ಕಾವ್ಯ, ಕಾದಂಬರಿ, ವಿಮರ್ಶೆ, ಸಂಶೋಧನೆ ಹೀಗೆ ಹಲವು ಕ್ಷೇತ್ರಗಳಲ್ಲಿ ಡಾ.ಎಸ್.ವಿ.ಪ್ರಭಾವತಿಯವರು ಕೆಲಸ ಮಾಡಿದ್ದಾರೆ. ಹಿರಿಯರಾದ ಇವರು ತಮ್ಮ ಸಮಗ್ರ ಕಾವ್ಯಕ್ಕೆ ಕಿರಿಯನಾದ ನನ್ನಿಂದ ಮುನ್ನುಡಿಯನ್ನು ಬಯಸಿರುವುದು ಸೋಜಿಗವೇ ಸರಿ. ನನ್ನ ಮೇಲೆ ಅವರು ಇಟ್ಟಿರುವ ಪ್ರೀತಿ ಭರವಸೆಗಳಿಗೆ ನಾನು ಆಭಾರಿಯಾಗಿದ್ದೇನೆ. ಯಾವುದೇ ಲೇಖಕನ/ಲೇಖಕಿಯ ಕೃತಿಗೆ ಮುನ್ನುಡಿ ಬೆನ್ನುಡಿ ಬರೆಯುವಾಗ ನಮ್ಮಲ್ಲಿ ಪ್ರೋತ್ಸಾಹಿಸುವ ಧಾಟಿಯಲ್ಲಿ, ಪ್ರಶಂಸಾ ಧಾಟಿಯಲ್ಲಿ, ಗುಣಗ್ರಹಣ ಧಾಟಿಯಲ್ಲಿ ಬರೆಯುವುದೇ ಸಂಪ್ರದಾಯವಾಗಿದೆ. ಅದರಲ್ಲು ಹಿರಿಯರು ಕಿರಿಯರಿಗೆ ಬರೆಯುವಾಗ ಹರಸುವುದು, ಪ್ರಮಾಣ ಪತ್ರ ನೀಡುವುದು, ಹಲವು ರಿಯಾಯತಿಗಳಿಂದ ಬರೆಯುವುದು ಇಂತಹ ಮಾದರಿಗಳನ್ನೆ ಅನುಸರಿಸುವುದು ಸಂಪ್ರದಾಯವಾಗಿದೆ. ಇನ್ನು ಕಿರಿಯರು ಹಿರಿಯರಿಗೆ ಬರೆಯುವಾಗ ಮೆಚ್ಚಿ ಜೈ ಜೈ ಅನ್ನುವುದು ಮತ್ತು ಧನ್ಯೋಸ್ಮಿ ಆಗುವುದು ಕೂಡ ಈಗೀಗ ರೋಗವಾಗುತ್ತಿದೆ. ಆದರೆ ಪ್ರಭಾವತಿಯವರ ಕಾವ್ಯಕ್ಕೆ ಈ ಯಾವ ಸಾಂಪ್ರದಾಯಿಕ ಜಾಡುಗಳ ಹಂಗೂ ಇಲ್ಲ. ಇಲ್ಲ ಅಷ್ಟೆ.
ಆಧುನಿಕ ಮಹಿಳಾ ಕಾವ್ಯದಲ್ಲಿ ಶೈಲಜಾ ಉಡಚಣ, ವೈದೇಹಿ, ಎಚ್.ಎಸ್.ಮುಕ್ತಾಯಕ್ಕ, ಪ್ರತಿಭಾ ನಂದಕುಮಾರ್, ಶಶಿಕಲಾ ವೀರಯ್ಯಸ್ವಾಮಿ, ಸರ್ವಮಂಗಳ, ಎಚ್.ಎಲ್.ಪುಷ್ಪ, ಸ.ಉಷಾ, ಸಂಧ್ಯಾದೇವಿ, ಕೆ.ಷರೀಫಾ, ಹೇಮಾ ಪಟ್ಟಣಶೆಟ್ಟಿ, ಜ್ಯೋತಿ ಗುರುಪ್ರಸಾದ್, ಲಲಿತಾ ಸಿದ್ಧಬಸವಯ್ಯ, ಸುಕನ್ಯಾ ಮಾರುತಿ ಹೀಗೆ ಹಲವಾರು ಜನ ತಮ್ಮದೇ ಛಾಪು ಮೂಡಿಸಿದ್ದಾರೆ. ಇದು ಇವರದ್ದೆ ಕವಿತೆ ಎಂದು ಗುರುತಿಸಬಲ್ಲಂತಹ ಕಾವ್ಯದ ಅನನ್ಯತೆಯನ್ನು ಇವರು ಸಾಧಿಸಿದ್ದಾರೆ. ಸುಕ್ರಿ ಬೊಮ್ಮಗೌಡ, ಬುರ್ರಕಥಾ ಈರಮ್ಮ, ಬನ್ನೂರು ಕೆಂಪಮ್ಮ, ಸಿರಿಯಜ್ಜಿ ಇಂತಹ ಹಲವಾರು ಜನ ಮಹಿಳೆಯರು ನಮ್ಮ ಸಾಹಿತ್ಯ ಪರಂಪರೆಗಳನ್ನು ಸಮೃದ್ಧಗೊಳಿಸಿದ್ದಾರೆ. ಇಂತಹ ಪ್ರತಿಭೆಗಳಿಗೆ ಸಮನಾದ ಕ್ರಿಯಾಶೀಲತೆ ನಮ್ಮ ಆಧುನಿಕ ಮಹಿಳಾ ಕಾವ್ಯಕ್ಕೆ ಇದೆ. ಅಕ್ಕಮಹದೇವಿ ಮತ್ತಿತರ ವಚನಕಾರ್ತಿಯರು, ಹರಪನಹಳ್ಳಿ ಭೀಮವ್ವ ಮತ್ತಿತರ ಕೀರ್ತನಕಾರ್ತಿಯರುಗಳನ್ನು ಹೊರತುಪಡಿಸಿದರೆ ಬರಿ ಪುರುಷರ ಬರವಣಿಗೆಯನ್ನು ಮಾತ್ರವೆ ಒಳಗೊಂಡಿರುವ ಪ್ರತಿಷ್ಠಿತ ಸಾಹಿತ್ಯಕ್ಕೆ ಆಧುನಿಕ ಸಂದರ್ಭದಲ್ಲಿ ಒಂದು ಮಹಿಳಾ ದಂಡೇ ಎದುರು ನಿಂತಂತೆ ಇವರೆಲ್ಲ ಬರೆದಿದ್ದಾರೆ. ಅಷ್ಟೆ ಅಲ್ಲ ಇಡೀ ಆಧುನಿಕ ಸಾಹಿತ್ಯವನ್ನು ಮಹಿಳಾ ಸಂವೇದನೆ ಮತ್ತು ಪುರುಷ ಸಂವೇದನೆಗಳ ಲಿಂಗಾಧಾರಿತ ನೆಲೆಯಲ್ಲಿ ಸೀಳಿ ನೋಡಬಲ್ಲಷ್ಟು ಗಾಢವಾಗಿ ಇವರೆಲ್ಲ ಬರೆದಿದ್ದಾರೆ. ಇವರ ಸಾಲಿಗೆ ಸೇರುವ ಕವಿಗಳಲ್ಲಿ ಡಾ.ಎಸ್.ವಿ.ಪ್ರಭಾವತಿ ಅವರೂ ಒಬ್ಬರು.
