊದಲಾದವು ಅಸಾಧಾರಣ ಕಲೆಗಳೆ ಆದರೂ ಇವುಗಳಿಗೆ ಆಯಾ ಜಾತಿಗಳ ಚಹರೆಗಳಿವೆ. ಹಾಗೆಯೇ ಆಯಾ ಜಾತಿಗಳ ಅಂತಸ್ತು ಕೂಡ ಇವುಗಳಿಗೆ ತಗಲಿಕೊಂಡು ಈ ಕಲೆಗಳೂ ಕೀಳಾಗಿಯೆ ಭಾವಿಸಲ್ಪಡುತ್ತವೆ. ಯಾವ ಕಲೆಯೂ ಕೀಳಲ್ಲ; ಯಾವ ಕಲೆಯೂ ತಂತಾನೆ ಮೇಲಲ್ಲ ಎಂಬುದು ನಮಗೆ ಗೊತ್ತಿದೆಯಾದರೂ ಸಮಾಜದಲ್ಲಿ ಕಲೆಗಳಲ್ಲಿ ಒಂದು ತರತಮ ಸ್ತರವಿನ್ಯಾಸವಂತೂ ಇದ್ದೇ ಇದೆ. ಸಮಾಜದ ಮೇಲು ಕೀಳುಗಳನ್ನು ಬಿಂಬಿಸುವ ಕನ್ನಡಿಗಳಂತೆ ಮತ್ತು ಆ ಬಗ್ಗೆ ವಕಾಲತ್ತು ವಹಿಸುವ ರೂಪಕಗಳಂತೆ ನಮ್ಮ ಬಹುತೇಕ ಕಲೆಗಳಿವೆ. ತಮ್ಮ ಕಸುಬು-ಕಲೆಯ ಕಾರಣಕ್ಕೆ ಜನ ಇಂದು ಗೌರವಿಸಲ್ಪಡುವುದಿಲ್ಲ. ತಮ್ಮ ಜಾತಿ ಕೀಳರಿಮೆಯ ಚಹರೆಗಳನ್ನು ಕಳಕೊಳ್ಳಲು ತವಕಿಸುತ್ತಿರುವ ಇವರು ತಮ್ಮ ಕುಲಜಾತಿಯ ಕಲೆಗಳನ್ನೂ ಅನಾದರಿಸುತ್ತಿದಾರೆ-ತಿರಸ್ಕರಿಸುತ್ತಿದ್ದಾರೆ. ಇದು ತಪ್ಪೇನೂ ಅಲ್ಲ. ಆದರೆ ಸಂದರ್ಭಮುಕ್ತ, ಜಾತಿಮುಕ್ತ ಸ್ಥಿತಿಯೊಂದನ್ನು ನಾವಿಂದು ನಮ್ಮ ಕಲೆಗಳಿಗೆ ಒದಗಿಸಬೇಕಾಗಿದೆ ಅಷ್ಟೆ. ಆ ಕಡೆಗೆ ಇಂದಿನ ಕಲಾಲೋಕ ಚಲಿಸುತ್ತಿದೆ ಕೂಡ.

ಕೆಲವು ಕಲೆಗಳನ್ನು ನಮ್ಮ ಜನ ಕುಲಕಸುಬಾಗಿಯೂ, ಜೀವನಾಧಾರವಾಗಿಯೂ ಆಶ್ರಯಿಸಿದ್ದಾರೆ. ಉದಾಹರಣೆಗೆ ದೊಂಬರು ದೊಂಬರಾಟ ಆಡುವುದು, ದೊಂಬಿದಾಸರು ಪದ ಹಾಡುವುದು, ಕೊಂಡಮಾಮಗಳು (ಅಲೆಮಾರಿ ಕವಿಗಳು) ಕತೆ ಹಾಡುವುದು ತಮ್ಮ ಜೀವನೋಪಾಯಕ್ಕಾಗಿ. ಅವರು ಅವನ್ನು ತಮ್ಮ ಕಸುಬು ಎನ್ನುತ್ತಾರೆ. ಕಲೆ ಎನ್ನುವುದಿಲ್ಲ. ನಾವು ಅವನ್ನು ಕಲೆ ಎನ್ನುತ್ತೇವೆ. ಇಂಥ ಜೀವನಾಧಾರ ಕಸುಬುಗಳು ಇಂದು ತಮ್ಮ ಕೀಳರಿಮೆ, ಅಪ್ರಸ್ತುತತೆ ಮತ್ತು ಆಥರ್ಿಕ ನಿಶ್ಯಕ್ತಿಗಳಿಂದಾಗಿ ಕಣ್ಮರೆಯಾಗುತ್ತಿವೆ. ಮೋಡಿ ಹಾಕುವವರು, ಜಾದೂ ಮಾಡುವವರು, ಕರಡಿ ಆಡಿಸುವವರು, ಕೋತಿ ಆಡಿಸುವವರು, ಹಾವಾಡಿಗರು ಕೂಡ ಒಂದು ರೀತಿಯಲ್ಲಿ ಹೊಟ್ಟೆಪಾಡಿಗೆ ಆ ವೃತ್ತಿಗಳನ್ನು ಆಶ್ರಯಿಸಿದ್ದರು. ಅವೆಲ್ಲ ಅವರಿಗೆ ಕಲೆಗಳು ಎನ್ನುವುದಕ್ಕಿಂತ ಜೀವನೋಪಾಯದ ಮಾರ್ಗಗಳಾಗಿದ್ದುವು. ಇದೇ ರೀತಿಯಲ್ಲಿ ಕೊರವಂಜಿಗಳು, ಹಚ್ಚೆಯವರು, ಬುಡುಬುಡುಕೆಯವರು, ಪುಟ್ಟಿ ಮಾರಮ್ಮನೋರು ಮೊದಲಾದವರು ಕೂಡ ಅವರವರ ಕಲೆಗಳನ್ನು ಅನ್ನದ ಮಾರ್ಗಗಳಾಗಿಯೆ ಬಳಸುತ್ತಿದ್ದರು. ಇಂದಿಗೂ ಇಂಥವರು ಅಲ್ಲೊಬ್ಬರು ಇಲ್ಲೊಬ್ಬರು ಸಿಗುತ್ತಾರೆ.

ಕಲೆಗಳಲ್ಲಿ ಶೂದ್ರರ ಕಲೆಗಳು, ಪರಿಶಿಷ್ಟರ ಕಲೆಗಳು ಎಂದು ಗೆರೆ ಎಳೆದು ಗುತರ್ಿಸುವಷ್ಟರ ಮಟ್ಟಿಗೆ ನಮ್ಮಲ್ಲಿ ಜಾತಿ ಚಹರೆಗಳು ಕಲೆಗಳಿಗೆ ಅಂಟಿಕೊಂಡಿವೆ. ಬುಡಕಟ್ಟು-ಗಿರಿಜನರ ಕಲೆಗಳಿಗೆ ಹೋದರೆ ಈ ವಿಂಗಡಣೆಯಿಲ್ಲ. ಅಲ್ಲಿ ಆಯಾಯ ಬುಡಕಟ್ಟು-ಜನಾಂಗಗಳಿಗೇ ವಿಶಿಷ್ಟವಾದ ಸಾಮುದಾಯಿಕ ಕಲೆಗಳು ಇವೆ. ಆದರೆ ಊರು ಕೇರಿಗಳು ಸ್ಪಷ್ಟವಾಗಿ ಬೇರೆಯಾದ ನಮ್ಮ ಗ್ರಾಮಗಳಲ್ಲಿ ಕಲೆಗಳು ನಿದರ್ಿಷ್ಟ ಜಾತಿಗಳ ಚಹರೆಗಳನ್ನು ಒಳಗೊಂಡಿರುವಂತೆಯೆ ನಿದರ್ಿಷ್ಟ ಸಮುದಾಯಗಳ ಚಹರೆಗಳನ್ನೂ ಒಳಗೊಂಡಿವೆ. ಈ ಸಮುದಾಯಗಳು ಶೂದ್ರ ಮತ್ತು ಪರಿಶಿಷ್ಟ (ಎಡ-ಬಲ) ಎಂಬ ಸಮುದಾಯಗಳು ಎಂಬುದನ್ನು ಮತ್ತೆ ಹೇಳಬೇಕಿಲ್ಲ. ಊರು ಕೇರಿಯಂತೆಯೇ ಕಲೆಗಳೂ ಕೂಡ ಊರಿನ ಕಲೆಗಳು ಕೇರಿಯ ಕಲೆಗಳು ಎಂದು ಎರಡು ಪಂಗಡಗಳಲ್ಲಿ ಇವೆ. ಆದರೆ ಆಸ್ವಾದ-ಆಚರಣೆಗೆ-ಗ್ರಾಮದ ಒಟ್ಟಾರೆ ಆರೋಗ್ಯಕ್ಕೆ ಇವೆಲ್ಲ ಎಲ್ಲರಿಗು ಬೇಕು.

ನಮ್ಮಲ್ಲಿ ಏಕವ್ಯಕ್ತಿ ಪ್ರದರ್ಶನಗಳು ಬಹಳ ಕಡಿಮೆ. ಇಲ್ಲವೆನ್ನುವಷ್ಟು ಕಡಿಮೆ. ಸಮುದಾಯದ ಪ್ರದರ್ಶನಗಳೇ ಹೆಚ್ಚು. ಜಂಗಿ ಕುಣಿತ, ಕೋಲಾಟ, ಪಟದ ಕುಣಿತ, ನಂದಿ ಕುಣಿತ, ಸೋಮನ ಕುಣಿತ, ನಾಟಕ, ಭಜನೆ ಹೀಗೆ ಯಾವ ಕಲೆಗಳನ್ನು ತೆಗೆದುಕೊಂಡರೂ ಅವೆಲ್ಲ ಸಾಮುದಾಯಿಕ ಅಭಿವ್ಯಕ್ತಿಗಳೆ ಆಗಿವೆ. ಕಲಾ ಪ್ರದರ್ಶನದಲ್ಲಿ ಸಮುದಾಯವೊಂದು ಪರಸ್ಪರ ಮುಟ್ಟಿತಟ್ಟಿ, ಸ್ಪಶರ್ಿಸಿ ಕಲಾಭಿವ್ಯಕ್ತಿ ಮಾಡುವುದು ನಮ್ಮ ಗ್ರಾಮೀಣ ಕಲೆಗಳ ಲಕ್ಷಣ. ತಂಡವೊಂದು ಏಕವ್ಯಕ್ತಿಯಂತೆ ವತರ್ಿಸಬೇಕು, ಸಮುದಾಯದಲ್ಲಿ ತಾಳಮೇಳ ಇರಬೇಕು. ಇಲ್ಲದಿದ್ದರೆ ಇಡೀ ಕಲೆಯೆ ವಿರೂಪವಾಗುತ್ತದೆ. ಕೋಲಾಟದಲ್ಲಿ ಒಬ್ಬನು ತಪ್ಪು ಕೋಲು ಹಾಕಿದರೂ; ತಪ್ಪು ಹೆಜ್ಜೆ ಇಟ್ಟರೂ ಅದು ಇಡಿ ತಂಡದ ಮೇಲೆ ಪರಿಣಾಮ ಬೀರುತ್ತದೆ. ಜಂಗಿ ಕುಣಿತದಲ್ಲಿ ಒಬ್ಬನು ತಪ್ಪು ಹೆಜ್ಜೆ ಹಾಕಿದರೂ ಇಡೀ ತಂಡದ ಕುಣಿತವೆ ಕೆಟ್ಟು ಹೋಗುತ್ತದೆ. ಭಜನೆಯಲ್ಲಿ ಒಬ್ಬನು ತಪ್ಪು ತಾಳ ಹಾಕಿದರೂ ಒಟ್ಟು ತಂಡದಲ್ಲಿ ಅಪಸ್ವರ ಬರುತ್ತದೆ. ಅಂದರೆ ಸಾಮುದಾಯಿಕ ಹೊಂದಾಣಿಕೆಯನ್ನು ಮತ್ತು ಐಕ್ಯತೆಯನ್ನು ನಮ್ಮ ಗ್ರಾಮೀಣ ಕಲೆಗಳು ಸದಾ ಅಪೆಕ್ಷಿಸುತ್ತವೆ. ಅಭಿವ್ಯಕ್ತಿಸುತ್ತವೆ. ಇಲ್ಲೆಲ್ಲ ವ್ಯಕ್ತಿ ಪ್ರಜ್ಞೆಗಿಂತ ಸಮಷ್ಟಿ ಪ್ರಜ್ಞೆ ನಾಟ್ಯೀಕರಣಗೊಳ್ಳುತ್ತದೆ. ಒಬ್ಬೊಬ್ಬರೂ ಎಲ್ಲರಿಗೂ ಹೊಂದಿಕೊಳ್ಳಬೇಕು. ಹೊಂದಿಕೊಳ್ಳದಿದ್ದರೆ ಶೋ ನಡೆಯುವುದಿಲ್ಲ. ಸಮುದಾಯದಲ್ಲಿ ಸ್ತರವಿನ್ಯಾಸ ಇರುವಂತೆ ಕಲಾಸಮುದಾಯದಲ್ಲೂ ಸ್ತರವಿನ್ಯಾಸ ಇದ್ದೇ ಇರುತ್ತದೆ. ಅದನ್ನು ಒಪ್ಪಿಯೆ ಕಲೆ ವ್ಯಕ್ತಗೊಳ್ಳಬೇಕಷ್ಟೆ.

