ಪುಟಗಳು

ಬುಧವಾರ, ಜೂನ್ 17, 2009

ಸಾಹಿತ್ಯದ ಅನುಸಂಧಾನಗಳು-ಸಂವಹನ




ಸಾಹಿತ್ಯವನ್ನು ಸಮಾಜದ ಬೇರೆ ಬೇರೆ ವಲಯಗಳಲ್ಲಿ, ಬೇರೆ ಬೇರೆ ಸಂದರ್ಭಗಳಲ್ಲಿ ನಾವು ಬಳಸುತ್ತೇವೆ. ಕೆಲವೊಮ್ಮೆ ಸಾಹಿತ್ಯದೊಂದಿಗೆ ಒಡನಾಟ, ಮುಖಾಮುಖಿ ನಡೆಸುತ್ತ ಸಾಹಿತ್ಯ ಸಂಬಂಧಿ ಗೋಷ್ಠಿ, ಚರ್ಚೆ, ವಿಮರ್ಶೆ, ವಿಚಾರ ಸಂಕಿರಣ, ಕಮ್ಮಟ, ಹಬ್ಬ, ಕೇಳಿಕೆ, ಸಮ್ಮೇಳನ, ಜಾತ್ರೆ, ಭಜನೆ, ತಾಳಮದ್ದಲೆ, ನಾಟಕ, ಹರಿಕತೆ ಹಾಡುಗಾರಿಕೆ ಇತ್ಯಾದಿಗಳನ್ನು ನಡೆಸುತ್ತೇವೆ ಅಲ್ಲದೆ ವಯಕ್ತಿಕವಾದ ಸಾಹಿತ್ಯದ ಓದು, ಶೈಕ್ಷಣಿಕವಾದ ಸಾಹಿತ್ಯದ ಕಲಿಕೆ-ಬೋಧನೆಗಳೂ ನಮ್ಮಲ್ಲಿವೆ. ಹೀಗೆ ವ್ಯಕ್ತಿ ಮತ್ತು ಸಮುದಾಯದ ಎರಡೂ ನೆಲೆಯಲ್ಲಿ ಏಕಾಂತದ ಕ್ರಿಯೆಯಾಗಿ ಮತ್ತು ಸಾಮುದಾಯಿಕ ಕ್ರಿಯೆಯಾಗಿ ಎರಡೂ ಬಗೆಯಲ್ಲಿ ಸಾಹಿತ್ಯದ ಹೊಕ್ಕು ಬಳಕೆಗಳಿವೆ. ಇಂಥ ಸಾಹಿತ್ಯದ ಜೊತೆಗಿನ ನಮ್ಮ ಹೊಕ್ಕು ಬಳಕೆಗಳನ್ನು ಇಲ್ಲಿ ಸಾಹಿತ್ಯದ ಅನುಸಂಧಾನಗಳು ಎನ್ನಲಾಗಿದೆ. ಇಂಥ ಹತ್ತಾರು ಆಚರಣೆಗಳಲ್ಲಿನ ಭಿನ್ನ ಅನುಸಂಧಾನಗಳು ಸಾಹಿತ್ಯದ ಭಿನ್ನ ಭಿನ್ನ ಸಂವಹನ ಸಾಧ್ಯತೆಗಳನ್ನು, ಬಹುಮುಖಿಯಾದ ಸಂವಹನ ಸ್ವರೂಪಗಳನ್ನು ತೋರಿಸುತ್ತವೆ ಎಂಬುದು ಇಲ್ಲಿನ ತಿಳುವಳಿಕೆಯಾಗಿದೆ.
ಇಂತಹ ಸಾಹಿತ್ಯದ ಅನುಸಂಧಾನಗಳಲ್ಲಿನ ಸಂವಹನದ ಸ್ವರೂಪವನ್ನು ಚರ್ಚಿಸುವ ಮೊದಲು ಸಾಹಿತ್ಯ ಎನ್ನುವುದು ಒಂದೇನಾ ಎಂದು ಕೇಳಿಕೊಳ್ಳಬೇಕಾಗಿದೆ. ನಮ್ಮಲ್ಲಿ ಪ್ರತಿಷ್ಠಿತ ಸಾಹಿತ್ಯ, ಮೌಖಿಕ ಸಾಹಿತ್ಯ, ಜನಪ್ರಿಯ ಸಾಹಿತ್ಯ, ಚಿತ್ರಸಾಹಿತ್ಯ, ಹೀಗೆ ಹಲವು ಸಾಹಿತ್ಯಗಳು ಇವೆ. ಜನಪ್ರಿಯ ಸಾಹಿತ್ಯ, ಚಿತ್ರಸಾಹಿತ್ಯಗಳು ಪ್ರತಿಷ್ಠಿತ ಸಾಹಿತ್ಯದ ಹೊರಗೇ ಉಳಿದಿವೆ. ಮೌಖಿಕ ಸಾಹಿತ್ಯದೊಂದಿಗೆ ಪ್ರತಿಷ್ಠಿತ ಸಾಹಿತ್ಯವು ಮುಖಾಮುಖಿ ಆಗುತ್ತಿದ್ದರೂ, ಮೌಖಿಕಕ್ಕೆ ಇನ್ನೂ ಎರಡನೆ ದರ್ಜೆಯತನ ಹೋಗಿಲ್ಲ. ಮೌಖಿಕ ಸಾಹಿತ್ಯವನ್ನು ಮೋಸ್ಟ್ ಎಂಡೇಂಜರ್‍ಡ್ ಸ್ಪೀಸೀಸ್ ಎಂದು ಭಾವಿಸಿರುವ ಪ್ರತಿಷ್ಠಿತ ಸಾಹಿತ್ಯವು ಅದನ್ನು ಭರದಿಂದ ಲಿಪೀಕರಣ ಮಾಡುತ್ತಿದೆ. ಪ್ರತಿಷ್ಠಿತ ಸಾಹಿತ್ಯವು ಮೌಖಿಕ ಸಾಹಿತ್ಯವನ್ನು ಲಿಪೀಕರಣ ಮಾಡಿದಾಕ್ಷಣ ಮೌಖಿಕ ಸಾಹಿತ್ಯವೆನ್ನುವುದು ನಷ್ಟವಾಗಿಬಿಡುವುದಿಲ್ಲ. ಏನೇ ಇರಲಿ ಈ ಒಂದೊಂದು ಸಾಹಿತ್ಯಗಳೂ ಅಜಮಾಸು ತಮ್ಮದೇ ಆದ ಜನವಲಯಗಳನ್ನು ಹೊಂದಿವೆ ಮತ್ತು ಇಲ್ಲೆಲ್ಲ ಬದುಕಿನ ವಿನ್ಯಾಸಕ್ಕೂ ಮತ್ತು ಸಾಹಿತ್ಯದ ಅನುಸಂಧಾನದ ವಿನ್ಯಾಸಕ್ಕೂ ಒಂದು ಅನ್ಯೋನ್ಯವಾದ ಸಂಬಂಧವಿದೆ. ಅಲ್ಲದೆ ಇವುಗಳ ಅನುಸಂಧಾನ ಸ್ವರೂಪಗಳು, ವಿನ್ಯಾಸಗಳು ಭಿನ್ನ ಭಿನ್ನವಾಗಿವೆ. ಹಾಗಾಗಿ ಇವುಗಳ ಸಂವಹನ ಸ್ವರೂಪಗಳೂ ಭಿನ್ನ ಭಿನ್ನವಾಗಿವೆ.
ಆಧುನಿಕ ಪ್ರತಿಷ್ಠಿತ ಸಾಹಿತ್ಯವು ಹೆಚ್ಚು ಕಡಿಮೆ ನಗರೀಕರಣ, ಕೈಗಾರಿಕೀಕರಣ, ತಂತ್ರಜ್ಞಾನೀಕರಣ, ಶೈಕ್ಷಣೀಕರಣ, ವ್ಯಾಪಾರೀಕರಣ, ಮಾಹಿತೀಕರಣ, ಆಧುನೀಕರಣಗಳಿಗೆ ಮತ್ತು ಇವೆಲ್ಲದರ ಫಲಿತವಾದ ಆಧುನಿಕೋತ್ತರತೆಗೆ ಗುರಿಯಾಗಿರುವ ಶಿಕ್ಷಿತ ಸಮುದಾಯದ ಓದುಗರಿಗೆ ಸೀಮಿತವಾಗುತ್ತಿದೆ. ವಿದ್ಯಾವಂತರೆಲ್ಲರೂ ಇದರ ಬಳಕೆದಾರರಲ್ಲ. ಸಾಹಿತ್ಯ ಎಲ್ಲರಿಗಲ್ಲ ಎನ್ನುವ ಒಂದು ವಾತಾವರಣ ನಮ್ಮಲ್ಲಿ ಇರುವ ಹಾಗಿದೆ. ಹಾಗಾಗಿ ಸಾಹಿತ್ಯ ಸಂವಹನವೆಂಬುದು ಇಂದು ಆಧುನಿಕೋತ್ತರತೆಯ ಭಿನ್ನ ಮುಷ್ಠಿಗಳಲ್ಲಿ ಸಾಪೇಕ್ಷವಾಗಿದೆ. ಸಾಹಿತ್ಯಗಳ ಸಂವಹನದ ಬಗ್ಗೆ ಮಾತಾಡುವಾಗ ಮೇಲ್ಕಂಡ ಆಧುನಿಕೋತ್ತರತೆಯನ್ನು ದಾಟುವ ಬಗ್ಗೆ, ಸಾಹಿತ್ಯಗಳ ಅನುಸಂಧಾನದ ಭಿನ್ನ ಸಮುದಾಯಗಳನ್ನು ನಿರಂತರ ಒಗ್ಗೂಡಿಸುವ ಇಲ್ಲವೇ ಸಹಬಾಳ್ವೆ ನಡೆಸುವಂತೆ ಕಾಯ್ದುಕೊಳ್ಳುವ ಬಗ್ಗೆ, ಸಾಹಿತ್ಯೇತರ ಸಮುದಾಯಗಳನ್ನು ಸಾಹಿತ್ಯದ ಓದುಗರು ಮತ್ತು ಗ್ರಾಹಕರನ್ನಾಗಿ ಮಾಡಿಕೊಳ್ಳುವ ಬಗ್ಗೆ, ಸಾಹಿತ್ಯದ ಸ್ವರೂಪ, ಅಭಿರುಚಿ ನಿರ್ಮಾಣ, ಸಾಹಿತ್ಯದ ಪ್ರಸಾರ, ಸಾಹಿತ್ಯ ರಚನೆಯ ಉದ್ದೇಶ ಮತ್ತು ಪರಿಕರಗಳ ಬಗ್ಗೆ, ಯಾರಿಗೆ ಯಾವ ರೀತಿಯ ಸಾಹಿತ್ಯ ಬೇಕಾಗಿದೆ ಎಂಬ ಬಗ್ಗೆ, ಇವತ್ತಿನ ಮೀಡಿಯಾಗಳ ಭರಾಟೆಯಲ್ಲಿ ಅಕ್ಷರರೂಪಿ ಲಿಪಿಕ ಸಾಹಿತ್ಯ ಮಾತ್ರವೇ ಶ್ರೇಷ್ಠವಾದದ್ದೇ? ಸಾಹಿತ್ಯದ ಪುಸ್ತಕರೂಪಿ ಓದು ಮಾತ್ರವೇ ಸಂವಹನದಲ್ಲಿ ಮುಖ್ಯವಾದದ್ದೇ? ಎಂಬ ಬಗ್ಗೆ, ಸಾಹಿತ್ಯ ಸಂಸ್ಕೃತಿಯ ಭಿನ್ನ ಶ್ರೇಣೀಕರಣಗಳ ಬಗ್ಗೆ ಹೀಗೆ ಬೇರೆ ಬೇರೆ ನೆಲೆಯಲ್ಲಿ ಪರಿಶೀಲನೆ ನಡೆಯಬೇಕಾಗಿದೆ.

ಮಾದ್ಯಮ-ಸಾಮಗ್ರಿ-ಸಂವಹನ
ಹಲವಾರು ಜನ ತಮ್ಮ ಉಪನ್ಯಾಸ, ಭಾಷಣಗಳಲ್ಲಿ ತಮ್ಮ ಅಭಿಪ್ರಾಯ ಮಂಡನೆಗೆ, ಸಮರ್ಥನೆಗೆ ಕಾವ್ಯ-ಸಾಹಿತ್ಯದ ಸಾಲುಗಳನ್ನು ಉಲ್ಲೇಖ ಮಾಡುವುದುಂಟು. ಇಂಥ ಬಳಕೆಗಳ ಮೂಲಕ ಸಾಹಿತ್ಯವನ್ನು ಜನರಿಗೆ ತಲುಪಿಸುವುದು ಭಾಷಣಕಾರರ ಉದ್ದೇಶ ಆಗಿರುವುದಿಲ್ಲ. ಸಾಹಿತ್ಯದ ಸಾಮಾಜಿಕ ಮಾನ್ಯತೆಯನ್ನು ವಯಕ್ತಿಕ ಅಭಿಪ್ರಾಯದ ಮಾನ್ಯತೆಗೆ, ಸಮರ್ಥನೆಗೆ ಬಳಸಿಕೊಳ್ಳುವ ಉದ್ದೇಶವೇ ಇಲ್ಲಿ ಮುಖ್ಯವಾಗಿರುತ್ತದೆ. ಕೆಲವೊಮ್ಮೆ ಬಜೆಟ್ ಮಂಡನೆಯ ಕಾಲದಲ್ಲಿ ರಾಜಕಾರಣಿಗಳು ಸಾಹಿತ್ಯದ ಸಾಲುಗಳನ್ನು ಬಳಸುವುದುಂಟು. ಏಕತಾನವನ್ನು ಮುರಿಯಲು ಮತ್ತು ತಮ್ಮ ಸಾಹಿತ್ಯ ಪಾಂಡಿತ್ಯವನ್ನು ಪ್ರದರ್ಶಿಸಲು ಸಾಹಿತ್ಯವನ್ನು ಬಳಸುವುದುಂಟು. ಇಂಥ ಎಲ್ಲ ಕಡೆ ಸಾಹಿತ್ಯವನ್ನು ತಮ್ಮ ಅಭಿಪ್ರಾಯ ಅಥವಾ ಸಿದ್ಧಾಂತಗಳನ್ನು ಸಮರ್ಥಿಸಿಕೊಳ್ಳಲು ಮಾತ್ರವಲ್ಲ ತಮ್ಮ ಅಭಿಪ್ರಾಯ ಅಥವಾ ಸಿದ್ಧಾಂತಗಳನ್ನು ಕೇಳುಗರಿಗೆ ಪರಿಣಾಮಕಾರಿಯಾಗಿ ತಲುಪಿಸಲು ಸಾಹಿತ್ಯವನ್ನು ಸಹಾಯಕ ಸಾಮಗ್ರಿಯಾಗಿ ಬಳಸುವುದುಂಟು. ಇಲ್ಲಿ ಸಾಹಿತ್ಯವನ್ನು ಜನರಿಗೆ ತಲುಪಿಸುವುದು ಉದ್ದೇಶ ಅಲ್ಲ. ತಮ್ಮ ಅಭಿಪ್ರಾಯ ಅಥವಾ ಸಿದ್ಧಾಂತಗಳನ್ನು ಜನಕ್ಕೆ ಸಂವಹನಗೊಳಿಸುವ ಸಾಧನ ಅಥವಾ ಮಾರ್ಗವಾಗಿ ಸಾಹಿತ್ಯವನ್ನು ಬಳಸುವುದು ಇಲ್ಲಿನ ಉದ್ದೇಶ. ಹೀಗೆ ಬಹಳಷ್ಟು ಸಾರಿ ಸಾಹಿತ್ಯದ ಜೊತೆ ನಾವು ನಡೆಸುವ ಅನುಸಂಧಾನವು(ಸಾಹಿತ್ಯವನ್ನು ನಾವು ಬಳಸುವ ಕ್ರಮವು) ಸಾಹಿತ್ಯ ಸಂವಹನವನ್ನೇ ಉದ್ದೇಶವನ್ನಾಗಿ ಹೊಂದಿರುವುದಿಲ್ಲ.
ಎಲ್ಲ ಸಾಹಿತ್ಯಗಳಿಗೂ ತಂತಾವೆ ಸಂವಹನ ಮಾದ್ಯಮಗಳಾಗುವ ಸಾದ್ಯತೆ ಮತ್ತು ಸಂವಹನ ಸಾಮಗ್ರಿಯಾಗುವ ಸಾಧ್ಯತೆ ಎರಡೂ ಇರುತ್ತವೆ. ಹಾಗೇ ಎಲ್ಲ ಸಾಹಿತ್ಯಗಳಿಗೂ ಸ್ವತಂತ್ರವಾದ ಅಸ್ತಿತ್ವವೂ ಇದೆ ಸಪ್ಲಿಮೆಂಟರಿಯಾದ, ಸಹಾಯಕ ಸಾಮಗ್ರಿಯಾಗುವ ಎಳೆಯೂ ಇರುತ್ತದೆ. ಬೇರೆ ಬೇರೆ ಆಶಯ, ಉದ್ದೇಶಗಳ ಈಡೇರಿಕೆಯ ಸಾಧನ ಸಾಮಗ್ರಿಯಾಗುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಒಂದೊಂದು ಸಾಹಿತ್ಯಗಳ ಸಂವಹನ ಸ್ವರೂಪ, ಶಕ್ತಿ, ಸಾಮರ್ಥ್ಯ, ವೈಶಾಲ್ಯ, ಮತ್ತು ಕಾಲ, ದೇಶ, ಸ್ಥಳಗಳನ್ನು ದಾಟಬಲ್ಲ ಸಾಧ್ಯತೆ, ಸಾಮರ್ಥ್ಯಗಳು ಭಿನ್ನಭಿನ್ನವಾಗಿರುತ್ತವೆ. ಸಾಹಿತ್ಯವನ್ನು ಬೇರೆ ಬೇರೆ ಉದ್ದೇಶಗಳ ಈಡೇರಿಕೆಗಾಗಿ ಬಳಸುವಾಗ ಆಯಾ ಉದ್ದೇಶಗಳ ಜೊತೆಗೆ ಸಾಹಿತ್ಯವೂ ಸಂವಹನವಾಗುತ್ತಿರುತ್ತದೆ. ಆದರೆ ಅಲ್ಲಿ ಸಾಹಿತ್ಯವು ಜನರಿಗೆ ಸಂವಹನಗೊಳ್ಳುವುದು ಮುಖ್ಯವಾಗಿರುವುದಿಲ್ಲ. ಸಾಹಿತ್ಯವನ್ನು ಸಾಧನ ಸಾಮಗ್ರಿಯಾಗಿ ಬಳಸಿ ಇನ್ನೇನೋ ಉದ್ದೇಶ/ಗಳನ್ನು ಸಾಧಿಸಿಕೊಳ್ಳುವುದೇ ಮುಖ್ಯವಾಗಿರುತ್ತದೆ. ನಮ್ಮ ಪ್ರತಿಷ್ಠಿತ ಸಾಹಿತ್ಯ ಚರಿತ್ರೆಯನ್ನು ನೋಡಿದರೆ; ೯ನೇ ಶತಮಾನದಿಂದ ಇವತ್ತಿನವರೆಗೆ ಕವಿಗಳು ತಮ್ಮದೇ ಸಾಹಿತ್ಯ ರಚನೆಯ ಉದ್ದೇಶ-ಕಾರಣಗಳನ್ನು ಹೇಳುತ್ತ ಬಂದಿದ್ದಾರೆ. ಆದರೆ ಅವರು ಯಾವ ಉದ್ದೇಶ-ಕಾರಣಗಳಿಂದ ಸಾಹಿತ್ಯ ರಚಿಸಿದರೋ ಅದೇ ಉದ್ದೇಶ-ಕಾರಣಗಳಿಗಾಗಿ ಮಾತ್ರ ಆ ಸಾಹಿತ್ಯಗಳು ಅನುಸಂಧಾನಕ್ಕೆ ಗುರಿಯಾಗಲಿಲ್ಲ. ಹಾಗೇ ಯಾರಿಗಾಗಿ ತಾವು ಬರೆಯುತ್ತಿದ್ದೇವೆ ಎಂದು ಭಾವಿಸಿದರೋ ಅವರು ಮಾತ್ರ ಆ ಬರೆಹಗಳಿಗೆ ಮುಖಾಮುಖಿಯಾಗಲಿಲ್ಲ. ಹಾಗಾಗಿ ಸಾಹಿತ್ಯ ಪಠ್ಯಗಳು ಚಲಿಸುವ ದಾರಿ ಮತ್ತು ಬಗೆಗಳು ಹಾಗೂ ವಲಯಗಳು ಕಾಲದಿಂದ ಕಾಲಕ್ಕೆ ಬದಲಾಗುವ ಅನುಸಂಧಾನಗಳಲ್ಲಿ ಬದಲುಗೊಳ್ಳುತ್ತ ಬಂದಿವೆ. ಹೀಗಾಗಿ ಸಾಹಿತ್ಯದ ಭಿನ್ನ ಭಿನ್ನ ಅನುಸಂಧಾನಗಳು ಅವುಗಳ ಸಂವಹನ ಮಟ್ಟ, ಪ್ರಮಾಣ, ವಿಧಾನ, ಬಗೆಗಳಲ್ಲಿ ಬಹುಸ್ತರ-ಬಹುಮುಖತೆಯನ್ನು ಪಡೆಯುತ್ತ ಬಂದಿವೆ.
ನಮ್ಮ ಪ್ರತಿಷ್ಠಿತ ಸಾಹಿತ್ಯ ಚರಿತ್ರೆಯಲ್ಲಿನ ಸಾಹಿತ್ಯ ಮತ್ತು ಸಾಹಿತಿ, ಸಾಹಿತ್ಯ ಮತ್ತು ಪ್ರಭುತ್ವ, ಸಾಹಿತ್ಯ ಮತ್ತು ಸಾಮಾನ್ಯ ಜನತೆ, ಸಾಹಿತ್ಯ ಮತ್ತು ಭಕ್ತಿ, ಧರ್ಮಗಳ ನಡುವಿನ ಸಂಬಂಧಗಳನ್ನು ಚರ್ಚಿಸಿದರೆ ಸಾಹಿತ್ಯದ ಸಂವಹನವು ಹೇಗೆಲ್ಲ ಆಗುತ್ತಿತ್ತು ಎಂಬ ಬಗ್ಗೆ ಕೆಲವು ಸುಳುಹುಗಳು ಸಿಗುತ್ತವೆ. ಅದೊಂದು ಪ್ರತ್ಯೇಕ ಚರ್ಚೆಯೇ ಆಗುವುದರಿಂದ ಇಲ್ಲಿ ಅದನ್ನು ಬೆಳೆಸುವುದಿಲ್ಲ.