ವಚನಗಳಿಂದ, ಕೀರ್ತನೆಗಳಿಂದ, ತತ್ವಪದಗಳಿಂದ ಪ್ರೇರಣೆ-ಪರಿಕರಗಳನ್ನು ಅಪಾರವಾಗಿ ಪಡೆದಿರುವ ಆಧುನಿಕ ಮಹಿಳಾ ಕಾವ್ಯವು ಕುವೆಂಪು, ಬೇಂದ್ರೆ, ಅಡಿಗ, ಕೆ.ಎಸ್.ನ ಇವರುಗಳಿಂದಲೂ ಪ್ರೇರಣೆ-ಪರಿಕರಗಳನ್ನು ಪಡದುಕೊಂಡಿದೆ. ಪುರುಷ ಸಾಹಿತ್ಯದಿಂದ ಪ್ರೇರಣೆ-ಪರಿಕರಗಳನ್ನು ಪಡೆದಿದ್ದರೂ ಗಾಢ ಮಹಿಳಾ ಸಂವೇದನೆಯನ್ನು ಇದು ಹೊಂದಿರುವುದೆ ಇದರ ವಿಶಿಷ್ಟತೆ ಮತ್ತು ಅನನ್ಯತೆಯಾಗಿದೆ. ನಾದ ಮತ್ತು ಲಯಗಳಲ್ಲಿ ಕೆ.ಎಸ್.ನ. ಮತ್ತು ಬೇಂದ್ರೆಯವರಿಂದಲೂ, ಪ್ರತಿಮಾ ರೂಪಕ ಮಾರ್ಗದಲ್ಲಿ ಅಡಿಗರು ಮತ್ತು ವಚನ ಪರಂಪರೆಯಿಂದಲೂ ವೈಚಾರಿಕ ಚಿಂತನಾ ಮಾರ್ಗದಲ್ಲಿ ಕುವೆಂಪು ಅವರಿಂದಲೂ ಪ್ರಭಾವತಿಯವರು ಪ್ರೇರಣೆ ಮತ್ತು ಪರಿಕರಗಳನ್ನು ಪಡೆದಿದ್ದಾರೆ. ಈ ಎಲ್ಲ ಲಯಗಾರಿಕೆ, ವೈಚಾರಿಕತೆ, ರೂಪಕ ಮಾರ್ಗಗಳೊಂದಿಗೆ ಸ್ತ್ರೀವಾದಿ ಪ್ರತಿಭಟನೆಯ ನೆಲೆಗಳನ್ನು ಹದಗೊಳಿಸಿ ತಮ್ಮದೇ ಕಾವ್ಯಧಾಟಿಯನ್ನು ಪ್ರಭಾವತಿಯವರು ರೂಪಿಸಿಕೊಂಡಿದ್ದಾರೆ. ಹೀಗಾಗಿ ಇವರ ಕವಿತೆಗಳಲ್ಲಿ ಪ್ರತಿಭಟನೆಯ ದನಿಗಳೂ, ವೈಚಾರಿಕ ಜಿಜ್ಞಾಸೆಗಳೂ, ರೂಪಕ ಸಾಮಗ್ರಿಗಳ ಭಿನ್ನಾರ್ಥ ಸಾಧ್ಯತೆಗಳೂ ಇವೆ. ಹಾಗೆ ನೋಡಿದರೆ ವಿಜಯಾ ಸುಬ್ಬರಾಜ್, ಅರುಂಧತಿ ರಮೇಶ್ ಇಂಥವರ ಕವಿತೆಗಳು ಅಡಿಗ ಮಾರ್ಗದ ಸಂಪೂರ್ಣ ಅನುಕರಣೆಯಲ್ಲಿ ಮುಳುಗಿ ಅನನ್ಯತೆ ಇಲ್ಲದೆ ಸೋಲುತ್ತವೆ. ಆದರೆ ಪ್ರಭಾವತಿ, ಎಚ್.ಎಲ್.ಪುಷ್ಪ ಇಂಥವರ ಕವಿತೆಗಳು ಅಡಿಗನವ್ಯ ಧಾಟಿಯ ಪ್ರತಿಮಾ ಮಾರ್ಗವನ್ನು ಚೆನ್ನಾಗಿ ದುಡಿಸಿಕೊಂಡು ಗೆದ್ದಿವೆ. ಆದರೆ ಪ್ರಭಾವತಿಯವರ ಕವಿತೆಗಳು ರೋಚಕತೆ, ಭಾವನಾತ್ಮಕತೆ, ಬೆರಗುಗಳಿಂದ ನಮ್ಮನ್ನು ಸೆಳೆಯುವುದಿಲ್ಲ. ಅವು ರೂಪಕ ಧಾಟಿಯಿಂದ ನಮ್ಮನ್ನು ಮರು ಓದಿಗೆ ಒತ್ತಾಯಿಸುತ್ತವೆ. ವೈಚಾರಿಕವಾಗಿ ಚಿಂತಿಸಲು ತೊಡಗಿಸುತ್ತವೆ. ಕತೆ, ಕಾವ್ಯ, ಪ್ರಬಂಧ ಎಂಬವುಗಳೆಲ್ಲ ಫಾರಮ್ಮುಗಳಷ್ಟೆ. ಆದರೆ ಅಂತಿಮವಾಗಿ ಇವೆಲ್ಲವೂ ಡಿಸ್ಕೋಸರ್್ಗಳೇ ಅಲ್ಲವೆ? ಹಾಗಾಗಿ ಇವರ ಕಾವ್ಯ ಕೂಡ ಮಹಿಳಾ ಸಂಕಥನದ ಒಂದು ಭಾಗವೇ ಆಗಿದೆ.
ಪ್ರಭಾವತಿಯವರ ಮೊದಲ ಸಂಕಲನ ಮಳೆ ನಿಂತ ಮೇಲಿನ ಮರ, ಎರಡನೆಯದ್ದು ಉಳಿದದ್ದು ಆಕಾಶ, ಮೂರನೆಯದು ಭೂಮಿ. ಇನ್ನು ಇವರ ನಾಲ್ಕನೆ ಸಂಕಲನ ಹರಿಯುತಿರಲಿ ಬಿಡು. ಹೀಗೆ ಇವರ ನಾಲ್ಕೂ ಸಂಕಲನಗಳು ಮಳೆ, ನದಿ, ಮರ, ಭೂಮಿ, ಆಕಾಶ ಹೀಗೆ ಪ್ರಕೃತಿ ರೂಪಕಗಳ ಮೂಲಕವೆ ಹೆಸರು ಪಡೆದಿವೆ. ಚರಿತ್ರೆ ಮತ್ತು ಪುರಾಣಗಳ ಪಾತ್ರಪ್ರತೀಕಗಳ ಜೊತೆಗೆ ಪ್ರಕೃತಿ ರೂಪಕಗಳು ಇವರ ಕಾವ್ಯದ ತುಂಬ ತುಂಬಿಕೊಂಡಿವೆ. 5ನೆ ಸಂಕಲನಕ್ಕೆ ಆಗುವಷ್ಟು ಇರುವ ಇವರ 'ಆನಂತರದ ಕವಿತೆಗಳು' ಕೂಡ ಭೂಮಿ, ಆಕಾಶ, ಮಳೆ, ಮರ ಇತ್ಯಾದಿ ಪ್ರತೀಕಗಳು ಮತ್ತು ರೂಪಕಗಳನ್ನು ಹೇರಳವಾಗಿ ಒಳಗೊಂಡಿವೆ. ಇನ್ನು ಇವರು ತಮ್ಮ ಸಮಗ್ರ ಕಾವ್ಯವನ್ನು ಕರೆದಿರುವುದೆ 'ನದಿ ಹರಿಯುತ್ತಿರಲಿ' ಎಂದು. ಇಲ್ಲೆಲ್ಲ ಪ್ರಕೃತಿಯ ಹತ್ತಾರು ಅಂಗಗಳೇ ಕಾವ್ಯರೂಪಕಗಳಾಗಿ ಮೈತಾಳಿವೆ. ಈ ರೂಪಕಗಳ ಲೋಕವಲ್ಲದೆ ಚರಿತ್ರೆ-ಪುರಾಣ ಪಾತ್ರಗಳು, ಆಧುನಿಕ ವ್ಯಕ್ತಿ ಚಿತ್ರಗಳು, ಕವನ ಹುಟ್ಟುವ ಲೋಕ, ಸಾವು ಮತ್ತು ಬದುಕಿನ ಸಂಬಂಧಗಳು, ಸಾಮಾಜಿಕ ಸಮಸ್ಯೆಗಳು ಮತ್ತು ಅವುಗಳ ಕಾರಣಪ್ರಪಂಚ ಹೀಗೆ ಹಲವು ವಲಯಗಳು ಇವರ ಕಾವ್ಯದ ಪ್ರಧಾನ ವಲಯಗಳಾಗಿವೆ. ಮೊದಲ ಸಂಕಲನ ಮಳೆ ನಿಂತ ಮೇಲಿನ ಮರದಲ್ಲಿ ಮಳೆ ಅಥವಾ ನೀರು ಮತ್ತೆ ಮತ್ತೆ ಪುನರಾವರ್ತನೆ ಆಗುವ ಪ್ರತೀಕ. ಮಳೆ, ನದಿ, ಸಮುದ್ರ, ಹರಿವು ಹೀಗೆ ನೀರು ಇವರಿಗೆ ಬಹು ಪ್ರಿಯವಾದ ಕಾವ್ಯಪ್ರತಿಮೆ. ಮೊದಲ ಸಂಕಲನದ ನಂತರವೂ ಈ ನೀರು ಹನಿಯುವುದು ನಿಂತೆ ಇಲ್ಲ. ಮಳೆ (ಪು.63), ಸಮುದ್ರ-ನದಿ (93), ಮಳೆಯ ಹಾಡು (121), ಇಳೆ ಮಳೆ (128), ಒಡೆದ ಕನಸು (215), ಮಳೆಯಾಗುತಿದೆ (261), ಮಳೆ ನಿಲ್ಲುವವರೆಗೆ (284) ಹೀಗೆ ಇವರು ಮಳೆಯ ಬಗೆಗೇ ಹಲವಾರು ಕವಿತೆಗಳನ್ನು ಬರೆದಿದ್ದಾರೆ.