ಈ ಮೇಲೆ ಉಲ್ಲೇಖಿಸಿದ ಎಲ್ಲ ಕಲೆಗಳು ಒಂದಲ್ಲ ಒಂದು ರೀತಿಯಲ್ಲಿ ಸಂಯುಕ್ತ ಕಲೆಗಳು. ಒಂದೇ ಒಂದು ಕೌಶಲ್ಯವನ್ನು ಏಕಾಂಗಿಯಾಗಿ ಹೊಂದಿದ ಕಲೆಗಳಲ್ಲ. ಗಾಯನ, ವಾದ್ಯವಾದನ, ನೃತ್ಯ, ಅಭಿನಯ, ಸಾಹಿತ್ಯ, ಇತ್ಯಾದಿ ಹಲವು ಕಲೆಗಳನ್ನು ಮೇಳೈಸಿಕೊಂಡ ಸಂಯುಕ್ತ ಕಲೆಗಳಿವು. ಹರಿಕತೆ, ಬಯಲಾಟಗಳಂತು ಹೇಳುವಂತೆಯೆ ಇಲ್ಲ. ಇವೆಲ್ಲ ನಮ್ಮ ಕಡೆಯ ನಿತ್ಯಸಂಭ್ರಮದ ಸಂಯುಕ್ತ ಕಲೆಗಳು. ಇಲ್ಲು ಕೂಡ ಪರಸ್ಪರ ಅವಲಂಬನೆಯೆ ಕಾಣುತ್ತದೆ. ಯಾವ ಒಂದು ಅಂಗ ಕೈ ಕೊಟ್ಟರೂ ಒಟ್ಟು ಕಲೆ ಕುಂಟುತ್ತದೆ. ಈ ಸಂಯುಕ್ತತೆಯ ಗುಣ ಕೂಡ ನಮ್ಮ ಕಲೆಗಳು ಸಮುದಾಯ ಪ್ರಜ್ಞೆಯ ಕಲೆಗಳಾಗಲು ಕಾರಣವಾಗಿದೆ. ಇದೇ ಗುಣ ಜನರಲ್ಲಿ ಸಾಮುದಾಯಿಕ ಪಾಲ್ಗೊಳ್ಳುವಿಕೆ-ಸಹಬಾಳ್ವೆಗಳಿಗೆ ಪ್ರೇರಕವಾಗಿದೆ ಕೂಡ. ಈ ಸಾಮುದಾಯಿಕ ಬಾಳ್ವಿಕೆಯು ಅಸಮಾನತೆಯನ್ನು ಒಪ್ಪಿ ಕೊಂಡದ್ದೆ ಆಗಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ನಮ್ಮ ಕೆಲವು ಕಲೆಗಳು ಪ್ರಾಚೀನ ಜೀವನವಿಧಾನಗಳ ಸಾಂಸ್ಕೃತಿಕ ಪಳೆಯುಳಿಕೆಗಳಾಗಿ ಉಳಿದು ಬಂದಿವೆ. ನಮ್ಮಲ್ಲಿ ಉಗಾದಿ ಹಬ್ಬದಂದು ಒಂದು ವಿಶಿಷ್ಟವಾದ ಆಚಾರವಿದೆ. ಸ್ನಾನ ಗೀನ, ಪೂಜೆ ಗೀಜೆ ಮಾಡಿ, ಪೂವರ್ಿಕರಿಗೆ ಸಮಾಧಿ ಮೇಲೆ ಎಡೆಯಿಕ್ಕಿ ಬಂದು, ಉಂಡು ಆದ ಮೇಲೆ ಮದ್ಯಾಹ್ನ ಕೆಲವರು ಉಯ್ಯಾಲೆ ಆಡಿದರೆ ಕೆಲವರು ಕಾಯಿ ಒಡೆಯುತ್ತಾರೆ. ಗುರಿಯಿಟ್ಟು ತೆಂಗಿನಕಾಯಿ ಒಡೆಯುವುದು ಪ್ರಾಚೀನ ಯುದ್ಧಕಲೆಯ ಪಳೆಯುಳಿಕೆ ಹಾಗಿದೆ. ಅಲ್ಲದೆ ನಮ್ಮ ಕಡೆ ಹೋಳಿ ಹಬ್ಬದಲ್ಲಿ ರಕ್ತ ಚೆಲ್ಲುವುದು, ಜಂಗಿ ಕುಣಿಯುವುದು ಮಾಡುತ್ತಾರೆ. ಇವೆಲ್ಲವೂ ವಿಜಯೋತ್ಸವದ ಆಚರಣೆಗಳ ಪಳೆಯುಳಿಕೆಗಳೇ ಆಗಿವೆ. ಹಾಗೆಯೇ ನಮ್ಮಲ್ಲಿ ಸಾಮಾನ್ಯವಾದ ಒಂದು ಆಟವೆಂದರೆ ಚೆಂಡಾಟ. ಇದೂ ಕೂಡ ಯುದ್ಧ ಕಲೆಯ ಹ್ರಸ್ವ ತರಬೇತಿಯ ಹಾಗೆ ಇದೆ.

ನಮ್ಮಲ್ಲಿ ಉಯ್ಯಾಲೆ ಆಡುವುದು ಒಂದು ತಾಕತ್ತಿನ ಕಲೆ. ಉಗಾದಿ ಹಬ್ಬದಲ್ಲಿ ಊರ ಮುಂದಲ ಬೃಹತ್ ಆಲದ ಮರಕ್ಕೆ ಹಗ್ಗ ಕಟ್ಟಿ, ಅದಕ್ಕೆ ದೊಡ್ಡ ಏಣಿ ಕಟ್ಟಿ ನಾಲ್ಕು ನಾಲ್ಕು ಜನ ಉಯ್ಯಾಲೆ ಆಡುವುದು ಒಂದು ಮೈ ಜುಮ್ಮೆನಿಸುವ ಮನರಂಜನೆ. ಇದೊಂದು ಸುಗ್ಗಿಯ ಆಚರಣೆೆ. ಇದೊಂದು ಸಾಹಸಕ್ರೀಡೆಯೂ ಹೌದು, ಕಲೆಯೂ ಹೌದು. ನಮ್ಮ ಗ್ರಾಮೀಣ ಕಲೆಗಳಲ್ಲಿ ಕೆಲವನ್ನು ಹೀಗೆ ಇದು ಕಲೆ ಇದು ಕ್ರೀಡೆ ಎಂದು ಒಂದೊಂದು ಗುಂಪಿಗೆ ವಿಂಗಡಿಸಿ ಹಾಕಲು ಬರುವುದಿಲ್ಲ. ಕೆಲವು ಏಕಕಾಲಕ್ಕೆ ಕಲೆಗಳೂ ಕ್ರೀಡೆಗಳೂ ಆಗಿರುತ್ತವೆ. ಈ ಹಿನ್ನೆಲೆಯಲ್ಲಿ ಬುಗುರಿ, ಚಿನ್ನಿ ದಾಂಡು, ಕಣ್ಣಾ ಮುಚ್ಚಾಲೆ, ಕುದುರೆ ಚೆಂಡು ಇವೆಲ್ಲ ಆಟಗಳೂ ಹೌದು ಕಲೆಗಳೂ ಹೌದು.

ನಮ್ಮ ಕಡೆಯ ಕೆಲವು ಗ್ರಾಮೀಣ ಕಲೆಗಳು ಜೀವನೋಪಾಯಗಳಾಗಿ, ವೃತ್ತಿಗಳಾಗಿ, ಕುಲಕಸುಬುಗಳಾಗಿ ಇದ್ದರೆ ಕೆಲವು ಸಂತಸ-ಸುಗ್ಗಿಹಿಗ್ಗು-ಫಲವಂತಿಕೆ-ಸಮೃದ್ಧಿಯ ಅಭಿವ್ಯಕ್ತಿಗಳಾಗಿ ಆಚರಣೆಯಲ್ಲಿವೆ. ಕೃಷಿ ಬದುಕಿಗೂ ಇವಕ್ಕು ನೇರ ಸಂಬಂಧವಿದೆ. ಸುಗ್ಗಿ ಮುಗಿದಾಗ ತಮ್ಮ ಹಿಗ್ಗನ್ನು ಆಚರಣೆಗಳ ಮೂಲಕ ಜನ ಹೊರಹಾಕುತ್ತಾರೆ. ಅಲ್ಲಿ ರಂಜನೆ ಕೂಡ ಕಲೆಗಳ ಅವಿಭಾಜ್ಯ ಅಂಗವಾಗಿ ಇದ್ದೇ ಇರುತ್ತದೆ. ಕೋಲಾಟ ಇಂತಹ ಒಂದು ಸಮೃದ್ಧಿ-ಫಲವಂತಿಕೆಯ ಆಚರಣೆ-ಕಲೆ. ಭಿನ್ನ ಲಯ ಗತ್ತಿಗೆ ತಕ್ಕಂತೆ ತರಾವರಿ ಹಾಡುಗಳ ಜೊತೆ ಕೋಲು ಹುಯ್ಯುವ ಹಲವು ಭರ್ಜರಿ ತಂಡಗಳು ನಮ್ಮ ಸುತ್ತಿನ ಊರುಗಳಲ್ಲಿವೆ. ಮದುವೆ, ಜಾತ್ರೆ, ಸಮಾರಂಭಗಳಲ್ಲಿ ಕೋಲಾಟ ಒಂದು ವಿಶೇಷ ಪ್ರದರ್ಶನ ಕಲೆಯಾಗಿ ನಮ್ಮಲ್ಲಿ ಪ್ರದಶರ್ಿತವಾಗುತ್ತದೆ.

ಬಲಿ ಆಚರಣೆಗಳಲ್ಲಿ ನಮ್ಮಲ್ಲಿ ಬಹು ಮುಖ್ಯವಾದ ಆಚರಣೆ ಎಂದರೆ ಮಾರಿ ಜಾತ್ರೆ. ಈ ಜಾತ್ರೆಯಲ್ಲಿ ಮಾರಮ್ಮನಿಗೆ ಉಪಾತರ್ಿ ಹೊರುವುದು ಒಂದು ಕಡ್ಡಾಯ ಆಚರಣೆ. ಉಪಾತರ್ಿಗಳನ್ನು ಅಡಕೆ-ತೆಂಗಿನ ಹೊಂಬಾಳೆಗಳಿಂದ ಸಿಂಗರಿಸುವುದೇ ಒಂದು ಕಲೆ. ಕನ್ನುಡುಗಿಯರು ಸಿಂಗಾರವಾಗಿ ಬೀದಿಯಲ್ಲಿ ಉಪಾತರ್ಿ ಹೊತ್ತು ದಂಡು ದಂಡಾಗಿ ಬರುತ್ತಿದ್ದರೆ ನೋಡಲು ಎರಡು ಕಣ್ಣು ಸಾಲುವುದಿಲ್ಲ. ಆಗೆಲ್ಲ ನಮ್ಮ ಊರಿನ ಪಡ್ಡೆ ಐಕಳು ಏನು ಕೆಲಸ ಇದ್ದರೂ ಕಡ್ಡಾಯವಾಗಿ ಹಾಜರ್. ಕೆಲವರಂತೂ ತಮ್ಮ ಭಾವಿ-ಹಾಲಿ ಪ್ರೇಯಸಿಯರನ್ನು ಒಲಿಸಲು ಇಲ್ಲದ ಆಟ ಆಡುವುದುಂಟು. ತಮಟೆ, ಅರೆ ಗತ್ತಿಗೆ ಕುಣಿಯುವುದುಂಟು. ಅದರಿಂದ ಎಲ್ಲರಿಗೂ ಮನರಂಜನೆ ಒದಗುತ್ತದೆ.