ಬದುಕು-ಆಚರಣೆಗಳು-ಸಂವಹನ
ಸಾಹಿತ್ಯದ ಅನುಸಂಧಾನಗಳಲ್ಲಿ ಕೆಲವು ನಿತ್ಯ ಬದುಕಿನಿಂದ ಬದಿಗೆ ಸರಿದ ಚಟುವಟಿಕೆಗಳಾಗಿದ್ದರೆ ಕೆಲವು ಬದುಕಿನ ಭಾಗವೇ ಆಗಿರುತ್ತವೆ. ನಮ್ಮಲ್ಲಿ ಸಾಂಸ್ಕೃತಿಕ ಚಟುವಟಿಕೆ ಎಂದರೆ ನಿತ್ಯದ ಚಟುವಟಿಕೆಗಳೆಲ್ಲ ಮುಗಿದ ಮೇಲೆ ಕೈಗೊಳ್ಳುವ ಅಥವಾ ಅದರ ಹೊರತಾದ ಚಟುವಟಿಕೆ ಎಂಬ ನಂಬಿಕೆಯೊಂದಿದೆ. ಆದರೆ ನಮ್ಮ ಜನಪದರು ಹೀಗೆ ನೋಡುವುದಿಲ್ಲ. ಅವರ ಸಾಹಿತ್ಯದ ಅನುಸಂಧಾನಗಳು ಅವರ ಬದುಕಿನ ಭಾಗವೇ ಆಗಿರುತ್ತವೆ. ನಮ್ಮಲ್ಲಿ ಸಾಹಿತ್ಯವನ್ನು ಒಳಗೊಂಡ ಅನೇಕ ರೀತಿಯ ಆಚರಣೆಗಳಿವೆ. ನಮ್ಮಲ್ಲಿ ವೃತ್ತಿ ರಂಗಭೂಮಿ ಕಲಾವಿದರು, ವೃತ್ತಿ ಗಾಯಕರು ಮತ್ತು ಮೌಖಿಕ ಚರಿತ್ರೆಕಾರರು ಇದ್ದರು. ಈಗಲೂ ಇವರು ಕೆಲವರು ಇದ್ದಾರೆ. ಮೊದಲಿನಂತೆಯೇ ಇಲ್ಲದಿದ್ದರೂ ಬೇರೆ ಬೇರೆ ರೀತಿಗಳಲ್ಲಿ ಇದ್ದಾರೆ. ಈ ವೃತ್ತಿಪರ ಜನ ಸಾಹಿತ್ಯವನ್ನು ಬಳಸುವುದಕ್ಕೂ ಬದುಕಿನ ಅಂಗವಾಗಿ ನಿತ್ಯದ ಪೂಜೆ, ಪುನಸ್ಕಾರ, ಹಬ್ಬ ಹರಿದಿನ, ಹರಿಕತೆ ಇತ್ಯಾದಿಗಳಲ್ಲಿ ಸಾಹಿತ್ಯವನ್ನು ಬಳಸುವುದಕ್ಕೂ ವ್ಯತ್ಯಾಸವಿದೆ. ನಮ್ಮಲ್ಲಿ ರಾಗಿ ಬೀಸುತ್ತ ಹಾಡುವ ಪದಗಳಿದ್ದವು, ಗಾಡಿ ಹೊಡೆಯುತ್ತ ಹಾಡುವ ಪದಗಳಿದ್ದವು, ನಾಟಿ ಮಾಡುತ್ತ ಹಾಡುವ ಪದಗಳಿದ್ದವು. ಈಗ ಇವು ಕೆಲವು ಇಲ್ಲವಾಗಿವೆ, ಕೆಲವು ಕಡಿಮೆಯಾಗಿವೆ, ಕೆಲವು ರೂಪಾಂತರಗೊಂಡಿವೆ. ಹೀಗೆ ನಮ್ಮಲ್ಲಿ ನಿತ್ಯ ಬದುಕಿನ ನಡುವೆ ಬಳಕೆಯಾಗುವ ಮತ್ತು ನಿತ್ಯ ಬದುಕಿನ ನಡುವೆ ಸೃಷ್ಟಿಯಾಗುವ ಸಾಹಿತ್ಯವೂ ಇದೆ. ಈ ಸಾಹಿತ್ಯಕ್ಕೆ ಸಂವಹನದ ಪ್ರಶ್ನೆ ಉದ್ಭವಿಸುವುದೇ ಇಲ್ಲ.
ಹೆಸರು, ಕೀರ್ತಿ, ವಾಣಿಜ್ಯ ಉದ್ದೇಶಗಳಿಗಾಗಿ ಮತ್ತು ಸಾಹಿತ್ಯ ಸೃಷ್ಟಿಸಬೇಕೆಂಬ ಉದ್ದೇಶಕ್ಕಾಗಿ ಸೃಷ್ಟಿಯಾಗುವ ಸಾಹಿತ್ಯ ಇದೆಯಲ್ಲ ಇಂಥ ಪ್ರತಿಷ್ಠಿತ ಸಾಹಿತ್ಯಕ್ಕೆ ಮಾತ್ರ ಸಂವಹನದ ಪ್ರಶ್ನೆ ಕಾಡುತ್ತದೆ. ಮಿಕ್ಕ ಬಳಕೆಯಲ್ಲಿನ ಸಾಹಿತ್ಯಕ್ಕೆ, ಸಾಮೂಹಿಕ ಒತ್ತಡಗಳಿಂದ ಯವ್ಯಾವುದೋ ಸಾಂದರ್ಭಿಕ ಅಗತ್ಯಗಳಿಗಾಗಿ ಸಂಭವಿಸುವ ಸಾಹಿತ್ಯಕ್ಕೆ ಸಂವಹನದ ಪ್ರಶ್ನೆ ಉದ್ಭವಿಸುವುದಿಲ್ಲ. ಅಷ್ಟೇ ಅಲ್ಲ ನಮ್ಮ ಎಷ್ಟೊ ಮೌಖಿಕ ಕಾವ್ಯ, ಸಾಹಿತ್ಯಗಳನ್ನು ಸೃಷ್ಟಿಸುವ, ಕಟ್ಟಿ ಹಾಡುವ ಜನ ಅವುಗಳನ್ನು ನಾವು ಹೇಳುವಂತೆ ಸಾಹಿತ್ಯ ಎಂದು ಕರೆಯುವುದೇ ಇಲ್ಲ. ಅವರ ಪರಿಭಾಷೆಯೇ ಬೇರೆ. ಎಲ್ಲಮ್ಮನ ಜಾತ್ರೆಯಲ್ಲಿ ಹಾಡುವ ಚೌಡಿಕೆ ಪದಗಳು, ಮಾರಮ್ಮನ ಜಾತ್ರೆಯಲ್ಲಿ ಹಾಡುವ ಆಸಾದಿ ಪದಗಳು, ಇತ್ಯಾದಿಗಳನ್ನು ಕಟ್ಟುತ್ತ ಹಾಡುವವರು ಇವುಗಳನ್ನು ಸಾಹಿತ್ಯವೆಂದು ಭಾವಿಸುವುದೇ ಇಲ್ಲ. ಇವುಗಳ ಅನುಸಂಧಾನಗಳಲ್ಲಿ ಭಾಗವಹಿಸುವವರೂ ಕೂಡ ಇವುಗಳನ್ನು ಅರ್ಥಮಾಡಿಕೊಳ್ಳುವ, ವಿಶ್ಲೇಷಿಸುವ, ವಿಮರ್ಶಿಸುವ ಗೋಜಿಗೇ ಹೋಗುವುದಿಲ್ಲ. ಆದರೆ ಇವುಗಳೆಲ್ಲವೂ ಇವರ ಪ್ರಜ್ಞೆಯ ಭಾಗವೇ ಅಗಿವೆ ಮತ್ತು ಸಾಮುದಾಯಿಕ ಪ್ರಜ್ಞೆಯನ್ನು ಇವು ರೂಪಿಸುತ್ತಲೂ ಇರುತ್ತವೆ. ಸಾಹಿತ್ಯ ಎಂದರೆ ನಿತ್ಯ ಬದುಕಿನ ಹೊರಗೆ ಇರುವ ಅಕ್ಷರ ಸಾಮಗ್ರಿ ಅಲ್ಲ. ಬದುಕಿನ ಕ್ರಮಗಳ ಶೋಧನೆಯಲ್ಲಿ ಬದುಕಿನ ಒಂದು ಅವಿಭಾಜ್ಯ ಅಂಗವಾಗಿ ಸಾಹಿತ್ಯ ಇಲ್ಲಿ ಅನುಸಂಧಾನಕ್ಕೆ ಗುರಿಯಾಗುತ್ತಿರುತ್ತದೆ. ಸಾಹಿತ್ಯದ ಅನುಸಂಧಾನವೆಂದರೆ ಸಾಹಿತ್ಯ ಸೃಷ್ಟಿ, ಬಳಕೆ, ಪ್ರಸರಣ ಎಲ್ಲ.
ನಮ್ಮಲ್ಲಿ ಬಹಳ ಹಿಂದಿನಿಂದಲೂ ಗಮಕ ವಾಚನ, ವ್ಯಾಖ್ಯಾನ, ಪಾರಾಯಣ, ಪಠಣಗಳು ನಡೆಯುತ್ತಾ ಬಂದಿವೆ. ಸಾಹಿತ್ಯ ಬಳಕೆ ಮತ್ತು ಸಂವಹನಗಳು ಬೆರೆತುಕೊಂಡ ಆಚರಣೆಗಳಿವು. ವ್ಯಕ್ತಿ ಮತ್ತು ಸಮುದಾಯಗಳ ಎರಡೂ ನೆಲೆಯಲ್ಲಿ ಈ ಆಚರಣೆಗಳು ನಡೆಯುತ್ತವೆ. ಪಾರಾಯಣ ಎಂದರೆ ತಮ್ಮ ಇಷ್ಟದ ಯಾವುದಾದರು ಗ್ರಂಥವನ್ನು ಪುಣ್ಯ ಕಾರ್ಯವೆಂಬಂತೆ ಮತ್ ಮತ್ತೆ ಓದುವುದು, ಒಂದು ರೀತಿಯಲ್ಲಿ ಜಪಿಸಿದಂತೆ ಮತ್ತೆ ಮತ್ತೆ ಅನ್ನುವುದು. ಗಮಕಕ್ಕಿಂತ ಭಿನ್ನವಾದ ಆಚರಣೆ ಇದು. ನಮ್ಮಲ್ಲಿ ಕುಮಾರವ್ಯಾಸ ಭಾರತ, ಭರತೇಶ ವೈಭವ, ಮರಾಠಿಯಲ್ಲಿ ಜ್ಞಾನೇಶ್ವರಿ ಕಾವ್ಯ, ಹಿಂದಿಯಲ್ಲಿ ರಾಮಚರಿತ ಮಾನಸ, ತಮಿಳಿನಲ್ಲಿ ಕಂಬರಾಮಾಯಣ, ತಿರುಕ್ಕುರುಳ್ ಇಂಥ ಗ್ರಂಥಗಳು ಪಾರಾಯಣಕ್ಕೆ ಗುರಿಯಾಗಿವೆ, ಗುರಿಯಾಗುತ್ತಿವೆ. ಇಂಥ ಅನುಸಂಧಾನಗಳಲ್ಲಿ ಸಾಹಿತ್ಯವನ್ನು ಆತ್ಮಸಾಥ್ ಮಾಡಿಕೊಳ್ಳುವ ಕೆಲಸ ಆಗುತ್ತಿರುತ್ತದೆ. ಪಾರಾಯಣ ಎಂದರೆ ಇಲ್ಲಿ ಸಂವಹನದ ಪ್ರಶ್ನೆ ಉದ್ಭವಿಸುವುದಿಲ್ಲ. ಭಕ್ತಿಯಿಂದ ನಂಬಿ ಕಾವ್ಯವನ್ನು ಸದಾ ಬಳಸುವ, ತಮ್ಮೊಟ್ಟಿಗೆ ಒಯ್ಯುವ ಕ್ರಿಯೆ ಇದು.
ಗಮಕ ಪಾರಾಯಣಗಳಿಗಿಂತ ಭಿನ್ನವಾದ ಇನ್ನೊಂದು ಸಾಹಿತ್ಯದ ಅನುಸಂಧಾನ ನಮ್ಮಲ್ಲಿದೆ. ಅದು ಕೇಳಿಕೆ. ಉತ್ತರ ಕರ್ನಾಟಕದ ಕಡೆ ಚಾಲ್ತಿಯಲ್ಲಿರುವ ಅನುಸಂಧಾನ ಇದು. ಸಾಹಿತ್ಯವನ್ನು ಚರ್ಚೆಗೆ, ಜಿಜ್ಞಾಸೆಗೆ ಗುರಿಪಡಿಸುವ ಚಟುವಟಿಕೆ ಇದು. ಇಲ್ಲಿ ಸಂವಹನವನ್ನು ದಾಟಿದ ಉನ್ನತ ತತ್ವ, ದರ್ಶನಗಳ ಚರ್ಚೆ ಇರುತ್ತದೆ. ಇಂಥ ಗೋಷ್ಠಿಗಳಲ್ಲಿ ಸಾಹಿತ್ಯವು ಒಳಗೊಂಡಿರುವ ತತ್ವ, ದರ್ಶನಗಳ ಚರ್ಚೆ ಹಿನ್ನೆಲೆಗೆ ಸರಿದು ಲೋಕನಡಾವಳಿ, ಲೋಕಜೀವನದ ತಾತ್ವಿಕತೆ, ದರ್ಶನಗಳ ಜಿಜ್ಞಾಸೆ ಮುನ್ನೆಲೆಗೆ ಬರುತ್ತದೆ. ತಮ್ಮ ತಮ್ಮ ತತ್ವಗಳನ್ನು ಜೀವನದರ್ಶನಗಳನ್ನು ಪ್ರತಿಪಾದಿಸುವ, ಪರೀಕ್ಷಿಸಿಕೊಳ್ಳುವ, ಆತ್ಮಾವಲೋಕನ ಮಾಡಿಕೊಳ್ಳುವ ಒಂದು ನೆಪವಾಗಿ ಸಾಹಿತ್ಯ ಇಂಥ ಕಡೆ ಒದಗಿ ಬರುತ್ತದೆ. ಇಂಥ ಗೋಷ್ಠಿಗಳನ್ನು ತತ್ವಕ್ಕೆ ಹಾಕುವುದು, ವಿಚಾರಕ್ಕೆ ಹಾಕುವುದು ಅಂತಲೂ ಕರೆಯುತ್ತಾರೆ. ಅಲೆಮಾರಿ ಸಂತರ, ನಾವು ಅನಕ್ಷರಸ್ಥರೆಂದು ಕರೆಯುವ ಜನರ ಸಾಹಿತ್ಯ ಜಿಜ್ಞಾಸೆಯ ಒಂದು ಪರಿ ಇದು. ಇಲ್ಲಿ ಸಾಹಿತ್ಯದ ಸಂವಹನದ ಪ್ರಶ್ನೆ ಉದ್ಭವಿಸುವುದಿಲ್ಲ. ಸಾಹಿತ್ಯದ ದರ್ಶನವನ್ನು ಭಿನ್ನ ವ್ಯಾಖ್ಯಾನಗಳಿಗೆ ಇಲ್ಲಿ ಗುರಿ ಮಾಡಲಾಗುತ್ತದೆ. ಆ ಮೂಲಕ ಲೋಕ ವಿಚಾರದ ಚರ್ಚೆಗೆ ಸಾಹಿತ್ಯವನ್ನು ಸಹಾಯಕ ಸಾಮಗ್ರಿಯಾಗಿ ಬಳಸಿಕೊಳ್ಳಲಾಗುತ್ತದೆ. ಇಂಥ ಅನುಸಂಧಾನಗಳಲ್ಲಿ ಸಾಹಿತ್ಯವು ತಾನು ಸಂವಹನಗೊಳ್ಳುತ್ತಲೆ ಇನ್ನೂ ಇತರ ಜೀವನ ಸಂಬಂಧಿ ವಿಚಾರಗಳ ವಾಹಕ (ವಾಹನ) ಆಗಿಯೂ ವರ್ತಿಸುತ್ತಿರುತ್ತದೆ. ಪಠ್ಯ, ಉಪಪಠ್ಯ, ವ್ಯಾಖ್ಯಾನ-ವಿಮರ್ಶೆಗಳು ಇಂಥಲ್ಲಿ ಸೃಷ್ಟಿಯಾಗುತ್ತಿರುತ್ತವೆ.
ಕರಾವಳಿ ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ತಾಳಮದ್ದಲೆ ಇಂಥ ಇನ್ನೊಂದು ಪರಿಪಾಠ. ಕೇಳಿಕೆಯಂತೆ ಇಲ್ಲಿ ಸಾಹಿತ್ಯವು ಚರ್ಚೆಯ ಸಾಮಗ್ರಿಯಲ್ಲ. ಕಥನದ ಪಾತ್ರಗಳೇ ತಾವಾಗಿ ಸಾಹಿತ್ಯವನ್ನು ಅಭಿನಯಿಸುತ್ತ, ಆಂಗಿಕ-ಶಾರೀರಿಕ ಚಟುವಟಿಕೆಗಳ ಮೂಲಕ ವಾದನವನ್ನೂ ಒಳಗೊಂಡು ಲೋಕವರ್ತಮಾನವನ್ನು ಆತ್ಮಸಾಥ್ ಮಾಡಿಕೊಳ್ಳುವ ಕ್ರಿಯೆ ಇದು. ಸಾಹಿತ್ಯ ಕಥನದ ಮೂಲಕ ವರ್ತಮಾನದ ಸಾಧಕ ಬಾಧಕಗಳನ್ನು ಜಿಜ್ಞಾಸೆ ಮಾಡುತ್ತ ತಮ್ಮದೇ ಪಾತ್ರ ಸನ್ನಿವೇಶಗಳ ಫಿಲಾಸಫಿಯನ್ನು ಹೇಳುವ ಒಂದು ಫೆಡರಲ್ ಆರ್ಟ್‌ನ ಮಿನಿಯೇಚರ್ ಇದು. ಕುಣಿತವಿಲ್ಲದೆ, ಕಾಸ್ಟ್ಯೂಮ್ ಇಲ್ಲದೆ ಕಥನವನ್ನು ತತ್ವಚರ್ಚೆಗೆ ಎತ್ತಿಕೊಳ್ಳುವ ಕಲೆ ಇದು. ಈ ಸಾಹಿತ್ಯ ಸಂಬಂಧಿ ಕಲೆಯು ತನ್ಮೂಲಕ ರಂಜನೆಯನ್ನು, ಬೋಧನೆಯನ್ನು, ಪಾತ್ರಗಳ ತಂತಮ್ಮ ಬೌದ್ಧಿಕ ಭಾಷಿಕ ಕೌಶಲ್ಯಗಳನ್ನು ಪ್ರಸ್ತುತಪಡಿಸುತ್ತದೆ. ಈ ರಂಗ ಪ್ರಸ್ತುತಿಯಲ್ಲಿ ಸಾಹಿತ್ಯ ಕಥನವು ಮೊದಲೇ ಗೊತ್ತಿರುತ್ತದೆ. ಪ್ರೇಕ್ಷಕರಿಗೂ ತಿಳಿದಿರುತ್ತದೆ. ಪಾತ್ರಧಾರಿಗಳಿಗಂತೂ ಅಂತರ್ಗತವೇ ಆಗಿರುತ್ತದೆ. ಹಾಗಾಗಿ ಇಲ್ಲಿ ಸಂವಹನದ ಪ್ರಶ್ನೆಯೇ ಇಲ್ಲ. ಈ ಕೇಳಿಕೆಗಳು, ತಾಳಮದ್ದಳೆಗಳ ಟಾರ್ಗೆಟ್ ಆಡಿಯನ್ಸ್ ಬೇರೆ. ನಮ್ಮ ಪ್ರತಿಷ್ಠಿತ ವರ್ಗದ ವಿಚಾರ ಸಂಕಿರಣಗಳು, ಕಮ್ಮಟಗಳು, ಕವಿಗೋಷ್ಠಿಗಳು, ಸಂವಾದ ಗೋಷ್ಠಿಗಳ ಟಾರ್ಗೆಟ್ ಆಡಿಯನ್ಸ್ ಬೇರೆ. ತಾಳಮದ್ದಳೆಗಳು ಜನಪದರನ್ನೂ-ಪ್ರತಿಷ್ಠಿತರನ್ನೂ ಒಟ್ಟಿಗೇ ತಲುಪಬಲ್ಲವು ಆದರೆ ಈ ಪ್ರತಿಷ್ಠಿತರ ಸಾಹಿತ್ಯಕ ಅನುಸಂಧಾನಗಳು ಜನಪದರನ್ನು ಒಳಗೊಳ್ಳುತ್ತಿಲ್ಲ.
ಮೌಖಿಕ ವಲಯದ ನಮ್ಮ ಕೆಲವು ಪಾರಂಪರಿಕ ಸಾಹಿತ್ಯದ ಅನುಸಂಧಾನಗಳು ಕೇವಲ ಸಾಹಿತ್ಯದ ಅನುಸಂಧಾನಗಳಲ್ಲ. ಸಾಹಿತ್ಯದ ಅನುಸಂಧಾನಗಳ ಕಾರಣಕ್ಕೆ ನಡೆಯುವ ಅನುಸಂಧಾನಗಳಲ್ಲ. ಕೆಲವು ಅನುಸಂಧಾಗಳಲ್ಲಿ ಭಕ್ತಿ, ಧಾರ್ಮಿಕತೆ ಸಾಹಿತ್ಯದ ಒಡನಾಟಗಳೆಲ್ಲ ಒಂದಕ್ಕೊಂದು ಬೆರೆತು ಹೋಗಿರುತ್ತವೆ. ಇದನ್ನು ವಿಸ್ತರಿಸಲು ನನ್ನ ಒಂದೆರಡು ಸ್ವಾನುಭವಗಳನ್ನು ಬಳಸಿಕೊಂಡು ಇಲ್ಲಿ ಕೆಲವು ಮಾತುಗಳನ್ನು ಹೇಳುತ್ತೇನೆ.
ನಮ್ಮ ಹಳ್ಳಿಯಲ್ಲಿ ವರ್ಷಕ್ಕೊಮ್ಮೆ ಕಾಮನ ಹಬ್ಬ ಮಾಡುತ್ತಿದ್ದರು. ಕಾಮನನ್ನು ಸುಟ್ಟ ಮಾರನೆ ದಿನ ಹೋಳಿ ಆಡುವ ಸಂದರ್ಭದಲ್ಲಿ ಪೋಲಿ ಹಾಡುಗಳನ್ನು ಹಾಡಿಕೊಳ್ಳುತ್ತ ಊರೆಲ್ಲರನ್ನೂ ಒಟ್ಟಿಗೇ ತರುಬಿಕೊಂಡು ಸರಸ, ತಮಾಶೆ, ಹುಸಿ ಕಚ್ಚಾಟ, ಅರಚಾಟಗಳಿಂದ ಊರಾಚೆಯ ಒಂದು ಮಡುವಿಗೆ ಹೋಗಿ ಈಜಾಡಿ ದೊಡ್ಡದೊಂದು ಆಲದ ಮರದ ಕೆಳಗೆ ಕಡ್ಲೆಪುರಿ ಪ್ರಸಾದ ತಿಂದು ಬರುವ ಆಚರಣೆ ಅದು. ಊರಿನ ವಯಸ್ಕ ಗಂಡಸರ ದೊಡ್ಡ ಊರಾಡೊ ಆಚರಣೆಯಲ್ಲಿ ಒಂದು ತಂಡ ಪೋಲಿ ಹಾಡುಗಳನ್ನು ಕಟ್ಟಿ ಹಾಡೋದು. ಒಂದಕ್ಕಿಂತ ಒಂದು ಪೋಲಿಯಾದ ರಚನೆಗಳನ್ನು ಸಾಮೂಹಿಕವಾಗಿ ಯಾವ ಅಂತಸ್ತು, ವಯಸ್ಸುಗಳ ಬೇಧ ಇಲ್ಲದೆ ಹಾಡುತ್ತಿದ್ದೆವು. ಇಂಥ ಸಂದರ್ಭದಲ್ಲಿ ಎಲ್ಲ ವೈರ-ಜಗಳಗಳು ಮಾಯವಾಗಿಬಿಡುತ್ತಿದ್ದವು. ಇಲ್ಲಿ ಸಾಹಿತ್ಯವೇ ಪ್ರಧಾನ ಅಲ್ಲದಿದ್ದರೂ ಎಲ್ಲರ ನಡುವಿನ ಒಂದು ಅಂತರ್ ವಿದ್ಯುತ್ತಾಗಿ ಅದು ನಮ್ಮೆಲ್ಲರನ್ನೂ ಜೋಡಿಸುತ್ತಿತ್ತು. ಇಂಥ ಕಡೆ ಫಂಕ್ಷನ್ ಆಫ್ ಲಿಟರೇಚರ್ ಅಂಡ್ ಕ್ರಿಯೇಶನ್ ಆಫ್ ಲಿಟರೇಚರ್ ಎರಡೂ ನಾಟ್ಯೀಕರಣಕ್ಕೆ ಗುರಿಯಾಗುತ್ತಿದ್ದವು. ಪ್ರಾಕ್ಟೀಸಿಗೆ ಒಳಗಾಗುತ್ತಿದ್ದವು. ಯಾರೋ ಒಬ್ಬ “ಹಾಲೂ ಮಾರುತ ಬಂದವಳಾರೆ ನೀಲೇ ನಾಮದ ಗೊಲ್ಲಾರುಡುಗಿ” ಅಂದರೆ ಎಲ್ಲರೂ ಅದನ್ನು ರಾಗವಾಗಿ ಹಾಡೋರು. ಇದೇ ಮುಂದೆ ಇನ್ಯಾರೋ ಒಬ್ಬನಿಗೆ ಸ್ಪೂರ್ತಿಯಾಗಿ ಅವನು ಅಲ್ಲೇ ಹೊಸದೊಂದು ಸಾಲನ್ನು “ಮೀನು ಮಾರೂತ ಬಂದೋಳ್ಯಾರೇ ಮೀನಾ ನಾಮದ ಬೆಸ್ತಾರುಡುಗಿ” ಅಂತ ಕಟ್ಟಿ ಹಾಡೋನು. ಅದನ್ನ ಮಿಕ್ಕವರು ಕೋರಸ್ ಥರ ಹಾಡೋರು. ಮೀನು ಮಾರೂತ, ಮೀನು ಮಾರೂತ. ಬಂದೋಳ್ಯಾರೇ, ಬಂದೋಳ್ಯಾರೇ ಅಂತ ವೇಗವಾಗಿ ಲಯಬದ್ಧವಾಗಿ ಹಾಡುತ್ತ ಕುಣಿಯೋರು. ಮತ್ತೆ ಹಾಡು, ಕುಣಿತ ನಡೀತಾ ಸಾಗೋದು. ಇದು ಪ್ರತಿ ವರ್ಷದ ಆಚರಣೆ. ಸಂವಹನ ಅಂದರೆ ಇಲ್ಲಿ ವ್ಯಕ್ತಿಗೆ ಸಾಹಿತ್ಯ ಅರ್ಥವಾಗುವುದು ಅಂತ ಅಲ್ಲ. ಇಂಥ ಆಚರಣೆಗಳಿಂದ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಸಾಹಿತ್ಯವನ್ನು ದಾಟಿಸುವ ಕೆಲಸ ನಡೆಯೋದು. ಸಾಹಿತ್ಯ ಸೃಷ್ಟಿಯ ವರಸೆಗಳು ಇಂಥ ಸಾಹಿತ್ಯದ ಅನುಸಂಧಾನಗಳಿಂದ ಪ್ರಾಕ್ಟೀಸಿನ ಮೂಲಕವೇ ಎಲ್ಲರಿಗೂ ಕರಗತ ಆಗಿಬಿಡೋವು. ಎಂದರೆ ಒಂದು ಕಾಲದಲ್ಲಿ ಪ್ರದೇಶದಿಂದ ಪ್ರದೇಶಕ್ಕೆ, ಒಬ್ಬರಿಗಿಂತ ಹೆಚ್ಚಿನ ಜನರಿಗೆ ಹಾರಿಜಾಂಟಲ್ಲಾಗಿ ಹಬ್ಬುವುದಷ್ಟೇ ಸಂವಹನ ಅಲ್ಲ. ವರ್ಟಿಕಲ್ಲಾಗಿ ಕಾಲದಿಂದ ಕಾಲಕ್ಕೆ ಸಾಗಿ ಬರುವುದು ಕೂಡ ಸಂವಹನವೇ.