ಎಚ್ಚರದ ಸ್ಥಿತಿಯನ್ನು ಮುಚ್ಚಿ ಭಾವನಾತ್ಮಕ ಸಂಬಂಧಗಳನ್ನು ಎತ್ತಿ ಹಿಡಿಯುವುದು; ಹೆಣ್ಣನ್ನು ವೈಚಾರಿಕ ಅಥವಾ ಬೌದ್ಧಿಕ ಆಕೃತಿಯನ್ನಾಗಿ ಕಲ್ಪಿಸಿಕೊಳ್ಳಲು ಆಗದಿರುವುದು ಕನ್ನಡ ಸಾಹಿತ್ಯ ಕಥನದಲ್ಲಿನ ಲಿಂಗರಾಜಕಾರಣವೆ ಆಗಿದೆ. ಒಬ್ಬ ಸಾಕವ್ವ, ಒಬ್ಬ ತಿಮ್ಮಿ ಇಂತಹ ಕೆಲವೊಂದು ಪಾತ್ರಗಳನ್ನು ಬಿಟ್ಟರೆ ಮಿಕ್ಕ ಪ್ರತಿಷ್ಠಿತ ಪುರುಷ ಸಾಹಿತ್ಯದ ಪಾತ್ರಗಳ ಚರಿತ್ರೆಯನ್ನು ಗಮನಿಸಿದರೆ ಇದು ತಿಳಿಯುತ್ತದೆ. ಇವೂ ಕೂಡ ಹಾಗೆ ನೋಡಿದರೆ ಕುಟುಂಬ ಕಟ್ಟುವ ಹೋಮ್ ಮೇಕರ್ ಪಾತ್ರಗಳೆ. ಆದರೆ ಆಧುನಿಕ ಮಹಿಳಾ ಕಾವ್ಯ ಅದರಲ್ಲು ವಿಶೇಷವಾಗಿ ಪ್ರತಿಭಾ, ಶೈಲಜ ಉಡಚಣ, ಶಶಿಕಲಾ ವೀರಯ್ಯಸ್ವಾಮಿ, ಮುಕ್ತಾಯಕ್ಕ ಇಂಥವರ ಕಾವ್ಯದಲ್ಲಿ ಹೆಣ್ಣನ್ನು ವೈಚಾರಿಕ ಆಕೃತಿಯಾಗಿಯೂ ಕಲ್ಪಿಸಿಕೊಳ್ಳುವ ನಡೆಗಳಿವೆ. ಪ್ರಭಾವತಿಯವರ ಕಾವ್ಯ ಕೂಡ ಹೀಗೆ ಭಾವನಾತ್ಮಕ ನೆಲೆಗಟ್ಟುಗಳನ್ನು ಬಹುಪಾಲು ಬಿಟ್ಟುಕೊಟ್ಟ ವೈಚಾರಿಕ ಸ್ತ್ರೀದನಿಯೇ ಆಗಿದೆ. ಇವರ ಹಲವು ಕವಿತೆಗಳು ಕವಿತೆಯ ಸೋಕಾಲ್ಡ್ ಸೌಂದರ್ಯ, ಆಕೃತಿಯ ಚೆಲುವುಗಳಿಲ್ಲದ ವಿಚಾರಚಿಂತನಾ ಗಪದ್ಯಗಳಂತೆ ಕಾಣುತ್ತವೆ. ಆಶಯ ಮತ್ತು ಆಕಾರಗಳ ನಡುವಣ ಸಂಬಂಧಗಳನ್ನು ಚಚರ್ಿಸಲು ಇವರ ಕವಿತೆಗಳು ಒಳ್ಳೆಯ ಉದಾಹರಣೆಗಳಾಗಬಲ್ಲವು. ಹಾಗಾಗಿಯೆ ಎಚ್ಚರದ ಸ್ಥಿತಿ ಮತ್ತು ಉದ್ದೇಶಪೂರ್ವಕ ಕಟ್ಟಾಣಿಕೆ ಇವರ ಕವಿತೆಗಳಲ್ಲಿ ಕಾಣುತ್ತದೆ. ಇವರ ಕವಿತೆಗಳಲ್ಲಿ ಬಾವನೆಗಳೇ ಇಲ್ಲವೆಂದಲ್ಲ. ಇದ್ದರೂ ಅವೆಲ್ಲವು ವ್ಯವಸ್ಥೆಯ ಕುರಿತಾದ ಸಿಟ್ಟು, ವ್ಯಂಗ್ಯ, ಪ್ರತಿರೋಧ, ನಿರಾಕರಣೆ, ದುಃಖ, ವಿಷಾದಗಳೇ ಆಗಿವೆ.
ನಮ್ಮ ಹೆಣ್ಣಿನ ಅಂತರಂಗವಂತೂ ಅದೊಂದು ನಿಗೂಢ ಜಗತ್ತು. ಪ್ರತಿಷ್ಠಿತ ಸಾಹಿತ್ಯದಲ್ಲಿ ನಾವು ಕಟ್ಟಿಕೊಂಡಿರುವ ಹೆಣ್ಣುಜಗತ್ತು ಏನಿದ್ದರೂ ಅದೆಲ್ಲ ಗಂಡು ತಾನು ಕಂಡ ಅಥವಾ ಕಂಡಿದ್ದೇನೆಂದು ಹೇಳುವ ಹೆಣ್ಣಿನ ಜಗತ್ತು ಅಷ್ಟೆ. ಆದರೆ ಹೆಣ್ಣೇ ಅವಳ ಅಂತರಂಗವನ್ನು ಅಭಿವ್ಯಕ್ತಿಸಿದರೆ ಆಗ ಅದರ ಸ್ವರೂಪವೆ ಬೇರೆ ಇರುತ್ತದೆಯಲ್ಲವೆ? ಹೆಣ್ಣಿನ ಅಂತರಂಗದಲ್ಲಿ ಏನೇನು ನಡೆಯುತ್ತದೆ ಎಂಬುದು ಯಾರಿಗೂ ತಿಳಿಯಬಾರದು; ಅದು ಹಾಗೇ ಗೋರಿಯಾಗಬೇಕು ಎಂಬ ಮತ್ತು ವಯಕ್ತಿಕ-ಖಾಸಗಿ-ಕೌಟುಂಬಿಕ ಎನ್ನಬಹುದಾದ ಸಂಗತಿಗಳನ್ನು ಹೆಣ್ಣು ಅಬಿವ್ಯಕ್ತಿಸಬಾರದು ಎಂಬ 'ಅಲಿಖಿತ ಸಂವಿಧಾನ'ವೊಂದು ನಮ್ಮ ಸಮಾಜದಲ್ಲಿ ಜಾರಿಯಲ್ಲಿದೆ. ಆದರೆ ಆಧುನಿಕ ಮಹಿಳಾ ಸಾಹಿತ್ಯದ ಒಂದು ಬಹು ಮುಖ್ಯವಾದ ಚಹರೆಯು ಈ ಅಲಿಖಿತ ಅಥವಾ ಸಾಹಿತ್ಯ ಲಿಖಿತ ಮೌಲ್ಯವನ್ನು ಮೀರುವುದೇ ಆಗಿದೆ. ಹೆಣ್ಣಿನ ಅಂತರಂಗದ ಅನಾವರಣ; ಒಳಮನೋಲೋಕದ ದರ್ಶನ ಆಧುನಿಕ ಮಹಿಳಾ ಸಾಹಿತ್ಯದ (ಒಟ್ಟಾರೆ ಮಹಿಳಾ ಸಾಹಿತ್ಯದ) ಒಂದು ಚಹರೆಯೆ ಅಲ್ಲವೆ? ಪ್ರಭಾವತಿಯವರ ಕಾವ್ಯ ಕೂಡ ಇದಕ್ಕೆ ಹೊರತಲ್ಲ. ಅಹಲ್ಯೆ, ದ್ರೌಪದಿ, ಸೀತೆ ಇಂತಹ ಪುರಾಣ ಪ್ರತೀಕಗಳು; ಭೂಮಿ, ನದಿ, ಮರ, ಮಳೆ, ಸಾವು ಇತ್ಯಾದಿ ಪ್ರಕೃತಿ ರೂಪಕಗಳ ಮೂಲಕ ಈ ದರ್ಶನವನ್ನು ಪ್ರಭಾವತಿ ಅವರ ಕಾವ್ಯ ಮಾಡುತ್ತದೆ. ಕಾವ್ಯದ ಪರಿಕರಗಳೆ ರೂಪಕ, ಉಪಮೆ, ಅನ್ಯೋಕ್ತಿ, ವ್ಯಂಗ್ಯ, ಧ್ವನಿ ಇತ್ಯಾದಿಗಳು. ಹೌದು. ಆದರೆ ಹೆಣ್ಣಿನ ಅಂತರಂಗದ ಅನಾವರಣ ಯಾಕೆ ರೂಪಕದ ಮೊರೆ ಹೋಗುತ್ತದೆ? ಖಚಿತವಾದ ನೇರ ಬಾಣಗಳು ಏಕೆ ಅಜ್ಞಾತವಾಸಕ್ಕೆ ಹೋಗಿ ರೂಪಕಗಳಲ್ಲಿ ಬಚ್ಚಿಟ್ಟುಕೊಳ್ಳುತ್ತವೆ? ಖಾಸಗಿ ಲೋಕವು ಸಾರ್ವಜನಿಕ ಅಂಗಳಕ್ಕೆ ಬರುವಾಗ ಅನೇಕ ಸೆನ್ಸಾರುಗಳನ್ನು; 'ಅಲಿಖಿತ ಸಂವಿಧಾನ'ದ ಅನೇಕ ಒತ್ತಡಗಳನ್ನು ಹಾದು ಬರಬೇಕಾಗುತ್ತದೆ. ಲೋಕದ ಗಂಡುಸ್ತುತಿ-ನಿಂದೆಗಳು ಯಾರನ್ನು ಬಾಧಿಸುವುದಿಲ್ಲ ಹೇಳಿ?