ನಮ್ಮ ಕಡೆಯ ಕೆಲವು ಕಲೆಗಳು ಧರ್ಮಶ್ರದ್ಧೆ-ದೈವಶ್ರದ್ಧೆಗಳ ಅಭಿವ್ಯಕ್ತಿರೂಪದ ಆರಾಧನಾ ಕಲೆಗಳಾಗಿ ಬಳಕೆಯಲ್ಲಿವೆ. ಇವು ಸಾಮಾನ್ಯವಾಗಿ ದೇವರ ಉತ್ಸವ, ಮೆರವಣಿಗೆ, ಜಾತ್ರೆ ಇಂತಹ ಸಂದರ್ಭಗಳಲ್ಲಿ ಪ್ರದರ್ಶನಗೊಳ್ಳುತ್ತವೆ. ಉದಾಹರಣೆಗೆ ತೋತರಣೆ ಕಟ್ಟುವುದು, ಮಣೇವು ಹಾಕುವುದು ಇಂತಹ ಕಲೆ-ಆಚರಣೆಗಳು. ಪೂಜಾ ಕುಣಿತ, ಪಟದ ಕುಣಿತ, ಸೋಮನ ಕುಣಿತ, ನಂದಿ ಕುಣಿತ, ವೀರಗಾಸೆಗಳೆಲ್ಲ ನಮ್ಮ ಸುತ್ತಿನ ಆರಾಧನಾ ಕಲೆಗಳೇ. ಇಲ್ಲೆಲ್ಲ ಭಕ್ತಿಯೊಂದಿಗೇ ಮನರಂಜನೆಯೂ ಬೆರೆತುಕೊಂಡಿರುತ್ತದೆ. ನಮ್ಮ ಊರಿನ ಪ್ರಧಾನ ದೇವರು ಶ್ರೀ ಕರಿತಿಮ್ಮರಾಯಸ್ವಾಮಿ. ಈ ದೇವರ ಉತ್ಸವ ಮೆರವಣಿಗೆಯಲ್ಲಿ ದಾಸಪ್ಪ ಶಂಖ ಊದುತ್ತ, ಜಾಗಟೆ ಬಾರಿಸುತ್ತ ದೈವಸ್ತುತಿ ಮಾಡುವುದು ಕಡ್ಡಾಯ. ಕೆಲವೊಮ್ಮೆ ದಾಸಯ್ಯನಿಂದ ಮಣೇವು ಹಾಕಿಸುವುದೂ ಉಂಟು. ಇಲ್ಲೆಲ್ಲ ಜನರ ಭಕ್ತಿ ದಾಸಯ್ಯನ ಮಣೇವು ಸೇವೆಯ ಮೂಲಕ ಪ್ರಕಟಗೊಳ್ಳುತ್ತದೆ. ದಾಸಯ್ಯನಿಗೆ ಈ ನೆಪದಲ್ಲಿ ಹೊಟ್ಟೆ ತುಂಬಾ ನೈವೇದ್ಯವೂ ದೊರೆಯುತ್ತದೆ. ಎಲ್ಲ ಜಾತಿ ಜನಾಂಗದ ಜನರೂ ದಾಸಪ್ಪ ತಿಂದು ಬಿಟ್ಟ ಎಂಜಲು ಪ್ರಸಾದವನ್ನು ದೇವರು ತಿಂದು ಬಿಟ್ಟ ಪ್ರಸಾದವೆಂದೇ ಭಾವಿಸಿ ಸ್ವೀಕರಿಸುತ್ತಾರೆ. ಹೀಗೆ ಕೆಲವೊಮ್ಮೆ ಕಂದಾಚಾರಗಳೂ ನಮ್ಮ ಕಲೆ-ಆಚರಣೆಗಳ ಭಾಗವಾಗಿಯೆ ಇರುತ್ತವೆ. (ಜನಕ್ಕೆ ಮಾತ್ರ ಇದು ಕಂದಾಚಾರ ಅಲ್ಲ, ಭಕ್ತಿ) ಈ ದೇವರ ಮೆರವಣಿಗೆ ಹಗಲಲ್ಲೆ ಬರಲಿ, ಇರುಳಲ್ಲೆ ಬರಲಿ ಪಂಜು ಹಿಡಿಯುವುದು ಕೂಡ ಕಡ್ಡಾಯ. ರಾತ್ರಿಯಾದರೆ ಬೆಳಕಿಲ್ಲದ್ದರಿಂದ ಪಂಜು ಹಿಡಿಯಬೇಕು ಸರಿ. ಹಗಲಾದರೂ ಪಂಜು ಮೆರವಣಿಗೆಯಲ್ಲಿ ಯಾಕೆ ಬೇಕು? ಯಾರೂ ಇಂಥದ್ದನ್ನು ಪ್ರಶ್ನೆ ಮಾಡುವ ಹಾಗಿಲ್ಲ. ಇದು ದೇವರ ಕಾರ್ಯ. ಯಾವುದೋ ಒಮ್ಮೆ ಬದುಕಿನ ಅಗತ್ಯಗಳಾಗಿದ್ದಂಥವು ನಿಗಧಿತವಾಗಿ ನಿತ್ಯದ ವಿಧಿಕ್ರಿಯೆ-ಆಚಾರಗಳಾಗಿ ಚಾಲ್ತಿಗೊಂಡಾಗ ಆ ಆಚರಣೆಗಳಿಗೆ ಸಾಮಾಜಿಕ ಸಂಸ್ಥೆಯ ಸ್ಥಾನಮಾನ ಬಂದುಬಿಡುತ್ತದೆ. ಆಗ ಅವುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅವು ಆಗ ಹೊರಗಿನವರಿಗೆ ಕಲೆಗಳು ಪಾಲಿಸುವವರಿಗೆ ಕಟ್ಟುಪಾಡುಗಳು.

ನಮ್ಮ ಆಸುಪಾಸಿನ ಬಹುತೇಕ ಊರುಗಳಲ್ಲಿ ವರ್ಷಕ್ಕೊಮ್ಮೆಯಾದರು ಬಯಲಾಟ ಆಡುತ್ತಾರೆ. ಅದಕ್ಕಾಗಿ ಪ್ರಖ್ಯಾತವಾದ ಮೇಷ್ಟರನ್ನು ಕರೆಸಿ ನಾಟಕ ಕಲಿಯುತ್ತಾರೆ. ಹಾಗೆ ನಾಟಕ ಕಲಿತು ಆಡುವಾಗ ಆಯಾ ಊರುಗಳಲ್ಲಿ ಆಯಾ ಊರ ದೇವರ ಹೆಸರಿನಲ್ಲಿ ನಾಟಕ ಮಂಡಲಿಗಳು ರಚನೆಯಾಗುತ್ತವೆ. ಪ್ರತಿ ಸಾರಿ ನಾಟಕ ಆಡುವಾಗಲೂ ತಂತಾನೆ ಸೃಷ್ಟಿಯಾಗಿ ಆಮೇಲೆ ಇಲ್ಲವಾಗುವ ನಾಟಕ ಮಂಡಲಿಗಳು ಅವು. ಅವ್ಯಾವೂ ಸ್ಥಾವರ ಸಂಸ್ಥೆಗಳಲ್ಲ. ಜಾತ್ಯತೀತವಾಗಿ ಎಲ್ಲ ಜನಸಮುದಾಯಗಳೂ ಭಾಗವಹಿಸಬಹುದಾದ ಒಂದು ಬ್ಯಾನರನ್ನು ಕಟ್ಟಿಕೊಳ್ಳುವುದು ಮತ್ತು ಅದಕ್ಕೆ ಜನರಲ್ಲಿನ ದೈವಭಕ್ತಿಯನ್ನು ಬಳಸಿಕೊಳ್ಳುವುದು ಇಲ್ಲಿನ ವ್ಯಾಪಾರ. ಇಲ್ಲೆಲ್ಲ ಭಿನ್ನ ಜಾತಿಯ ಜನರನ್ನು ಒಳಗೊಳ್ಳುವ ಒಂದು ಐಕ್ಯತೆಯ ಐಡೆಂಟಿಟಿಯಾಗಿ ದೈವಭಕ್ತಿ ನಮ್ಮ ಪ್ರದರ್ಶನ ಕಲೆಗಳಿಗೆ ಒದಗಿ ಬರುತ್ತದೆ. ಮತ್ತೆ ಈ ದೈವಭಕ್ತಿ ಏಕಕಾಲಕ್ಕೆ ಒಂದು ವಿಶಾಲ ಸಮುದಾಯವನ್ನು ತನ್ನೊಳಗೆ ಒಳಗೊಳ್ಳುತ್ತಲೆ ಅನ್ಯ ಸಮುದಾಯಗಳನ್ನು ಹೊರಗೆ ಇಡುತ್ತಿರುತ್ತದೆ ಕೂಡ.

ನಮ್ಮ ಸುತ್ತಿನಲ್ಲಿ ಬಯಲಾಟಗಳು ಬಹು ಮುಖ್ಯವಾದ ಮನರಂಜನಾ ಕಲೆಗಳು. ಎಲ್ಲ ಹಳ್ಳಿಗಳಲ್ಲು ಕಡ್ಡಾಯವಾಗಿ ಒಂದಲ್ಲ ಒಮ್ಮೆ ವರ್ಷದಲ್ಲಿ ಬಯಲಾಟಗಳನ್ನು ನಮ್ಮವರು ಆಡುತ್ತಾರೆ. ನಮ್ಮ ಸುತ್ತಿನ ನಾಟಕಗಳೆಲ್ಲ ಬಹುಪಾಲು ಪೌರಾಣಿಕ ನಾಟಕಗಳೆ. ಪುರಾಣ ಪಾತ್ರಗಳ ಮೌಲ್ಯ ಚೌಕಟ್ಟಿನಲ್ಲೆ ವರ್ತಮಾನದ ಜೀವನವನ್ನು ಸದಾ ಕಟ್ಟುವ ಕೆಲಸವನ್ನೆ ಇವುಗಳು ಮಾಡುತ್ತಿರುತ್ತವೆ. ಇವುಗಳಲ್ಲಿ ಪೌರಾಣಿಕ ಪಾತ್ರ-ಸನ್ನಿವೇಶಗಳ ಮೂಲಕವೇ ನಮ್ಮ ಸುತ್ತಿನ ಸಮಾಜ ಮತ್ತೆ ಮತ್ತೆ ನಿರ್ವಚನಗೊಳ್ಳುತ್ತಿರುತ್ತದೆ. ನಾಟಕಗಳೆಂದರೆ ನಮ್ಮಲ್ಲಿ ಇಡೀ ರಾತ್ರಿ ಆಡುತ್ತಾರೆ, ನೋಡುತ್ತಾರೆ. ಪೆಟ್ರೊಮ್ಯಾಕ್ಸುಗಳು, ಸೀಮೆ ಎಣ್ಣೆ ಪಂಜುಗಳು ಈಗಿಲ್ಲ. ಜಗಮಗಿಸುವ ಸೀನರಿ-ವಿದ್ಯುತ್ ದೀಪಾಲಂಕಾರಗಳಿಂದ ಊರಿನ ಒಂದು ದೊಡ್ಡ ಹಬ್ಬದಂತೆ ಅವು ನಡೆಯುತ್ತವೆ. ಪೌರಾಣಿಕ ನಾಟಕಗಳ ಕಥೆ-ಪಾತ್ರ ಸನ್ನಿವೇಶಗಳೆಲ್ಲ ನಮ್ಮವರಿಗೆ ಚಿರಪರಿಚಿತ. ಆದಾಗ್ಯೂ ನಮ್ಮ ಜನ ಅವನ್ನು ಕಣ್ಣು ಕೀಲಿಸಿಕೊಂಡು ನೋಡುತ್ತಾರೆ. ಪ್ರತಿ ಸಾರಿಯೂ ನಮ್ಮ ಹುಡುಗ ಈ ಪಾತ್ರ ಮಾಡುತ್ತಾನೆ, ನಮ್ಮ ಹುಡುಗ ಆ ಪಾತ್ರ ಮಾಡುತ್ತಾನೆ ಎಂಬ ಕುತೂಹಲ ಇದ್ದೇ ಇರುತ್ತದೆ. ಆದರೆ ಇಗೀಗ ಇವು ಅವಜ್ಞೆಗೆ ಗುರಿಯಾಗುತ್ತಿವೆ.

ನಮ್ಮ ಭಜನೆ, ಜಾತ್ರೆ, ಪೌರಾಣಿಕ ನಾಟಕ, ಹರಿಕಥೆ ಇತ್ಯಾದಿ ಕಲೆಗಳು ಮನರಂಜನೆಯನ್ನು ಒಂದು ಉತ್ಪನ್ನವನ್ನಾಗಿ ನೀಡುವುದಕ್ಕಿಂತ ಅದನ್ನೊಂದು ಸಾಧನವನ್ನಾಗಿ ಬಳಸುತ್ತವೆ. ಇವುಗಳ ಉದ್ದೇಶವು ಮನರಂಜನೆಯನ್ನು ನೀಡುವುದು ಮಾತ್ರ ಅಲ್ಲ. ದೈವಶ್ರದ್ಧೆ, ಧರ್ಮಶ್ರದ್ಧೆಗಳನ್ನು ಜನರಲ್ಲಿ ಸ್ಥಿರಗೊಳಿಸುವುದು ಮತ್ತು ಸಮಾಜದ ಸಮಷ್ಠಿ ನೈತಿಕಪ್ರಜ್ಞೆ, ಮೌಲ್ಯಪ್ರಜ್ಞೆಗಳನ್ನು ಸದಾ ನೆಲೆಗೊಳಿಸುವುದು. ಜನರ ನಡಾವಳಿ-ಆಲೋಚನಾಕ್ರಮಗಳನ್ನು ರೂಪಿಸುವ ಕೆಲಸವನ್ನು ಇವು ಮಾಡುತ್ತವೆ. ಕುರುಕ್ಷೇತ್ರ ನಾಟಕದ ದ್ರೌಪದಿಯ ಮಾನಭಂಗ ಪ್ರಸಂಗದಲ್ಲಿ ಹೆಂಡತಿಗೆ ಅವಮಾನ ಆಗುತ್ತಿದ್ದರೂ ಭೀಮ ಅಜರ್ುನರು ಸುಮ್ಮನೆ ಇರುವುದು ಅಣ್ಣನ ಮೇಲಿನ ಭಕ್ತಿ-ಗೌರವಗಳಿಂದ. ನಲ್ಲತಂಗಾ ತೌರಿಗೆ ಹೋಗದಿರುವುದು ಎಷ್ಟೇ ಕಷ್ಟ ಬಂದರೂ ಗಂಡನೊಂದಿಗೇ ಬಾಳಬೇಕು ಎಂಬ ಕಾರಣದಿಂದ. ಆಕೆ ತನ್ನ ಮಕ್ಕಳನ್ನೆಲ್ಲ ಬಾವಿಗೆ ಹಾಕುವ ಪ್ರಸಂಗವಂತು ತೌರಿನ ಕರ್ತವ್ಯವನ್ನು ನಮಗೆ ನೆನಪಿಸುವ ಪ್ರಸಂಗವಾಗಿದೆ. ಜಲಂಧರ ಕಥೆ ನಾಟಕದ ಜಲಂಧರ ಮಹಾರಾಜನ ಹೆಂಡತಿಯ ಪಾತ್ರವಂತೂ ನಮ್ಮಲ್ಲಿನ ಪಾತಿವ್ರತ್ಯ ಮೌಲ್ಯದ ರೂಪಕವಾಗಿದೆ. ಪಾಂಡವರ ಕಥನಗಳಂತು ನಮ್ಮ ಹಳ್ಳಿಗಳಲ್ಲಿ ನಿತ್ಯವೂ ನೈತಿಕತೆ-ಮೌಲ್ಯಪ್ರಜ್ಞೆಗಳನ್ನು, ಅಣ್ಣತಮ್ಮತನದ ನಡಾವಳಿಯನ್ನು ನಿತ್ಯ ನೆನಪಿಸುವ ಕಥನಗಳಾಗಿ ಅಭಿನಯಗೊಳ್ಳುತ್ತವೆ. ಆದರೆ ಈಗೀಗ ಜನಪದ ಕಲೆಗಳು ತಮ್ಮ ಸಮಾಜದ ಮೇಲಿನ ಹಿಡಿತವನ್ನು ಕಳೆದುಕೊಳ್ಳುತ್ತಿವೆ. ಈ ಜವಾಬ್ದಾರಿಯನ್ನು ಆಧುನಿಕ ಜನಪದ ಕಲೆಗಳಾದ ಸಿನೆಮಾ, ಟೀವಿ ಧಾರವಾಹಿಗಳು ಕೈಗೆತ್ತಿಕೊಂಡಿವೆ.