ಇಲ್ಲಿ ಸಾಹಿತ್ಯಕ್ಕೆ ಬಹುಮುಖಿಯಾದ ಕಾರ್ಯಗಳು ಇವೆ. ಇಲ್ಲಿ ಸಾಹಿತ್ಯದ ಅನುಸಂಧಾನವು ಏಕಕಾಲಕ್ಕೆ ಆನಂದವನ್ನು, ಅನುಭವವನ್ನು, ದೈಹಿಕ ಮತ್ತು ಮಾನಸಿಕ ಚೈತನ್ಯವನ್ನು ನೀಡುತ್ತದೆ. ಭಾಗಿಯಾದವನಿಗೆ ಸಾಹಿತ್ಯವನ್ನು ತಂತಾನೆ ಇನ್ನೊಬ್ಬರಿಗೆ ದಾಟಿಸುವ ಸಂವಹನ ಮಾಧ್ಯಮವಾಗುವ ಮತ್ತು ಅದನ್ನು ತನ್ನ ಸ್ಮೃತಿಕೋಶದಲ್ಲಿ ಇಟ್ಟುಕೊಳ್ಳುವ ಮೂಲಕ ತಾನು ಧಾರಣ ಮಾದ್ಯಮವೂ ಆಗುವ ಸಾದ್ಯತೆಯನ್ನು ನೀಡುತ್ತದೆ. ಪುಸ್ತಕ, ಸಿ.ಡಿ, ಕಂಪ್ಯೂಟರುಗಳ ರೂಪದಲ್ಲಿ ಸ್ಮೃತಿಕೋಶಗಳನ್ನು ಮಾಡಿ ಇಟ್ಟುಕೊಳ್ಳುವುದಕ್ಕೂ ಜನಸಮುದಾಯದ ಮಿದುಳು ಮತ್ತು ಮನಸ್ಸುಗಳನ್ನೇ ಸ್ಮೃತಿಕೋಶಗಳನ್ನಾಗಿ ಬಳಸುವುದಕ್ಕೂ ಬಹಳ ವ್ಯತ್ಯಾಸವಿದೆ. ಮನರಂಜನೆಗಾಗಿ ಜನರು ಟೀವಿ ಎದುರು, ಸಿನಿಮಾ ಹಾಲುಗಳಲ್ಲಿ ನಿಷ್ಕ್ರಿಯವಾಗಿ ಕೂತುಕೊಳ್ಳುವುದಕ್ಕೂ ಇಂಥ ಆಚರಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಕ್ಕೂ ಬಹಳ ವ್ಯತ್ಯಾಸ ಇದೆ. ದೇಹ ಮನಸ್ಸುಗಳ ಪಾಲ್ಗೊಳ್ಳುವಿಕೆ-ಕ್ರಿಯಾಶೀಲತೆಗಳು ಸಂವಹನದಲ್ಲಿ ತುಂಬಾ ಅಗತ್ಯ. ಕೇಳಿಕೆ, ತಾಳಮದ್ದಲೆ, ಕಾಮನ ಹಾಡು-ಕುಣಿತ ಮುಂತಾದ ಇಂಥ ಆಚರಣೆಗಳಿಂದ ನಾವು ಮಾರುಕಟ್ಟೆ ರಾಜಕಾರಣದ ಆಧುನಿಕೋತ್ತರ ಅವತಾರಗಳನ್ನು ಸಂಶಯದಿಂದಲೂ ಜನಪದರ ಆಚರಣೆಗಳನ್ನು ಚಿಕಿತ್ಸಕ ವಿವೇಕದಿಂದಲೂ ನೋಡುವುದನ್ನು ಕಲಿಯಬೇಕಾಗಿದೆ.
ಇದಕ್ಕಿಂತ ಭಿನ್ನವಾದ ಇನ್ನೊಂದು ಉದಾಹರಣೆ ಕೊಡುತ್ತೇನೆ. ಅದು ಶುದ್ಧಾಂಗವಾಗಿ ಸಾಹಿತ್ಯಕ ಅನುಸಂಧಾನ ಅಲ್ಲ. ಹಾಗೆ ನೋಡಿದರೆ ಶುದ್ಧಾಂಗವಾದ ಸಾಹಿತ್ಯಕ ಅನುಸಂಧಾನ ಅನ್ನುವುದು ಇಲ್ಲವೇ ಇಲ್ಲ. ಕಲೆಗಾಗಿ ಕಲೆ ಎನ್ನುವುದು ಒಂದು ಶುದ್ಧ ಸುಳ್ಳು. ಅಂತಹ ಕಲೆ ಇರೋಕ್ಕೆ ಸಾಧ್ಯವಿಲ್ಲ. ವ್ಯಕ್ತಿ, ವ್ಯಕ್ತಿಯ ಪ್ರಜ್ಞೆ, ಸಮುದಾಯ, ಬದುಕು ಹೀಗೆ ಬಿಡಿ ಅಥವಾ ಇಡಿ ನೆಲೆಯಲ್ಲಿ ಪ್ರೇರೇಪಣೆ ನೀಡದ ಸಾಹಿತ್ಯ ಎಲ್ಲಾದರೂ ಇರಲು ಸಾಧ್ಯವೇ? ಇರಲಿ, ಉದಾಹರಣೆಗೆ ಬರುತ್ತೇನೆ. ಮಾಂತಪ್ಪನ ಗದ್ದುಗೆ ಅಂತ ವೀರಶೈವ ಸಂತನ ಸಮಾಧಿಯೊಂದು ನಮ್ಮ ಊರಿನಿಂದ ಸುಮಾರು ಮುವ್ವತ್ತು ಕಿಲೋಮೀಟರು ದೂರದಲ್ಲಿ ಇತ್ತು. ಅದೊಂದು ಮಠದ ರೀತಿಯ ದೇಗುಲ. ಅಲ್ಲಿಗೆ ನಮ್ಮ ಸುತ್ತಮುತ್ತಲ ಊರುಗಳ ಬಹಳಷ್ಟು ಜನ ನಡೆದುಕೊಳ್ಳುತ್ತಿದ್ದರು. ಮಕ್ಕಳು ಮರಿಗೆ ಏನಾದರೂ ರೋಗಗಳು ಬಂದರೆ ಮಂಡೆ ಕೊಡುತ್ತೇವೆ ಅಂತ ಹರಕೆ ಮಾಡಿಕೊಳ್ಳುತ್ತಿದ್ದರು. ಶಿವರಾತ್ರಿ ಕಾಲದಲ್ಲಿ ಅಲ್ಲಿಗೆ ಯಾತ್ರೆ ಹೋಗುತ್ತಿದ್ದರು. ಒಂದೊಂದು ಊರಿನಿಂದಲೂ ಒಂದೋ, ಹಲವೋ ತಂಡಗಳು ಬೆಳಗಿನ ಜಾವ ಭಜನೆ ಮಾಡುತ್ತ ಹೊರಟರೆ ಊರುಗಳನ್ನು ದಾಟುತ್ತಾ ಭಜನೆ ಮಾಡುತ್ತಾ ರಾತ್ರಿಗೆ ಹೋಗಿ ಗದ್ದುಗೆಯನ್ನು ತಲುಪುತ್ತಿದ್ದೆವು. ಬೇರೆ ಬೇರೆ ಊರುಗಳ ಭಕ್ತಾದಿಗಳು ಕೊಟ್ಟ ದವಸ ಧಾನ್ಯ ತರಕಾರಿ ತೆಗೆದುಕೊಂಡು ಹೋಗಿ ಗದ್ದುಗೆಗೆ ಅರ್ಪಿಸುವುದು. ಮುಡಿಗಿಡಿ ಕೊಟ್ಟು ವಾಪಾಸು ಬರುತ್ತಾ ಭಜನೆ ಮಾಡುತ್ತಾ ಊರಿಗೆ ಬಂದು ಹನುಮನ ಗುಡಿಯಲ್ಲಿ ಪೂಜೆ ಮಾಡಿ ಭಂಡಾರ ಇಟ್ಟುಕೊಂಡು ಅವರವರ ಮನೆಗೆ ಹೋಗುತ್ತಿದ್ದೆವು. ನಮ್ಮ ದೇಶಾದ್ಯಂತ ಇಂಥ ಸಾವಿರಾರು ರೂಢಿಗಳು ಇದ್ದಾವೆ. ಆ ಮಾಂತಪ್ಪನ ಗದ್ದಿಗೆಗೆ ಒಮ್ಮೆ ಭಜನೆ ತಂಡದ ಜೊತೆ ಹೋಗಿ ಬಂದರೆ ಭಜನೆಯವರ ಜೊತೆ ಅಂದೂ ಅಂದೂ ಬಹುತೇಕ ಭಜನೆಗಳು ಬಾಯಿಗೆ ಬಂದುಬಿಡುತ್ತಾ ಇದ್ದವು. ಇಂತಹ ಆಚರಣೆಗಳಲ್ಲಿ ಸಾಹಿತ್ಯವು ದಾರಿಯನ್ನು ಭಕ್ತಿಯಿಂದ ಕ್ರಮಿಸಲು ಸಹಾಯ ಮಾಡುತ್ತಾ ಇತ್ತು. ಪದಗಳನ್ನು ಕಟ್ಟುವ ಮತ್ತು ಹಾಡುವ ಎರಡೂ ತೆರನ ಕೌಶಲ್ಯ ಪ್ರಾಕ್ಟೀಸಿನ ಮೂಲಕವೇ ಸಿದ್ಧಿಸಿಬಿಡುತ್ತಿತ್ತು. ಸಾಹಿತ್ಯದ ಬಳಕೆ ಸಾಹಿತ್ಯದ ಸೃಷ್ಠಿ ಮತ್ತು ಸಾಹಿತ್ಯದ ಸಂವಹನಗಳು ಏಕಕಾಲಕ್ಕೆ ಇಲ್ಲಿ ಜರುಗುತ್ತಿದ್ದವು. ಸಾಹಿತ್ಯದ ಬಳಕೆ ಮತ್ತು ಸೃಷ್ಠಿಗಳು, ಸಾಹಿತ್ಯದ ಸಂವಹನ ಮತ್ತು ಸೃಷ್ಠಿಗಳು ಪ್ರತಿಷ್ಠಿತರಲ್ಲಿ ಯಾವತ್ತಿನಿಂದಲೂ ಪ್ರತ್ಯೇಕಿತ ಚಟುವಟಿಕೆಗಳೇ ಆಗಿವೆ. ಆದರೆ ಜನಪದರಲ್ಲಿ ಇವು ಒಟ್ಟಿಗೇ ಜರುಗುವ ಚಟುವಟಿಕೆಗಳು. ಇದೂ ಕೂಡ ಸಾಹಿತ್ಯ, ಭಕ್ತಿ, ಧಾರ್ಮಿಕತೆಗಳೆಲ್ಲ ಬೆರೆತುಕೊಂಡ ಆಚರಣೆ. ಈ ಸಾಹಿತ್ಯ ಕೂಡ ತಲೆಮಾರಿನಿಂದ ತಲೆಮಾರಿಗೆ ಮೌಖಿಕವಾಗಿ ದಾಟಿ ಬರುತ್ತಿದ್ದ ಕಲೆ. ಬದುಕು, ಸಂಗೀತ, ಸಾಹಿತ್ಯಗಳು ಬೆರೆತ ಸ್ಥಿತಿ ಇದು. ಈಗೀಗ ಇಂತಹ ಹಳೆ ಆಚರಣೆಗಳು ಅಳಿಯುತ್ತ ರೂಪಾಂತರವಾಗುತ್ತಿವೆ. ಹೊಸ ಆಚರಣೆಗಳು ಹುಟ್ಟಿಕೊಳ್ಳುತ್ತಿವೆ.
ಮಾಂತಪ್ಪನ ಗದ್ದುಗೆಯ ರೀತಿಯಲ್ಲೇ ಬೇಂದ್ರೆ ರಾಷ್ಟೀಯ ಟ್ರಸ್ಟ್, ಕುವೆಂಪು ಟ್ರಸ್ಟ್‌ಗಳು ಪ್ರತಿಷ್ಠಿತ ಸಾಹಿತ್ಯ ಸಮುದಾಯಗಳಿಗೆ ಇವೆ. ವರ್ಷಕ್ಕೊಮ್ಮೆಯೋ ಅಥವಾ ಪ್ರಾಸಂಗಿಕವಾಗಿಯೋ ಅಲ್ಲಿ ವಿಚಾರಗೋಷ್ಠಿ, ಅಧ್ಯಯನ, ಕವಿಗೋಷ್ಠಿ, ಪಾರಾಯಣ ಕೀರ್ತನೆ, ಭಜನೆಗಳು ನಡೆಯುತ್ತವೆ. ಆದರೆ ಇಲ್ಲಿನ ಅಧ್ಯಯನ, ಪಾರಾಯಣಗಳ ಸ್ವರೂಪ ಬೇರೆ. ಪ್ರತಿಷ್ಠಿತ ವಿದ್ವಾಂಸರಿಗೆ ಇಂಥ ಆಚರಣೆಗಳಲ್ಲಿ ಟಿ.ಎ. ಡಿ.ಎ. ಗೌರವಗಳು ಸಿಗುತ್ತವೆ . ಇದು ಇನ್ನೊಂದೇ ರೀತಿಯ ಸಂವಹನ.
ಸಾಣೆಹಳ್ಳಿ ಮಠಕ್ಕೆ ಒಮ್ಮೆ ನಾನು ಸಾಹಿತ್ಯ ಅಭಿರುಚಿ ಕಮ್ಮಟದ ಅಥಿತಿಯಾಗಿ ಹೋಗಿದ್ದೆ. ಒಂದು ವಾರ ಕಾಲ ವಾಸ್ತವ್ಯ ಮಾಡಬೇಕಾದ ಪ್ರಸಂಗ ಅದು. ಆ ಸಂಸ್ಥೆಯಲ್ಲಿ ಬೆಳಗ್ಗೆ ಪ್ರಾರ್ಥನೆಗೆ ವಚನ, ಊಟಕ್ಕೆ ಮುಂಚೆ ವಚನ, ಪ್ರತಿ ಸಮಾರಂಭಗಳಲ್ಲೂ ಪ್ರಾರ್ಥನೆಗೆ ವಚನ, ಒಟ್ಟಾರೆ ಕೀರ್ತನ, ಸಂಸ್ಕೃತಗಳಿಗೆ ಪರ್‍ಯಾಯವಾದ ವಚನ ಸಂಸ್ಕೃತಿಯನ್ನು ಅಲ್ಲಿ ನಾನು ಕಂಡೆ. ಸಾಹಿತ್ಯದ ಅನುಸಂಧಾನ ಇಲ್ಲಿ ಸಂವಹನದ ಉದ್ದೇಶ ಹೊಂದಿಲ್ಲ. ಜೀವನದ ಒಂದು ಭಾಗವಾಗಿ ಅಳವಡಿಸಿಕೊಳ್ಳಲ್ಪಟ್ಟಿದೆ. ಸಾಹಿತ್ಯವನ್ನು ಓದುವುದು, ಅನುಭವಿಸುವುದು, ಅರ್ಥಮಾಡಿಕೊಳ್ಳುವುದು, ಆನಂದಿಸುವುದು, ಅರ್ಥ ವಿವರಿಸಿ ಹೇಳುವುದು, ವ್ಯಾಖ್ಯಾನಿಸುವುದು, ವಿಮರ್ಶಿಸುವುದು ಇವೆಲ್ಲವುಗಳನ್ನು ದಾಟಿದ ಸಾಹಿತ್ಯವನ್ನು ಬಾಳುವ, ಬಾಳಿನಲ್ಲಿ ಸಾಹಿತ್ಯವನ್ನು ಬಳಸುವ ಪರಿ ಇದು. ಸಾಹಿತ್ಯವನ್ನು ಪ್ರಚಾರ ಮಾಡುವುದು, ಸಂವಹನಗೊಳಿಸುವುದು ಮತ್ತು ಸಾಹಿತ್ಯವನ್ನು ಬಾಳುವುದು ಇವುಗಳಲ್ಲಿ ಬಾಳುವುದೇ ದೊಡ್ಡದು ಅಲ್ಲವೆ? ಕಲೆಗಾಗಿ ಕಲೆ, ರಸಾನಂದಕ್ಕಾಗಿ ಕಲೆ ಎನ್ನುವ ಸಾಹಿತ್ಯ ಸಿದ್ಧಾಂತ, ಮನರಂಜನೆಗಾಗಿ ಮತ್ತು ವ್ಯಾಪಾರಕ್ಕಾಗಿ ಸಾಹಿತ್ಯ ಎಂಬ ಸಿದ್ಧಾಂತ, ಪೊಯೆಟ್ರಿ ಶುಡ್ ಅಡ್ರೆಸ್ ಸಫರಿಂಗ್-‘ಖಡ್ಗವಾಗಲಿ ಕಾವ್ಯ ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಎಂಬ ಸಿದ್ಧಾಂತ ಇವೆಲ್ಲವುಗಳಿಗಿಂತ ಸಾಹಿತ್ಯವನ್ನು ಬಾಳುವುದು ಮತ್ತು ಬಾಳುವುದಕ್ಕಾಗಿ ಸಾಹಿತ್ಯದ ಸಂಭವ ಆಗುವುದು ಮುಖ್ಯ. ಬಾಳಿಗಾಗಿ ಸಾಹಿತ್ಯ ರಚಿಸುವುದು ಅಲ್ಲ-ಬಾಳಿಗಾಗಿ ಸಾಹಿತ್ಯ ಸಂಭವಿಸುವುದು ಬಹಳ ಅಮೂಲ್ಯವಾದುದು. ನಮ್ಮಲ್ಲಿ ಇಂದಿಗೂ ಇಂಥ ಸಂಭವನೀಯತೆಗಳು ಇವೆ. ಭಜನೆ, ಕೀರ್ತನೆ, ಪ್ರಾರ್ಥನೆ, ಹರಿಕತೆ, ಆರಾಧನೆ, ಸುಗ್ಗಿ ಕುಣಿತ, ಕೋಲಾಟ ಇತ್ಯಾದಿ ಇತ್ಯಾದಿ ನೂರಾರು ಪ್ರದರ್ಶನ ಕಲೆಗಳು, ಆಚರಣೆಗಳಿವೆ. ಇವೆಲ್ಲವೂ ಮೊದಲು ಇದ್ದಂತೆ ಇಂದಿಗೂ ಇಲ್ಲ. ಮುಂದೂ ಉಳಿಯುವುದಿಲ್ಲ ಅದಕ್ಕಾಗಿ ನಾವು ಇವುಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನೇನೂ ಹೊತ್ತುಕೊಳ್ಳಬೇಕಿಲ್ಲ. ಆದರೆ ನಾವು ಸಾಹಿತ್ಯದ ಪರ್‍ಯಾಯ-ಸಾದ್ಯತೆಗಳನ್ನು ಶೋಧಿಸಬೇಕಾಗಿದೆ. ಕಾಲದ ಅಗತ್ಯಗಳಿಗೆ ತಕ್ಕ ಪರ್‍ಯಾಯ ಆಚರಣೆಗಳ ಶೋಧನೆ, ಬಳಕೆ ಬಹು ಮುಖ್ಯವಾದದ್ದು ಸಾಹಿತ್ಯವನ್ನು ತಲುಪಿಸಲಿಕ್ಕಾಗಿ ಸಾಹಿತ್ಯವನ್ನು ಸಂವಹನಗೊಳಿಸುವುದು ನಮ್ಮ ಅನುಸಂಧಾನಗಳ ಉದ್ದೇಶ ಆದರೆ ಅದು ಅಷ್ಟು ಯಶಸ್ವಿ ಆಗಲಾರದು.
ಈಗೀಗ ನಮ್ಮ ಹಳ್ಳಿಗಳು ಬದಲಾಗಿವೆ. ನಮ್ಮ ಹಳಿಗಳಲ್ಲಿ ಮೊದಲು ರಾಜಕೀಯ ಮೀಸಲಾತಿ, ಟೀವಿ, ಸಿನೆಮಾ, ಬಾರುಗಳು, ಕೇಬಲ್ಲುಗಳು ಬರುವುದಕ್ಕೆ ಮುಂಚೆ ಅವರ ನೈತಿಕ ಮೌಲ್ಯಗಳನ್ನು ನಮ್ಮ ಬಹುತೇಕ ಮೌಖಿಕ ಸಾಹಿತ್ಯ ಪ್ರಕಾರಗಳು, ಹರಿಕತೆ, ಬಯಲಾಟದಂತಹ ಪ್ರದರ್ಶನ ಸಂಗತಿಗಳು, ಯಾತ್ರೆ, ಭಜನೆ, ಕೋಲಾಟ ಇತ್ಯಾದಿಗಳು ರೂಪಿಸುತ್ತಿದ್ದವು. ಜನಗಳ ತತ್ವ, ನಡಾವಳಿ, ಜೀವನದರ್ಶನಗಳು ಮತ್ತೆ ಮತ್ತೆ ಇಂಥ ಸಾಹಿತ್ಯದ ಅನುಸಂಧಾನಗಳಿಂದ ರೂಪಗೊಳ್ಳುತ್ತಿದ್ದವು. ಆದರೆ ಇತ್ತೀಚೆಗೆ ಬಾರುಗಳು, ರಾಜಕೀಯ ಅಧಿಕಾರ, ಟೀವಿ ಕೇಬಲ್ಲುಗಳಲ್ಲಿ ಹರಿದು ಬರುವ ಸಿನಿಮಾಗಳು ಹಳ್ಳಿಗಳ ಸಾಂಸ್ಕೃತಿಕ ಜೀವನ ಮತ್ತು ದರ್ಶನಗಳನ್ನು ಬಹುಪಾಲು ರೂಪಿಸುತ್ತಿವೆ. ಸಾರ್ವರ್ತ್ರಿಕ ಶಿಕ್ಷಣದ ಪಾತ್ರ, ಸಾಹಿತ್ಯ ಕಲೆಗಳ ಅನುಸಂಧಾನದ ಪಾತ್ರ ತೀರಾ ಗೌಣವಾಗಿದೆ. ಬೇಡ ಬೇಡವೆಂದರೂ ಅವರ ಮನಸ್ಸು, ನಾಡಿಮಿಡಿತಗಳನ್ನೇ ಬದಲಿಸುವಷ್ಟು ಶಕ್ತಿಯನ್ನು ಟೀವಿ ಚಾನೆಲ್ಲು, ಸಿನೆಮಾ ಮತ್ತು ಸ್ಥಳೀಯ ರಾಜಕಾರಣಗಳು ಪಡೆದಿವೆ. ಹಳ್ಳಿಗಳ ಋತುಮಾನಗಳೂ ಬದಲಾಗುತ್ತಿವೆ. ಜೀವನ ವಿಧಾನಗಳೂ ಬದಲಾಗುತ್ತಿವೆ. ಆಧುನಿಕೋತ್ತರ ಸಂವೇದನೆ ಸ್ಥಳೀಯ ವಿವೇಚನೆ, ನಂಬಿಕೆಗಳನ್ನು ಧ್ವಂಸ ಮಾಡಿದೆ. ಪ್ರತಿಯೊಂದೂ ಪ್ಯಾಕೇಜಿನ ರೂಪದಲ್ಲಿ ದೊರೆಯುವುದರಿಂದ ಜನ ಗ್ರಾಹಕರು ಮಾತ್ರ ಆಗುವ ಅನಿವಾರ್‍ಯತೆ ಸೃಷ್ಟಿಯಾಗಿದೆ. ಎಲ್ಲವನ್ನೂ ಸಾಪೇಕ್ಷ ಎನ್ನುವ, ಎಲ್ಲವನ್ನೂ ನಿರಾಕರಿಸುವ, ಯಾವುದರಲ್ಲೂ ನಂಬಿಕೆ ಇರಿಸದ ಸ್ಥಿತಿಗೆ ಜನಸಮುದಾಯ ಬರುತ್ತಿದ್ದಾರೆ. ಇನ್ನು ಸಾಹಿತ್ಯದ ಅನುಸಂಧಾನಗಳು ಬದಲಾಗದೇ ಇರುತ್ತವೆಯೇ? ನಾವೆಲ್ಲ ಇಂದು ಸಾಹಿತ್ಯದ ಸ್ವರೂಪ, ಅಗತ್ಯ, ಪಾತ್ರ, ಪ್ರಾಮುಖ್ಯತೆಗಳನ್ನು ಗಂಭೀರವಾಗಿ ಮರುನಿರ್ವಚನೆ ಮಾಡಿಕೊಳ್ಳಬೇಕಾಗಿದೆ.