ಎಲ್ಲ ಮಹಿಳೆಯರೂ ಕಾರಂತರ ಮಂಜುಳೆಯಂತೆ ತಮ್ಮ ದಿನಚರಿ ಬರೆಯಲು ಆಗುವುದಿಲ್ಲ. ಆ ಅವನು, ಈ ಇವನ ಬಗ್ಗೆ ಮಾತಾಡಲು ಆಗುವುದಿಲ್ಲ. ಎಲ್ಲ ಗಂಡನೊಳಗೇ ಐಕ್ಯ ಎಂಬಂತೆ ಕೆಲವೊಮ್ಮೆ ನಟಿಸಬೇಕಾಗುತ್ತದೆ. (ನೋಡಿ; ಪು.169) ಹೀಗಿರುವುದೇ ಹೆಣ್ಣಿನ ವಾಸ್ತವ. ಇಂತಹ ಹೆಣ್ಣಿನ ವಾಸ್ತವಕ್ಕೆ ಒದಗುವ ಒಂದು ಹೊರದಾರಿಯೆ ಕಾವ್ಯ. ನಿಟ್ಟುಸಿರು ಬಿಡಬಹುದಾದ ದಾರಿಯಿದು. ಇಂತಹ ಹೊರದಾರಿಯನ್ನು ಪ್ರಭಾವತಿಯವರು ತಮ್ಮ ತಲ್ಲಣಗಳ ಅಭಿವ್ಯಕ್ತಿಯ ಮಾದ್ಯಮವಾಗಿ ಸಮರ್ಥವಾಗಿ ಬಳಸಿದ್ದಾರೆ. ಆಧುನಿಕ ಕವಿತೆಗಳಿಗೆ ಇವರು ಕೊಟ್ಟಿರುವ ಉಪಮೆ ಬೋನ್ಸಾಯ್ ಗಿಡಗಳದ್ದು. ಆಧುನಿಕ ಕವಿತೆಗಳೆಲ್ಲ ಅಪಾರವಾದ ಹೆಣ್ಣುಲೋಕದ ಅನುಭವಗಳ ಬೋನ್ಸಾಯ್ ಗಿಡಗಳೇ ಹೌದು. ವ್ಯಾಸ ವಾಲ್ಮೀಕಿ, ಪಂಪ, ಕುಮಾರವ್ಯಾಸ, ಕುವೆಂಪು ಇವರ ಪರಂಪರೆ ನೋಡಿದರೆ ಒಟ್ಟಾರೆ ಸಾಹಿತ್ಯ ಕಥನಗಳೆ ನಿಧಾನಕ್ಕೆ ಬೋನ್ಸಾಯ್ ಗಿಡಗಳಾಗುತ್ತ ಬಂದಂಥೆ ಕಾಣುತ್ತದೆ. ಇನ್ನೊಂದು ನಿಜ ಏನಪ್ಪಾ ಅಂದರೆ ಪ್ರಭಾವತಿಯವರ ಕವಿತೆಗಳು ಕೂಡ ಕೊನೆಕೊನೆಗೆ ಬೋನ್ಸಾಯ್ ಗಿಡಗಳಾಗುತ್ತ ಬಂದಿವೆ. ಇವರ ಇತ್ತೀಚಿನ 'ಆ ನಂತರದ ಕವಿತೆಗಳ'ಂತು ಬೋನ್ಸಾಯ್ ಗಿಡಗಳನ್ನೆ ಮತ್ತಷ್ಟು ಬೋನ್ಸಾಯ್ ಮಾಡಿದಂತೆ ಆಗಿವೆ. ಕವಿತೆ ಮತ್ತು ಹನಿಗವಿತೆಗಳನ್ನು ಕಸಿ ಮಾಡಿದ 'ಹನಿಗವಗವಿತೆ'ಗಳಂತೆ ಆಗಿವೆ.
ದೀಪಾವಳಿಯ ನೆನಪು, ಕನ್ನಡ ರಾಜ್ಯೋತ್ಸವ, ಪರ್ವ, ಸುವರ್ಣ ಸ್ವಾತಂತ್ರ್ಯ ಹೀಗೆ ಹಬ್ಬಗಳ ಕುರಿತು ಇವರು ಕೆಲವೊಂದು ಕವಿತೆಗಳನ್ನು ಬರೆದಿದ್ದಾರೆ. ಹಬ್ಬ ಎಂದರೆ ಇವರಿಗೆ ಸಂಭ್ರಮ ಅಲ್ಲ. ಕನ್ನಡವನ್ನು ಕೊಲ್ಲುತ್ತ ಕನ್ನಡ ರಾಜ್ಯೋತ್ಸವ ಮಾಡುವುದು ಅಥವಾ ಸ್ವಾತಂತ್ರ್ಯವನ್ನು ದುರುಪಯೋಗ ಮಾಡುತ್ತ ಸುವರ್ಣ ಸ್ವಾತಂತ್ರ ಆಚರಿಸುವುದನ್ನು ಕಂಡು ಇವರಿಗೆ ಸಿಟ್ಟು ಮತ್ತು ವಿಷಾದಗಳಿವೆ. ಹಬ್ಬಗಳ ಕುರಿತ ಈ ಎಲ್ಲ ಕವಿತೆಗಳಲ್ಲು ಸಮಾಜವನ್ನು ಗಂಡು ಮತ್ತು ಹೆಣ್ಣು ಗಳ ಎರಡು ಭಿನ್ನ ಕ್ರಿಯಾಲೋಕಗಳೆಂಬಂತೆ ಕಾಣುವ ದೃಷ್ಟಿಯಿದೆ. ಇಲ್ಲಿನ ಎಲ್ಲ ಅನಾಹುತ, ಅನಾಚಾರಗಳಿಗೆ ಈ ಗಂಡುಕುಲವೇ ಕಾರಣ ಎಂಬ ಸಿಟ್ಟು ಮತ್ತು ವ್ಯಗ್ರತೆಗಳು ವ್ಯಂಗ್ಯವಾಗಿ ಇಲ್ಲೆಲ್ಲ ತುಂಬಿಕೊಂಡಿವೆ. ಪದ್ಯ ಮತ್ತು ಗದ್ಯಗಳ ಮದ್ಯದ ರೂಪ ಗಪದ್ಯವಾಗಿ, ಕವಿತೆ ಮತ್ತು ಹನಿಗವಿತೆಗಳ ಮದ್ಯದ ರೂಪ ಹನಿಗವಗವಿತೆಗಳಾಗಿ ಇವರ ಕವನಗಳು ಹೊರಳಿಕೊಂಡಿರುವಂತೆಯೆ ಇವರ ಹಲವಾರು ಕವನಗಳು ಭಾಷಣ ಮತ್ತು ವಿಚಾರಚಿಂತನೆಗಳ ಮದ್ಯಮ ರೂಪವನ್ನು ತಾಳಿವೆ. ಇದು ಇವರ ಒಟ್ಟಾರೆ ಕಾವ್ಯದ ಲಕ್ಷಣವಲ್ಲ. ಇವರ ಹಲವಾರು ಕವಿತೆಗಳು ತುಸು ಆಯ ತಪ್ಪಿದರೆ ಭಾಷಣ ಆಗಬಹುದಾದ ಸಾಧ್ಯತೆಗಳನ್ನು ಇಲ್ಲವೆ ಕಾವ್ಯಾತ್ಮಕ ವಿಚಾರಲೇಖನ ಆಗಬಹುದಾದ ಸಾಧ್ಯತೆಗಳನ್ನು ತಪ್ಪಿಸಿಕೊಂಡ ಕಾವ್ಯರಚನೆಗಳಾಗಿವೆ. ಒಂದು ಉದಾಹರಣೆಗೆ ಬೇಕಾದರೆ ನೀವು ಕನ್ನಡ ರಾಜ್ಯೋತ್ಸವ ಪದ್ಯವನ್ನು ನೋಡಬಹುದು (ಪು. 104).