ಆದರೆ ಈ ಪೌರಾಣಿಕ ನಾಟಕಗಳು ಪ್ರತಿಪಾದಿಸುವ ಅಣ್ಣತಮ್ಮತನ, ಪಾತಿವ್ರತ್ಯ, ಗಂಡನ ಮನೆ ಬಾಳು, ದೈವಭಕ್ತಿ ಇತ್ಯಾದಿ ಮೌಲ್ಯಗಳೆಲ್ಲ ಇಂದು ಅನಿವಾರ್ಯ ಮೌಲ್ಯಗಳಾಗಿ ಉಳಿದಿಲ್ಲ. ಜೀವನವಿಧಾನ-ಜಗತ್ತಿನ ಪರಿಕಲ್ಪನೆ ಬದಲಾಗುತ್ತಿರುವಾಗ ಹೊಸ ಮೌಲ್ಯವ್ಯವಸ್ಥೆ ಜಾರಿಯಾಗುತ್ತಿದೆ. ಹಾಗಾಗಿ ಅಪ್ರಸ್ತುತ ಮೌಲ್ಯಗಳನ್ನು ಪ್ರತಿಪಾದಿಸುವ ಹಳೆ ಕಲಾಪ್ರಕಾರಗಳು ಅಪ್ರಸ್ತುತವಾಗುತ್ತಿವೆ. ಅಷ್ಟೇ ಅಲ್ಲ ಇಂದು ನಮ್ಮ ಗ್ರಾಮೀಣ ಕಲೆಗಳು ಬದಲಾಗುತ್ತಿರುವ ಜೀವನವಿನ್ಯಾಸಗಳಿಂದಾಗಿ ತಾವು ಸಹಜವಾಗಿ ಸಂಭವಿಸುತ್ತಿಲ್ಲ ಬಲವಂತವಾಗಿ ಪ್ರದಶರ್ಿತವಾಗುತ್ತಿವೆ, ಪೋಷಿತವಾಗುತ್ತಿವೆ. ನಮ್ಮ ಗತವನ್ನು ಅದರೆಲ್ಲ ಮುಖಗಳಲ್ಲಿ ಹಿಡಿದಿಟ್ಟು ಸಂರಕ್ಷಿಸಬೇಕೆಂಬ ಚರಿತ್ರೆಯ ಹೆಣವನ್ನು ರಕ್ಷಿಸಿಡುವ ಮ್ಯೂಸಿಯಂತನದಿಂದಾಗಿ ಕಲೆಗಳಿಂದು ಪೋಷಕರಿಗಾಗಿ ಕಾಯುತ್ತಿವೆ. ತಮ್ಮ ಸಹಜಸಂಭವ ಗುಣವನ್ನು ಕಳೆದುಕೊಳ್ಳುತ್ತಿರುವ ಅವು ತಮ್ಮ ಪ್ರದರ್ಶನಕ್ರಮ ಮತ್ತು ಹೂರಣಗಳೆರಡರಲ್ಲು ಕಳಾಹೀನವಾಗುತ್ತಿವೆ. ಅಂದರೆ ಯಂತ್ರನಾಗರಿಕ-ಡಿಜಿಟಲೀಕೃತ ಉತ್ಪನ್ನಗಳಿಗೆ ಹೋಲಿಕೆಗೊಂಡು ತಮ್ಮ ಕಂಟೆಂಟು ಮತ್ತು ಫಾರಮ್ಮುಗಳೆರಡರಲ್ಲು ಕಳಾಹೀನವಾಗಿ ಕಾಣುತ್ತಿವೆ. ಇದೂ ಕೂಡ ನಮ್ಮ ಕಲೆಗಳು ಅವಜ್ಞೆಗೆ ಗುರಿಯಾಗಲು ಕಾರಣವಾಗಿದೆ. ಜಾಗತೀಕರಣ ಮತ್ತು ಅದರ ಗಾಳಿ ಮಾತ್ರವೆ ನಮ್ಮ ಕಲೆಗಳ ಅಳಿವಿಗೆ ಏಕೈಕ ಕಾರಣವಲ್ಲ. ಬದುಕೇ ಬದಲಾಗುವಾಗ ಕಲೆಗಳೂ ರೂಪಾಂತರಗೊಳ್ಳಬೇಕಲ್ಲವೆ?

ನಮ್ಮ ಸುತ್ತಿನ ಕೆಲವು ಕಲೆಗಳು ಬರ-ಅನಾವೃಷ್ಟಿ-ಬಡತನ-ಹಸಿವು-ನೋವುಗಳ ಅಭಿವ್ಯಕ್ತಿಗಳಾಗಿ, ಮನೋಶಮನ ಉಪಾಯಗಳಾಗಿ ಆಚರಣೆಯಲ್ಲಿವೆ. ಇವು ಪ್ರಕೃತಿಯೊಂದಿಗಿನ ಅವರ ಸಂಬಂಧವನ್ನೂ ಹೇಳುತ್ತವೆ. ಪ್ರಾಕೃತಿಕ ವಿಕೋಪಗಳಿಗೆ ಪ್ರಕೃತಿ ಆರಾಧನೆಯನ್ನಲ್ಲದೆ ನಮ್ಮ ಗ್ರಾಮೀಣರು ಇನ್ನೇನೂ ಮಾಡಲಾಗದ ಸಜ್ಜನರು. ನಮ್ಮ ಸುತ್ತಿನಲ್ಲಿ ಹಲವಾರು ಮಳೆ ಸಂಬಂಧಿ ಆಚರಣೆಗಳು ಇವೆ. ಮಳೆರಾಯನ ಪೂಜೆ, ಕಪ್ಪೆ ಮದುವೆ, ಕತ್ತೆ ಮೆರವಣಿಗೆ, ತೆಪ್ಪೋತ್ಸವ (ತೆಪ್ಪುಚ್ವ), ಹೆಡಿಗೆ ಜಾತ್ರೆ, ದೇವರನ್ನು ಕೆರೆಮೇಲೆ ಹೊರಡಿಸುವುದು, ಗಂಗೆ ಗೌರಿ ನಾಟಕ ಆಡಿಸುವುದು ಇತ್ಯಾದಿ. ಮಳೆಯನ್ನು ಗಂಡಾಗಿ ಮತ್ತು ಹೆಣ್ಣೂ ಆಗಿ ಭಾವಿಸುವ ನಮ್ಮ ಜನ ಗಂಗೆ ಪೂಜೆ ಮತ್ತು ಮಳೆರಾಯನ ಪೂಜೆ ಎರಡನ್ನೂ ಮಾಡುತ್ತಾರೆ. ಮಳೆರಾಯನ ಪೂಜೆಯಲ್ಲಿ ಊರತುಂಬ ಮಳೆರಾಯನನ್ನು ಹೊತ್ತು ಮೆರವಣಿಗೆ ಮಾಡುತ್ತ ವಿಧವಿಧವಾದ ಮಳೆರಾಯನ ಮತ್ತು ಮಳೆಸಂಬಂಧಿ ಹಾಡುಗಳನ್ನು ಹಾಡುತ್ತಾರೆ. ತಮಟೆ ವಾದ್ಯಗಳ ಗತ್ತಿಗೆ ತಕ್ಕಂತೆ ಕುಣಿಯುತ್ತಾರೆ. ಊರೆಲ್ಲ ಮಳೆರಾಯನಿಗೆ ತಣ್ಣೀರು ಅಭಿಷೇಕ ಮಾಡಿದ ಮೇಲೆ ವಿಸಜರ್ಿಸುತ್ತಾರೆ.

ವಷರ್ಾನುಗಟ್ಟಲೆ ಕೂತು ತಿನ್ನುವಷ್ಟು ಬೆಳೆಯುವುದಾಗಲೀ ವಂಶಪಾರಂಪರ್ಯ ಕೂತು ಕರಗಿಸುವಷ್ಟು ಸಂಪತ್ತು ಗಳಿಸುವುದಾಗಲೀ ನಮ್ಮವರ ಪ್ರವೃತ್ತಿಯಲ್ಲ. ಹಾಗಾಗಿ ವರ್ಷವೆಲ್ಲ ಮಳೆ ಬರದಿದ್ದಾಗ ಸಹಜವಾಗಿ ನಮ್ಮ ಗ್ರಾಮೀಣರು ಉಪವಾಸ ಬೀಳಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಮುಂಗಾರು ಬಹಳ ಕಾಲ ಬರದಿದ್ದರೆ ನಮ್ಮಲ್ಲಿ ಹೆಡಿಗೆ ಜಾತ್ರೆ ಮಾಡುತ್ತಾರೆ. ಆಗ ಊರಿನ ಪ್ರತಿ ಮನೆಯವರು ತಮ್ಮ ತಮ್ಮ ಮನೆಗಳಲ್ಲಿ ತಮ್ಮ ತಮ್ಮ ಅಭಿರುಚಿ-ಶಕ್ತಿಗೆ ಅನುಸಾರವಾಗಿ ಅಡಿಗೆ ಮಾಡಿಕೊಂಡು ಹೆಡಿಗೆಗಳಲ್ಲಿ ತುಂಬಿಕೊಂಡು ಊರ ಹೊರಗಿನ ಬಸವಣ್ಣನ ದೇವಸ್ಥಾನದ ಬಳಿಗೆ ಹೋಗುತ್ತಾರೆ. ಅರೆ, ತಮಟೆ, ಜಾಗಟೆ, ವಾಲಗ ಇತ್ಯಾದಿ ವಾದ್ಯಗಳೊಂದಿಗೆ ಹೋಗಿ ನೆರೆದು ಬಸವಣ್ಣನಿಗೆ ಪೂಜೆ ಮಾಡಿಸುತ್ತಾರೆ. ಆನಂತರ ಊರಿನ ಪ್ರತಿಯೊಂದು ಮನೆಯವರು ತಾವು ತಂದ ಅಡಿಗೆಯನ್ನು ಬೇರೆಯವರಿಗೆ ಬಡಿಸಿ ತಾವು ಬೇರೆಯವರ ಮನೆಯ ಅಡಿಗೆಯನ್ನು ಇಡಿಸಿಕೊಂಡು ಊಟ ಮಾಡುತ್ತಾರೆ. ಹೀಗೆ ಊಟ ಮಾಡುತ್ತ ಮಾಡುತ್ತ ತಮ್ಮ ಕಷ್ಟ ಸುಖಗಳನ್ನು ಮಾತಾಡಿಕೊಳ್ಳುತ್ತಾರೆ. ಮಳೆ ಬಂದರೆ ಬಿತ್ತನೆ ಮಾಡಬಹುದಾದ ಬೀಜಗಳ ಬಗ್ಗೆ, ಯಾರ್ಯಾರ ಮನೆಯಲ್ಲಿ ಏನೇನು ಬಿತ್ತನೆ ಬೀಜಗಳ ಸ್ಥಿತಿಗತಿ-ಕೊರತೆ ಇದೆ ಎಂಬ ಬಗ್ಗೆ, ಬೇಸಾಯ ಕ್ರಮದ ಬಗ್ಗೆ, ಮಳೆ ಬರದೇ ಹೋದ ಕಾರಣಗಳ ಬಗ್ಗೆ, ಜನಗಳಲ್ಲಿ ಅನಾಚಾರ ಜಾಸ್ತಿಯಾಗುತ್ತಿರುವುದರ ಬಗ್ಗೆ ಹೀಗೆ ಹಲವು ವಿಚಾರಗಳ ಬಗ್ಗೆ ಅನೌಪಚಾರಿಕವಾಗಿ ಚಚರ್ೆ ಮಾಡುತ್ತಾರೆ. ಸಮಾನದುಃಖಿಗಳ ಇಂತಹ ಜಾತ್ರೆಗಳಿಂದ ಸುತ್ತಣ ಊರವರಿಗೆ ಅವರಿಗೇ ಅರಿವಿಲ್ಲದಂತೆ ಅವರಲ್ಲಿನ ಹೈರಾರ್ಕಿಗಳು ಮುರಿದುಹೋಗುತ್ತವೆ. ಪರಸ್ಪರ ಕಷ್ಟಕ್ಕೆ ಆಗುವ ವಾತಾವರಣ ತಂತಾನೆ ನಿಮರ್ಾಣ ಆಗುತ್ತದೆ. ಸಾಮುದಾಯಿಕ ಮೌಲ್ಯಗಳ ಬಗ್ಗೆ ನಂಬಿಕೆ ಹೆಚ್ಚಾಗುತ್ತ, ಮಳೆ ಬೆಳೆ ಆಗದಿರುವುದಕ್ಕೂ ಜನರ ಅನಾಚಾರಕ್ಕೂ ದೊಡ್ಡ ಸಂಘರ್ಷ ಏರ್ಪಡುತ್ತದೆ. ಬೇರೆ ಬೇರೆ ಜಾತಿಯ ಜನ ಸಾಮೂಹಿಕ ಭೋಜನ ಮಾಡುವ ಈ ಆಚರಣೆ ಒಂದು ಸಾಮರಸ್ಯದ ಆಚರಣೆ. ಇದೇ ರೀತಿ ಬರ ಹೆಚ್ಚಾದಾಗ ಊರಿನ ಉಳ್ಳವರ ಹತ್ತಿರ ದವಸ ಎತ್ತಿ ಸಮಸ್ತರಿಗೂ ಊಟ ಹಾಕುವ ಪರೋವು ಮಾಡುವುದೂ ಉಂಟು. ಇಲ್ಲೂ ಕೂಡ ಸಮುದಾಯ ಪ್ರಜ್ಞೆ ಎದ್ದು ಕಾಣುತ್ತದೆ.