ಮೌಖಿಕ ಪರಂಪರೆಗಳಷ್ಟೇ ಅಲ್ಲದೆ ಪ್ರತಿಷ್ಟಿತ ಸಾಹಿತ್ಯ ಕೂಡ ಜನಕ್ಕೆ ಬೇಕೇ ಬೇಕು ಎಂಬ ಸ್ಥಿತಿ ಇಲ್ಲ. ಸಾಮಾಜಿಕ ನ್ಯಾಯ, ಸಮಾನತೆ, ಪ್ರಜಾಪ್ರಭುತ್ವೀಯ ಸ್ಥಿತಿ, ಉದ್ಯೋಗ, ಆತ್ಮಗೌರವ ಇತ್ಯಾದಿಗಳನ್ನು ತಂದುಕೊಡುವ ಶಕ್ತಿ ಆಧುನಿಕ ಸಾರ್ವರ್ತ್ರಿಕ ಶಿಕ್ಷಣಕ್ಕೆ ಇದೆ ಎಂಬ ಭ್ರಮೆ ಈಗೀಗ ನಿರಸನಗೊಳ್ಳುತ್ತಿದೆ. ಸಾಕ್ಷರರಾದವರೆಲ್ಲ ತಮ್ಮ ನಿಕೃಷ್ಟ ಜೀವನದಿಂದ ವಿಮೋಚನೆ ಪಡೆಯುತ್ತಾರೋ? ಇದೂ ದೊಡ್ಡ ಪ್ರಶ್ನೆ. ಪ್ರತಿಷ್ಠಿತ ಸಾಹಿತ್ಯಕ್ಕೆ ಜನರು ಅಪೇಕ್ಷಿಸುವುದನ್ನು ನೀಡುವುದು ಮತ್ತು ಜನರ ಅಪೇಕ್ಷೆಯನ್ನೇ ರೂಪಿಸುವುದು ಈ ಎರಡೂ ಪಕ್ಷಗಳ ನಡುವಿನ ಗೊಂದಲ ಕಾಡುವ ಪ್ರಶ್ನೆಯೇ ಆಗಬಾರದು. ಯಾಕೆಂದರೆ ಸಾಹಿತ್ಯ ಸಂಸ್ಕೃತಿಯನ್ನು ಮಾರಾಟದ ಸರಕನ್ನಾಗಿ ಉತ್ಪಾದನೆ ಮಾಡುವ ವ್ಯಾಪಾರಿಗಳಿಗೆ ಕಾಡುವ ಪ್ರಶ್ನೆ ಇದು. ಹಾಗಾಗಿ ಪ್ರತಿಷ್ಠಿತ ಸಾಹಿತ್ಯ ತನ್ನ ಅನುಸಂಧಾನಗಳ ವಲಯವನ್ನು ವಿಸ್ತರಿಸಿಕೊಳ್ಳುವ ಮಾರ್ಗದ ಬಗ್ಗೇನೇ ಹೆಚ್ಚು ಯೋಚಿಸುವುದು ಒಳಿತು.

ಚಿತ್ರಲೋಕ ಮತ್ತು ಸಾಹಿತ್ಯದ ಅನುಸಂಧಾನ
ಪ್ರತಿಷ್ಠಿತ ಸಾಹಿತ್ಯ ರಚನೆಯು ಇನ್ನೂ ಒಂದು ಪ್ರವೃತ್ತಿಯಾಗಿಯೇ ನಮ್ಮಲ್ಲಿ ಚಾಲ್ತಿಯಲ್ಲಿದೆ. ಆದರೆ ಸಿನಿಮಾವನ್ನು ನಮ್ಮ ಅನೇಕ ಜನ ತಮ್ಮ ವೃತ್ತಿಯನ್ನಾಗಿಯೇ, ಜೀವನೋಪಾಯದ ಮಾರ್ಗವನ್ನಾಗಿಯೇ ಮಾಡಿಕೊಂಡಿದ್ದಾರೆ. ಹಾಗಾಗಿ ಇಲ್ಲಿ ನಿರಂತರ ನಿರ್ಮಾಣ ಮತ್ತು ವಿತರಣಾ ಕಾರ್‍ಯ ನಡೆಯುತ್ತಲೇ ಇರುತ್ತದೆ. ಇದೊಂದು ಇಂಡಸ್ಟ್ರಿ. ಆದರೆ ಪ್ರಿತಿಷ್ಠಿತ ಸಾಹಿತ್ಯದ ರಚನೆಕಾರರಿಗೆ ತಮ್ಮ ಸಾಹಿತ್ಯ ರಚನೆಯನ್ನು ಒಂದು ಇಂಡಸ್ಟ್ರಿಯಾಗಿಸುವ ತುರ್ತು ಇಲ್ಲ. ಹಾಗಾಗಿ ಸಿನೆಮಾಗೂ ಪ್ರತಿಷ್ಠಿತ ಸಾಹಿತ್ಯಕ್ಕೂ ಅನುಸಂಧಾನದ ವಿನ್ಯಾಸಗಳು ಬೇರೆ ಇವೆ. ಸಂವಹನ ಸ್ವರೂಪಗಳೂ ಬೇರೆ ಬೇರೆ ಇವೆ.
ಕೇಬಲ್ ಟೀವಿ ಕಲ್ಚರು ಮತ್ತು ಲೌಡ್ ಸ್ಪೀಕರ್ ಕಲ್ಚರಿನಿಂದಾಗಿ ನಮ್ಮ ಸಮಾಜದ ಮೂಲೆ ಮೂಲೆಗಳಿಗೆ ಸಿನಿಮಾ ಹಾಡುಗಳು ಮುಟ್ಟುತ್ತಿವೆ. ಸಿನೆಮಾ ಹಾಡುಗಳನ್ನು ಹಾಡುವವರು, ಸಿನೆಮಾ ನೃತ್ಯಗಳನ್ನು ಮಾಡುವವರು, ಹಿರಿ-ಕಿರಿ ತೆರೆಗಳಲ್ಲಿ ನಟನೆ ಮಾಡುವವರು ನಮ್ಮ ಸಮಾಜದಲ್ಲಿ ಹೀರೋಗಳಾಗುತ್ತಿದ್ದಾರೆ. ಶಿಕ್ಷಣದ ಪಠ್ಯಕ್ರಮಗಳನ್ನು ಸಿದ್ಧಪಡಿಸುವವರು, ವಿಜ್ಞಾನದ ಜನಪಯೋಗಿ ಸಂಶೋಧನೆಗಳನ್ನು ಮಾಡುವಂಥವರು ಲೆಕ್ಕಕ್ಕೇ ಇಲ್ಲದಂತಾಗಿದೆ. ಮತ್ತೆ ಮತ್ತೆ ಯಾವ ಸಾಹಿತ್ಯ ಕಲೆಗಳು ನಿಯಂತ್ರಣವಿಲ್ಲದೆ ನಮ್ಮ ಜನರ ಮನಸ್ಸನ್ನು ಪ್ರವೇಶ ಮಾಡುತ್ತಿರುತ್ತವೋ ಅದನ್ನೇ ಸಮಾಜವು ಒಪ್ಪಿ ಬಳಸುವ ಪರಿಪಾಠವು ಬೆಳೆಯುತ್ತಿದೆ. ತಪ್ಪಿಸಿಕೊಳ್ಳಲು ಸಾದ್ಯವೇ ಇಲ್ಲದಾಗ ಒಪ್ಪಿಕೋಳ್ಳಲೇಬೇಕಲ್ಲ. ಸಂವಹನವು ಅತಿಯಾದರೆ ನಮ್ಮ ನಮ್ಮ ಭಾವಕೋಶ-ಮೌಲ್ಯಲೋಕವನ್ನೇ ಕಬಳಿಸಿಬಿಡುವ ಅಪಾಯ ಇರುತ್ತದೆ. ಸಿನೆಮಾ, ಟೀವಿಗಳಿಂದ ಇದು ಆಗುತ್ತಿದೆ. ನಮ್ಮಲ್ಲಿಂದು ಪ್ರತಿಷ್ಠಿತ ಸಾಹಿತ್ಯವು ಸಂವಹನದ ಕೊರತೆಯಿಂದ ನರಳುತ್ತಿದ್ದರೆ, ಚಿತ್ರಸಾಹಿತ್ಯವು ಅತಿಸಂವಹನದ ಕೊಬ್ಬಿನಿಂದ ಬೆಳೆಯುತ್ತಿದೆ.
ಶಾಸ್ತ್ರೀಯ ಸಂಗೀತ ಲೋಕ, ಸುಗಮ ಸಂಗೀತ ಲೋಕಗಳಿಗೆ ಅವುಗಳದ್ದೇ ಆದ ನಿರ್ಧಿಷ್ಟ ಟಾರ್ಗೆಟ್ ಆಡಿಯನ್ಸ್ ಇದ್ದಾರೆ. ಆದರೆ ಜನಪ್ರಿಯ ಸಿನೆಮಾ ಸಂಗೀತಲೋಕಕ್ಕೆ ಎಲ್ಲರೂ ಟಾರ್ಗೆಟ್ಟೆ. ರಂಗಭೂಮಿಯಲ್ಲಿ ವೃತ್ತಿ ಮತ್ತು ಜನಪದ ರಂಗಭೂಮಿಗಳು ಸರಿ ಸುಮಾರು ಎಲ್ಲ ಮಾಸ್ ಅನ್ನು ತಲುಪಲು ಯತ್ನಿಸಿದರೆ ಹವ್ಯಾಸಿ ರಂಗಭೂಮಿಯು ಬಹುಪಾಲು ಪ್ರತಿಷ್ಟಿತರಿಗೆ ಸೀಮಿತವಾಗಿದೆ. ಸಾಹಿತ್ಯ ಸಂಗೀತ ರಂಗಲೋಕಗಳಿಗೆ ಹೋಲಿಸಿದರೆ ಸಿನೆಮಾ ಲೋಕವು ಜನರನ್ನು ತಲುಪುವ ವೇಗ-ವ್ಯಾಪ್ತಿ ತುಂಬ ಜೋರಾಗಿದೆ. ಸಾಹಿತ್ಯ ಸಂಗೀತ ರಂಗಭೂಮಿಗಳನ್ನು ಬದುಕಿನ ಬೇರೆ ಬೇರೆ ಪ್ರಸಂಗಗಳಲ್ಲಿ ಬಳಸುವ ಫ್ರೀಕ್ವೆನ್ಸಿ ಮತ್ತು ಅವಕಾಶಗಳು ಸಿನೆಮಾಗೆ ಹೋಲಿಸಿದರೆ ತುಂಬ ಕಡಿಮೆ.
ಕೆಲವರು ಶ್ರೀರಾಮನವಮಿ ಉತ್ಸವಕ್ಕೆ ಸಂಗೀತ ಕಛೇರಿ ನಡೆಸಬಹುದು, ಇನ್ಯಾರೊ ಒಬ್ಬಿಬ್ಬರು ತಮ್ಮ ಗೃಹಪ್ರವೇಶಗಳಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ಮಾಡಬಹುದು, ಇನ್ಯಾರೊ ಬೆಟ್ಟದಲ್ಲಿ ಕವಿಗೋಷ್ಠಿ ನಡೆಸಬಹುದು. ಇವೆಲ್ಲವು ಸಂಗೀತ, ನಾಟಕ, ಸಾಹಿತ್ಯಗಳ ಅನುಸಂಧಾನಗಳೆ ಅದರೂ ಚಿತ್ರಸಾಹಿತ್ಯವನ್ನು ಬಳಸುವ ಮಟ್ಟದಲ್ಲಿ ನಾವಿಂದು ಇವುಗಳನ್ನು ಬಳಸುತ್ತಿಲ್ಲ. ನಮ್ಮಲ್ಲಿ ಮೌಖಿಕ ಪರಂಪರೆಯ ಸಾಹಿತ್ಯವನ್ನು ಲಿಪೀಕರಣ ಮಾಡಿ ಪ್ರತಿಷ್ಠಿತ ಸಾಹಿತ್ಯದಲ್ಲಿ ಅಕಾಮಡೇಟು ಮಾಡುವಂತೆ ಚಿತ್ರಸಾಹಿತ್ಯವನ್ನು ಲಿಪೀಕರಣ ಮಾಡುವ ಪರಿಪಾಠ ಇಲ್ಲ. ಇದು ಅಗತ್ಯವಿದೆಯೇ ಎಂಬುದು ಚರ್ಚಾರ್ಹ. ಆದರೆ ಹಾಡುಗಳ ಪಠ್ಯರೂಪಗಳು ಮಾರ್ಕೇಟಿನಲ್ಲಿ ಸಿಗುತ್ತವೆ. ಪುಸ್ತಕ ಮಳಿಗೆಗಳಲ್ಲಿ ಚಿತ್ರಗೀತೆಯ ಪುಸ್ತಕಗಳು ಸಿಗುವುದಿಲ್ಲ. ಬೀದಿ ಬದಿ ಬಜಾರಿನಲ್ಲಿ ಸಿಗುತ್ತವೆ. ಆಂಜನೇಯ ಸ್ತೋತ್ರ, ವರಮಹಾಲಕ್ಷ್ಮಿ ವ್ರತ, ಶನೇಶ್ವರ ಮಹಾತ್ಮೆ, ಇಂಥ ಬಜಾರ್ ಪುಸ್ತಕಗಳ ನಡುವೆ ಚಿತ್ರಗೀತೆಯ ಪುಸ್ತಕಗಳು ಇರುತ್ತವೆ. ಅಂದರೆ ಚಿತ್ರಗೀತೆಯ ಪುಸ್ತಕಗಳನ್ನು ಕೊಳ್ಳುವವರು ಪ್ರತಿಷ್ಠಿತ ಸಾಹಿತ್ಯ ಪುಸ್ತಕಗಳನ್ನು ಕೊಳ್ಳುವವರು ಬೇರೆ ಇದ್ದಾರೆ. ಇದು ಬೇರೆಯದೇ ಲೋಕ ಮತ್ತು ಇಂಥ ಲೋಕವನ್ನು ಪ್ರತಿಷ್ಠಿತ ಸಾಹಿತ್ಯ ಲೋಕವು ಇಂದು ಕೀಳೆಂದು ಕಾಣುತ್ತಿದೆ.
ನಾವು ಬೇಡ ಬೇಡವೆಂದರು ಟೀವಿ, ರೇಡಿಯೋ, ಸೀಡಿ, ಕ್ಯಸೆಟ್ಟುಗಳು, ಮೈಕ್‌ಸೆಟ್ಟುಗಳು ಇತ್ಯಾದಿಗಳ ಮೂಲಕ ಚಿತ್ರಗೀತೆಗಳು-ದೃಶ್ಯಗಳು ನಮ್ಮ ಕಣ್ಣಿಗೆ ಬೀಳುತ್ತಲೆ ಇರುತ್ತವೆ. ರಂಜನೆಯನ್ನು ಮಾರುವ ಕೊಳ್ಳುವ ಒಂದು ಉದ್ಯಮವಾಗಿ ಸಿನಿಮಾ ಲೋಕ ಬೆಳೆಯುತ್ತಲೆ ಇದೆ. ಚಿತ್ರಸಾಹಿತ್ಯವನ್ನು ಜನಕ್ಕೆ ತಲುಪಿಸುವ ಮಾರ್ಗಗಳನ್ನು ಹೆಚ್ಚಿಸುವ ದಾರಿಗಳು ಶಕ್ತವೂ ವ್ಯಾಪ್ತವೂ ಆಗುತ್ತಿವೆ. ಹಣದ ವಹಿವಾಟು ಪ್ರಬಲವಾದಾಗ ಅಲ್ಲಿ ಯಾವುದೇ ಸಂಕೃತಿಯನ್ನು ಸರಕಾಗಿ ಬಿಕರಿ ಮಾಡಲು ಜನರು ಹುಟ್ಟಿಕೊಳ್ಳುತ್ತಾರೆ. ಚಿತ್ರಸಾಹಿತ್ಯ ಜನರಿಗೆ ಬೇಕೋ ಬೇಡವೋ ಆದರೆ ನೀಡುವ ವ್ಯವಸ್ಥೆಯಂತೂ ಬಲವಾಗಿದೆ. ಹೀಗಾಗಿ ಸಂವಹನವೆಂದರೆ ಇಲ್ಲಿ ಕಲೆಯ ಮಾರುಕಟ್ಟೆ ವಿಸ್ತರಣೆ ಅಷ್ಟೆ. ಜಾಹೀರಾತು, ಚಿತ್ರಾಧಾರಿತ ಕಾರ್‍ಯಕ್ರಮಗಳು ಸಿನೆಮಾವನ್ನು ಇನ್ನಷ್ಟು ಜನಪ್ರಿಯಗೊಳಿಸುವ ತಂತ್ರಗಳಷ್ಟೆ. ಬೇಡಿಕೆ ಇರಲಿ ಇಲ್ಲದಿರಲಿ ಕೈಗಾರಿಕೆಗಳು ಅಪಾರ ಪ್ರಮಾಣದಲ್ಲಿ ಉತ್ಪಾದನೆ ಮಾಡುವಾಗ ಬೇಡಿಕೆ ಬೆಳೆಸುವ-ಮಾರ್ಕೇಟು ಬೆಳೆಸುವ ಕೆಲಸವನ್ನೂ ಆ ಕೈಗಾರಿಕೆಯೇ ಮಾಡಬೇಕಾಗುತ್ತದೆ. ಈ ಕೆಲಸವನ್ನು ಚಿತ್ರೋದ್ಯಮ ಇಂದು ಭಾರಿ ಪ್ರಮಾಣದಲ್ಲಿ ಮಾಡುತ್ತಿದೆ. ಹೀಗಾಗಿ ಸಂವಹನವೆಂದರೆ ಇಲ್ಲಿ ಮಾರುಕಟ್ಟೆ ತಂತ್ರಗಳಿಂದ ಜನರನ್ನು ತಲುಪುವುದು ಅದಕ್ಕೆ ಅವರನ್ನು ಬಲಿಮಾಡಿ ಹಣ ಮಾಡುವುದೆ ಆಗಿದೆ.

ಪುಸ್ತಕೋದ್ಯಮ ಮತ್ತು ಸಾಹಿತ್ಯದ ಅನುಸಂಧಾನ
ಸಾಹಿತ್ಯದೊಂದಿಗಿನ ಹತ್ತಾರು ಅನುಸಂಧಾನಗಳಲ್ಲಿ ಪುಸ್ತಕೋದ್ಯಮವೂ ಒಂದು. ಸಾಹಿತ್ಯ ಮಾತ್ರದಿಂದ ಪುಸ್ತಕೋದ್ಯಮ ಬದುಕುತ್ತಿಲ್ಲ. ಪುಸ್ತಕೋದ್ಯಮದಲ್ಲಿ ಮುದ್ರಿತವಾಗುವ, ಮಾರಾಟವಾಗುವ ಪುಸ್ತಕಗಳ ಸ್ವರೂಪ, ವಿಧಾನ ಮಾತ್ರ ಬಹುರೂಪಿಯಾಗಿ ಬೆಳೆದಿದೆ. ಮುದ್ರಣ ತಂತ್ರಜ್ಞಾನದಿಂದ ‘ಪುಸ್ತಕ ಸಂಸ್ಕತಿ’ ಎಂಬ ಪರಿಭಾಷೆ ಜಾರಿಗೆ ಬಂದಿದೆಯಾದರೂ ‘ಪುಸ್ತಕೋದ್ಯಮ’ ಎಂಬ ಪರಿಭಾಷೆಗೆ ನಮ್ಮಲ್ಲಿ ಚಲಾವಣೆ ಜಾಸ್ತಿ ಇದೆ. ಜೈನರಲ್ಲಿ ಗ್ರಂಥದಾನವೆಂಬ ಆಚರಣೆಯೊಂದು ಚಲಾವಣೆಯಲ್ಲಿತ್ತು. ಈಗಲೂ ಇದೆ. ಆದರೆ ಇದು ಎಲ್ಲ ಸಮುದಾಯದಲ್ಲೂ ಚಾಲ್ತಿಯಲ್ಲಿಲ್ಲ. ಪ್ರತಿಷ್ಠಿತ ಸಾಹಿತ್ಯ ರಚಿಸಿದ ಹೊಸಬರು ತಮ್ಮ ಪುಸ್ತಕಗಳನ್ನು ಸಹಿ ಮಾಡಿ ವಿದ್ವಾಂಸರಿಗೆ ನೀಡುವ ಪರಿಪಾಠ ಇಂದು ಇದೆ. ಆದರೆ ನಾವೂ ಬರೆಯುತ್ತೇವೆ ಎಂಬುದು ಬಲ್ಲಿದರಿಗೆ ತಿಳಿಯಲಿ, ನಮಗೂ ಮಾನ್ಯತೆ ಸಿಗಲಿ ಎಂಬ ಉದ್ದೇಶದಿಂದಲೆ ಇದು ನಡೆಯುತ್ತಿದೆ. ಎಸ್ಟಾಬ್ಲಿಶ್ಡ್ ಆದ ಬರಹಗಾರರು ಹೀಗೆ ಮಾಡುವುದಿಲ್ಲ.