ಹರಿದ ನೋಟು, ಕಾದಿರುವೆ ಬಾ, ನಿರೀಕ್ಷೆ, ಭೂಮಿ ಕಾಯುವುದಿಲ್ಲ, ಕನಸುಗಳು, ಕಾಯುತ್ತಿರು, ನಾನು ನೀನು, ಇಳೆ ಮಳೆ, ಭೂಮಿ(ಮಳೆಗಾಗಿ ಕಾಯುವ ಸೂಳೆ ಇಳೆ!), ಭೂಮಿ ನಾನು, ಮುಕ್ತಿ ಇಂತಹ ಹಲವಾರು ಪದ್ಯಗಳಲ್ಲಿ ಕಾಯುವಿಕೆ ಒಂದು ಬಹು ಪುನರಾವರ್ತಿತ ಪ್ರತಿಮೆಯಾಗಿ ಬರುತ್ತದೆ. ಹೆಣ್ಣು ಗಂಡಿಗಾಗಿ ಕಾಯವುದು, ಮಗುವಿಗಾಗಿ ಕಾಯುವುದು, ಮುಕ್ತಿಗಾಗಿ ಕಾಯುವುದು, ಸಾವಿಗಾಗಿ ಕಾಯುವುದು ಹೀಗೆ ಎಲ್ಲೆಲ್ಲು ಕಾಯಬೇಕಾದ ಸ್ಥಿತಿಯ ಬಗ್ಗೆ ಒಂದು ದೊಡ್ಡ ಅಸಹನೆ ಮತ್ತು ಪ್ರತಿರೋಧ ಇವರ ಕಾವ್ಯಬದುಕಿನುದ್ದಕ್ಕು ಪ್ರಕಟವಾಗುತ್ತಲೆ ಬಂದಿದೆ. ಹೊಸರೈಲು ಸಿಗದೇ ಹೋಗುವುದು, ಟಿಕೇಟೇ ತಪ್ಪಿಹೋಗುವುದು ಇಂಥದ್ದೆಲ್ಲಾ ಹೆಣ್ಣಿಗೇ ಯಾಕೆ ಹೆಚ್ಚಾಗಿ ಆಗುತ್ತದೆ? ಗಂಡಿಗೆ ಇಂಥದ್ದು ಬಹು ಕಡಿಮೆಯಲ್ಲ! ಇಂತಹ ಪ್ರಶ್ನೆಗಳು ಇವರ ಕಾವ್ಯದಲ್ಲಿ ಮತ್ತೆ ಮತ್ತೆ ಕೇಳಲ್ಪಟ್ಟಿವೆ. ಹಾಗೆಯೆ ಈ ರೀತಿಯ ಲಿಂಗರಾಜಕಾರಣವೆ ಈ ಜಗದಲ್ಲೆಲ್ಲ ತುಂಬಿರುವ ಬಗ್ಗೆ ಇವರ ಕಾವ್ಯ ದೊಡ್ಡ ಪ್ರತಿರೋಧವನ್ನು ಪ್ರಕಟಿಸಿದೆ.
ಪುರಾಣ ಪ್ರತೀಕಗಳು ಮತ್ತು ಪ್ರಕೃತಿ ರೂಪಕಗಳು ಆಧುನಿಕ ಮಹಿಳಾ ಕಾವ್ಯದಲ್ಲಿ ಬಹು ಮುಖ್ಯವಾದ ಪರಿಕರಗಳು ಮತ್ತು ಅಭಿವ್ಯಕ್ತಿ ವಿನ್ಯಾಸಗಳು. ಇವೆರಡನ್ನೂ ಪ್ರಭಾವತಿಯವರ ಕಾವ್ಯ ಬಹು ಚೆನ್ನಾಗಿ ದುಡಿಸಿಕೊಂಡಿದೆ. ವೈದೇಹಿ ಸೂರ್ಯನ ಬಗ್ಗೆ ಸಾಕಷ್ಟು ಪದ್ಯಗಳನ್ನು ಬರೆದಿದ್ದಾರೆ, ಭಾಗ್ಯ ಜಯಸುದರ್ಶನ ಭೂಮಿಯ ಬಗ್ಗೆ ಸಾಕಷ್ಟು ಪದ್ಯಗಳನ್ನು ಬರೆದಿದ್ದಾರೆ. ಈ ತಲೆಮಾರಿನ ಸ್ವಯಂಪ್ರಭಾ ಮಳೆಯ ಮೇಲೆ ಸಾಕಷ್ಟು ಪದ್ಯಗಳನ್ನು ಬರೆದಿದ್ದಾರೆ. ಮತ್ತು ರೂಪ ಹಾಸನ ರೊಟ್ಟಿ ಮತ್ತು ಹಸಿವು ಎಂಬ ಥೀಮುಗಳನ್ನು ಇರಿಸಿಕೊಂಡು ಒಂದು ಸಂಕಲನವನ್ನೆ ತಂದಿದ್ದಾರೆ. ಇಲ್ಲೆಲ್ಲ ಹೆಣ್ತನವನ್ನು ಕಥಿಸಲಾಗಿದೆ. ಎಸ್.ವಿ.ಪ್ರಭಾವತಿಯವರು ಕೂಡ ಭೂಮಿ ಮತ್ತು ಮೃತ್ಯುವಿನ ಕುರಿತು ಸಾಕಷ್ಟು ಪದ್ಯಗಳನ್ನು ಬರೆದಿದ್ದಾರೆ. ಹೀಗೆ ಯಾವುದಾದರೂ ಥೀಮುಗಳನ್ನು ಇರಿಸಿಕೊಂಡು ಬರೆಯುವುದು ಮತ್ತು ಆ ಮೂಲಕ ಹೆಣ್ಣು-ಹೆಣ್ತನಗಳನ್ನು ಕಥಿಸುವುದು ನಮ್ಮ ಮಹಿಳಾ ಕಾವ್ಯದ ಒಂದು ಲಕ್ಷಣವೇ ಆಗಿದೆ. ಪ್ರಭಾವತಿಯವರಲ್ಲಂತು ಈ ಲಕ್ಷಣ ಡಾಳಾಗಿ ಇದೆ.
ನದಿ, ಆಕಾಶ, ಭೂಮಿ, ಮರ, ಮಳೆ, ಗಾಳಿ, ಹೂವು ಹೀಗೆ ಪ್ರಭಾವತಿ ಅವರು ಹಲವು ಪ್ರತಿಮೆಗಳನ್ನು ಪ್ರಕೃತಿಯಿಂದ ತೆಗೆದುಕೊಳ್ಳುತ್ತಾರೆ. ಇವು ಇವರಿಗೆ ಕಾವ್ಯಪ್ರತಿಮೆಗಳೂ ಹೌದು, ಸಾಮಗ್ರಿಗಳೂ ಹೌದು. ಇದಲ್ಲದೆ ಇವರು ಪುರಾಣ ಮತ್ತು ಚರಿತ್ರೆಗಳಿಂದಲೂ ರೂಪಕ ಮತ್ತು ಸಾಮಗ್ರಿಗಳನ್ನು ಪಡೆಯುತ್ತಾರೆ. ಅಕ್ಕ (ಪು. 33), ಅಭಿನವ ಅಕ್ಕ (ಪು.36), ಹೀಗೊಂದು ಸ್ವಗತ (ಪು.59), ಕೃತ್ತಿಕಾ (ಪು.144), ಅಲ್ಪಾಯು ಬಸವ (ಪು.149), ಕಿಂಡಿಯೊಳಗೊಂದು ಸತ್ಯ (ಪು.152), ಗಾಂಧಿ ಎಂದರೆ (ಪು.152), ಹರಿದ ನೋಟು (ಪು.165) ವಿಕ್ರಮನಿಗೊಂದು ಪಿಸುಮಾತು (ಪು.179), ದ್ರೌಪದಿ (ಪು.183), ಸೀತಾ (ಪು.185), ಮೀರಾಬಾಯಿ ಹಾಡುತ್ತಾಳೆ (ಪು.187), ದೇವಕಿ (ಪು.224), ಮೀರಬೇಕು (ಪು.281) ಹೀಗೆ ಇವರಲ್ಲಿ ಸಾಕಷ್ಟು ಪುರಾಣ ಮತ್ತು ಚರಿತ್ರೆಯ ಪಾತ್ರ, ಪ್ರಸಂಗಗಳಿಗೆ ಸಂಬಂಧಿಸಿದ ಕವಿತೆಗಳಿವೆ. ಪ್ರಶ್ನೆ, ಜಿಜ್ಞಾಸೆ ಮತ್ತು ಮರುನಿರೂಪಣೆಗಳು ಇಲ್ಲಿನ ಮುಖ್ಯ ಕಾವ್ಯಕ್ರಮಗಳು. ಇಲ್ಲೆಲ್ಲ ಪುರಾಣ ಮತ್ತು ಚರಿತ್ರೆಗಳಲ್ಲಿ ಹೆಣ್ಣನ್ನು ನಿಕೃಷ್ಟವಾಗಿ ಕಾಣಲಾಗಿರುವ ಬಗ್ಗೆ ಮತ್ತು ಅದು ಇಂದಿಗೂ ಮುಂದುವರೆದಿರುವ ಬಗ್ಗೆ ಪ್ರತಿರೋಧ ವ್ಯಕ್ತವಾಗಿದೆ. ಪುರಾಣ ಚರಿತ್ರೆಗಳು ನಮ್ಮ ಆಧುನಿಕ ಮಹಿಳಾ ಕಾವ್ಯದಲ್ಲಿ ವರ್ತಮಾನದ ಪ್ರತಿನಿಧೀಕರಣಕ್ಕೆ ಬಳಕೆಯಾಗಿರುವಂತೆ ಪ್ರಭಾವತಿಯವರಲ್ಲು ವರ್ತಮಾನದ ಕಥನಕ್ಕೆ ಬಳಕೆಯಾಗಿವೆ. ವರ್ತಮಾನದ ಲಿಂಗತಾರತಮ್ಯವನ್ನು ಪ್ರತಿರೋಧಿಸುವ ಪ್ರತೀಕಗಳಾಗಿ ಬಳಕೆಯಾಗಿವೆ. ಅಕ್ಕ, ಸೀತಾ, ಬುದ್ಧ ದ್ರೌಪದಿ, ಮೀರಾ, ದೇವಕಿ, ಕೃತ್ತಿಕಾ, ಗಾಂಧಿ, ಇತ್ಯಾದಿ ಪಾತ್ರಕವಿತೆಗಳಲ್ಲಿ ಚರಿತ್ರೆ ಮತ್ತು ಪುರಾಣದ ಪಾತ್ರಗಳನ್ನು ಪ್ರಭಾವತಿ ಅವರು ಕೆಲವೊಮ್ಮೆ ತಮ್ಮ ಎದುರು ನಿಲ್ಲಿಸಿಕೊಂಡು ಪ್ರಶ್ನಿಸುತ್ತಾರೆ ಮತ್ತು ಸಂವಾದಿಸುತ್ತಾರೆ. ಕೆಲವೊಮ್ಮೆ ಮರುನಿರೂಪಿಸುತ್ತಾರೆ. ಹಾಗೆಯೆ ಕೆಲವೊಮ್ಮೆ ಅಂದನ್ನು ಇಂದಿಗೆ ಅನ್ವಯಿಸಿ ನೋಡುವುದನ್ನು ಪ್ರಶ್ನಿಸುತ್ತಾರೆ ಕೂಡ! (ನೋಡಿ; ಹೀಗೊಂದು ಸ್ವಗತ. ಪು-59) ಹೀಗೆ ಪ್ರಶ್ನಿಸುವುದು ಇವರ ಕಾವ್ಯದ ಕ್ರಮಗಳಲ್ಲಿ ಒಂದು ಮುಖ್ಯವಾದ ಕ್ರಮ.