ಮಳೆ ಬರದೆ ಕೆರೆಯ ಅಂಗಳವೆಲ್ಲ ಒಣಗಿದಾಗಲೂ ದೇವರನ್ನು ಕೆರೆ ಮೇಲಕ್ಕೆ ಹೊರಡಿಸುವುದುಂಟು. ಆಗ ಕೆರೆ ಏರಿ ಮೇಲೆ ದೇವರನ್ನು ಒಂದು ಸುತ್ತು ಹಾಕಿಸಿ, ಒಣಗಿ ಬಿರುಕು ಬಿಟ್ಟ ಕೆರೆಯ ಅಂಗಳದಲ್ಲಿ ದೇವರನ್ನು ಇಳಿಸಿ ಪೂಜೆ ಸಲ್ಲಿಸಿ ದೇವರೇ ನಿನ್ನ ಕೆರೆ ತುಂಬಿಲ್ಲ; ಅದರಿಂದ ನಿನಗೆ ತೆಪ್ಪೋತ್ಸವವೂ ಇಲ್ಲ. ಬೇಗ ಕೆರೆ ತುಂಬುವಂತೆ ಮಾಡು ಎಂದು ಬೇಡಿಕೊಳ್ಳುತ್ತಾರೆ. ಕೆಲವರು ದೇವರನ್ನು ಮಳೆ ಬಾರದಿದ್ದುದಕ್ಕೆ ಬಯ್ಯುವುದೂ ಉಂಟು. ನಾವೇನಾದರೂ ತಪ್ಪು ಮಾಡಿದ್ದರೆ ನಮ್ಮ ತಪ್ಪನ್ನು ಹೊಟ್ಟೆಗೆ ಹಾಕಿಕೊಂಡು ಕಾಪಾಡು ಎಂದು ತಪ್ಪೊಪ್ಪಿಕೊಳ್ಳುವುದೂ ಉಂಟು. ವಾದ್ಯ, ಕುಣಿತ, ಚಪರ್ು, ಮನರಂಜನೆಗಳೆಲ್ಲ ಈ ಆಚರಣೆಯ ಅಂಗವಾಗಿ ಇದ್ದೇ ಇರುತ್ತವೆ.

ಮಳೆರಾಯನನ್ನು ಮೆರೆಸುವಂತೆಯೆ, ಹೆಡಿಗೆ ಜಾತ್ರೆ ಮಾಡಿಸುವಂತೆಯೇ ಮಳೆ ಬಾರದಿದ್ದಾಗ ನಮ್ಮ ಕಡೆಯ ಊರುಗಳಲ್ಲಿ ಗಂಗೆ ಗೌರಿ ನಾಟಕ ಆಡಿಸುವುದೂ ಉಂಟು. ವೃತ್ತಿ ನಾಟಕದವರನ್ನು ಕರೆಸಿ ಊರಿನಲ್ಲಿ ದವಸ-ಧಾನ್ಯ, ಬಟ್ಟೆ-ಬರೆ, ಕಾಳು-ಕಡಿ, ಕಾಸು-ಕರೇಮಣಿ ಎತ್ತಿ ಅವರಿಗೆ ಕೊಟ್ಟು ಈ ನಾಟಕ ಆಡಿಸುತ್ತಾರೆ. ನಾಟಕದ ಅಂಗವಾಗಿ ಗಂಗಾ ಪೂಜೆಯನ್ನು ಮಾಡಿಸುತ್ತಾರೆ. ಹೀಗೆ ಮಾಡುವುದರಿಂದ ಮಳೆ ಬರುತ್ತದೆ ಎಂಬ ನಂಬಿಕೆ ನಮ್ಮವರಲ್ಲಿದೆ. ನಾಟಕ ಆಡಿಸಿದ ಆರೇಳು ದಿನಗಳಲ್ಲಿ ಎಷ್ಟೋ ಸಾರಿ ಮಳೆ ಬಂದಿರುವುದೂ ಉಂಟು. ಜನಪದರ ಈ ನಂಬಿಕೆ ಮತ್ತು ಆಚರಣೆಗಳ ಲೋಕವೆ ದೊಡ್ಡದು. ಮಳೆ ಬರುವುದಕ್ಕು ನಾಟಕದ ಮೂಲಕ ಗಂಗೆಯ ಪ್ರಾರ್ಥನೆ ಮಾಡುವುದಕ್ಕು ನೇರವಾದ ಸಂಬಂಧ ಇದೆಯೋ ಇಲ್ಲವೋ; ಆದರೆ ಇದರಿಂದ ಕಲಾವಿದರ ಹೊಟ್ಟೆಯಂತೂ ತುಂಬುತ್ತದೆ. ಜನರಲ್ಲಿ ಜಲಪ್ರಜ್ಞೆಯೊಂದು ಮೂಡುವುದರ ಮೂಲಕ ಮನರಂಜನೆಯೂ ದೊರಕುತ್ತದೆ. ಒಂದರಗಳಿಗೆಯಾದರೂ ಜನ ತಮ್ಮ ಕಷ್ಟ ಮರೆತು ಭರವಸೆಯ ಲೋಕದಲ್ಲಿ ವಿಹರಿಸುತ್ತಾರೆ. ಗೌರಿಯು ಗಂಗೆಯ ಶಾಪದಿಂದ ನೀರಿಲ್ಲದೆ ಪಡುವ ಪಾಡನ್ನು ನಾಟಕದ ಮೂಲಕ ಕಾಣುವ ಜನ ನೀರಿನ ಪ್ರಾಮುಖ್ಯತೆ ಮತ್ತು ಮಿತಬಳಕೆಯ ಬಗ್ಗೆ ಮನರಂಜನೆಯ ಮೂಲಕವೆ ಅರಿವನ್ನೂ ಪಡೆಯುತ್ತಾರೆ. ಈ ದೃಷ್ಟಿಯಿಂದ ನಮ್ಮ ಜನಪದರ ಕಲೆಗಳು ಬಾಳಿಗೆ ಹೆಚ್ಚು ಉಪಯುಕ್ತವಾಗಿವೆ. ಮತ್ತು ಉಪಯುಕ್ತ ಬಾಳಿನ ಅಂಗಗಳೇ ಆಗಿವೆ. ಉಪದೇಶಾತ್ಮಕವಾದ ಹೇರಿಕೆಯ ಮಾರ್ಗಗಳನ್ನು ತೊರೆದು ಸ್ವಯಂ ಪಾಲ್ಗೊಳ್ಳುವಿಕೆಯ ಆಚರಣೆ-ನಂಬಿಕೆಗಳ ಮೂಲಕ ಸಮಾಜದ ಸ್ವಾಸ್ಥ್ಯಕ್ಕಾಗಿ; ಸಮಷ್ಠಿ ಹಿತಕ್ಕಾಗಿ ಮನೋರಂಜಕ ಕಲಾಪ್ರಕಾರಗಳನ್ನು ಬಳಸುವ ಕುಶಲತೆಯನ್ನು ನಮ್ಮ ಸಮಾಜ ಹೀಗೆ ರೂಡಿಸಿಕೊಂಡಿದೆ. 

ಯಾವುದೇ ಸಮಾಜದಲ್ಲಿ ಅಲಕ್ಷಿತ ವರ್ಗವು ಸದಾ ಮೇಲ್ಮುಖ ಚಲನೆಗೆ ಯತ್ನಿಸುತ್ತಿರುತ್ತದೆ. ಆದರೆ ಯಾಜಮಾನ ವರ್ಗವು ಅದನ್ನು ಹತ್ತಿಕ್ಕುತ್ತಿರುತ್ತದೆ. ಈ ಪ್ರಕ್ರಿಯೆಯ ಅಭಿನಯದಂತೆ ನಮ್ಮ ಹಲವಾರು ಗ್ರಾಮೀಣ ಕಲೆಗಳಿವೆ. ಸವಣರ್ೀಯ ಯಾಜಮಾನ ವರ್ಗವು ಸದಾ ತನ್ನ ಯಾಜಮಾನ್ಯವನ್ನು ಕಾಪಾಡಿಕೊಳ್ಳುವ ಹತಾರಗಳನ್ನಾಗಿ ಕಲೆ-ಸಾಹಿತ್ಯಗಳನ್ನು ಬಳಸುತ್ತ ಬರುತ್ತಿರುವುದಕ್ಕೆ ನಮ್ಮ ಕಡೆಯ ಮಾರಿ ಜಾತ್ರೆ ಒಂದು ಉತ್ತಮ ಉದಾಹರಣೆಯಾಗಿದೆ. ಅಲಕ್ಷಿತ ವರ್ಗದ ಗತಿಶೀಲತೆಯ ಕಡೆಗಿನ ಚಲನೆ ಮತ್ತು ಯಾಜಮಾನ ವರ್ಗದ ಯಥಾಸ್ಥಿತಿವಾದಿ ದುಡಿಮೆಗಳ ನಡುವಿನ ಸಂಘರ್ಷದ ಆಚರಣಾ ರೂಪವಾಗಿ ನಮ್ಮ ಮಾರಿಜಾತ್ರೆಯಿದೆ. ಮೇಲ್ನೋಟಕ್ಕೆ ಇದು ಸಹಬಾಳ್ವೆ-ಐಕಮತ್ಯ-ಸಾಮುದಾಯಿಕ ಬದುಕಿನ ಆಚರಣೆಯಾಗಿ ಕಾಣುತ್ತದೆಯಾದರೂ ಇದು ಆಳದಲ್ಲಿ ದಬ್ಬಾಳಿಕೆ-ಯಾಜಮಾನ್ಯಗಳ ಸ್ಥಿರೀಕರಣದ ಅಭಿನಯವಾಗಿಯೇ ಪರಿಣಮಿಸುತ್ತಿರುತ್ತದೆ. ನಮ್ಮ ಮಾರಿಜಾತ್ರೆಯಲ್ಲಿ ಪ್ರತಿವರ್ಷ ಶ್ರೀಬಾಲಗೌರಿಯ ಕಥೆಯನ್ನು ಹೇಳುತ್ತಾರೆ. ಚೌಡಿಕೆಯನ್ನು ಬಾರಿಸುತ್ತ ಮಾರಿಯನ್ನು ಹೀನಾಮಾನ ನಿಂದಾಸ್ತುತಿ ಮಾಡುತ್ತ ನಿಯತ ಗತಿಯ ಲಘು ಕುಣಿತದೊಂದಿಗೆ ಈ ಆಚರಣೆ ಸಾಗುತ್ತದೆ. ಕಥೆ ಹಾಡುವಾಗ ಆಸಾದಿಗಳು ಚೆನ್ನಾಗಿ ಓವರೂ ಆಗಿರುತ್ತಾರೆ.