ಪ್ರಕಟಿಸಿದ ಪುಸ್ತಕಗಳನ್ನು ಬಿಡುಗಡೆ ಮಾಡುವ ಸಂಪ್ರದಾಯವೊಂದು ನಮ್ಮಲ್ಲಿ ಚಾಲ್ತಿಯಲ್ಲಿದೆ. ಇದರಿಂದ ಕೃತಿಗಳ ಪರಿಚಯ ಹಲವರಿಗೆ ಆಗುತ್ತಿದೆ. ರಿಯಾಯಿತಿ ದರದ ಮಾರಾಟವೂ ಅಲ್ಪಮಟ್ಟಿಗೆ ಆಗುತ್ತದೆ. ಇತ್ತೀಚೆಗೆ ಗ್ರಂಥಾಲಯಗಳಿಗೂ ಪುಸ್ತಕೋದ್ಯಮಕ್ಕೂ ಬಿಡಿಸಲಾಗದ ನಂಟು ಬೆಳೆದಿದೆ. ಕರ್ನಾಟಕ ಸರ್ಕಾರಕ್ಕೆ ತನ್ನದೇ ಒಂದು ಪುಸ್ತಕ ನೀತಿ ಇಲ್ಲದಿರುವ ಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು ಹಲವರು ಅಕ್ರಮ ಮಾರಾಟ ಜಾಲವನ್ನೇ ಗ್ರಂಥಾಲಯದೊಂದಿಗೆ ಸೃಷ್ಟಿಸಿಕೊಂಡಿದ್ದಾರೆ. ಕೆಲವರು ಕಪ್ಪು ಪಟ್ಟಿಗೂ ಸೇರಿದ್ದಾರೆ. ಪ್ರತಿಯೊಂದು ಶಾಲೆ, ಕಾಲೇಜುಗಳಲ್ಲಿ, ಗ್ರಾಮ ಪಂಚಾಯ್ತಿಗಳಲ್ಲಿ ಗ್ರಂಥಾಲಯಗಳಿವೆ ಇವುಗಳಿಗೆ ಪುಸ್ತಕವೆಂಬ ಕಸ ಮಾರುವ-ಕೊಳ್ಳುವ ಜಾಲವೇ ಚಲಾವಣೆಯಲ್ಲಿದೆ. ಪುಸ್ತಕಗಳನ್ನು ಜನರ ಮನೆಗಳಿಗೆ, ಶಾಲೆ-ಕಾಲೇಜು, ಪಂಚಾಯ್ತಿ, ನಗರ ಕೇಂದ್ರ ಗ್ರಂಥಾಲಯಗಳಿಗೆ ತುಂಬಿದ ಮಾತ್ರಕ್ಕೆ, ಅಥವಾ ಜನ ಪುಸ್ತಕಗಳನ್ನು ಕೊಂಡ ಮಾತ್ರಕ್ಕೆ ಸಾಹಿತ್ಯ ಸಂವಹನ ಆಯಿತು ಎಂದು ತಿಳಿಯಬೇಕೇ? ಇಲ್ಲಿ ಸಂವಹನ ಎಂದರೆ ಪುಸ್ತಕಗಳನ್ನು ತಲುಪಿಸಲಷ್ಟೇ ಸಾಧ್ಯ. ಅದರ ಮುಂದುವರಿದ ಕ್ರಿಯೆಗಳು ತೀರಾ ವಯಕ್ತಿಕವಾದವು. ರೀಡಬಲಿಟಿ, ರೀಡಿಂಗ್ ಪಾಸಿಬಲಿಟಿಗಿಂತ ರೀಚಬಲಿಟಿ ಮಾತ್ರವೇ ಇಲ್ಲಿ ಮುಖ್ಯ. ಆದರೆ ಓದುವ ಅಭಿರುಚಿ ಮತ್ತು ವಾತಾವರಣ ನಿರ್ಮಾಣ ಮಾಡುವುದು ನಮ್ಮ ಮುಂದಿನ ಒಂದು ಬಹು ದೊಡ್ಡ ಸವಾಲು.
ಇವತ್ತು ಟೀವಿ ಚಾನೆಲ್ಲುಗಳ ಸಂಖ್ಯೆಯನ್ನು ನೋಡಿದರೆ ಭಯವಾಗುತ್ತದೆ. ರಿಮೋಟುಗಳಿಗಾಗಿ ಕೆಲವು ಮನೆಗಳಲ್ಲಿ ಜಗಳವೇ ನಡೆಯುತ್ತದೆ. ಕೆಲವರಂತೂ ಕೈಯ್ಯಲ್ಲಿ ರಿಮೋಟು ಹಿಡಿದರೆ ನಾಲ್ಕೈದು ಸೆಕೆಂಡುಗಳಿಗಿಂತ ಹೆಚ್ಚು ಕಾಲ ಯಾವ ಚಾನೆಲ್ಲನ್ನೂ ನೋಡುವುದಿಲ್ಲ. ಇದೊಂಥರಾ ಚಿತ್ತ ಚಂಚಲತೆ. ಏಕಾಗ್ರಶೂನ್ಯತೆಯ ರೋಗವನ್ನು ನಮ್ಮ ಜನಗಳಲ್ಲಿ ಹಬ್ಬಿಸುತ್ತಿದೆ. ಪುಸ್ತಕದ ಓದೆಂಬುದು ಶ್ರಮ-ಬಿಡುವು-ಏಕಾಗ್ರತೆ-ವಯಕ್ತಿಕ ತೊಡಗಿಕೊಳ್ಳುವಿಕೆಯನ್ನು ಬೇಡುವ ಕೆಲಸ. ಕೇಳುವ ನೋಡುವ ಜನ ರಿಮೋಟು ಕಯ್ಯಲ್ಲಿ ಹಿಡಿದು ಮೂರ್‍ನಾಲ್ಕು ಸೆಕೆಂಡುಗಳ ಕಾಲ ಕೂಡ ಏಕಾಗ್ರವಾಗಿ ಒಂದೆಡೆ ನಿಲ್ಲಲಾರರು ಎಂದ ಮೇಲೆ ಇವರು ಪುಸ್ತಕಗಳನ್ನು ಓದುತ್ತಾರಾ? ಪುಸ್ತಕ ಸಂಸ್ಕೃತಿಯನ್ನು ಬೆಳೆಸುತ್ತಾರಾ? ಇಂಥ ನಿಷ್ಕ್ರಿಯ ವೀಕ್ಷಕ-ಕೇಳುಗರೇ ಹೆಚ್ಚಾಗುತ್ತಿರುವ ಕಡೆ ಓದುವ ಅಭಿರುಚಿ-ವಾತಾವರಣವನ್ನು ಬೆಳೆಸುವುದು ಒಂದು ಸವಾಲೇ ಸರಿ.
ದೃಶ್ಯ ಮತ್ತು ಶ್ರವಣಗಳು ನಮ್ಮ ಮನಸ್ಸಿಗೆ ಸದಾ ಬಂದು ಬೀಳುವುದರಿಂದ ನಮ್ಮ ಬಹುತೇಕ ಜನ ಕೇವಲ ನೋಡುಗರೂ, ಕೇಳುಗರೂ ಆಗಿ ಪರಿವರ್ತಿತರಾಗುತ್ತಿದ್ದಾರೆ. ನೋಡುವ ಮತ್ತು ಕೇಳುವ ಕ್ರಿಯೆಗಳು ಓದುವ ಕ್ರಿಯೆಯನ್ನು ಕಡಿಮೆ ಮಾಡುತ್ತಿವೆಯಾ? ಒಂದಂತೂ ನಿಜ. ಓದುವಾಗ ತನ್ನದೇ ಆದ ಕಲ್ಪನಾ ಶಕ್ತಿ ಓದುಗನಿಗೆ ಇರಬೇಕಾಗುತ್ತದೆ. ಸಾಹಿತ್ಯ ಕಥನದೊಂದಿಗೆ ಓದುಗ ತಾನೂ ಯಾನಿಸಬೇಕಾಗುತ್ತದೆ. ಕಥನದ ಭಾವಲೋಕದೊಳಗೆ ಇರಬಹುದಾದ ಖಾಲಿ ಸ್ಪೇಸುಗಳನ್ನು ತುಂಬಿಕೊಳ್ಳಬೇಕಾಗುತ್ತದೆ. ಲಿಪಿಕ ಅಭಿವ್ಯಕ್ತಿಯನ್ನು ತನ್ನದೇ ದೃಶ್ಯಾತ್ಮಕ ಕಲ್ಪನೆಗಳಿಂದ ಓದುಗ ಸಜೀವಗೊಳಿಸಿ ಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಓದುಗ ತಾದಾತ್ಮ್ಯದಿಂದ ತೊಡಗಿಕೊಳ್ಳಬೇಕಾಗುತ್ತದೆ. ಇಂಥ ಕಡೆ ಓದುಗನಿಗೆ ಅವನದೇ ಸ್ಪೇಸು ಸಾಹಿತ್ಯದಲ್ಲಿ ಇರತ್ತದೆ. ಆದರೆ ದೃಶ್ಯ ಮತ್ತು ಶ್ರವಣಗಳು ಓದುಗನ ಕ್ರಿಯಾಶೀಲ ತೊಡಗುವಿಕೆಯನ್ನು ಕಡಿಮೆ ಮಾಡುತ್ತವೆ. ಅಥವಾ ಓದುಗನಿಗೆ ಇರಬಹುದಾದ ಕಷ್ಟಗಳನ್ನು ಸುಲಭ ಮಾಡುತ್ತವೆ. ಇದರಿಂದ ನಿತ್ಯ ಬದುಕಿನ ಜಂಜಡಗಳಿಂದ ಬೇಸತ್ತವರು ಸುಲಭ ಮನರಂಜನೆಗಾಗಿ ದೃಶ್ಯ-ಶ್ರವಣ ಮಾದ್ಯಮಗಳಿಗೆ ಹೋಗುತ್ತಾರೆ ಮತ್ತು ಬಹುತೇಕ ಜನ ತಮಗೆ ಕ್ರಿಯಾಶಿಲರಾಗಿ ತೊಡಗಿಕೊಳ್ಳುವ ಸಾಮರ್ಥ್ಯ-ಅವಕಾಶ ಇದ್ದರೂ ಸುಲಭ ಮನರಂಜನೆಗೆ ತಾವು ದಾಸರಾಗುತ್ತಾರೆ.
ನಾವು ಏನೇ ಹೇಳಿದರೂ ಓದು ಮತ್ತು ಆಲಿಸುವಿಕೆ ನಡೆಯದ ಯಾವ ಪುಸ್ತಕ ಮಾರುವ-ಕೊಳ್ಳುವ ಕೆಲಸಗಳೂ ಸಂವಹನದ ಪೂರ್ಣ ಕ್ರಿಯೆಗಳಲ್ಲ. ಪುಸ್ತಕ ಕೈಗೆ ಸಿಗುವಂತೆ ನೋಡಿಕೊಳ್ಳುವುದು; ಎಂದೋ ಬಿಡುವಾದಾಗ ಜನರಿಗೆ ಇಷ್ಟ ಬಂದಷ್ಟು ಓದಿಕೊಳ್ಳಲಿಕ್ಕೆ ಅನುವು ಮಾಡಿಕೊಡುವಷ್ಟರ ಮಟ್ಟಿಗೆ ಈ ಕೆಲಸ ಸಾರ್ಥಕ. ಆದರೆ ಧ್ವನಿ ರೂಪದ, ದೃಶ್ಯ ರೂಪದ ಬಿತ್ತರಗಳು ಇವೆಯಲ್ಲ ಇವಕ್ಕೆ ಸಂವಹನವನ್ನು ಜನಕ್ಕೆ ಬೇಕಿರಲಿ ಬೇಕಿಲ್ಲದಿರಲಿ ಬಿಕರಿ ಮಾಡುವ ಸಾಮರ್ಥ್ಯ ಇರುತ್ತದೆ. ಹೀಗೆ ಸಂವಹನವನ್ನು ಬಿಕರಿ ಮಾಡುವುದರಿಂದ ಅದು ಎಷ್ಟರಮಟ್ಟಿಗೆ ಜನರ ಮನಸ್ಸಿಗೆ ಇಳಿಯುತ್ತದೆ ಎಂಬುದು ಬೇರೆಯೇ ಪ್ರಶ್ನೆ. ಆದರೆ ಸಂವಹನ ದೃಷ್ಟಿಯಿಂದ ಲಿಪಿರೂಪಕ್ಕಿಂತ ಸಾಹಿತ್ಯದ ಧ್ವನಿ-ದೃಶ್ಯರೂಪಗಳು ಹೆಚ್ಚು ಬಲಶಾಲಿ ಎಂಬುದು ಮಾತ್ರ ನಿಜ.
ಸಿನಿಮಾ, ಟೀವಿ, ರೇಡಿಯೋ, ಸೀಡಿ ಪ್ಲೇಯರ್, ಮೋಬೈಲ್ ಇತ್ಯಾದಿ ಆದುನಿಕ ಮಾದ್ಯಮಗಳು ಸಂವಹನ (ಸಮೂಹ) ಮಾದ್ಯಮಗಳೆಂದೇ ಖ್ಯಾತವಾಗಿವೆ. ಹಾಗಾಗಿ ಇವುಗಳ ಮೂಲಕ ಬಿತ್ತರವಾಗುವ ಸಾಹಿತ್ಯಕ್ಕೆ ಸಂವಹನದ ಸಾಧ್ಯತೆ ಹೆಚ್ಚಾಗಿರುತ್ತದೆ. ಪುಸ್ತಕ ಕೂಡ ಸಂವಹನ ಮಾದ್ಯಮವೇ ಹೌದಾದರೂ ಅದು ಶ್ರಮ, ಬಿಡುವನ್ನು ಬೇಡುವ ಸಂವಹನ ಮಾದ್ಯಮ. ಕಾನ್ಸಂಟೆಶನ್ನು ಮತ್ತು ಸಾಕ್ಷರ ಕೌಶಲ್ಯವನ್ನು ಬೇಡುವ ಮಾದ್ಯಮ, ಇಲ್ಲದಿದ್ದರೆ ಇದಕ್ಕೆ ಮದ್ಯವರ್ತಿಗಳಾದರೂ ಬೇಕು. ಹಾಗಾಗಿಯೇ ನಮ್ಮಲ್ಲಿ ಶಿಕ್ಷಕರು, ಗಮಕಿಗಳು, ವ್ಯಾಖ್ಯಾನಕಾರರು, ವಿಮರ್ಶಕರು ಹುಟ್ಟಿಕೊಂಡಿದ್ದಾರೆ. ಇವರೆಲ್ಲ ಇಂದು ನಮ್ಮಲ್ಲಿ ಸಂವಹನದ ಮದ್ಯವರ್ತಿಗಳಾಗಿದ್ದಾರೆ. ನಿಜವಾಗಿಯೂ ಇವರು ಸಂವಹನಕ್ಕೆ ಸಹಕರಿಸುತ್ತಾರೋ? ಸಂವಹನವನ್ನು ಸಂಕೀರ್ಣಗೊಳಿಸುತ್ತಾರೋ? ಅಥವಾ ತಮ್ಮ ತಮ್ಮ ಓದುಗಳನ್ನು ಪ್ರಸ್ತುತಪಡಿಸುತ್ತಾರೋ? ಎಲ್ಲವೂ ಹೌದು.
ಕಂಪ್ಯೂಟರಿನಲ್ಲಿ ಅಷ್ಟೇ ಅಲ್ಲ ಮೊಬೈಲುಗಳಲ್ಲಿಯೂ ಎಫ್,ಎಂ-ಎಂ,ಎಂ,ಎಸ್-ಮೆಮರಿಕಾರ್ಡ್-ಇಂಟರ್ನೆಟ್ ಬಂದು ಏಕಾಕಿ ಆಗಿದ್ದೂ ಜನರೊಂದಿಗೆ ಇರುವ ಅನುಭವ, ವರ್ತನೆ ನಮ್ಮ ಜನಗಳಲ್ಲಿ ಹೆಚ್ಚುತ್ತಿದೆ. ಭೌತಿಕ ಸಮುದಾಯಗಳಿಗಿಂತ ಮಾನಸಿಕ ಸಮುದಾಯಗಳು ಹೆಚ್ಚಾಗುತ್ತಾ ಇವೆ. ಚಾನೆಲ್ಲಿನಿಂದ ಚಾನೆಲ್ಲಿಗೆ ನೆಗೆಯುವ ಜನ ಅಂತರ್ಜಾಲ-ಇಂಟರ್ನೆಟ್ಟಿನಲ್ಲಂತೂ ಬ್ಲಾಗಿನಿಂದ ಬ್ಲಾಗಿಗೆ, ಸೈಟಿನಿಂದ ಸೈಟಿಗೆ ನೆಗೆಯುತ್ತಾರೆ. ಒಂದು ಕಡೆ ನೆಲೆ ನಿಲ್ಲದ ಚಿತ್ತ ಚಾಂಚಲ್ಯ ವಿಕಾರದಿಂದ, ವ್ಯಕ್ತಿ ಪ್ರತಿಷ್ಠೆಯ ಪ್ರದರ್ಶನ ರೋಗದಿಂದ ನರಳುತ್ತಿದ್ದಾರೆ. ಇಂಟರ್ನೆಟ್ಟಿನಲ್ಲಿ ಪತ್ರಿಕೆಗಳನ್ನು ನಡೆಸುವ-ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುವ ಬ್ಲಾಗುಗಳನ್ನು ನಿರ್ಮಿಸುವ ಒಂದು ಮಹಾ ಜಾಲವೇ ಇದೆ. ಇಂಥ ಕಡೆ ನಡೆಯುವ ಸಾಹಿತ್ಯದ ಅನುಸಂಧಾನ ಬಹು ಸೀಮಿತವಾದ ಸಮುದಾಯಗಳಲ್ಲಿ ನಡೆಯುತ್ತಿರುತ್ತದೆ. ಇಲ್ಲಿ ಸಾಹಿತ್ಯವು ಹೆಚ್ಚು ಹೆಚ್ಚು ಮಾಹಿತಿಯ ರೂಪದಲ್ಲಿ ಸಂವಹನಗೊಳ್ಳುತ್ತದೆ. ಯಾವಾಗ ಬೇಕಾದರೂ ಯಾರು ಬೇಕಾದರೂ ನೋಡಬಹುದಾದ ಸರಕಾಗಿ ಇದು ಬಿದ್ದಿರುತ್ತದೆ. ಅಂತರ್ಜಾಲ ಶಿಕ್ಷಿತ ಸಮುದಾಯಕ್ಕೆ (ಕಂಪ್ಯೂಟರ್ ಲಿಟರೇಟ್ಸ್‌ಗೆ) ಮಾತ್ರ ಸೀಮಿತವಾದ ಜಗತ್ತು ಇದು. ನಮ್ಮಲ್ಲಿ ಈ ಬುಕ್ಕುಗಳನ್ನು ಓದುವ, ಈ ತಾಣಗಳನ್ನು ಎಡತಾಕುವ, ಬ್ಲಾಗುಗಳಲ್ಲಿ ಬರೆಯುವ ಜನಸಮುದಾಯ ತುಂಬಾ ಕಡಿಮೆ ಇದೆ. ಮತ್ತು ಅದು ಈಗೀಗ ವೇಗವಾಗಿ ವೃದ್ಧಿಯಾಗುತ್ತಿದೆ. ಇಂಥ ಗುಂಪುಗಳ ಬೆಳವಣಿಗೆಯಿಂದ ಪುಸ್ತಕದ ಓದಿನ ಮೇಲೆ ಎಂಥ ಪರಿಣಾಮ ಬೀಳುತ್ತದೆ ಎಂದು ಕಾಯ್ದು ನೋಡಬೇಕಾಗಿದೆ.
ಪುಸ್ತಕವನ್ನು ಮುದ್ರಿಸುವ, ಪ್ರಕಾಶಿಸುವ, ಮಾರುವ, ವಿತರಿಸುವ, ಕೊಳ್ಳುವ ಬಹುಮಂದಿ ಪುಸ್ತಕೋದ್ಯಮ ಕ್ಷೇತ್ರದಲ್ಲಿ ಇದ್ದಾರೆ. ಪುಸ್ತಕಗಳು ಈಗ ಸ್ಮೃತಿಕೋಶಗಳಂತೆ ಕೆಲಸ ಮಾಡುತ್ತಿವೆ. ಜ್ಞಾನ, ಮನರಂಜನೆ, ಮಾಹಿತಿ ಕೋಶಗಳಂತೆ ಕೆಲಸ ಮಾಡುತ್ತಿವೆ. ಬರವಣಿಗೆಯನ್ನು ಪುಸ್ತಕಗಳಲ್ಲೋ-ಪತ್ರಿಕೆಗಳಲ್ಲೋ ಪ್ರಕಟಿಸಬೇಕೆಂಬ ಆಕಾಂಕ್ಷೆ ಬರಹಗಾರರಲ್ಲಿ ಹೆಚ್ಚಾಗುತ್ತಿದೆ. ಕೆಲವು ಪತ್ರಿಕೆಗಳಲ್ಲಿ, ಮ್ಯಾಗಝಿನುಗಳಲ್ಲಿ ಪುಸ್ತಕಗಳನ್ನು ಪರಿಚಯಿಸುವ ರೂಢಿ ಇದೆ. ಇದರಿಂದಲೂ ಕೆಲ ಪುಸ್ತಕಗಳು ಕೆಲವರ ಗಮನಕ್ಕೆ ಬರುತ್ತವೆ. ಇದೂ ಕೂಡ ಒಂದು ರೀತಿಯ ಸಂವಹನವೇ. ಪುಸ್ತಕಗಳನ್ನು ಜನಕ್ಕೆ ತಲುಪಿಸುವುದು ಒಂದು ರೀತಿಯ ಸಂವಹನವಾದರೆ ಅದಕ್ಕಿಂತಲೂ ಮೊದಲು ಇಂಥಿಂಥ ಪುಸ್ತಕಗಳು ಇವೆ ಎಂಬ ಅರಿವನ್ನು ಜನರಿಗೆ ನೀಡುವುದು ಇನ್ನೂ ಪ್ರಾಥಮಿಕ ಹಂತದ ಸಂವಹನ. ಯಾವುದೇ ಸಾಂಸ್ಕೃತಿಕ ಉತ್ಪನ್ನವನ್ನು ಮಾರಲು ಅದು ಇದೆ ಎಂಬ ಬಗ್ಗೆ ತಿಳುವಳಿಕೆ ನೀಡುವುದೂ ಮುಖ್ಯವಲ್ಲವೇ? ಪುಸ್ತಕಗಳನ್ನು ಗಮನಕ್ಕೆ ತರುವ, ಕೊಳ್ಳಲು ಪ್ರೇರೇಪಿಸುವ, ಪುಸ್ತಕಗಳನ್ನು ಕೊಂಡು ಮನೆಗಳಲ್ಲಿ ಕಿರು ಗ್ರಂಥಾಲಯಗಳನ್ನು ಇಟ್ಟುಕೊಳ್ಳುವಂತೆ ಪ್ರತಿಯೊಂದು ಕುಟುಂಬವನ್ನು ಪ್ರೇರಿಸುವ ಮಾರ್ಗೋಪಾಯಗಳು ನಮ್ಮಲ್ಲಿ ಶಕ್ತಿಯುತವಾಗಿಲ್ಲ. ಒಂದೊಂದು ಶಿಕ್ಷಿತ ಕುಟುಂಬದಲ್ಲೂ ಟೀವಿ, ಫ್ರಿಜ್ಜು, ಕಂಪ್ಯೂಟರುಗಳು ಐಶಾರಾಮಿ ಆದರೂ ಅಗತ್ಯ ವಸ್ತುಗಳೆಂಬಂತೆ ಆಗುತ್ತಿವೆ. ಆದರೆ ಪುಸ್ತಕಗಳೇಕೆ ಹೀಗೆ ಆಗುತ್ತಿಲ್ಲ?