ನಮ್ಮ ಕಾವ್ಯಪರಂಪರೆಯಲ್ಲಿ ಕಾವ್ಯವ್ಯಾಖ್ಯಾನ, ಕಾವ್ಯಕಟ್ಟುವ ಕ್ರಮ ಇತ್ಯಾದಿಗಳನ್ನು ಒಳಗೊಂಡ ಕಾವ್ಯತತ್ವವು ಕಾವ್ಯದ ರೂಪದಲ್ಲೆ ಅಪಾರ ಪ್ರಮಾಣದಲ್ಲಿ ಸೃಷ್ಟಿಯಾಗಿದೆ. ಪ್ರಭಾವತಿಯವರೂ ಕೂಡ ಇಂತಹ ಸಾಕಷ್ಟು ಕವಿತೆಗಳನ್ನು ಬರೆದಿದ್ದಾರೆ. ಕವನವೆಂದರೆ ಏನು? ಈಗಿನ ಕವನಗಳು ಹೇಗಿವೆ? ಕವನ ಹುಟ್ಟುವುದು ಯಾವಾಗ? ಅದು ಹೇಗೆ ಹುಟ್ಟುತ್ತದೆ? ಕವನ ಅರ್ಥವಾಗುವುದು ಎಂದರೆ ಏನು? ಇಂತಹ ಹಲವಾರು ಪ್ರಶ್ನೆಗಳಿಗೆ ಉತ್ತರಿಸುವ ಹಾಗೆ ಇಂತಹ ಕವನಗಳಿವೆ.
ಆಳದ ಆಳದ ಆಳದಲ್ಲೆಲ್ಲೋ ಅಡಗಿದ್ದ ಕಾವು
ಮರುಹುಟ್ಟು ಪಡೆದದ್ದೆ ಒಂದು ನೋವು
ಹೀಗೆ ಬಂದು ನಿಶ್ಚಿಂತೆಯಿಂದ
ಮಗುವಿನಂತೆ ಮಲಗಿದೆ ಈ ಕವನವೆಂಬ ಕಾವ್ಯ (ಪು.5)
ಪಾತಿವ್ರತ್ಯದ ಸೋಗಿನಲ್ಲಿ ಎಲ್ಲವನ್ನೂ ನುಂಗುತ್ತಾ
ಅರಗಿಸಿಕೊಳ್ಳುತ್ತಾ ಮತ್ತೆ ಮತ್ತೆ ಫಲವಾಗುತ್ತಾ
ನಡೆದಿರುವ ಈ ವಿಷಚಕ್ರದ ಅಡಿಯಲ್ಲಿ
ಕುಳಿತೇ ಕನಸು ಕಾಣುವ ಈ ಕೊಂಚ ಹೊತ್ತು
ಕವನ ಹುಟ್ಟುವ ಹೊತ್ತು. (ಪು.7)
ಈ ಕವನ ಹುಟ್ಟಿದ ನಂತರವೆ ಗೊತ್ತು ಇದರ ಪ್ರವರ
ಅದುವರೆಗೂ ಇದು ಅಜ್ಞಾತ ಅಜಾತ (ಪು. 10)
ಈ ಪದ್ಯಗಳಿವೆ ನೋಡಿ ಇವು.. ..
ಪ್ರತ್ಯಕ್ಷವಾಗಿಬಿಡುವ ದೇವರಿಗೆ ಭಕ್ತ
ಕೇಳುವ ವರ ಮುಂಚೆಯೇ ತಿಳಿಯಲ್ಲವಲ್ಲಾ ಆ ರೀತಿ (ಪು.67)
ಆರ್ಥವಾದವರಿಗೊಂದು ಅರ್ಥ ಅರ್ಥವಾಗದವರಿಗಿನ್ನೊಂದು ಅರ್ಥ
ಕೊನೆಗೆ ಏನೊಂದೂ ಹೊಳೆಯದೆ ಹೋದಾಗ ಹಾ! ಅದೇ ಬದುಕಿನ ಜಟಿಲತೆ
ಬದುಕೇ ಹೀಗಲ್ಲವೇ ಸುಲಭದಲ್ಲಿ ಅರ್ಥವಾಗುವುದಿಲ್ಲ. ಕ್ಲಿಷ್ಟ, ಕ್ಲೀಷೆ.
ಈ ಚಿತ್ರವೂ ಅದರಂತೆ ಈ ಕಾವ್ಯವೂ ಅದರಂತೆ (ಪು.77)
ಎಲ್ಲ ಬೋನ್ಸಾಯಿ ಗಿಡಗಳು.. .. ..
ನಮ್ಮದು ಮರೆಯಬೇಡ ಅವರಿದ್ದಾರಲ್ಲ ಕತ್ತರಿಸಲು
ಅದರ ಆಳ ಅಗಲ ರೆಕ್ಕೆ ಪುಕ್ಕ ಅಕ್ಕ ಪಕ್ಕ .. ..