ಮಾರಿಕಥೆ ಸಂಕ್ಷಿಪ್ತವಾಗಿ ಹೀಗಿದೆ. ಕರಿಯನೆಂಬ ಮಾದಿಗರ ಹುಡುಗ ಬ್ರಾಹ್ಮಣರ ಹುಡುಗಿ ಶ್ರೀಬಾಲಗೌರಿಯನ್ನು ಪ್ರೀತಿಸುತ್ತಾನೆ. ತಾನು ಬ್ರಾಹ್ಮಣನೆಂದು ಸುಳ್ಳು ಹೇಳಿ ಆಕೆಯನ್ನು ವಿವಾಹ ಆಗುತ್ತಾನೆ. ಅವರಿಗೆ ಮಕ್ಕಳೂ ಆಗುತ್ತವೆ. ಹೀಗೇ ಇರುವಾಗ ಒಂದು ದಿನ ಕರಿಯನ ಅವ್ವ ಮಗನನ್ನು ಹುಡುಕಿಕೊಂಡು ಬರುತ್ತಾಳೆ. ಅವ್ವನನ್ನು ಕಂಡ ಮಗ ಅವಳನ್ನು ಮನೆಗೆ ಕರೆತರುತ್ತಾನೆ. ಆದರೆ ಮನೆಯಲ್ಲಿ ಬ್ರಾಹ್ಮಣರ ಹುಡುಗಿ ಹೆಂಡತಿಯಾಗಿ ಬಂದಿದ್ದಾಳೆ ಆದ್ದರಿಂದ ನೀನೂ ಬ್ರಾಹಣಿತಿಯಂತೆ ನಟಿಸು ಎಂದು ಕೇಳಿಕೊಳ್ಳುತ್ತಾನೆ. ಒಂದು ದಿನ ಊಟ ಮಾಡುತ್ತಿದ್ದಾಗ ಸೊಸೆ ಎದುರೆ ಕರಿಯ ಅವ್ವನನ್ನು ಊಟ ಹೇಗಿದೆಯೆಂದು ಕೇಳುತ್ತಾನೆ. ಆಕೆ ತಟಕ್ಕನೆ ಏ ಏನ್ ತಿಂದ್ರೂ ಕೋಣಗರುವಿನ ಕಾಲು ಕಡಿದಂಗಾಗಲಿಲ್ಲ ಬಿಡೋ ಅಂದುಬಿಡುತ್ತಾಳೆ. ಇದನ್ನು ಕೇಳಿದ ಶ್ರೀಬಾಲಗೌರಿ ಅನುಮಾನ ಬಂದು ಅವನ ಜಾತಿ ವಿಚಾರಿಸುತ್ತಾಳೆ. ಅವನು ಮಾದಿಗ ಎಂಬುದು ತಿಳಿಯುತ್ತದೆ. ಅದಕ್ಕಾಗಿ ಆಕೆ ಬೆಂಕಿಯಲ್ಲಿ ಹಾರಿಕೊಂಡು ಪ್ರಾಣ ಬಿಡುತ್ತಾಳೆ. ಅದಕ್ಕೆ ಮುನ್ನ ಆಕೆ ನೀನು ಪ್ರತಿ ಜನ್ಮದಲ್ಲು ಕೋಣನಾಗಿ ಹುಟ್ಟು ನಾನು ಮಾರಿಯಾಗಿ ಹುಟ್ಟಿ ನಿನ್ನ ಬಲಿ ತೆಗೆದುಕೊಳ್ಳುತ್ತೇನೆ ಎಂದು ಶಾಪ ಹಾಕಿ ಶಪಥ ಮಾಡುತ್ತಾಳೆ. ಮಕ್ಕಳಿಗೂ ಕುರಿ ಮೇಕೆ ಕೋಳಿಗಳಾಗಿ ಹುಟ್ಟಿ ತನಗೆ ಪ್ರತಿ ಸಾಲು ಬಲಿಯಾಗುವಂತೆ ಶಾಪ ಹಾಕುತ್ತಾಳೆ. ಅದರಂತೆ ಪ್ರತಿ ಸಾರಿಯೂ ಜಾತ್ರೆ ನಡೆಯುತ್ತದೆ.

ಈ ಇಡೀ ಮಾರಿ ಜಾತ್ರೆಯ ಆಚರಣೆ ಪ್ರತಿಲೋಮ ವಿವಾಹವನ್ನು ನಿರಂತರ ನಿಷೇಧಿಸುವ ಆಚರಣೆಯಾಗಿದೆ. ಜಾತಿ ಸಂಕರವನ್ನು ತಡೆಯುವ ಹುನ್ನಾರವೂ ಯಥಾಸ್ಥಿತಿ ಕಾಪಾಡುವ ಯೋಜನೆಯೂ ಆಗಿದೆ. ಹಾಗೇ ಮೇಲ್ವರ್ಣದ ಹೆಣ್ಣನ್ನು ಮದುವೆಯಾದರೆ ನಿಮಗೇನು ಗತಿ ಆಗುತ್ತದೆ ಎಂಬುದನ್ನು ಕೆಳವರ್ಗಕ್ಕೆ ಮತ್ತೆ ಮತ್ತೆ ನೆನಪು ಮಾಡುವ ಆಚರಣೆಯಾಗಿದೆ. ಕೆಳಜಾತಿಯವರ ಮಾಂಸಾಹಾರವನ್ನು ಅವಹೇಳನ ಮಾಡುವ ಮತ್ತು ಅವರ ಮೇಲ್ಮುಖ ಚಲನೆಯನ್ನು ನಿಷೇಧಿಸುವ ಕ್ರಿಯೆಗೆ ಅವರನ್ನು ಸಜ್ಜುಗೊಳಿಸುವ ಕೆಲಸವನ್ನು ಈ ಕಥನ ಮಾಡುತ್ತದೆ. ತಾವು ಮೇಲ್ಜಾತಿಯ ಕಡೆಗೆ ಚಲಿಸುವುದು ತಪ್ಪು ಎಂದು ತಾವೇ ನಂಬುವಂತೆ ಕೆಳವರ್ಗವನ್ನು ಪ್ರೇರೇಪಿಸುತ್ತದೆ. ನಾವು ಮೇಲ್ಜಾಜಿಯ ಹೆಣ್ಣನ್ನು ಕಟ್ಟಿಕೊಳ್ಳಲು ಯತ್ನಿಸಿದರೆ ನಮ್ಮ ತಾಯಿಯೇ ನಮ್ಮನ್ನು ಬಲಿ ತೆಗೆದುಕೊಳ್ಳುತ್ತಾಳೆ ಎಂದು ನಾವು ನಂಬುವಂತೆ ಮಾಡುವ; ನಮ್ಮ ದೈವವನ್ನು ನಾವೆ ನಿಂದಿಸಿ ವಿವಸ್ತ್ರಳನ್ನಾಗಿ ಮಾಡುವಂತೆ ಮಾಡುವ ಆಚರಣೆ ಇದು. ಆದರೆ ದುರಂತವೆಂದರೆ ನಾವು ಹುಡುಗರಾಗಿದ್ದಾಗ ಈ ಆಚರಣೆಯನ್ನು ಕೇವಲ ಮನರಂಜನೆ ಪಡೆಯುವ, ಸಮುದಾಯವನ್ನು ಬೆಸೆಯುವ, ಬಾಡಿಟ್ಟನ್ನು ಸವಿಯುವ ಅವಕಾಶವನ್ನಾಗಿ ಮಾತ್ರ ಗ್ರಹಿಸುತ್ತಿದ್ದೆವು. ಆ ಮೂಲಕ ಅಪ್ರಜ್ಞೆಯಲ್ಲಿ ಯಾಜಮಾನ್ಯ ಮೌಲ್ಯಗಳ ವಾಹಕಗಳಾಗಿಯೇ ಆಡುತ್ತ ಇದ್ದೆವು! ಆದರೆ ಈಗೀಗ ಈ ಮಾರಿಜಾತ್ರೆ ತನ್ನ ಹೊಳಪನ್ನು ಕಳೆದುಕೊಂಡು ಅಪ್ರಸ್ತುತವಾಗುತ್ತಿದೆ. ಅದು ಪ್ರವಹಿಸುವ ಮೌಲ್ಯವೂ ಅಪ್ರಸ್ತುತವಾಗಿರುವುದರಿಂದ ಜಾತ್ರೆಯೇ ಇಡಿಯಾಗಿ ತಿರಸ್ಕಾರಕ್ಕೆ ಗುರಿಯಾಗುತ್ತಿದೆ.

ಯಂತ್ರನಾಗರಿಕತೆಯ ಗಾಳಿ ನಮ್ಮನ್ನು ಆವರಿಸುವ ಮುನ್ನ ನಮ್ಮ ಬಹುತೇಕ ಪ್ರದರ್ಶನ ಕಲೆಗಳು-ಆಟೋಟಗಳು ನೇರ ಆಚರಣೆಗಳು ಮಾತ್ರ ಆಗಿ ಸಂಭವಿಸುತ್ತಿದ್ದವು. ಸಾಹಿತ್ಯ ಕೂಡ ಇದಕ್ಕೆ ಹೊರತಲ್ಲ. ನೀಲಗಾರರ ಕತೆ, ಕಂಸಾಳೆ, ಕೊಂಡಮಾಮ, ವೃತ್ತಿಗಾಯನಗಳು ಎಲ್ಲವೂ ಪ್ರತಿ ಸಾರಿಯೂ ಸಮುದಾಯದ ಎದುರಿಗೆ ಲೈವ್ ಆಗಿಯೆ ಸಂಭವಿಸುತ್ತಿದ್ದವು. ಅಲ್ಲಿ ಕೇಳುಗ ಸಮುದಾಯ ಮತ್ತು ಕಾಲ-ಸ್ಥಳಗಳು ಕೂಡ ಸಂಭವವನ್ನು ರೂಪಿಸುತ್ತಿದ್ದವು. ಭೂತ ಮತ್ತು ವರ್ತಮಾನಗಳ ಸಮನ್ವಯವು ನಿರಂತರ ಇಂತಹ ಸಂಭವಗಳಲ್ಲಿ ಏರ್ಪಡುತ್ತಿತ್ತು. ಲೈವ್ ಮತ್ತು ರೆಕಾಡರ್ೆಡ್ ಎಂಬ ಬೇಧವೇ ಈ ಮೊದಲು ಇರಲಿಲ್ಲ. ಧ್ವನಿಮುದ್ರಿಸುವ, ಚಿತ್ರೀಕರಿಸಿಕೊಳ್ಳುವ, ಮುದ್ರಿತ ಧ್ವನಿಯನ್ನು ಮುದ್ರಿತ ಅಕ್ಷರವನ್ನಾಗಿ ಪರಿವತರ್ಿಸುವ, ಒಂದು ಭಾಷೆಯ ಧ್ವನಿಯನ್ನು ಇನ್ನೊಂದು ಭಾಷೆಯನ್ನಾಗಿ ಪರಿವತರ್ಿಸುವ ತಂತ್ರಜ್ಞಾನಗಳೆಲ್ಲ ಇತ್ತೀಚಿನವು. ಇಂದು ಕಲೆಗಳನ್ನು ಅವುಗಳ ಆಚರಣೆಯ ಸಂದರ್ಭದಿಂದ ಬೇರ್ಪಡಿಸಿ ಬಿನ್ನ ಸಂಧರ್ಭಗಳಲ್ಲಿ ಯಥಾರೂಪವಾಗಿ ಇಟ್ಟು ನೋಡಬಹುದಾದ ವಿಸ್ತರಣೆಯೊಂದು ಲಭಿಸಿದೆ. ಹೀಗಾಗಿ ಲೈವ್ (ನೇರ) ಮತ್ತು ಮುದ್ರಿತಗಳ ಬೇಧವೊಂದು ಇಂದು ಏರ್ಪಟ್ಟಿದೆ. ಇದರಿಂದಾಗಿ ಬದುಕಿನ ಅವಿಭಾಜ್ಯ ಅಂಗಗಳೇ ಆಗಿದ್ದ ಕಲೆಗಳು ಬದುಕಿನಿಂದ ಬೇರ್ಪಟ್ಟು ಮನರಂಜನೆಯ ಶೋಕೇಸಿನ ಪೀಸುಗಳೇ ಆಗುತ್ತಿವೆ. ಬೆಂಗಳೂರಿನಲ್ಲಿ ಒಂದೆರಡು ವರ್ಷಗಳಿಂದ ನಡೆಯುತ್ತಿರುವ ಜಾನಪದ ಜಾತ್ರೆ ಇದಕ್ಕೊಂದು ಉತ್ತಮ ಉದಾಹರಣೆ.

ಹಾಗೆ ನೋಡಿದರೆ ಅಚ್ಚೆ ಕಲೆ, ಚಿತ್ರಕಲೆ, ಗೋಡೆಬರಹ ಮೊದಲಾದ ಕಲೆಗಳೆಲ್ಲ ತಾವು ಸಂಭವಿಸುವಾಗ ಸಮುದಾಯದೆದುರು ನೇರವಾಗಿ ಸಂಭವಿಸುತ್ತವೆಯಾದರೂ ಅನಂತರ ಅವು ರಚನೆಗಳಾಗಿ ಉಳಿದುಬಿಡುತ್ತವೆ. ನಮ್ಮ ಶಿಷ್ಠ ಸಾಹಿತ್ಯ ಇವುಗಳಿಗಿಂತ ಭಿನ್ನವಾದುದು. ಅದು ಪ್ರಾಚೀನರಲ್ಲಿ ರಚಿತ ಕಲೆಯಾಗಿ ಮೊದಲು ಸಿದ್ಧಪಟ್ಟು ಆನಂತರದಲ್ಲಿ ಬೇರೆ ಬೇರೆ ಸಮುದಾಯಗಳಿಗೆ ಪಠ್ಯವಾಗಿ ಯಾನಿಸುತ್ತಿತ್ತು. ಉದಾಹರಣೆಗೆ ಕುಮಾರವ್ಯಾಸನ ಕಾವ್ಯ ತಾಳಮದ್ದಲೆ, ಯಕ್ಷಗಾನ, ಬಯಲಾಟ, ಪಾರಾಯಣ, ಅಧ್ಯಯನ, ಪಠಣ, ಗಮಕ ಹೀಗೆ ಹಲವು ಕಲೆ-ನೆಲೆಗಳಲ್ಲಿ ಯಾನಿಸುವ ಮುನ್ನ ತಾನೊಂದು ರಚಿತ ಪಠ್ಯವಾಗಿ ಸಂಭವಿಸಿದ್ದೇ ಆಗಿದೆ. (ಈ ಬಗ್ಗೆ ಇದೊಂದು ಸಮುದಾಯದ ಕೇಳುಗರ ಎದುರು ಸಂಭವಿಸಿ ಆಮೇಲೆ ಬರೆಯಲ್ಪಟ್ಟಿದೆ ಎಂಬ ವಾದವೂ ಇದೆ) ನೇರ ಸಂಭವ ಮತ್ತು ರಚಿತ ಪಠ್ಯ ಎಂಬುದೇ ಈ ಮೊದಲು ನಮ್ಮ ಮೌಖಿಕ ಮತ್ತು ಶಿಷ್ಠ ಸಾಹಿತ್ಯಗಳ ಪ್ರಧಾನ ಬೇಧವಾಗಿತ್ತು. ಆದರೆ ಇಂದಿನ ಯಂತ್ರನಾಗರೀಕತೆಯಲ್ಲಿ ಈ ಬೇಧವೂ ಅಳಿಸಿಹೋಗುತ್ತಿದೆ. ಮೌಖಿಕ-ನೇರ ಸಂಭವಗಳೆಲ್ಲ ರಚಿತ ಪಠ್ಯಗಳಾಗಿ ಬದಲುಗೊಳ್ಳುತ್ತಿವೆ. ಇದರಿಂದ ಆಗುತ್ತಿರುವ ದೊಡ್ಡ ಬದಲಾವಣೆಯೆಂದರೆ ಇಂದು ಸಾಹಿತ್ಯದ ಅನುಸಂಧಾನವೂ ಕೂಡ ಬಾಳುವೆಯ ಮಾರ್ಗ ಆಗದೆ ಪಠ್ಯ ವಿಮಶರ್ೆ ಮಾತ್ರ ಆಗುತ್ತಿದೆ.