ಪತ್ರಿಕೋದ್ಯಮ ಮತ್ತು ಸಾಹಿತ್ಯದ ಅನುಸಂಧಾನ
ನಮ್ಮಲ್ಲಿ ಸಾಹಿತ್ಯಕ್ಕಾಗಿಯೇ ಮೀಸಲಾದ ಕಿರುಪತ್ರಿಕೆಗಳಿವೆ. ಸಾಹಿತ್ಯಕ್ಕೆ ವಾರಕ್ಕೊಮ್ಮೆ ಪುರವಣೆಗಳಲ್ಲಿ ಅವಕಾಶ ನೀಡುವ ದಿನಪತ್ರಿಕೆಗಳಿವೆ. ಸಾಹಿತ್ಯಕ್ಕೆ ಸಾಕಷ್ಟು ಸ್ಪೇಸು ನೀಡುವ ತಿಂಗಳ ಪತ್ರಿಕೆಗಳೂ, ಟ್ಯಾಬ್ಲ್ಯಾಯ್ಡ್ ಪತ್ರಿಕೆಗಳೂ, ವಾರಪತ್ರಿಕೆಗಳೂ ಇವೆ. ಕತೆಗೆಂದೇ ಮೀಸಲಾದ ಒಂದು ಪತ್ರಿಕೆಯೂ ಇದೆ. ಇಂಟರ್ನೆಟ್ ಪತ್ರಿಕೆಗಳೂ ಇವೆ. ಕೆಲ ಪತ್ರಿಕೆಗಳು ಲೇಖನ, ಕತೆ, ಕವಿತಾ ಸ್ಪರ್ಧೆಗಳನ್ನೂ ನಡೆಸುತ್ತಿವೆ. ದೀಪಾವಳಿ, ಯುಗಾದಿ, ಹೊಸ ವರ್ಷದ ವಿಶೇಷಾಂಕಗಳನ್ನೂ ಪ್ರಕಟಿಸುತ್ತಿವೆ. ಇಂತಹ ಅನುಸಂಧಾನಗಳಲ್ಲಿ ಸಾಹಿತ್ಯಕ್ಕೆ ವಿಶೇಷ ಸ್ಥಾನ ಮಾನ ಇದೆ. ಜನಪ್ರಿಯ ಪತ್ರಿಕೆಗಳು ಮತ್ತು ಸಾಹಿತ್ಯ ಪತ್ರಿಕೆಗಳು ಎಂದು ಸ್ಥೂಲವಾಗಿ ಪತ್ರಿಕೆಗಳನ್ನು ವಿಭಾಗಿಸಿಕೊಂಡರೆ ಜನಪ್ರಿಯ ಪತ್ರಿಕೆಗಳು ಉದ್ಯಮ ಎಂಬ ಹೆಸರಿಗೆ ತಕ್ಕ ಹಾಗೆ ನಡೆಯುತ್ತಿವೆ. ಇನ್ನು ಸಾಹಿತ್ಯ ಪತ್ರಿಕೆಗಳು ಯಾವತ್ತೂ ಉದ್ಯಮಗಳಾಗಿ ಬೆಳೆದಿಲ್ಲ. ಸಾಹಿತ್ಯ ಪತ್ರಿಕೆಗಳದ್ದು ಯಾವಾಗಲೂ ನಷ್ಟ-ಕಷ್ಟದ ವಿಚಾರವೇ. ಲಾಭದ ಪ್ರಶ್ನೆಯೇ ಇಲ್ಲ. ಜನಪ್ರಿಯತೆ ಮತ್ತು ಸಾಹಿತ್ಯಪ್ರಿಯತೆ ಎರಡನ್ನೂ ಮೈಗೂಡಿಸಿಕೊಂಡ ಪತ್ರಿಕೆಗಳು ನಮ್ಮಲ್ಲಿ ಇದ್ದವು. ಈಗಲೂ ಕೆಲವು ಇವೆ. ಪ್ರಸಾರ ಸಂಖ್ಯೆಯ ದೃಷ್ಟಿಯಿಂದ ನೋಡಿದರೆ ಜನಪ್ರಿಯ ಪತ್ರಿಕೆಗಳ ಪ್ರತಿಶತ ಹತ್ತರಷ್ಟೂ ಕೂಡ ಸಾಹಿತ್ಯ ಪತ್ರಿಕೆಗಳು ಓಡುತ್ತಿಲ್ಲ. ಇಲ್ಲಿ ಪ್ರಸಾರ ಸಂಖ್ಯೆ ಮುಖ್ಯವಲ್ಲವಾದರೂ ಸದ್ಯದ ಓದುಗರ ಸಂಖ್ಯೆಯನ್ನು ಇವು ನೇರವಾಗಿ ತಿಳಿಸುತ್ತವೆ. ಹಾಗೆ ನೋಡಿದರೆ ಸಾಹಿತ್ಯದ ಸಂವೇದನೆ ಇದ್ದ ಅತಿ ಹೆಚ್ಚು ಪ್ರಸಾರ ಸಂಖ್ಯೆ ಹೊಂದಿದ್ದ ಒಂದೇ ಪತ್ರಿಕೆ ಎಂದರೆ ಲಂಕೇಶ್ ಬದುಕಿದ್ದಾಗಿನ ಲಂಕೇಶ್ ಪತ್ರಿಕೆ. ಅದರ ಖ್ಯಾತಿಯನ್ನು ಇನ್ನಾವ ಪತ್ರಿಕೆಯೂ ಇದುವರೆಗೆ ಮುಟ್ಟಲಾಗಿಲ್ಲ. ಪ್ರಸಾರ ಸಂಖ್ಯೆಗೂ ಸಾಹಿತ್ಯ ಸಂವಹನ ಪ್ರಮಾಣಕ್ಕೂ ಒಂದು ಅನ್ಯೋನ್ಯವಾದ ಸಂಬಂಧ ಇದೆ. ಎಷ್ಟು ಸಂಖ್ಯೆಯ ಪತ್ರಿಕೆಗಳು ಓಡುತ್ತವೆಯೋ ಅದರ ಕನಿಷ್ಟ ಎರಡು ಪಟ್ಟು ಓದುಗರಿಗೆ ಅವು ತಲುಪುತ್ತಿವೆ ಎಂದು ನಾವು ಭಾವಿಸಬಹುದು.
ಜನಪ್ರಿಯ ಸಾಹಿತ್ಯ, ಸಿನಿಮಾ ಸಾಹಿತ್ಯ ಮತ್ತು ಪ್ರತಿಷ್ಠಿತ ಸಾಹಿತ್ಯಗಳಿಗೆ ಅವುಗಳದ್ದೇ ಆದ ಪತ್ರಿಕೆಗಳಿವೆ. (ಮೌಖಿಕಕ್ಕೆ ಈ ಸೌಲಭ್ಯ ಇಲ್ಲ. ಇದನ್ನು ವಿವರಿಸಿ ಹೇಳಬೇಕಿಲ್ಲ) ರಾಗಸಂಗಮ, ಕಿಲ್ಲರ್ ಅಂತಹ ಪತ್ರಿಕೆಗಳಲ್ಲಿ ಪ್ರತಿಷ್ಠಿತ ಸಾಹಿತಿಗಳ ಬರಹ ಬರುವುದಿಲ್ಲ. ದೇಶಕಾಲದಂತಹ ಪತ್ರಿಕೆಗಳನ್ನು ಈ ಜನಪ್ರಿಯರು ಕಣ್ಣೆತ್ತಿಯೂ ನೋಡುವುದಿಲ್ಲ. ಸಿನಿಮಾ ಪತ್ರಿಕೆಗಳಲ್ಲಂತೂ ಸಿನಿಮಾ ಸುದ್ದಿ, ಗಾಸಿಪ್ಪು, ಭಿನ್ನ ಆಂಗಲ್ಲಿನ ಫೋಟೋಗಳದ್ದೇ ದರಬಾರು. ಬೇರೆ ಸಾಹಿತ್ಯದ ಮಾತಿರಲಿ ಚಿತ್ರಸಾಹಿತ್ಯಕ್ಕೆ ಕೂಡ ಅಲ್ಲಿ ಎಳ್ಳಷ್ಟೂ ಪ್ರಾಶಸ್ತ್ಯವಿಲ್ಲ. ಇನ್ನು ದಿನಪತ್ರಿಕೆಗಳ ಪುರವಣೆಗಳಲ್ಲೂ ಕೂಡ ಪ್ರತಿಷ್ಠಿತ ಬರಹಗಳಿಗೆ ಮಾತ್ರ ಅವಕಾಶ. ಅವುಗಳನ್ನು ಓದುವವರು ಕೂಡ ಸೆಲೆಕ್ಟೆಡ್ ರೀಡರ್‍ಸ್. ಎಲ್ಲರೂ ಓದುವುದಿಲ್ಲ. ಎಲ್ಲರಿಗೂ ಅದು ಬೇಕಾಗಿಯೂ ಇಲ್ಲ. ರಂಗಭೂಮಿಗೆ ಹೋದರೆ ಅಲ್ಲೂ ಪ್ರತ್ಯೇಕ ಪತ್ರಿಕೆಗಳಿವೆ. ಪತ್ರಿಕೋದ್ಯಮದಲ್ಲಿ ಸಾಹಿತ್ಯಗಳನ್ನು ಅನುಸಂಧಾನ ನಡೆಸುವ ಬೇರೆ ಬೇರೆ ಲೋಕಗಳಿವೆ ಜನವರ್ಗ, ಅಭಿರುಚಿಗಳಿವೆ. ಒಂದು ಇನ್ನೊಂದಕ್ಕೆ ರೀಚಾಗುವುದಿಲ್ಲ. ರೀಚಾಗಬೇಕಾದ ಅಗತ್ಯವಿದೆಯೇ? ಇದು ಚರ್ಚಾರ್ಹ.
ಇನ್ನು ಸಾಹಿತ್ಯ ಪತ್ರಿಕೆಗಳ ವಿಚಾರಕ್ಕೆ ಬಂದರೆ ನಮ್ಮ ಬಹುತೇಕ ಸಾಹಿತ್ಯ ಪತ್ರಿಕೆಗಳು ಚಂದಾದಾರರ ಕೊರತೆಯಿಂದ ನರಳುತ್ತಿವೆ. ಈ ಪತ್ರಿಕೆಗಳು ನಿಯತವಾಗಿ ಬರುವುದಿಲ್ಲ. ಬಹುತೇಕ ಪತ್ರಿಕೆಗಳ ಸಂಪಾದಕರು ಬರಹಗಾರರಿಗೆ ನಿರ್ಧಿಷ್ಟ ಗೌರವ ಧನ ನೀಡುವುದಿಲ್ಲ. ಇವೆಲ್ಲವೂ ಪರಸ್ಪರ ಒಂದಕ್ಕೊಂದು ಸಂಬಂಧವುಳ್ಳ ವಿಚಾರಗಳು. ಆಕರ್ಷಕವಾಗಿ ಮುದ್ರಣವಾಗದಿರಲು, ನಿಯತವಾಗಿ ಪ್ರಕಟವಾಗದಿರಲು, ಗೌರವಧನ ನೀಡದಿರಲು, ಚಂದಾದಾರರು ಹಣ ನೀಡದೆ ಸಹಕರಿಸದಿರುವುದು ಮುಖ್ಯ ಕಾರಣ. ಒಂದೇ ಮಾತಿನಲ್ಲಿ ಹೇಳುವುದಾದರೆ ಸಾಹಿತ್ಯ ಪತ್ರಿಕೆಗಳು ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿವೆ. ಇದಕ್ಕೂ ಸಾಹಿತ್ಯ ಸಂವಹನಕ್ಕೂ ನೇರ ಸಂಬಂಧವಿದೆ. ಹೀಗೆ ಯಾಕಾಗುತ್ತಿದೆ? ಸಾಹಿತ್ಯವನ್ನು ಸಾಹಿತ್ಯ ಪತ್ರಿಕೆಗಳು ಸರಿಯಾಗಿ ಅನುಸಂಧಾನ ಮಾಡುತ್ತಿವೆಯಾ? ಪ್ರಾದೇಶಿಕ ಸಮಾನತೆ, ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವವಾದಿ ನೆಲೆಗಟ್ಟು ಸಾಹಿತ್ಯ ಪತ್ರಿಕೆಯ ಸಂಪಾದಕರಲ್ಲಿ ಪಾಲನೆಯಾಗುತ್ತದೆಯೋ? ಬಹುಪಾಲು ಸಂಪಾದಕರು ತಮ್ಮ ಅಭಿರುಚಿಗೆ ತಕ್ಕ ಲೇಖನ, ಕವಿತೆಗಳನ್ನು ಮಾತ್ರ ಪ್ರಕಟಿಸುತ್ತಾರೆ. ಗುಂಪುಗಾರಿಕೆ ಮಾಡುತ್ತಾರೆ. ಸಮುದಾಯ ಪಾಲುದಾರಿಕೆ ಇರಲ್ಲ. ವ್ಯಕ್ತಿಪ್ರತಿಷ್ಠೆ ಜಾಸ್ತಿ ಇರುತ್ತೆ. ಉದ್ಯಮಶೀಲತೆ ಇರಲ್ಲ. ಚಂದಾದಾದಾರರ ಜೊತೆ ನಿತ್ಯ ಸಂಪರ್ಕ ಇರಲ್ಲ. ಬಹುಮುಖಿ ಅಭಿರುಚಿಗಳಿಗೆ ಬೆಲೆ ಇರಲ್ಲ. ನಿಯತತೆ ಇರಲ್ಲ. ಹೆಸರಾಂತ ಬರಹಗಾರರ ಬರಹಗಳಿಗೆ ಮಾತ್ರ ಹೆಚ್ಚು ಗಮನ ನೀಡುತ್ತಾರೆ. ಉತ್ತಮವಾದ ಜಾಹೀರು ಜಾಲ, ವಿತರಣಾ ಜಾಲ ಇರುವುದಿಲ್ಲ. ಬರೀ ಖಾಸಗಿ ಪ್ರಸಾರಕ್ಕೆಂಬಂತೆ ಕೆಲವರು ವ್ಯವಹರಿಸುತ್ತಾರೆ. ಪತ್ರಿಕಾ ಪ್ರಕಟಣೆಯನ್ನು ಬಹುತೇಕರು ಪೂರ್ಣಕಾಲಿಕ ಉದ್ಯೋಗವೆಂದು ಸ್ವೀಕರಿಸದೆ ಹವ್ಯಾಸವೆಂಬಂತೆ ಸ್ವೀಕರಿಸುತ್ತಾರೆ. ಹೀಗೆ ಎಲ್ಲ ಕಡೆಗೂ ಹಲವು ಸಮಸ್ಯೆಗಳಿವೆ. ಹಾಗಾಗಿಯೇ ಸಾಹಿತ್ಯ ಪತ್ರಿಕೆಗಳು ಸಾಕಷ್ಟು ಜನರನ್ನು ತಲುಪುತ್ತಿಲ್ಲ.
ನಮ್ಮ ಬಹುತೇಕ ಪತ್ರಿಕೆಗಳು ಪುಸ್ತಕ ಪರಿಚಯ ವಿಮರ್ಶೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತವೆ. ನಮ್ಮ ಬಹುತೇಕ ಪತ್ರಿಕೆಗಳ ವಿನ್ಯಾಸ ಕವಿತೆಗಳನ್ನು ಫಿಲ್ಲರುಗಳನ್ನಾಗಿ ಬಳಸುವ ಹಾಗೆ ಇರುತ್ತದೆ. ಪತ್ರಿಕೆಗಳಲ್ಲಿ ಕತೆ ಕವಿತೆ ಪ್ರಬಂಧಗಳನ್ನು ಮಾತ್ರ ಪ್ರಕಟಿಸುವ ಪರಿಪಾಠ ಇದೆ. ಅಲ್ಲೊಂದು ಇಲ್ಲೊಂದು ಕಿರುನಾಟಕಗಳು, ಕಾದಂಬರಿ ಧಾರವಾಹಿಗಳು ಪ್ರಕಟವಾಗುವುದುಂಟು. ಕತೆ, ಕವಿತೆ, ಪ್ರಬಂಧಗಳಿಗೆ ಕೆಲವೊಮ್ಮೆ ಪದಮಿತಿಯ ನಿರ್ಬಂಧ ವಿಧಿಸುವುದುಂಟು. ಅಭಿರುಚಿಯ ನಿರ್ಬಂಧ ಅನೌಪಚಾರಿಕವಾಗಿ ಚಾಲ್ತಿಯಲ್ಲಿ ಇರುವುದೂ ಉಂಟು. ಇಂಥ ಕ್ರಮಗಳು ಸಾಹಿತ್ಯ ಸ್ವರೂಪವನ್ನೇ ನಿಯಂತ್ರಿಸುತ್ತವೆ. ಇಲ್ಲೇ ಇನ್ನೊಂದು ಮಾತು ಗಮನಾರ್ಹ ನಮ್ಮ ರೇಡಿಯೋ ಮತ್ತು ಟಿ.ವಿ ಚಾನೆಲ್ಲುಗಳು ಜನರಿಗೆ ತಲುಪಿಸುತ್ತಿರುವ ಸಾಹಿತ್ಯ ಎಂಥದ್ದು. ಬರಿ ಸಿನೆಮ ಆಧಾರಿತ ಮತ್ತು ದೃಶ್ಯಾಧಾರಿತ ಕಾರ್‍ಯಕ್ರಮಗಳ ಮೂಲಕ ಹಾಡು-ಕಥನಗಳನ್ನು ತಲುಪಿಸುತ್ತಿವೆ. ಟೀವಿಗಳಲ್ಲಿ ರೇಡಿಯೋಗಳಲ್ಲಿ ಕಾಣಿಸಿಕೊಳ್ಳುವ ಹಾಡುಗಾರರು ನಟರು ಕಲಾವಿದರು ಬಹುಪಾಲು ಪ್ರತಿಷ್ಠಿತ ಸಾಹಿತ್ಯ ವರ್ಗದ ಆಚೆಗಿನವರಾಗಿದ್ದಾರೆ. ಹಾಗೇ ಇಂದಿನ ಕಾಮಿಡಿ ಕಿಲಾಡಿಗಳು, ಜಾಣರ ಜಗಲಿ, ನಗೆ ಹಬ್ಬ ಇಂಥ ಕಾರ್‍ಯಕ್ರಮಗಳು ಎಂಥ ಸಾಹಿತ್ಯದ ಅನುಸಂಧಾನ ಮತ್ತು ಸಂವಹನವನ್ನು ನಡೆಸುತ್ತಿವೆ. ಬುದ್ಧಿ ಮತ್ತು ರಂಜನೆಗಳು ಬೆರೆತ ಜನಪ್ರಿಯ ಸೃಜನಶೀಲತೆಯ ವಿನ್ಯಾಸಗಳು ಇಲ್ಲಿ ಸೃಷ್ಟಿಯಾಗುತ್ತಿವೆ. ಮೌಖಿಕ ಪರಂಪರೆ, ಲಿಖಿತ ಪರಂಪರೆ, ನಾಟ್ಯ, ದೃಶ್ಯ, ಸಂಗೀತ ಪರಂಪರೆಗಳೆಲ್ಲ ಡೈಲೂಟಾಗಿ ಇಲ್ಲೂ ಒಂಥರದ ಫ್ಯೂಶನ್ ಕ್ರೀಯೇಟಾಗ್ತಾ ಇದೆ.
ಇನ್ನು ನಮ್ಮ ರೇಡಿಯೋಗಳಲ್ಲಿ ನಿತ್ಯ ಬಿತ್ತರವಾಗುವ ಚಿಂತನ ಕಾರ್‍ಯಕ್ರಮಗಳನ್ನು ಇಲ್ಲಿ ನೆನಪಿಸಿಕೊಳ್ಳಲೇಬೇಕು. ನಮ್ಮ ಆಧುನಿಕ ಸಾಹಿತ್ಯ ಸೃಷ್ಟಿ ಮತ್ತು ಸಾಹಿತ್ಯದ ಅನುಸಂಧಾನ ಎರಡೂ ಬ್ಲೆಂಡಾಗಿರುವ ಒಂದು ಕಾರ್‍ಯಕ್ರಮ ಇದು. ಚಿಂತನೆಗಳ ಮುದ್ರಿತ ರೂಪಗಳೂ ಅಲ್ಲಲ್ಲಿ ಸಿಗುತ್ತವೆ. ಹೊಸತು, ಪ್ರಜಾವಾಣಿ, ವಿಜಯ ಕರ್ನಾಟಕಗಳಲ್ಲಿ ಇಂಥದ್ದಕ್ಕೆ ಖಾಯಂ ಕಾಲಮ್ಮುಗಳಿವೆ. ಇಂಥ ಚಿಂತನ ಪ್ರಕಾರವು ಇತ್ತೀಚೆಗೆ ಸೃಷ್ಟಿಯಾಗುತ್ತಿರುವ ಒಂದು ಹೊಸ ಸಾಹಿತ್ಯ ಪ್ರಕಾರವೇ ಆಗಿದೆ. ಚಿಂತನ ಸಾಹಿತ್ಯ ಎಂದು ಇದನ್ನು ಕರೆಯಬಹುದು. ಲಂಕೇಶ್, ಅಗ್ನಿ, ಕನ್ನಡ ಟೈಮ್ಸ್ ಪತ್ರಿಕೆಗಳಲ್ಲಿ ಪ್ರಕಟವಾದ, ಆಗುತ್ತಿರುವ ಕಟ್ಟೆ ಪುರಾಣ, ಒಕ್ಕಲ ಒನಪು, ಭಳಾರೆ ವಿಚಿತ್ರಂ, ಅಮಾಸೆ ಟೈಮ್ಸ್ ಇಂಥ ಕಾಲಂಗಳು ಹೊಸ ಪ್ರಕಾರಗಳನ್ನು ಸೃಷ್ಟಿಸುತ್ತಿವೆ. ಲಲಿತ ಸಾಹಿತ್ಯ ಎಂದೇ ಇವನ್ನು ಕರೆಯಬಹುದು. ಪತ್ರಿಕೆಗಳು ಸಾಹಿತ್ಯದ ಅನುಸಂಧಾನಕ್ಕೆ ತೊಡಗಿದಾಗ ಹೀಗೆ ಸಾಹಿತ್ಯ ಜನಕ್ಕೆ ತಲುಪುತ್ತಲೇ ಹೊಸ ವಿನ್ಯಾಸಗಳನ್ನು ಪಡೆಯುತ್ತ ಹೋಗುತ್ತದೆ.

ಹೋರಾಟದ ಹಾಡುಗಳು-ಸಾಹಿತ್ಯದ ಅನುಸಂಧಾನ
ಸಾಹಿತ್ಯದ ಹಲವು ರೀತಿಯ ಅನುಸಂಧಾನಗಳಲ್ಲಿ-ಬಳಕೆಯ ವಿಧಾನಗಳಲ್ಲಿ ಮುಷ್ಕರಗಳು, ಹೋರಾಟಗಳು, ಚಳುವಳಿಗಳು ಬಳಸಿಕೊಳ್ಳುವ ಮಾರ್ಗಗಳು ಕೆಲವು. ನಮ್ಮಲ್ಲಿ ಬಂಡಾಯ-ದಲಿತ ಚಳುವಳಿಯು ಹೋರಾಟದ ಹಾಡುಗಳೆಂದೇ ಹಲವು ಹಾಡುಗಳನ್ನು ಚಲಾವಣೆಗೆ ತಂದಿದೆ. ಎಷ್ಟೋ ಸಭೆ-ಸಮಾರಂಭ-ಪ್ರತಿಭಟನೆ-ಮೆರವಣಿಗೆ-ಮುಷ್ಕರಗಳಲ್ಲಿ ಹಾಡಲಾಗುವ ಹೋರಾಟದ ಹಾಡುಗಳು ಬರೆದವರ ಯಾವ ಕಾಪಿರೈಟಿನ ಗೋಜೂ ಇಲ್ಲದೆ ಜನಮನಗಳಲ್ಲಿ ಬೆರೆತು ಹೋಗಿವೆ. ಜನಗಳಿಗೆ ತಮ್ಮದೇ ದನಿಯನ್ನು ನೀಡಿ ಅವರನ್ನು ಬಡಿದೆಚ್ಚರಿಸುವ ಉದ್ದೇಶ ಇರುವ-ಜನಸಂಘಟನೆ ಮತ್ತು ಜನಭಾಗಿತ್ವ ಬೇಡುವ ಈ ಹೋರಾಟದ ಹಾಡುಗಳು ಸರಳ ಸಂವಹನ ಗುಣವನ್ನು ತಮ್ಮಲ್ಲಿ ಒಳಗೊಂಡಿರುತ್ತವೆ. ಭಾಷೆಯ ದೃಷ್ಟಿಯಿಂದ ಹೇಳುವುದಾದರೆ ಜನಭಾಷೆಯಲ್ಲಿ ರಚಿತವಾದ ಸಾಹಿತ್ಯ ಇದು. ಪ್ರತಿಷ್ಠಿತ ಸಾಹಿತ್ಯ ರೂಪಗಳು ಜನಭಾಷೆಗಳ ಮೂಲಕ ಜನಗಳತ್ತ ಸಾಗಿದ್ದಕ್ಕೆ ನಮ್ಮ ಹೋರಾಟದ ಹಾಡುಗಳು ಉದಾಹರಣೆ.