ಕುವೆಂಪು ಕುಮಾರವ್ಯಾಸ ನೋಡಬೇಡ
ಅವರ ಕತ್ತರಿಗಿಂತ ಬೇಕೇ ವ್ಯಾಸ ವಾಲ್ಮೀಕಿ? (ಪು. 140)
ಈ ಹರಿದ ನೋಟು ಬರುವುದಿಲ್ಲ ಬಿಡಿ ಯಾವುದಕ್ಕೂ
ಪಡೆದು ಬಿಡಿ ಹೊಸ ನಾಣ್ಯ
ಒಮ್ಮೆ ಒದಗಲಿ ಈ ಬಳ್ಳಿಗೂ ಹೂ ಬಿಡುವ ಭಾಗ್ಯ (ಪು. 166)
ಗುಡಿಯ ಗೋಪುರದ ಸೌಂದರ್ಯಕ್ಕೇ ಮನಸೋತು
ಗರ್ಭಗುಡಿ ಪ್ರವೇಶಿಸುವುದ ಮರೆತವನೊಬ್ಬ
ಪ್ರಾಕಾರದ ಸುತ್ತು ಹಾಕುವಾಗಲೆ ಬಳಲಿ ನೀರಾದವನೊಬ್ಬ
ಇವರ ನಡುವೆ ಸತ್ಯ ಹುಡುಕಬೇಕಿದೆ (ಪು. 170)
.. .. ಆಗಿ ಹಳೆಯದು
ಈಗೊಂದು ಮೊಬೈಲು ಹಿಡಿದು
ಕುಟ್ಟುತ್ತಿದ್ದರೆ ಸಾಕು ಕವಿತೆ ರೆಡಿ (ಪು. 285)
ಬೇಕೆಂದೇ ಇಲ್ಲಿ ಇವರ ಕವನಗಳ ಕೊಲಾಜ್ ಮಾಡಲಾಗಿದೆ. ಒಂದು ಕವಿತೆಯ ಮೂಗು, ಇನ್ನೊಂದು ಕವಿತೆಯ ಕಣ್ಣು, ಮತ್ತೊಂದರ ತುಟಿ, ಮಗದೊಂದರ ಕಾಲು, ಮಗಮಗದೊಂದರ ಎದೆ ಪ್ರಾಣಗಳನ್ನು ಸೇರಿಸಿ ಕೊಲಾಜು ಮಾಡಿ ಹೊಸದೊಂದೇ ಕವಿತೆ ಕಟ್ಟುವುದು ಸ್ವಲ್ಪ ಇಂಟರೆಸ್ಟಿಂಗ್ ಆಗಿ ಕಾಣುತ್ತದೆ. ಒಂದು ಮಾತು, ಪ್ರಭಾವತಿಯವರ ಒಟ್ಟಾರೆ ಕಾವ್ಯದ ಲಕ್ಷಣದಲ್ಲಿ ನಮ್ಮ ಇಡೀ ಪರಂಪರೆಯ ಬಿಡಿ ಬಿಡಿ ಕೊಲಾಜೂ ಕೂಡ ಇದೆ. ಈ ಇಲ್ಲಿನ ಕಾವ್ಯ ಜಿಜ್ಞಾಸೆಯ ಕೊಲಾಜು ಕವಿತೆಯನ್ನು ನೋಡಿದರೆ ಅರ್ಧ ಕಟ್ಟಿ ನಿಂತು ಹೋದ ಮನೆಯಂತೆ, ಸುಣ್ಣ ಬಣ್ಣ ಮಾಡದ ಮನೆಯಂತೆ ಕಾಣಬಹುದು. ಥಳಕು ಬಳುಕು ಸುಂಗಾರ ಮಾಡದೆ ಉಳಿಸಿದ ಕವಿತೆಯಂತೆ ಕೂಡ ಪ್ರಭಾವತಿಯವರ ಹಲವು ಕವಿತೆಗಳು ಕಾಣುತ್ತವೆ. ಈಗಾಗಲೇ ಹೇಳಿರುವಂತೆ ಪ್ರಭಾವತಿಯವರಿಗೆ ಕವಿತೆ ಎನ್ನುವುದು ಒಂದು ಫಾರಮ್ಮು ಅಷ್ಟೆ. ಅವರಿಗೆ ಅದರ ಸೌಂದರ್ಯಾತ್ಮಕತೆಗಿಂತ ತಮಗೆ ಹೇಳಲಿರುವುದನ್ನು ಹೇಳುವುದು ಹೆಚ್ಚು ಮುಖ್ಯ ಅನ್ನಿಸಿದೆ. ಆದರೆ ಗುಡಿಯ ಗೋಪುರದ ಸೌಂದರ್ಯಕ್ಕೇ ಮನಸೋತು ಗರ್ಭಗುಡಿಯನ್ನೇ ಪ್ರವೇಶಿಸದೆ ಹೋಗುವ ನಾಸ್ತಿಕ ಭಕ್ತರಂತೆ ಓದುಗರು ಪ್ರಭಾವತಿಯವರ ಕಾವ್ಯವನ್ನು ಮೇಲುನೋಟಕ್ಕೆ ನೋಡಿ ತೆರಳಿದರೆ ಅದರಿಂದ ಭಕ್ತರಿಗೆ ನಷ್ಟವೇ ವಿನಾ ಗುಡಿಗಲ್ಲ.
ದೂರ ಸರಿಯುತ್ತೇವೆ, ವರ್ಷ, ಚಕ್ರ ಇಂತಹ ಹಲವು ಪದ್ಯಗಳು ಜಾತಿ, ಧರ್ಮ, ಸಾಮಾಜಿಕ ಸ್ಥಗಿತತೆ ಇತ್ಯಾದಿಗಳ ಕುರಿತ ಜಿಜ್ಞಾಸೆಯನ್ನು ನಡೆಸಿದರೆ ಹಂಬಲ, ನರಸತ್ತವರು, ನನ್ನೊಡನಿದ್ದೂ ನನ್ನಂತಾಗದೆ ಇಂತಹ ಕವಿತೆಗಳು ತನ್ನತನದ ಮತ್ತು ಹೆಣ್ಣುತನದ ಪ್ರಶ್ನೆಗಳನ್ನು ಚಿಂತಿಸುತ್ತವೆ. ಹಾಗೆಯೆ ಸಂಬಂಧಗಳು, ಕನವರಿಕೆಗಳು, ಜಂಬೂಫಲ ಇಂತಹ ಕವಿತೆಗಳು ಕೌಟುಂಬಿಕ ಸಂಬಂಧಗಳ ಬಗ್ಗೆ ಜಿಜ್ಞಾಸೆ ನಡೆಸುತ್ತವೆ. ಇಲ್ಲಿ ಉದಾಹರಿಸಿರುವ ಎಲ್ಲ ಪದ್ಯಗಳೂ ಇವರ ಮೊದಲ ಸಂಕಲನದ ಪದ್ಯಗಳು. ಇವರ ಇಡೀ ಸಮಗ್ರ ಕಾವ್ಯವನ್ನು ಹೀಗೆ ಲೋಕಸಂಬಂಧಗಳು. ಕೌಟುಂಬಿಕ ಸಂಬಂಧಗಳು ಮತ್ತು ಹೆಣ್ಣಿನ ಸ್ವಂತಿಕೆಯ ಪ್ರಶ್ನೆಗಳು ಎಂದು ವಗರ್ೀಕರಿಸಬಹುದು. ಆದರೂ ಇವರದ್ದು ಇವೆಲ್ಲವೂ ಬೆರೆತುಕೊಂಡ ಕಾವ್ಯಪಾಕ ಆಗಿದೆ. ಜಾತಿಯ ಪ್ರಶ್ನೆಗಳು, ಧರ್ಮದ ಪ್ರಶ್ನೆಗಳು, ಆಧುನಿಕತೆ-ಸಾಂಪ್ರದಾಯಿಕತೆಯ ಘರ್ಷಣೆಯ ಪ್ರಶ್ನೆಗಳು, ಜೊತೆಜೊತೆಗೆ ಕರ್ಣರು ಜನಿಸುತ್ತಿದ್ದಾರೆ, ಕುಂತಿಯರು ನಿಟ್ಟುಸಿರು ಬಿಡುತ್ತಿದ್ದಾರೆ, ಗಾಂಧಾರಿಯರು ಹೊಟ್ಟೆ ಹೊಸೆಯುತ್ತಿದ್ದಾರೆ, ದ್ರೌಪದಿಯರು ರೋಷಗೊಳ್ಳುತ್ತಿದ್ದಾರೆ, ಕೃಷ್ಣರು ಕುತಂತ್ರ ನಡೆಸುತ್ತಲೆ ಇದ್ದಾರೆ, ಚಿನ್ನದ ಜಿಂಕೆಗಾಗಿ ಮತ್ತೆ ನಡೆದಿದೆ ಹೋರಾಟ, ರಾವಣರ ಕಾಟ, ಏಕೆ ಮತ್ತೆ ಮತ್ತೆ ಹೀಗಾಗುತ್ತದೆ? ಇಂತಹ ಸಾಮಾಜಿಕ ಸ್ಥಗಿತತೆಯ ಕುರಿತ ವಿಹ್ವಲ ಪ್ರಶ್ನೆಗಳು ಇಲ್ಲಿ ಮುಖ್ಯವಾಗಿ ಕೇಳಲ್ಪಟ್ಟಿವೆ. ಆದರೆ ಅಷ್ಟೇ ಮುಖ್ಯವಾಗಿ ಇಲ್ಲಿ ಲಿಂಗೀಯತೆಯ ಪ್ರಶ್ನೆಗಳು ಕೂಡ ಕೇಳಲ್ಪಟ್ಟಿವೆ. ಕೌಟುಂಬಿಕತೆ, ಜಾತಿ, ಧರ್ಮ, ಆಚರಣೆ, ಆಧುನಿಕತೆ, ಆಥರ್ಿಕತೆ, ಬೌದ್ಧಿಕ ದಿವಾಳಿತನದ ಪ್ರಶ್ನೆಗಳ ಎದುರಿಗೆ ಲಿಂಗೀಯ ಪ್ರಶ್ನೆಗಳು ಗೌಣವಲ್ಲ; ಅವು ಕೂಡ ಅಷ್ಟೇ ಮುಖ್ಯ ಮತ್ತು ಪ್ರಸ್ತುತ ಎಂಬುದು ಇವರ ಸಮಗ್ರ ಕಾವ್ಯದ ಒಂದು ಸ್ಥಾಯಿ ಪ್ರಜ್ಞೆಯಾಗಿದೆ. ಹಾಗೆ ನೋಡಿದರೆ ಈ ಎಲ್ಲ ಪ್ರಶ್ನೆಗಳಲ್ಲು ಲಿಂಗೀಯತೆಯು ಅಡಗಿಕೊಡದ್ದೆ ಹೌದು. ಇವೆಲ್ಲವುಗಳ ಹೊರತಾಗಿ ಎಲ್ಲಾದರೂ ಲಿಂಗೀಯತೆ ಇರಲು ಸಾಧ್ಯವೇ? ಆದರೆ ನಮ್ಮ ಪ್ರತಿಷ್ಟಿತ ಸಾಹಿತ್ಯ ಹಾಗೆ ಭಾವಿಸುವಂತೆ ಮಾಡಿದೆಯಲ್ಲ!