ನಮ್ಮ ಸುತ್ತಿನ ಸಮೃದ್ಧಿ-ಫವಂತಿಕೆಯ ಆಚರಣೆಯಾದ ಕೋಲಾಟದಂತಹ ಕಲೆಯಲ್ಲಿ ಸಮುದಾಯವು ಜಾತ್ಯತೀತವಾಗಿ ಪಾಲ್ಗೊಳ್ಳುವ ಅವಕಾಶವಿದೆ. ಈ ಮೊದಲು ಊರು ಕೇರಿ ಎಂಬ ಸ್ಪಷ್ಟ ಬೇಧ ಕಲೆಗಳಲ್ಲು ಇದ್ದ ಕಾಲ ಈಗ ಬದಲಾಗುತ್ತ ಊರುಕೇರಿಗಳು ಅಲ್ಲಿ ಕಲಸಿಕೊಳ್ಳುತ್ತಿವೆ. ಜಾತಿಗಳು ಕಲೆಗಳಲ್ಲಿ ಕಲಸಿಕೊಳ್ಳಲು ವಿದ್ಯೆ-ಆಧುನಿಕತೆಗಳ ಪ್ರವೇಶವು ಮುಖ್ಯ ಕಾರಣವಾಗಿದೆ. ನಮ್ಮ ಈ ಕೋಲಾಟದಲ್ಲಿ ಕೋಲು ಹುಯ್ಯುವವರಲ್ಲದೆ ಪ್ರೇಕ್ಷಕರೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ತಲ್ಲೀನರಾಗುತ್ತ ಸಂವಾದದಲ್ಲಿ ಪಾಲ್ಗೊಳ್ಳುತ್ತ ಇರುತ್ತಾರೆ. ಈ ಕಲೆಗೆ ಯಾರು ಬೇಕಾದರೂ ಒಳಹೋಗಬಹುದಾದ ಮತ್ತು ಹೊರಬರಬಹುದಾದ ಮುಕ್ತ ಅವಕಾಶಗಳಿವೆ. ಮಾನಸಿಕ ಮತ್ತು ದೈಹಿಕ ಸಕ್ರಿಯ ಪಾಲ್ಗೊಳ್ಳುವಿಕೆ, ಕನಿಷ್ಠ ದೈಹಿಕ ಸಸಿನತೆ ಇಲ್ಲಿ ಕಡ್ಡಾಯ. ಆದರೆ ಇಂದಿನ ಯಂತ್ರರಂಜನೆಯ ಕಲೆಗಳಲ್ಲಿ (ಟೀವಿ ಅಥವಾ ಸಿನೆಮಾಗಳಲ್ಲಿ) ಸಕ್ರಿಯ ಪಾಲ್ಗೊಳ್ಳುವಿಕೆಗಿಂತ ಪ್ರೇಕ್ಷಕರು ನಿಷ್ಕ್ರಿಯ ನೋಡುಗರಾಗಿ ಬದಲಾಗುತ್ತಿದ್ದಾರೆ. ಗ್ರಾಹಕರಾಗಿ ಬದಲಾಗುತ್ತಿದ್ದಾರೆ. ಸರ್ವ ಅಂಗಗಳಿಗಿಂತ ಕಣ್ಣೆ ಇಲ್ಲಿ ಪ್ರಧಾನವಾಗುತ್ತಿದೆ. ಆದರೆ ನೇರವಾಗಿ ಸಂಭವಿಸುವ ಗ್ರಾಮೀಣ ಕಲೆಗಳಲ್ಲಿ ಹಾಗಲ್ಲ. ಅಲ್ಲಿ ವ್ಯಕ್ತಿ ಇಡಿಯಾಗಿ ಪಾಲ್ಗೊಳ್ಳಬೇಕು. ಅಷ್ಟೆ ಅಲ್ಲ ಕೆಲವೊಮ್ಮೆ ಇಡೀ ಸಮುದಾಯವೇ ಆಚರಣೆಯಲ್ಲಿ ಪಾಲ್ಗೊಳ್ಳುತ್ತದೆ. ಓಡವುದೋ, ನಡೆಯುವುದೋ, ಪ್ರತಿಕ್ರಿಯಿಸುವುದೋ ಮಾಡುತ್ತಿರುತ್ತದೆ. ಕಲಾಕಾರರು ಮತ್ತು ಪ್ರೇಕ್ಷಕರ ನಡುವೆ ಉಪಸ್ಥಿತಿಯ ಅಂತರವಂತೂ ಇರುವುದೇ ಇಲ್ಲ. ಇಂತಹ ಕಡೆ ಇಡೀ ಸಮುದಾಯ ನಿಷ್ಕ್ರಿಯವಾಗದೆ ಸಕ್ರಿಯವಾಗಿ ಪಾಲ್ಗೊಳ್ಳುತ್ತದೆ. ಆದರೆ ಯಂತ್ರರಂಜನಾ ಕಲೆಗಳು ಹಾಗಲ್ಲ ಅವು ಅನುಭೋಗಿಯ ಸರಕುಗಳಾಗಿ ಬಿಕರಿಯಾಗುತ್ತಿರುತ್ತವೆ.

ಕೈಗೆಟಕುವ ಖಚರ್ಿನಲ್ಲಿ ಕಲೆಯನ್ನು ಪ್ರದಶರ್ಿಸಲು ಸಾಧ್ಯವಾದರೆ ಮಾತ್ರ ಸಾಮಾನ್ಯರು ಅದರಲ್ಲಿ ತೊಡಗಿಕೊಳ್ಳಲು ಸಾಧ್ಯ. ಇಲ್ಲದಿದ್ದರೆ ಕಲೆ ಏನಿದ್ದರೂ ಶ್ರೀಮಂತರ ಸ್ವತ್ತಾಗಿಬಿಡುತ್ತದೆ. ನಮ್ಮಲ್ಲಿ ಶಾಸ್ತ್ರೀಯ ಸಂಗೀತ, ಭರತನಾಟ್ಯ, ಶಾಸ್ತ್ರೀಯವಾದ್ಯ ವಾದನಗಳು ಸಾಮಾನ್ಯರ ಕಲೆಗಳಲ್ಲ ಎಂಬಂತೆ ಹಣೆಪಟ್ಟಿ ಕಟ್ಟಿಕೊಂಡಿವೆ. ತಮಟೆ, ಸಮಾಳ, ದುಡಿ, ಚೌಡಿಕೆಯಂಥ ವಾದ್ಯಗಳನ್ನು ನಮ್ಮ ಜನಪದರೇ ತಯಾರಿಸಿಕೊಳ್ಳುತ್ತಾರೆ. ಅವುಗಳು ಕೈಗೆಟಕುವ ಬೆಲೆಯಲ್ಲಿ ಸಿಗುತ್ತವೆ ಕೂಡ. ಆದರೆ ಒಂದು ತಂಬೂರಿಯನ್ನೋ, ಮೃದಂಗವನ್ನೋ ಕೊಳ್ಳಬೇಕೆಂದರೆ ಅದಕ್ಕೆ ಹೆಚ್ಚು ಹಣ ಬೇಕು. ಹಾಗೆಯೇ ಶಾಸ್ತ್ರೀಯ ನೃತ್ಯ-ಸಂಗೀತ ಕಲಿಯುವುದಕ್ಕು ಹೆಚ್ಚು ಹಣ ತೆರಬೇಕು. ಹಾಗಾಗಿ ಗ್ರಾಮೀಣರಲ್ಲೂ ಶ್ರೀಮಂತರ ಕಲೆಗಳು ಮತ್ತು ಬಡವರ ಕಲೆಗಳು; ಕೈಗೆಟಕುವ ಕಲೆಗಳು ಮತ್ತು ದುಬಾರಿ ಕಲೆಗಳು ಎಂದು ಎರಡು ವರ್ಗಗಳಿವೆ.

ಮದುವೆ, ಸೀಮಂತ, ನಾಮಕರಣ ಇತ್ಯಾದಿಗಳಲ್ಲಿ ಗ್ರಾಮೀಣ ಮಹಿಳೆಯರು ಹಾಡುವ ಹಾಡುಗಳು ಕೂಡ ಆಚರಣೆಗಳ ಭಾಗವಾಗಿಯೆ ಬರುವ ಕಲೆಗಳು. ಇವುಗಳು ಪುರಾಣ ಪಾತ್ರಗಳ ಹಂದರದಲ್ಲಿಯೇ ವರ್ತಮಾನವನ್ನು ಪರೀಕ್ಷಿಸುತ್ತಿರುತ್ತವೆ. ಪುರಾಣ ಪಾತ್ರಗಳ ಚೌಕಟ್ಟಿನಲ್ಲೆ ವರ್ತಮಾನದ ಜನಜೀವನವನ್ನು ಸದಾ ಕಟ್ಟುವ ಕೆಲಸವನ್ನಿವು ಮಾಡುತ್ತಿರುತ್ತವೆ. ಸೀಮಂತದಲ್ಲಿ ಹೆಣ್ಣು ಯಾರೇ ಆಗಿರಲಿ ಹಾಡುಗಾತಿಯರು ಮಡಲದುಂಬಿರೇ ಸೀತಾದೇವಿಗೆ ಶ್ರೀ ರಾಮಚಂದ್ರಸ್ವಾಮಿ ಸತಿಗೆ ಮಡಲದುಂಬಿರೇ ಎಂದೇ ಹಾಡುತ್ತಾರೆ. ನಮ್ಮ ಸುತ್ತಿನಲ್ಲಿ ಮೈನೆರೆದ ಹೆಣ್ಣು ಮಕ್ಕಳಿಗೆ ಒಸಗೆ ಹಾಕುವುದು, ಗುಡ್ಲುಶಾಸ್ತ್ರ ಮಾಡುವುದು ಇತ್ಯಾದಿ ಆಚರಣೆಗಳನ್ನು ಮಾಡುತ್ತಾರೆ. ಒಸಗೆ ಹಾಕಿದಾಗ ಒಸಗೆ ಹಾಡುಗಳನ್ನು ಹಾಡುವುದು ಸಂಪ್ರದಾಯ. ಮೊನ್ನೆ ನಮ್ಮ ಸ್ನೇಹಿತರ ಮಗಳೊಬ್ಬಳು ಮೈನೆರೆದಿದ್ದಳು. ಆಕೆಯ ಒಸಗೆ ಶಾಸ್ತ್ರಕ್ಕೆ ಹೋಗಬೇಕಾಗಿ ಬಂತು. ಅಂದು ಹಾಡು ಹಾಡಲು ಅಲ್ಲಿ ನೆರೆದಿದ್ದ ಒಬ್ಬೊಬ್ಬರನ್ನೂ ಕೇಳಿದರು. ಆದರೆ ಎಲ್ಲರೂ ನನಗೆ ಬರೊಲ್ಲ, ನನಗೆ ಬರೊಲ್ಲ ಎಂದೇ ಹೇಳಿದರು. ಕೊನೆಗೆ ಒತ್ತಾಯಕ್ಕೆ ಮಣಿದ ಒಂದಿಬ್ಬರು ಹುಡುಗಿಯರು ನಿಸ್ಸಂಕೋಚವಾಗಿ ಪುಸ್ತಕ ಹಿಡಿದು ಚಿತ್ರಗೀತೆಯೊಂದನ್ನು ಹಾಡಿದರು. ಅವರಿಗೆ ಚಿತ್ರಗೀತೆಯ ಮಟ್ಟು ನೆನಪಿತ್ತೆ ವಿನಾ ಇಡಿ ಹಾಡು ನೆನಪಿರಲಿಲ್ಲ. ಆದರೆ ಪುಸ್ತಕ ಅವರ ಸಹಾಯಕ್ಕೆ ಒದಗಿಬಂದಿತ್ತು. ಜನಪದ ಹಾಡಿನ ಪುಸ್ತಕ ಒದಗಿದ್ದರೆ ಅದನ್ನೆ ಅವರು ಹಾಡುತ್ತಿದ್ದರೇನೋ. ಹಿರಿಯರೂ ಕೂಡ ಏನೂ ಹಾಡದೆ ಒಸಗೆ ಮುಗಿಯುವುದಕ್ಕಿಂತ ಏನಾದರು ಹಾಡಲಿ ಎಂದು ಸುಮ್ಮನಿದ್ದರು. ನಮ್ಮ ವಾಣಿಜ್ಯದ ರಾಜಕಾರಣ ಹೀಗೆ ಯಾವುದು ನಮ್ಮ ಜನಕ್ಕೆ ಬೇಕೋ ಅದನ್ನು ನೀಡುವ ಬದಲು ಯಾವುದನ್ನು ತಾನು ಮಾರಬೇಕಾಗಿದೆಯೋ ಅದನ್ನು ಅವರಿಗೆ ತಲುಪಿಸುತ್ತದೆ. ನಮ್ಮ ಹಳೆ ಆಚರಣೆಗಳು ಅಲಕ್ಷ್ಯಕ್ಕೆ ಸರಿಯುತ್ತ ಸಿನೆಮಾ ಅಂಗಾಂಶಗಳು ಮನರಂಜನೆಯ ಪ್ಯಾಕೇಜಿನ ಮೂಲಕ ಜನಮನದಲ್ಲಿ ಆಚರಣೆಗಳ ರೂಪದಲ್ಲಿ ನೆಲೆಸಲು ನಮ್ಮ ವಾಣಿಜ್ಯದ ರಾಜಕಾರಣವೂ ಒಂದು ಮುಖ್ಯ ಕಾರಣವೆಂಬುದಕ್ಕೆ ಆ ಪ್ರಸಂಗ ಸಾಕ್ಷಿಯಾಗಿತ್ತು.