‘ಖಡ್ಗವಾಗಲಿ ಕಾವ್ಯ ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಎಂಬ ಬಂಡಾಯ ಸಂಘಟನೆಯ ಘೋಷವಾಕ್ಯದ ‘ಜನ’ದ ಪರಿಕಲ್ಪನೆಯಲ್ಲಿ ಪ್ರತಿಷ್ಠಿತ ವರ್ಗಕ್ಕಿಂತ ಕೆಳವರ್ಗದ ಜನ ಎಂಬ ತಿಳುವಳಿಕೆ ಇದೆ. ಇಂಥ ಘೋಷಣೆಯ ದಲಿತ-ಬಂಡಾಯ ಚಳುವಳಿಯಲ್ಲಿ ಆ ಸಮುದಾಯಕ್ಕೆ ಸೇರಿದ ವಿದ್ಯಾವಂತ ಜನ ಪ್ರತಿಷ್ಠಿತ ಸಾಹಿತ್ಯ ವರ್ಗಕ್ಕೆ ಮತ್ತು ಜನವರ್ಗಕ್ಕೆ ಸೇರ್ಪಡೆಗೊಳ್ಳುವ ಬೇರೆ ಮಾತುಗಳಲ್ಲಿ ಹೇಳುವುದಾದರೆ ‘ಪ್ರಧಾನ ಧಾರೆ’ಗೆ ಸೇರಿಕೊಳ್ಳುವ ಉದ್ದೇಶ ಬಹುತೇಕ ಸಾಧಿತವಾದಂತೆ ಕಾಣುತ್ತದೆ. ಆದರೆ ಇಲ್ಲಿನ ಸಾಹಿತ್ಯಕ ಅನುಸಂಧಾನಗಳು ತಮ್ಮ ಪರಂಪರೆಯ ಪುನರುತ್ಥಾನ ಮಾಡದೆ ಅದರ ಸಾಮಾಜಿಕ ಕೀಳುತನವನ್ನು ಬಿಡುಗಡೆಗೊಳಿಸುವ ಕೆಲಸ ಮಾಡಿವೆ. ತಮ್ಮ ಪರಂಪರೆಯ ಸತ್ವವನ್ನು ಪ್ರತಿಷ್ಟಿತ ಸಾಹಿತ್ಯ ರಚನೆಗೆ ಅಂತಃಸತ್ವವಾಗಿ ಸ್ವೀಕರಿಸಿವೆ. ತಮ್ಮ ಪಾರಂಪರಿಕ ಚಹರೆಗಳಿಂದ ಬಿಡುಗಡೆಗೊಳ್ಳುತ್ತ ಪ್ರತಿಷ್ಠಿತ ಸಾಹಿತ್ಯವನ್ನು ತನ್ನದೇ ನೆಲೆಯಲ್ಲಿ ಅನುಸರಿಸುವ ಮತ್ತು ‘ಕುಲಗೆಡಿಸುವ’ ಎರಡೂ ಕೆಲಸವನ್ನು ಏಕಕಾಲಕ್ಕೆ ಮಾಡಿವೆ. ಹೀಗಾಗಿ ದಲಿತ ಸಾಹಿತ್ಯವು ಪ್ರಧಾನ ಧಾರೆಯಲ್ಲಿರದ ದಲಿತರಿಗಾಗಿ ಬರೆದ ಸಾಹಿತ್ಯವಾಗಿರದೆ-ದಲಿತರು ಪ್ರತಿಷ್ಠಿತರಿಗಾಗಿ ಬರೆದ ಸಾಹಿತ್ಯವಾಗಿದೆ. (ಈ ಪ್ರತಿಷ್ಟಿತರಲ್ಲಿ ದಲಿತರೂ ಸೇರಿದಂತೆ ಎಲ್ಲ ಜಾತಿಯವರೂ ಇದ್ದಾರೆ) ಇಲ್ಲಿ ಪ್ರತಿಭಟನೆ-ಬಂಡಾಯವನ್ನು ಗುರಿಯಾಗಿಸಿಕೊಂಡ ಸಾಹಿತ್ಯ ಚಳುವಳಿಯ ಗುರಿಯು ಬುದ್ಧ, ಬಸವ, ಅಂಬೇಡ್ಕರರಂತೆ ತಮ್ಮವರನ್ನು ಮೇಲಿನ ಸ್ತರಕ್ಕೆ ತರದೆ-ವಿದ್ಯಾವಂತ ದಲಿತರನ್ನು ಪ್ರತಿಷ್ಠಿತರನ್ನಾಗಿ ಮಾಡುವ-ಪ್ರತಿಷ್ಠಿತರ ಹುನ್ನಾರಗಳನ್ನೆಲ್ಲ ಕಲಿತು ಅವರಲ್ಲಿ ತಾವೂ ಮಾನ್ಯರಾಗುವ ಗುರಿಯನ್ನು ಸಾಧಿಸಿದಂತೆ ಕಾಣುತ್ತದೆ. ಅಂದರೆ ದಲಿತ ಬಂಡಾಯ ಸಾಹಿತ್ಯವು ಯಾರಿಗೆ ತಲುಪುತ್ತಿದೆ;ಯಾತಕ್ಕಾಗಿ ಬಳಕೆಯಾಗುತ್ತಿದೆ ಎಂಬುದು ಇಲ್ಲಿ ಚರ್ಚಾರ್ಹ ಪ್ರಶ್ನೆ. ಇಂಥ ಕಡೆ ಸಾಹಿತ್ಯದ ಸಂವಹನದ ಪ್ರಶ್ನೆ ಅಪ್ರಸ್ತುತ. ಸಾಹಿತ್ಯಕ್ಕೆ ಕೆಲವು ನಿಯೋಗಗಳು, ಕೆಲವು ಕಾರ್‍ಯಗಳು (ಫಂಕ್ಷನ್ಸ್) ಇರುತ್ತವೆ. ಆ ಕಾರ್‍ಯಗಳನ್ನು ಆ ಸಾಹಿತ್ಯಗಳು ಮಾಡುತ್ತವೆ. ಇಂತಹ ಕಡೆ ಸಾಹಿತ್ಯದ ಬಳಕೆಯ ಆಯಾಮ (ಕಾರ್‍ಯ) ಪ್ರಾಥಮಿಕ; ಅದರ ಸಂವಹನ ಆನುಷಂಗಿಕ.

ಸರ್ಕಾರಿ ಪ್ರಾಯೋಜಿತ ಕಾರ್‍ಯಕ್ರಮಗಳು ಮತ್ತು ಅನುಸಂಧಾನಗಳು
ಕುಟುಂಬ ಯೋಜನೆಯ ಪ್ರಚಾರ ಕಾರ್‍ಯಕ್ರಮ, ಏಡ್ಸ್, ಪೋಲಿಯೋ ಲಸಿಕೆ, ಸಾಕ್ಷರ ಕಾರ್‍ಯಕ್ರಮಗಳು, ಪಂಚಾಯ್ತಿ ಸದಸ್ಯರ ತರಬೇತಿ ಕಾರ್‍ಯಕ್ರಮಗಳು ಇಂಥ ಸರ್ಕಾರಿ ಪ್ರಾಯೋಜಿತ ಕಾರ್‍ಯಕ್ರಮಗಳಲ್ಲೂ ಸಾಹಿತ್ಯದ ಅನುಸಂಧಾನಗಳಿರುತ್ತವೆ. ಇಂಥ ಕಾರ್‍ಯಕ್ರಮಗಳಿಗೆಂದೇ ಹಲವಾರು ಹಾಡು, ಬೀದಿನಾಟಕಗಳನ್ನು ರಚಿಸಿ ಬಳಸಲಾಗುತ್ತದೆ. ಬೇರೆ ಬೇರೆ ಉದ್ದೇಶಗಳಿಗಾಗಿ ಸಾಹಿತ್ಯವನ್ನು ಬಳಸುವ ಉದಾಹರಣೆಗಳಿವು. ಜನಗಳಿಗೆ ಜಾಗೃತಿ ಮೂಡಿಸುವುದು ಇಂಥ ಕಡೆ ಉದ್ದೇಶವಾಗಿರುತ್ತದೆಯೇ ವಿನಾಃ ಸಾಹಿತ್ಯವನ್ನು ಸಂವಹನಗೊಳಿಸುವುದು ಇಲ್ಲಿನ ಉದ್ದೇಶವಲ್ಲ. ಸರ್ಕಾರಿ ಉದ್ದೇಶಗಳನ್ನು ಸಂವಹನಗೊಳಿಸುವ ಒಂದು ಯಶಸ್ವಿ ಸಂವಹನ ಮಾದ್ಯಮವಾಗಿ ಇಂಥ ಕಡೆ ಸಾಹಿತ್ಯವನ್ನು ಬಳಸಲಾಗುತ್ತದೆ. ಇಲ್ಲೆಲ್ಲ ಸಾಹಿತ್ಯ ಸಂವಹನ ಆಗಬೇಕಾದ ಸಾಮಾಗ್ರಿ ಅಲ್ಲ. ಅನ್ಯ ಸಂದೇಶ-ಸಾಮಾಗ್ರಿಗಳ ಸಂವಹನದ ಮಾದ್ಯಮ. ಸಾಹಿತ್ಯವೂ ಒಂದು ಸಮೂಹ ಮಾದ್ಯಮ. ಪ್ರಚಾರ ಮಾದ್ಯಮ.
ಇತ್ತೀಚಿನ ಜಾನಪದ ಜಾತ್ರೆ ಕಾರ್ಯಕ್ರಮ ಇಲ್ಲಿ ಉಲ್ಲೇಖಾರ್ಹ. ಇದು ಮುಖ್ಯವಾಗಿ ಜಾನಪದ ಪ್ರದರ್ಶನ ಕಲೆಗಳ ಶೋಧ ಮತ್ತು ಆಧುನೀಕರಣ ಕಾರ್‍ಯ. ಈ ಕಾರ್‍ಯಕ್ರಮವು ಕಲಾಪ್ರಕಾರಗಳನ್ನು ಬೇರೆ ಬೇರೆ ಜನಸಮುದಾಯಗಳಿಗೆ ತಲುಪಿಸುವ, ವೃತ್ತಿ ಕಲಾವಿದರು, ಪರಿಣತರು, ಆಸಕ್ತ ಶಾಲಾ ಕಾಲೇಜು ವಿದ್ಯಾರ್ಥಿ ಕಲಾವಿದರು, ಹವ್ಯಾಸಿ ಜಾನಪದ ಕಲಾವಿದರನ್ನೆಲ್ಲ ಒಟ್ಟಿಗೆ ಒಂದೇ ವೇದಿಕೆಯಲ್ಲಿ ಮುಖಾಮುಖಿ ಮಾಡುವ, ಕೆಲವು ಕಲೆಗಳಿಗೆ ಮರುಜೀವ ನೀಡುವ ಹೀಗೆ ಹಲವು ಉದ್ದೇಶಗಳನ್ನು ಒಳಗೊಂಡು ನಡೆಯುತ್ತಿದ್ದ ಕಾರ್‍ಯಕ್ರಮ. ಸಾಹಿತ್ಯ ಇಲ್ಲಿ ಏನಿದ್ದರೂ ಸಪೋರ್ಟೀವ್ ಅಥವಾ ಸಪ್ಲಿಮೆಂಟರಿ ಎಲಿಮೆಂಟು ಅಷ್ಟೆ. ಸಾಹಿತ್ಯ ಎನ್ನುವುದು ಕೆಲವೊಮ್ಮೆ ತಾನೇ ಸ್ವಯಂ ಏಕಮೇವ ಪ್ರಕಾರವಾಗಿಯೂ ಕೆಲವೊಮ್ಮೆ ಬೇರೆ ಬೇರೆ ಕಲಾ ಪ್ರಕಾರಗಳಲ್ಲಿ ಒಂದಾಗಿ ಬೆರೆತು ಸಂಯುಕ್ತ ಕಲೆಗಳ ಜೊತೆ ಅನುಸಂಧಾನಕ್ಕೆ ಗುರಿಯಾಗುವ ಪೂರಕ ಅಂಗಾಂಶವಾಗಿಯೂ ಇರುತ್ತದೆ. ಇಂಥ ಕಾರ್‍ಯಕ್ರಮವು ನಗರಗಳ ಟೀವಿ, ಸಿನೆಮಾಗಳಿಂದ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳುವ ಕೆಲಸ ಮಾಡುತ್ತಿದ್ದರೂ ಇದು ಮುಖ್ಯವಾಗಿ ಕಲಾವಿದರನ್ನು ಪ್ರೋತ್ಸಾಹಿಸಿ, ಬೆಳೆಸುವ ಕೆಲಸವನ್ನು ಮಾತ್ರ ಪರಿಣಾಮಕಾರಿಯಾಗಿ ಮಾಡುತ್ತಿzಮಿಂತಹ ಕಡೆ ಸಾಹಿತ್ಯ-ಅದರ ಸಂವಹನ ಎಲ್ಲ ಗೌಣ. ಕಲಾಪ್ರದರ್ಶನವೇ ಪ್ರಧಾನ. ಸಾಹಿತ್ಯದ ಸಂವಹನವು ಇಲ್ಲಿ ಆನುಷಂಗಿಕ ಮಾತ್ರ.

ಶಿಕ್ಷಣ ಪಠ್ಯ-ಸಾಹಿತ್ಯದ ಅನುಸಂಧಾನ ಮತ್ತು ಸಂವಹನ
ಶಿಕ್ಷಣ ವ್ಯವಸ್ಥೆಯಲ್ಲಿ ಬಹುಪಾಲು ಹಂತಗಳಲ್ಲಿ ಕನ್ನಡ ಸಾಹಿತ್ಯ; ಕನ್ನಡ ಭಾಷೆಯ ತಿಳುವಳಿಕೆ ಇಲ್ಲದೇ ಪದವಿಗಳನ್ನು ಪಡೆಯುವ ಅವಕಾಶ ಇಂದು ಇದೆ. ಇಂಥ ಕಡೆ ಸಾಹಿತ್ಯದ ಅನುಸಂಧಾನವೇ ಇಲ್ಲ. ಹಾಗಾಗಿ ಇಲ್ಲಿ ಸಂವಹನದ ಪ್ರಶ್ನೆಯೂ ಇಲ್ಲ. ಶಿಕ್ಷಣದಲ್ಲಿ ಇವತ್ತು ಮುಕ್ತ ಶಿಕ್ಷಣ (ದೂರ ಶಿಕ್ಷಣ) ಮತ್ತು ಸಾರ್ವರ್ತ್ರಿಕ ಶಿಕ್ಷಣ ಎಂಬ ಎರಡು ಬಗೆ ಇದೆ. ಇವೆರಡರಲ್ಲೂ ಪಠ್ಯ ಬೋಧನೆ-ಅಧ್ಯಯನ-ಪರೀಕ್ಷೆ ಈ ಮೂರು ಹಂತಗಳಲ್ಲಿ ಸಾಹಿತ್ಯದ ಅನುಸಂಧಾನ ನಡೆಯುತ್ತಿದೆ. ಶಿಶುಪಾಲನಾ ಕೇಂದ್ರಗಳಂತೆ, ಪ್ರೌಢಪಾಲನಾ, ಸಮಯನಿರ್ವಹಣಾ ಕೇಂದ್ರಗಳಂತೆ ಕೆಲಸ ಮಾಡುತ್ತಿರುವ ಶಾಲೆಗಳಲ್ಲಿ, ಪದವಿ ಉತ್ಪಾದನಾ ಕೇಂದ್ರಗಳಂತೆ ಆಗಿರುವ ಕಾಲೇಜು ವ್ಯವಸ್ಥೆಯಲ್ಲಿ ಸಾಹಿತ್ಯದ ಅನುಸಂಧಾನವು ಬಹು ಮುಖ್ಯವಾಗಿ ಒಂದು ಬಿಕ್ಕಟ್ಟನ್ನು ಎದುರಿಸುತ್ತಿದೆ. ಅದೆಂದರೆ: ಶಿಕ್ಷಣದ ಬಹುಮುಖಿ ಉದ್ದೇಶಗಳು ನಿರ್ಲಕ್ಷಕ್ಕೆ ಗುರಿಯಾಗುತ್ತ ಪರೀಕ್ಷೆಯಲ್ಲಿ ಅಂಕ ಗಳಿಸುವುದು ಮಾತ್ರ ಪ್ರಧಾನವಾಗುತ್ತಿದೆ. ಇದರಿಂದಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು ಮಾತ್ರವಲ್ಲ ಪಠ್ಯಗಳು ಕೂಡ ಅಪ್ರಸ್ತುತವಾಗುತ್ತಿವೆ. ಖಾಸಗಿ ಮನೆಪಾಠ ಮತ್ತು ಬಜಾರ್ ಗೈಡುಗಳು ಮಾತ್ರವೇ ಮುಖ್ಯವಾಗುತ್ತಾ ಇವೆ. ಪ್ರಶ್ನೋತ್ತರ ರೂಪಿ ಅಧ್ಯಯನ-ಪರೀಕ್ಷೆಯಲ್ಲಿ ಅಂಕಗಳಿಸುವ ತಂತ್ರಗಳ ಕಲಿಕೆಯೇ ಪ್ರಧಾನವಾಗುತ್ತಾ ಇದೆ. ಇಂಥ ಕಡೆ ಸಾಹಿತ್ಯದ ಓದು, ಸಾಹಿತ್ಯದ ಆದ್ಯಯನವು ಸಾಹಿತ್ಯದ ಅನುಭವ ಆಗದೆ ಅದು ಸಾಹಿತ್ಯದ ಸಾರಾಂಶೀಕರಣ ಮಾತ್ರ ಆಗುತ್ತಿದೆ. ಪಠ್ಯಗಳೇ ಅಪ್ರಸ್ತುತವಾಗುವ ಇಂಥ ಬಿಕ್ಕಟ್ಟಿನಲ್ಲಿ ಸಾಹಿತ್ಯವು ನಿರೀಕ್ಷಿಸಿದ ಮಟ್ಟದಲ್ಲಿ ಸಂವಹನ ಆಗುತ್ತಿದೆಯಾ?
ಸಾಹಿತ್ಯದ ಸಂವಹನದ ಸಂದರ್ಭದಲ್ಲಿ ಇನ್ನೊಂದು ಬಿಕ್ಕಟ್ಟು ಇದೆ. ಭೂಗೋಳ, ಚರಿತ್ರೆ, ಭೌತಶಾಸ್ತ್ರ, ವಾಣಿಜ್ಯಶಾಸ್ತ್ರ ಹೀಗೆ ಹಲವು ಸಬ್ಜೆಕ್ಟುಗಳು ಇರುವ ಹಾಗೆ ಮಕ್ಕಳಿಗೆ ಕನ್ನಡ ಭಾಷೆ, ಕನ್ನಡ ಐಚ್ಛಿಕಗಳು ಕೂಡ ಒಂದೊಂದು ಸಬ್ಜೆಕ್ಟು ಅಷ್ಟೆ. ಸಾಹಿತ್ಯವನ್ನು ಸಾಹಿತ್ಯವನ್ನಾಗಿ ಓದದೇ ಒಂದು ಲರ್ನಬಲ್ ಡಿಸಿಪ್ಲೀನಾಗಿ ಓದುವಾಗ ಸಾಹಿತ್ಯದ ವಿಷಯೀಕರಣ ನಡೆಯುತ್ತಾ ಇರುತ್ತದೆ. ೧.ಅಕಾಡೆಮಿಕ್ ಗುಣ ಇರುವ ಸಾಹಿತ್ಯ ಅಥವಾ ಕಲಿಸಬಹುದಾದ ಸಾಹಿತ್ಯ ಮತ್ತು ೨.ಶಿಕ್ಷಣ ವ್ಯವಸ್ಥೆಗೆ ಪ್ರವೇಶ ಪಡೆಯದ ನಾನ್ ಅಕಾಡೆಮಿಕ್ ಸಾಹಿತ್ಯ ಎಂಬ ಒಂದು ಅನೌಪಚಾರಿಕ ವಿಂಗಡಣೆಯೊಂದು ಕೂಡ ಇಂಥ ಕಡೆ ನಡೆಯುತ್ತಿರುತ್ತದೆ. ಸಾಹಿತ್ಯದಿಂದ ಕವಿಗೆ-ಓದುಗನಿಗೆ-ಒಟ್ಟಾರೆ ಸಮಾಜಕ್ಕೆ ಆಗುವ ಪ್ರಯೋಜನಗಳೇನು ಎಂಬ ಬಗ್ಗೆ ನಮ್ಮ ಮೀಮಾಂಸೆ ಮತ್ತು ಫಲಶೃತಿಗಳಲ್ಲಿ ಹಲವು ರೀತಿಯ ನಂಬಿಕೆಗಳೂ, ಸಿದ್ಧಾಂತಗಳೂ ಇವೆ. ಆದರೆ ಶಿಕ್ಷಣ ವ್ಯವಸ್ಥೆಯಲ್ಲಿ ನಾವು ಸಾಹಿತ್ಯದೊಂದಿಗೆ ಇಂದು ನಡೆಸುತ್ತಿರುವ ಅನುಸಂಧಾನಗಳಲ್ಲಿ ಇಂಥ ಪ್ರಯೋಜನಗಳು ಲಭಿಸುತ್ತಿವೆಯೇ?
ಶಿಕ್ಷಣದ ಬಗೆಗೆ ನಮ್ಮ ಸಮಾಜದಲ್ಲಿ ಹಲವು ಭ್ರಮೆಗಳಿವೆ. ಶಿಕ್ಷಣದಿಂದ ಉದ್ಯೋಗ, ಗೌರವ, ಸಂಪತ್ತು, ಸುಖ ದೊರಕುತ್ತವೆ, ಸಾಮಾಜಿಕ ತಾರತಮ್ಯ ಇಲ್ಲವಾಗುತ್ತದೆ. ಮೌಢ್ಯ, ಕಂದಾಚಾರಗಳು ಇಲ್ಲವಾಗುತ್ತವೆ ಇತ್ಯಾದಿ ಇತ್ಯಾದಿ.. ಆದರೆ ಇವೆಲ್ಲವೂ ಬರೀ ಭ್ರಮೆಗಳೆಂಬುದು ಈಗ ನಮಗೆ ತಿಳಿದಿದೆ. ಹಾಗೇ ಸಾಹಿತ್ಯದ ಓದುಗರ ಕುರಿತಾದ ಒಂದು ಭ್ರಮೆಯೂ ಇದೆ. ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯಗಳ ಮೂಲಕ ಲಕ್ಷಾಂತರ ಓದುಗರಿಗೆ ಸಾಹಿತ್ಯ ತಲುಪುತ್ತಿದೆ ಎಂಬುದು ಇಂಥ ಒಂದು ಭ್ರಮೆ. ಭಾಷೆ ಮತ್ತು ಸಾಹಿತ್ಯದ ಪಠ್ಯಗಳು ಸಾಹಿತ್ಯದ ಓದುಗರನ್ನು ನಿರ್ಮಾಣ ಮಾಡುತ್ತಿವೆಯಾ-ಕನಿಷ್ಠ ತಾತ್ಕಾಲಿಕವಾಗಿಯಾದರೂ ನಿರ್ಮಾಣ ಮಾಡುತ್ತಿವೆಯಾ? ಖಂಡಿತಾ ಇಲ್ಲ. ಹಾಗಾದರೆ ಇದು ನಮ್ಮ ಶಿಕ್ಷಣ ವ್ಯವಸ್ಥೆಯ ದೋಷವೋ ಅಥವಾ ನಮ್ಮ ಸಮಾಜಕ್ಕೆ ಇದು ಬೇಕಿಲ್ಲವೋ? ಸಾಹಿತ್ಯ ಬೋಧನೆಯನ್ನು ವೃತ್ತಿಯನ್ನಾಗಿ ಸ್ವೀಕರಿಸುವ ಶಿಕ್ಷಕರೇ ಸಾಹಿತ್ಯದ ಓದುಗರಾಗಿದ್ದಾರಾ ಎಂದು ಕೇಳಿಕೊಳ್ಳುವ ಈ ಕಾಲದಲ್ಲಿ ವಿದ್ಯಾಭ್ಯಾಸ ವ್ಯವಸ್ಥೆಗೆ ಬಂದವರೆಲ್ಲ ಸಾಹಿತ್ಯದ ಓದುಗರಾಗುತ್ತಾರಾ? ಆಗಬೇಕಾ? ಆಗದಿದ್ದರೆ ಅವರಿಗಾಗಲೀ, ಸಮಾಜಕ್ಕಾಗಲೀ ಆಗುವ ಹಾನಿ ಏನು? ಇವೆಲ್ಲ ಚರ್ಚಾರ್ಹ ಪ್ರಶ್ನೆಗಳಾಗಿವೆ. (ತರಗತಿ ಅಧ್ಯಯನಕ್ಕೆ ನಿಗಧಿಗೊಳಿಸಿದ ಸಾಹಿತ್ಯ ಪಠ್ಯವನ್ನು ಬೋಧಿಸಲಿಕ್ಕಾಗಿ ಶಿಕ್ಷಕರೂ ಪರೀಕ್ಷೆಗಾಗಿ ಶಿಕ್ಷಣಾರ್ಥಿಗಳೂ ಕಾಲಕಾಲಕ್ಕೆ ಓದುತ್ತಾರೆ ಎಂಬುದನ್ನು ಬಿಟ್ಟರೆ ಅವರೆಲ್ಲ ಸಾಹಿತ್ಯದ ಓದುಗರಾಗಿ ಬೆಳೆಯುವುದಿಲ್ಲ ಎಂಬುದು ಮಾತ್ರ ವಾಸ್ತವ.)