ಡಾ.ಎಸ್.ವಿ.ಪ್ರಭಾವತಿಯವರು ಅವರ ಸಮಗ್ರ ಕಾವ್ಯಕ್ಕೆ ಮುನ್ನುಡಿ ಬರೆಯಲು ಕೋರಿದುದು ಅವರು ನನಗೆ ತೋರಿದ ಪ್ರೀತಿ ಮತ್ತು ಗೌರವ ಎಂದೇ ನಾನು ಬಾವಿಸುತ್ತೇನೆ. ಅಂತಹ ಪ್ರೀತಿ ಮತ್ತು ಗೌರವವನ್ನು ಮರುಸಲ್ಲಿಸುವಂತೆ ಈ ಮುನ್ನುಡಿಯೂ ಇದೆಯೇ? ಇರಲಿ; ಕಾವ್ಯಭಾಷೆ ಮತ್ತು ಕಾವ್ಯದ ಆಕೃತಿಗಳಲ್ಲಿ ಮಹಿಳೆಯದ್ದೆ ಆದಂತಹ ಒಂದು ಅನನ್ಯತೆ ಅಥವಾ ಅನನ್ಯತೆಗಳನ್ನು ಆಧುನಿಕ ಮಹಿಳಾ ಕಾವ್ಯವು ಪಡೆದಿದೆಯೇ? ಪ್ರಭಾವತಿಯವರು ತಮ್ಮದೇ ಆದ ಕಾವ್ಯಭಾಷೆಯನ್ನು ರೂಪಿಸಿಕೊಂಡಿದ್ದಾರೆಯೆ? ಈ ಬಗ್ಗೆ ಮರುಚಿಂತಿಸಬೇಕಿದೆ. ಬರಿ ಇವರ ದೃಷ್ಟಿಯಿಂದ ಮಾತ್ರ ಅಲ್ಲ, ಇದು ಇಡೀ ಮಹಿಳಾ ಕಾವ್ಯದ ದೃಷ್ಟಿಯಿಂದ ಕೇಳಿಕೊಳ್ಳಬೇಕಾದ ಪ್ರಶ್ನೆ. ಗಂಡು ಮೆಟ್ಟಿನ ನಾಡು, ಗಂಡು ಮೆಟ್ಟಿನ ಭಾಷೆ ಎಂಬ ಮಾತುಗಳನ್ನು ಕೇಳಿದಾಗೆಲ್ಲ ತಮಾಶೆ ಎನ್ನಿಸುತ್ತದೆ, ಆದರೂ ಸೀರಿಯಸ್ಸಾಗಿ ಕೇಳುವುದಾದರೆ ಹೆಣ್ಣಿನ ಗಂಟಲಿನಿಂದ ಹೆಣ್ಣಿನ ಭಾಷೆಯೊಂದು ಅಥವಾ ಹೆಣ್ಣುಭಾಷೆಗಳು ಬರುತ್ತಿವೆಯೆ? ಓದುಗರ ಮೈದಾನಕ್ಕೆ ಈ ಪ್ರಶ್ನೆ ಒಗೆದಿದ್ದೇನೆ, ಇರಲಿ; ಮತ್ತೆ ಪ್ರಭಾವತಿಯವರ ಕಾವ್ಯಕ್ಕೆ ಬರೋಣ;
ಮತ್ತೆ ಮತ್ತೆ ಪುನರಾವರ್ತನೆ ಆಗುವ ಸಾವು, ಭೂಮಿ, ಆಕಾಶ, ಕಡಲು, ನದಿ, ಮರ, ಮಳೆ ಇಂತಹ ರೂಪಕಗಳ ಎನಿಗ್ಮ ಏನಿದೆಯಲ್ಲ ಈ ಲೋಕವೆ ಇವರ ಕಾವ್ಯದ ತುಂಬ ತುಂಬಿಕೊಂಡಿರುವ ಲೋಕವಾಗಿದೆ. ಈ ಭೂಮಿ, ಆಕಾಶ, ನದಿ, ಮಳೆ, ಮರಗಳಿಗೆಲ್ಲ ಲಿಂಗವಿದೆಯೆ? ಇವರ ಕವಿತೆಗಳ ಪ್ರಕಾರ ಇದೆ. ಇವೆಲ್ಲವೂ ಲೋಕದಲ್ಲಿ ಸ್ತ್ರೀಲಿಂಗಿಗಳು. ಮಹಿಳಾ ಪ್ರತೀಕಗಳು. ಪುರಾಣ ಮತ್ತು ಚರಿತ್ರೆಯ ಅಸಂಖ್ಯ ಮಹಿಳಾಪಾತ್ರ ಪ್ರತೀಕಗಳಂತೆಯೆ ಇವು ಕೂಡ ನಿತ್ಯನಿರಂತರ ಸ್ತ್ರೀ ಪ್ರತೀಕಗಳು. ಹಬ್ಬ ಹರಿದಿನಗಳು ಕೂಡ ಇಲ್ಲಿ ಇಂತಹ ಪ್ರತೀಕಗಳಾಗಿಯೆ ಬರುತ್ತವೆ. ಹಬ್ಬಗಳಿಗೂ ಇಲ್ಲಿ ಲಿಂಗವುಂಟು. ಈ ಎಲ್ಲ ಪ್ರತೀಕಗಳಲ್ಲಿ ವಯಕ್ತಿಕತೆ-ಸಾಮಾಜಿಕತೆ, ಚರಿತ್ರೆ-ಆತ್ಮಚರಿತ್ರೆ, ವರ್ತಮಾನ-ಪುರಾಣ-ಭವಿಷ್ಯತ್ತುಗಳೆಲ್ಲ ಕಲಸಿಹೋಗುತ್ತವೆ. ನದಿಗೆ? ನದಿಗೂ ಲಿಂಗವಿದೆ. 'ಹರಿಯುತ್ತಿರಲಿ ನದಿ' ಎಂದರೆ ಮಹಿಳಾ ನದಿ ಹರಿಯುತ್ತಿರಲಿ ಎಂದೇ ನಾವು ಓದಿಕೊಳ್ಳಬೇಕು. ಹಾಗೆ ಇವರ ಸಮಗ್ರಕಾವ್ಯ ನಮ್ಮನ್ನು ನಿದರ್ೆಶಿಸುತ್ತದೆ. ಇಂತಹ ಕಾವ್ಯ ನೀಡಿದ ಪ್ರಭಾವತಿಯವರಿಗೆ ಧನ್ಯವಾದಗಳು. ಅರೆ ಇದೇನೂ ಇವರ ಸಮಗ್ರ ಕಾವ್ಯ ಅಲ್ಲ, ಇದು ಇವರ ಈವರೆಗಿನ ಸಮಗ್ರ ಮಾತ್ರ. ಇದು ಪ್ರಕಟವಾದ ನಂತರವೂ ಇವರು ಕವಿತೆಗಳನ್ನು (ಮಹಾಕಾವ್ಯವನ್ನು?) ಬರೆಯಬಹುದು. ಅಷ್ಟಕ್ಕು ಸಮಗ್ರ ಅನ್ನುವುದು ಎಲ್ಲಾದರೂ ಉಂಟೇ? ಬರೆದದ್ದೆಲ್ಲವೂ ಪ್ರಕಟವಾಗುತ್ತದೆಯೆ? ಅಷ್ಟಕ್ಕು ಹಾಗೆ ಪ್ರಕಟವಾದದ್ದೆಲ್ಲವೂ ಸಮಗ್ರವಾಗಿ ಸಮಾಜಕ್ಕೆ ಬೇಕಾಗುತ್ತದೊ? ಇರಲಿ, ಇಲ್ಲಿಗೆ ಈ ಪ್ರವರ ನಿಲ್ಲಿಸುತ್ತೇನೆ, ನಮಸ್ಕಾರ.
-ಡಾ.ರಾಮಲಿಂಗಪ್ಪ. ಟಿ.ಬೇಗೂರು
ಮಹಾರಾಣಿ ಮಹಿಳಾ ಕಲಾ ಕಾಲೇಜು
ಶೇಷಾದ್ರಿ ರಸ್ತೆ, ಬೆಂಗಳೂರು - 560001
begur41@gmail.com
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