ಕಲೆಗಳು ಬೇರೆ ಬೇರೆ ಕಾರಣಗಳಿಂದ ತಮ್ತಾವೆ ಆತ್ಮಹತ್ಯೆಯ ದಾರಿ ಹಿಡಿಯುತ್ತಿವೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ಇಂದು ಬಹಳ ವೇಗವಾಗಿ ಆಧುನಿಕ ಯಂತ್ರನಾಗರಿಕತೆಯ ಸಾಧನಗಳನ್ನು ಬಳಸಿ ಮೀಡಿಯಾ ನಮ್ಮ ಜನರ ಆಚರಣೆಗಳನ್ನು ರೂಪಿಸುತ್ತಿದೆ, ರೂಪಾಂತರಿಸುತ್ತಿದೆ. ಇಂದು ಯಾವುದೇ ಕಲೆಗಳು ಗ್ರಾಮಕ್ಕೆ ಮಾತ್ರ ಸೀಮಿತವಾದ ಕಲೆಗಳಾಗಿ ಉಳಿದಿಲ್ಲ. ಜಾಗತೀಕರಣದ ಜಾದೂ ಕಲೆಗಳಿಗೆ ಒಂದು ವೇಗಯುತವಾದ ಚಲನೆಯನ್ನೂ ಒದಗಿಸಿದೆ. ಅಲ್ಲದೆ ಎಲೆಕ್ಟ್ರಾನಿಕ್ ಮೀಡಿಯಾಗಳು ಕಲೆಗಳಿಗೆ ಸರ್ವವ್ಯಾಪಕವಾದ ಗುಣವೊಂದನ್ನು ಒದಗಿಸಿವೆ. ಅನಾರೋಗ್ಯಕರವಾದ ಪೈಪೋಟಿಯ ಗುಣವನ್ನೂ ಅಂಟಿಸಿವೆ. ಜಾಗತೀಕರಣದ ಬಹು ದೊಡ್ಡ ಪರಿಣಾಮವೆಂಬಂತೆ ಮನರಂಜನೆಯೆ ಒಂದು ಬೃಹತ್ ಸಾಂಸ್ಕೃತಿಕ ಕೈಗಾರಿಕೋದ್ಯಮವಾಗಿ ಬೆಳೆಯುತ್ತಿದೆ. ಸ್ಥಳೀಯ ಕಲೆಗಳಿಗೆ ಇದರಿಂದ ತಾವು ಮೀಡಿಯಾಗಳು ಹೇರುವ ರೂಪಾಂತರಗಳಿಗೆ ಒಳಗಾಗಲೆಬೇಕಾದ ಇಲ್ಲವೆ ಸಾಯಬೇಕಾದ ಒತ್ತಡ ಉಂಟಾಗುತ್ತಿದೆ. ಇದರಿಂದಾಗಿಯೆ ಇಂದು ಸ್ಥಳೀಯ ಕಲೆಗಳಲ್ಲಿ ವಿಶಿಷ್ಟತೆ ಮತ್ತು ಏಕರೂಪತೆಗಳ ನಡುವೆ ಒಂದು ದೊಡ್ಡ ಸಂಘರ್ಷ ಏರ್ಪಡುತ್ತಿದೆ. ಸ್ಥಳೀಯ ಕಲೆಗಳು ತಮ್ಮ ಸ್ಥಳೀಯತೆಯನ್ನು ಬಿಟ್ಟುಕೊಟ್ಟು (ಕೇಲವ ಸಾಂಕೇತಿಕವಾಗಿ ಮಾತ್ರ ಸ್ಥಳೀಯತೆಯನ್ನು ಉಳಿಸಿಕೊಂಡು) ಆಧುನಿಕಗೊಳ್ಳತೊಡಗಿವೆ. ಹಾಗಾಗಿ ಜಾಗತಿಕ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ರೂಪಗೊಳ್ಳಬೇಕಾದ ಒತ್ತಡದಿಂದಾಗಿ ಗ್ರಾಮೀಣ ಕಲೆಗಳು ಏಕರೂಪಾತ್ಮಕತೆಯ ಕಡೆಗೆ ಚಲಿಸುತ್ತಿವೆ. ಪಿಂಡಿಪಾಪನಳ್ಳಿ ಮುನಿವೆಂಕಟಪ್ಪನೂ ನಮ್ಮೂರಿನ ಕಾಳಯ್ಯನೂ ಬಡಿಯುವ ತಮಟೆ ಗತ್ತಿನ ಸದ್ದು ಒಂದೇ ರೀತಿ ಕೇಳತೊಡಗಿದೆ. ಜನಪ್ರಿಯ ಚಲನಚಿತ್ರ ಗೀತೆಯೂ ನಮ್ಮ ಊರಿನ ದೇವರ ಪದವೂ ಒಂದೇ ರೀತಿ ಕೇಳಿಸುತ್ತಿವೆ. ಕಲಾಲೋಕವು ಬಾಳ್ವೆ, ಆಚರಣೆಗಳ ನೆಲೆಯಿಂದ ಸ್ಪಧರ್ೆ, ವ್ಯಾಪಾರೋದ್ಯಮದ ಕಡೆಗೆ ಚಲಿಸುತ್ತಿದೆ. ಇದರಿಂದ ಮನರಂಜನೆಯನ್ನೆ ಕೇಂದ್ರವಾಗಿಸಿಕೊಂಡ ಮಾದ್ಯಮಗಳು ಗ್ರಾಹಕರ ಸರಕನ್ನಾಗಿ ಕಲೆಗಳನ್ನು ಉತ್ಪಾದಿಸುತ್ತಿವೆ. ಯಾವಾಗ ಕೈಗಾರಿಕೆಯು ಭಾರಿ ಬಂಡವಾಳದೊದಿಗೆ ಕ್ಷೇತ್ರ ಪ್ರವೇಶ ಮಾಡುತ್ತದೋ ಆಗ ಸಹಜವಾಗಿ ಸಣ್ಣ ಪ್ರಮಾಣದ ಗುಡಿ ಕೈಗಾರಿಕೆಗಳು ತತ್ತರಿಸುತ್ತವೆ. ಕರಕುಶಲ ಕಲೆಗಳ ಪಾಡೇ ಹೀಗಾದರೆ ಇನ್ನು ಗ್ರಾಮೀಣ ಆಚರಣೆಗಳ ಪಾಡು ಎನಾಗಬೇಕು ಹೇಳಿ!

ಆಧುನಿಕತೆಯ ಕಡೆಗೆ ನಡೆದಂತೆಲ್ಲ ಕಲೆಗಳೆಲ್ಲ ಪ್ರದರ್ಶನಗಳ ಮೂಲಕವೇ ಅಭ್ಯಾಸ ಮಾಡುವ ಪ್ರಕ್ರಿಯೆಯಿಂದ ದೂರವಾಗಿ ಅಭ್ಯಾಸದ ನಂತರ ಪ್ರದಶರ್ಿಸುವ ಕಲೆಗಳಾಗಿ ಬದಲಾಗುತ್ತಿವೆ. ಪ್ರಾಕ್ಟೀಸಿನ ಮೂಲಕ ಕಲಿಯುವ ಕಲೆಗಳೆಲ್ಲ ನಮ್ಮ ಆಧುನಿಕ ಶಿಕ್ಷಣ ಪದ್ಧತಿಯಿಂದಾಗಿ ಥಿಯರಿಯ ಮೂಲಕ ಕಲಿಯಬಹುದಾದ ವಿದ್ಯೆಯ ಶಿಸ್ತುಗಳಾಗಿ ರೂಪಾಂತರವಾಗುತ್ತಿವೆ. ಮೀಡಿಯಾಗಳ ಪೈಪೋಟಿಯಲ್ಲಿ ಚೀಪ್ ಪಾಪ್ಯುಲಾರಿಟಿ, ಲಘು ಹಾಸ್ಯಗಳು ಬಹುತೇಕ ಎಲ್ಲ ಆಚರಣಾತ್ಮಕ ಕಲೆಗಳಿಗೂ ತಗಲಿಕೊಳ್ಳುತ್ತಿವೆ. ನಗರದ ಅವಸರದ ಬದುಕಿಗೆ ತಕ್ಕಂತೆ, ವೇದಿಕೆ-ಸಮಾರಂಭಗಳ ಕಾಲಮಿತಿಯ ಅಗತ್ಯಕ್ಕೆ ತಕ್ಕಂತೆ ಗ್ರಾಮಿಣ ಕಲೆಗಳು ಹ್ರಸ್ವವಾಗುತ್ತಿವೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅವು ತಮ್ಮ ಸಾಮಾಜಿಕ ಸಂದರ್ಭಗಳ ಕಳ್ಳುಬಳ್ಳಿ ಸಂಬಂಧ ಕಳೆದುಕೊಂಡು ಅಪಸಾಂದಭರ್ೀಕರಣ, ನವಸಾಂದಭರ್ೀಕರಣಗೊಳ್ಳುತ್ತಿವೆ. ಆದರೆ ಈ ಎಲ್ಲ ಬದಲಾವಣೆಗಳು ಇಂದು ನೆನ್ನೆಯವಲ್ಲ. ಈ ಸ್ಥಿತ್ಯಂತರ ಆರಂಭವಾಗಿ ಒಂದು ಶತಮಾನವೆ ಆಗಿದೆ. ವಸಾಹತೀಕರಣ, ನಗರೀಕರಣ, ಜಾಗತೀಕರಣ ಪ್ರಕ್ರಿಯೆಗಳೊಟ್ಟಿಗೇ ಆರಂಭವಾದ ಸ್ಥಿತ್ಯಂತರವಿದು. ಯಾವಾಗ ನಮ್ಮಲ್ಲಿ ಇಂಗ್ಲಿಷರ ಪುನರುಜ್ಜೀವನ ಯೋಜನೆ ಆರಂಭವಾಯಿತೋ ಆಗಲೇ ಈ ಪ್ರಕ್ರಿಯೆಗೆ ಒಂದು ವೇಗ ಒದಗಿತು. ಈ ಎಲ್ಲ ಬದಾವಣೆಗಳನ್ನು ಋಣಾತ್ಮಕವಾಗಿಯೇನೂ ನಾವು ನೋಡಬೇಕಿಲ್ಲ. ನಿತ್ಯ ಸ್ಥಿತ್ಯಂತರವೇ ನಿಜವಾದ ಸಾಮಾಜಿಕ ವಾಸ್ತವ. ಹಳೆಯದನ್ನೆಲ್ಲ ಹಾಗೆ ಹಾಗೇ ಕಾಪಾಡಿಕೊಳ್ಳಬೇಕು ಎಂಬುದೇನಿದ್ದರೂ ನಮ್ಮ ಹಳವಂಡ ಅಷ್ಟೆ. ಹುಟ್ಟುವ ಹೊಸ ಮಕ್ಕಳನ್ನು ಪೋಷಿಸುವುದು, ಹೊಸ ಹುಟ್ಟು ಪಡೆದ ಹಳೆ ಮಕ್ಕಳನ್ನೂ ಪೋಷಿಸುವುದು ಸಮಯೋಚಿತವಾದುದು. ನಾವೆಷ್ಟೆ ಹಿಡಿದಿಡಲು ಯತ್ನಿಸಿದರೂ ಬೀಸುವ ಹೊಸ ಗಾಳಿಗೆ ತಕ್ಕಂತೆ ಮರದ ಎಲೆಗಳು ಅಲ್ಲಾಡುತ್ತವೆ. ಕಾಲ ಕಳೆದಂತೆ ಮರಗಳು ಚಿಗುರಿ, ಬತ್ತಲಾಗಿ, ಚಿಗುರಿ ಒಣಗುತ್ತವೆ. ಹೊಸ ಗಿಡಗಳು ಹುಟ್ಟುತ್ತಿರುತ್ತವೆ. ಇದು ಪ್ರಕೃತಿ ಸಹಜ ಗತಿ.

-ಡಾ. ಬೇಗೂರು ರಾಮಲಿಂಗಪ್ಪ
ಕನ್ನಡ ಉಪನ್ಯಾಸಕರು,
ಮಹಾರಾಣಿ ಕಲಾ ಕಾಲೇಜು
ಶೇಷಾದ್ರಿ ರಸ್ತೆ, ಬೆಂಗಳೂರು-560001





ಮುರುಡೇಶ್ವರದಲ್ಲಿ