ಇಲ್ಲಿ ಇನ್ನೊಂದು ರೀತಿಯ ಬಿಕ್ಕಟ್ಟು ಕೂಡ ಇದೆ. ಶಿಕ್ಷಣದಲ್ಲಿ ಪಠ್ಯಗಳ ಮೂಲಕ ನಾವು ಪ್ರಿಸ್ಕ್ರೈಬ್ ಮಾಡುತ್ತಾ ಇರುವ ಸಾಹಿತ್ಯವು ಬಹುತೇಕ ವಿದ್ಯಾರ್ಥಿಗಳಿಗೆ ಅವರು ಬಲ್ಲ ಆಥವಾ ಅವರು ಬಳಸುವ ಭಾಷೆಯಲ್ಲಿ ಇರುವುದಿಲ್ಲ. ಹಾಗಾಗಿ ಸಾಹಿತ್ಯ ಪಠ್ಯವೆನ್ನುವುದು ಅರ್ಥಮಾಡಿಕೊಳ್ಳಬೇಕಾದ, ಅರ್ಥಮಾಡಿಸುವ ಸಾಮಗ್ರಿ ಮಾತ್ರ. ಹಾಗಾಗಿ ಸಾಹಿತ್ಯವು ನಮ್ಮದಲ್ಲ ಎಂಬ ಭಾವ ವಿದ್ಯಾರ್ಥಿಗಳಲ್ಲಿ ಇದೆ. ಅಲ್ಲದೆ ನಮ್ಮ ಬೋಧನಾ ವಿಧಾನ ಕೂಡ ವಿದ್ಯಾರ್ಥಿಗಳು ಬಲ್ಲ ಭಾಷೆಗೆ ಸಾಹಿತ್ಯವನ್ನು ತರ್ಜುಮೆ ಮಾಡಿ ತಿಳಿಸುವ ಒಂದು ಕೆಲಸವಾಗಿದೆ. ಇದೂ ಅಲ್ಲದೆ ಪರೀಕ್ಷೆಯಲ್ಲಿ ನಾವು ಅಪೇಕ್ಷಿಸುವ ಭಾಷೆಗೂ ವಿದ್ಯಾರ್ಥಿಗಳು ತಾವು ನಿತ್ಯ ವ್ಯವಹರಿಸುವ ಭಾಷೆಗೂ ಸಂಬಂಧವೇ ಇಲ್ಲ. ವಿದ್ಯಾರ್ಥಿಯು ಒಂದು ವೇಳೆ ತನ್ನ ನಿತ್ಯ ಬಳಕೆಯ ಭಾಷೆಯನ್ನು ಪರೀಕ್ಷೆಯಲ್ಲಿ ಬಳಸಿದರೆ ನಾವು ಮಾನ್ಯ ಮಾಡುವುದೂ ಇಲ್ಲ. ಇದರಿಂದಾಗಿ ಸಾಹಿತ್ಯವನ್ನು ಓದುವ, ತಿಳಿಯುವ ಆಸಕ್ತಿಗೆ ತಡೆ ಉಂಟಾಗಿದೆಯೇ? ಸಾಹಿತ್ಯವನ್ನು ಬರೆಯುವ-ಪಠ್ಯಗಳನ್ನು ಸಿದ್ಧಪಡಿಸುವ ಭಾಷೆ ಸಾಹಿತ್ಯವು ವಿದ್ಯಾರ್ಥಿ ಸಮುದಾಯವನ್ನು ತಲುಪುವ ವೇಗಕ್ಕೆ ತಡೆಯಾಗಿದೆಯೇ? ಎಂಬುದೂ ವಿಚಾರಾರ್ಹವಾದ ವಿಷಯವಾಗಿದೆ. ಪಠ್ಯಗಳ ಮೂಲಕ ನಾವು ವಿದ್ಯಾರ್ಥಿಗಳಿಗೆ ಓದುವುದಕ್ಕೆ ಒದಗಿಸುವ ಸಾಹಿತ್ಯವು ಅವರು ಬಲ್ಲ ಉಪಭಾಷೆಯಲ್ಲಿಯೇ ಇರಬೇಕು ಎಂಬುದಾಗಲೀ ಅಥವಾ ಅವರು ಬಲ್ಲ ಭಾಷೆಯ, ಅಥವ ಭಾಷಾ ರೂಪಗಳ ಸಾಹಿತ್ಯವನ್ನು ಅವರಿಗೆ ಓದಲು ನಿಗಧಿಪಡಿಸಬೇಕು ಎಂಬುದಾಗಲೀ ಸಾಧ್ಯವಾದ ಅಥವಾ ಸಾಧುವಾದ ವಿಚಾರ ಅಲ್ಲ. ಆದರೆ ಅದನ್ನು ಓದಿ ಅರಗಿಸಿಕೊಂಡು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಬಳಸುವ ಭಾಷೆ ಯಾವುದಾಗಿರಬೇಕು? ಇದು ವಿಚಾರಾರ್ಹ. ಹುರೂಪಿಯಾದ ಎಲ್ಲ ಬಗೆಯ ಸಾಹಿತ್ಯ ಪಠ್ಯಗಳನ್ನು ಶಿಕ್ಷಣದಲ್ಲಿ ಪಠ್ಯಕ್ರಮವಾಗಿಸುವ ಪರಿಪಾಠ ನಮ್ಮಲ್ಲಿ ಯಾಕೆ ಇಲ್ಲ? ಇದು ಕೂಡ ವಿಚಾರಾರ್ಹ.

ಪ್ರಮಾಣ ಕನ್ನಡ-ಬ್ರಾಹ್ಮಣ ಕನ್ನಡ
ಶಿಕ್ಷಣದಲ್ಲಿ ಬಳಕೆಯಲ್ಲಿರುವ ಪ್ರಮಾಣ ಕನ್ನಡವನ್ನು ರೂಪಿಸಿಕೊಳ್ಳುವುದು ನಮ್ಮ ಇಂದಿನ ಮಕ್ಕಳ ಒಂದು ಮುಖ್ಯ ಹೊಣೆಯಾಗಿದೆ. ನಮ್ಮಲ್ಲಿ ಬೇರೆ ಬೇರೆ ಹಿನ್ನೆಲೆಯಿಂದ ಬಂದಿರುವ ಮಕ್ಕಳಲ್ಲಿ ತಮ್ಮದೇ ಬಳಕೆಯ ಭಾಷೆ ಇರುತ್ತದೆಯಾದರೂ ಕನ್ನಡ ಭಾಷೆಯ ಬಳಕೆಯ ನೆಲೆಯನ್ನು ಸ್ಥೂಲವಾಗಿ ಬ್ರಾಹ್ಮಣ-ಅಬ್ರಾಹ್ಮಣ ಭಾಷೆ ಎಂದು ವಿಂಗಡಿಸಬಹುದಾಗಿದೆ. ಇಂಥ ಸಾಮಾಜಿಕ ಉಪಭಾಷೆ ಎಲ್ಲೂ ಇಲ್ಲವಾದರೂ ಸ್ಥೂಲವಾದ ಸಮಾನ ಭಾಷಿಕ ಚಹರೆಗಳನ್ನು ಈ ವಿಂಗಡಣೆಗಳಲ್ಲಿ ಗುರ್ತಿಸಬಹುದಾಗಿದೆ. ನಮ್ಮ ಶಿಕ್ಷಣದಲ್ಲಿ ಬ್ರಾಹ್ಮಣ ಕನ್ನಡವೇ ಪ್ರಮಾಣ ಕನ್ನಡವಾಗಿದ್ದು, ಅಬ್ರಾಹ್ಮಣ ಕನ್ನಡವು ಶಿಕ್ಷಣದಲ್ಲಿ ಮಾನ್ಯತೆ ಪಡೆದಿಲ್ಲ. ವಿಲಿಯಂ ಲೆಬೊವ್, ಬೆಸಿಲ್ ಬರ್ನ್‌ಸ್ಟಿನ್ (ಕನ್ನಡ ಜಗತ್ತು ಅರ್ಧ ಶತಮಾನ; ಡಾ.ಕೆ.ವಿ.ನಾರಾಯಣ-ಪುಟ: ೧೫೩,೧೫೫) ಇವರ ಅಧ್ಯಯನಗಳ ಫಲಿತಗಳನ್ನು ನಮ್ಮ ಪರಿಸರಕ್ಕೆ ಅನ್ವಯಿಸಿಕೊಳ್ಳಲು ಸಾಧ್ಯವಿದೆ. ನಮ್ಮಲ್ಲಿ ಬ್ರಾಹ್ಮಣ-ಅಬ್ರಾಹ್ಮಣರ ಶಿಕ್ಷಣ ಗುಣಮಟ್ಟದ ವ್ಯತ್ಯಾಸಕ್ಕೆ ಈ ಭಾಷಿಕ ತೊಡಕೂ ಒಂದು ಕಾರಣವಾಗಿದೆ. ಪಠ್ಯಗಳನ್ನು ಬರೆಯುವ, ಸಾಹಿತ್ಯ ಪಠ್ಯಗಳನ್ನು ಅನುವಾದಿಸುವ ಮತ್ತು ಪರೀಕ್ಷೆಗಳಲ್ಲಿ ಅಪೇಕ್ಷಿಸುವ ಪ್ರಮಾಣ ಕನ್ನಡವು ಬ್ರಾಹ್ಮಣ ಕನ್ನಡಕ್ಕೆ ತೀರಾ ಸಮೀಪವಾಗಿದ್ದು, ಇದು ಆ ಮಕ್ಕಳಿಗೆ ಮಾತ್ರ ಹೆಚ್ಚು ಅನುಕೂಲಕಾರಿಯಾಗಿದೆ. ಹಾಗಾಗಿ ಶಿಕ್ಷಣದಲ್ಲಿ ‘ಬೊಮ್ಮನ್ ಪಿಳ್ಳೆ’ಗಳು ಮಾತ್ರ ಬುದ್ಧಿವಂತರು ಎಂಬ ಮಿಥ್ ಒಂದು ಚಾಲ್ತಿಯಲ್ಲಿದೆ. ಬುದ್ಧಿಗು, ಹುಟ್ಟಿದ ಜಾತಿಗು ಎಲ್ಲಾದರು ಒನ್ ಟು ಒನ್ ರಿಲೇಶನ್ನು ಇರುತ್ತದಾ?!
೮೦ರ ದಶಕದಿಂದ ಈಚೆಗೆ ಸಾಮಾಜಿಕ ಉಪಭಾಷೆಗಳು ಸಾಹಿತ್ಯಕ್ಕೆ ಮತ್ತು ಆ ಮೂಲಕ ಪಠ್ಯಗಳಿಗೆ ನುಗ್ಗತೊಡಗಿವೆ. ಹೀಗಾಗಿ ಇವತ್ತು ಅನೇಕ ಶಿಕ್ಷಕರು ಈ ಸಾಮಾಜಿಕ ಉಪಭಾಷೆಗಳುಳ್ಳ ಪಠ್ಯಗಳನ್ನು ತಮ್ಮ ಪ್ರಮಾಣ ಕನ್ನಡಕ್ಕೆ ತರ್ಜುಮೆ ಮಾಡಿಕೊಳ್ಳಲು ಹೆಣಗುತ್ತ, ಅವು ಅರ್ಥವಾಗುವುದಿಲ್ಲ ಎನ್ನುತ್ತಿದ್ದಾರೆ. ಏನೇ ಆಗಲಿ ಸಾಹಿತ್ಯವನ್ನು ಕಲಿಯುವ ಮತ್ತು ಪರೀಕ್ಷೆಯಲ್ಲಿ ಉತ್ತರಿಸುವದಕ್ಕೆ ನಮಗೆಲ್ಲಾ ಪ್ರಮಾಣ ಕನ್ನಡವೊಂದು ಬೇಕು ಸರಿ. ಆದರೆ ಅದು ಯಾರ ಪ್ರಮಾಣ ಕನ್ನಡವಾಗಿರಬೇಕು ಎಂಬುದು ಚರ್ಚಾರ್ಹ ವಿಚಾರವಾಗಿದೆ. ಯಾಕೆಂದರೆ ಪಠ್ಯದ ಸಂವಹನಕ್ಕೂ ಮತ್ತು ಭಾಷೆಗೂ ಒಂದು ಅನ್ಯೋನ್ಯ ಸಂಬಂಧ ಇದೆ.
ಶಿಕ್ಷಣದಲ್ಲಿ ಸಾಹಿತ್ಯವು ಭಾಷೆಯನ್ನು ಕಲಿಯುವ ಸಾಧನವಾಗಿ ಬಳಕೆಯಾಗುತ್ತಿದೆ. ಕನ್ನಡ ಭಾಷೆಯನ್ನು ಬರೆಯುವ ಮತ್ತು ಓದುವ ತಿಳುವಳಿಕೆಯನ್ನು ಶಾಲೆಗಳಿಂದ ನಮ್ಮ ಮಕ್ಕಳು ಕಲಿಯಲು ಯತ್ನಿಸುತ್ತಿದ್ದಾರೆ. ಈ ಬರೆಯುವ ಮತ್ತು ಓದುವ ಕೌಶಲವನ್ನು ಮಕ್ಕಳು ಸಾಹಿತ್ಯದ ಮೂಲಕ ಕಲಿಯಬೇಕಾ? ಬಾಷೆಯನ್ನು ಕಲಿಸುವಾಗ ಕತೆ, ಕವನ, ಪ್ರಬಂಧದಂತಹ ಸಾಹಿತ್ಯ ಪ್ರಕಾರಗಳನ್ನು ನಮ್ಮ ಮಕ್ಕಳು ಓದಬೇಕಾ? ಇವನ್ನೆಲ್ಲ ಪರೀಕ್ಷೆಗಾಗಿ ಅಭ್ಯಾಸ ಮಾಡಬೇಕಾ? ಕನ್ನಡವನ್ನು ಹೊರಜಗತ್ತಿನಲ್ಲಿ ಬೇರೆ ಬೇರೆ ವ್ಯಾವಹಾರಿಕ ನೆಲೆಗಳಲ್ಲಿ ಬಳಸುವ ಬಗೆಗಳನ್ನು ಶಿಕ್ಷಣದ ಮೂಲಕ ತಿಳಿಯಬೇಕೋ ಅಥವಾ ಸಾಹಿತ್ಯವನ್ನು ಓದಿ ಆ ಮೂಲಕ ಅವರು ಸಾಹಿತ್ಯದ ಸಹೃದಯರೂ ಗ್ರಾಹಕರೂ ಆಗಬೇಕೋ? ಸಾಹಿತ್ಯದ ಸಂವೇದನೆಯನ್ನು ಮೈಗೂಡಿಸಿಕೊಂಡು ನೈತಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕೋ? ಈ ಎಲ್ಲವೂ ಶಿಕ್ಷಣದಲ್ಲಿ ಆಗುತ್ತಿವೆ. ಪರಿಣಾಮಕಾರಿಯಾಗಿ ಸಾಹಿತ್ಯದ ಸಂವಹನದ ಮೂಲಕ ಇದೆಲ್ಲ ಆಗುತ್ತಿದೆಯಾ? ಭಾಷೆಯ ಹೆಸರಿನಲ್ಲಿ ನಾವು ಸಾಹಿತ್ಯ ಓದಿಸುತ್ತಿದ್ದೇವೆ ಎನ್ನುವುದು ಸ್ಪಷ್ಟ. ಸಾಹಿತ್ಯವನ್ನು ಸಂವಹನಗೊಳಿಸುವ ಒಂದು ಮುಖ್ಯ ಮಾರ್ಗವಾಗಿ ಶಿಕ್ಷಣ ನಮ್ಮಲ್ಲಿ ಜಾರಿಯಲ್ಲಿದೆ. ಹತ್ತಾರು ವರ್ಷ ಸಾಹಿತ್ಯವನ್ನು ಶಿಕ್ಷಣಕ್ಕಾಗಿ ಓದಿದ ಜನ ನಂತರದ ತಮ್ಮ ಜೀವನದಲ್ಲಿ ಸಾಹಿತ್ಯದ ಗ್ರಾಹಕರಾಗಿ, ಸಹೃದಯರಾಗಿ ಉಳಿಯುವುದಿಲ್ಲ, ಬೆಳೆಯುವುದಿಲ್ಲ ಎಂಬುದು ಕೂಡ ಸ್ಪಷ್ಟ.

ಅನುಸಂಧಾನ ಮತ್ತು ಸೆನ್ಸಾರ್ ಮಂಡಳಿ
ಯಾವುದೇ ಸಾಹಿತ್ಯ ಪಠ್ಯಗಳಿಗೆ ಮುದ್ರಣ ರೂಪ ಬಂದಾಕ್ಷಣ ಅದು ಶಾಶ್ವತ ಪಠ್ಯವೆಂದೇನೂ ನಾವು ತಿಳಿಯಬೇಕಾಗಿಲ್ಲ. ಪ್ರತಿಯೊಬ್ಬ ಓದುಗನಲ್ಲಿ ಸಂವಹನವಾಗುವ ಪಠ್ಯಗಳು ಬೇರೆ ಬೇರೆಯಾಗುವ ಸಾಧ್ಯತೆಗಳಿರುತ್ತವೆ. ಇರುವುದು ಒಂದಾದರೆ, ತಲುಪುವುದು ಇನ್ನೊಂದೇ ಆಗುವ ಸಾದ್ಯತೆಗಳಿರುತ್ತವೆ. ಇದು ಸಂವಹನಕ್ಕೆ ಇರುವ ಬಹುಮುಖಿ ಸಾಧ್ಯತೆ. ಇದು ಬರಿ ಪಠ್ಯದ ವಿಚಾರವಷ್ಟೆ ಅಲ್ಲ ಆಶಯಕ್ಕೂ ಇದು ಅನ್ವಯಿಸುತ್ತದೆ. ಇದು ಸಂವಹನದ ವಿಫಲತೆ ಅಲ್ಲ. ಎಫೆಕ್ಟಿವ್ ಕಮ್ಯುನಿಕೇಶನ್ ಎಂಬ ಪ್ರಶ್ನೆಯಾಗಲೀ, ಕಮ್ಯುನಿಕೇಶನ್ ಫೆಯಿಲೂರ್ ಎಂಬ ಪ್ರಶ್ನೆಯಾಗಲೀ ಇಲ್ಲಿ ಮುಖ್ಯವೇ ಅಲ್ಲ. ಪಠ್ಯಗಳು ಓದುಗರ ಭಿನ್ನ ಭಿನ್ನ ಗ್ರಹಿಕೆಯ ಸಾಮರ್ಥ್ಯ, ಲೋಕಗ್ರಹಿಕೆಯ ವಿನ್ಯಾಸ, ಭಾವಕೋಶ, ವ್ಯುತ್ಪತ್ತಿ, ಪ್ರಯತ್ನ ಇತ್ಯಾದಿಗಳಿಗೆ ಅನುಗುಣವಾಗಿ ಸಂವಹನವಾಗುತ್ತವೆ. ಪಠ್ಯವು ತಲುಪುವುದು ಸಂವಹನದ ಮೊದಲನೆ ಹಂತವಾದರೆ, ಅರ್ಥವಾಗುವುದು, ಅನುಭವಕ್ಕೆ ಒದಗುವುದು, ಗ್ರಹಿಕೆಗೆ ದಕ್ಕುವುದು ಎರಡನೆ ಹಂತ. ಪ್ರತಿಷ್ಠಿತ ಸಾಹಿತ್ಯದ ಪ್ರಯೋಜನ-ಪರಿಣಾಮಗಳು ಕಾಣುವುದು ಈ ಎರಡನೆ ಹಂತದಲ್ಲಿ.
ಕೆಲವು ರೇಡಿಯೋ ಕಾರ್‍ಯಕ್ರಮಗಳಲ್ಲಿ, ಸರ್ಕಾರಿ ದೂರದರ್ಶನ ಕಾರ್‍ಯಕ್ರಮಗಳಲ್ಲಿ ಅವುಗಳದ್ದೇ ಆದ ಸಮುದಾಯದ ಹಿತಾಸಕ್ತಿಗಳು, ನಿಯಂತ್ರಕಗಳು ಕೆಲಸ ಮಾಡುತ್ತಾ ಇರುತ್ತವೆ. ಸಕಾರದ್ದೇ ಆದ ನೀತಿ ನಿರ್ಭಂಧಗಳಿಗೆ ತಕ್ಕಂತೆ ಅಲ್ಲಿ ಸಾಹಿತ್ಯದ ಅನುಸಂಧಾನ-ಸಂವಹನ ನಡೆಯುತ್ತಾ ಇರುತ್ತದೆ. ಯಾವುದೋ ಪಠ್ಯಪುಸ್ತಕದಲ್ಲಿ ಯಾವುದೋ ಜಾತಿಯನ್ನು ಕುರಿತ ಅವಹೇಳನದ ಮಾತುಗಳಿವೆ, ಇನ್ಯಾವುದೋ ಪಠ್ಯದಲ್ಲಿ ಸೆಕ್ಸಿ ವಿಚಾರಗಳಿವೆ. ಇವೆಲ್ಲಾ ಪಾಠ ಮಾಡೋಕೆ ಆಗಲ್ಲ. ಇದರಿಂದ ಮುಜುಗರ ಆಗುತ್ತದೆ ಎನ್ನುತ್ತಾರೆ. ಸಂಸ್ಕಾರ ಕಾದಂಬರಿಯ ಹಿಂದಿ ಅನುವಾದಿತ ಪಠ್ಯದ ಬಗ್ಗೆ ಎದ್ದ ವಿವಾದ ಇದಕ್ಕೆ ಉದಾಹರಣೆ. ಅಂದರೆ ಸಾಹಿತ್ಯದ ಅನುಸಂಧಾನಕ್ಕೆ ಅವರದ್ದೇ ಆದ ಸೆನ್ಸಾರ್ ನಿಯಮಾವಳಿಗಳನ್ನೂ ಈ ಸಮಾಜ ಹೇರುತ್ತದೆ. ಸೆನ್ಸಾರ್ ನಿಯಮಗಳನ್ನು ಪಾಲಿಸದ ಪಠ್ಯಗಳನ್ನು ನಿಷೇಧಿಸಲೂ ಒತ್ತಾಯಿಸುತ್ತದೆ. ಲೇಖಕನ ಪಠ್ಯಗಳಿಗೆ ಕತ್ತರಿ ಪ್ರಯೋಗ ಮಾಡುವ ಅಷ್ಟೇ ಯಾಕೆ ಮೆದುಳಿಗೂ ಕತ್ತರಿಯಾಡಿಸುವ ಐಡಿಯಾಲಜಿಗಳು ನಮ್ಮಲ್ಲಿವೆ. ಸಾಹಿತ್ಯವು ಸಮುದಾಯದ ಹಿತಾಸಕ್ತಿಯನ್ನು ಕೆಲವೊಮ್ಮೆ ಕಾಪಾಡಲೇಬೇಕು. ಇಲ್ಲವಾದರೆ ಸಾಹಿತ್ಯ ಪಠ್ಯವು ಅಜ್ಞಾತವಾಸವನ್ನು ಅನುಭವಿಸಬೇಕಾಗುತ್ತದೆ.
ಕಲಬುರ್ಗಿಯವರ ಮಾರ್ಗ, ಪಿ.ವಿ.ನಾರಾಯಣರ ಧರ್ಮಕಾರಣ, ಶಿವಪ್ರಕಾಶರ ಮಹಾಚೈತ್ರ, ಬಂಜಗೆರೆಯವರ ಆನುದೇವಾ ಇಂಥ ವಿವಾದಿತ ಕೃತಿಗಳು ಕೋರ್ಟಿನ ಮೆಟ್ಟಿಲೂ ಏರುತ್ತವೆ. ಹಾಗೇ ಜನತಾ ನ್ಯಾಯಾಲಯದಲ್ಲೂ ತೀರ್ಪಿಗೆ ಗುರಿಯಾಗುತ್ತವೆ. ಇಂಥಲ್ಲಿ ಸರ್ಕಾರವು ಸಾಹಿತ್ಯಕ್ಕೆ ತನ್ನದೇ ಆದ ಸೆನ್ಸಾರ್ ನಿಯಮಗಳನ್ನು ಹೇರುತ್ತದೆ. ಇಂಥ ಕಡೆ ಬರಿ ಸಾಹಿತ್ಯ ಅಷ್ಟೇ ಅಲ್ಲ ಸಾಹಿತಿ ಕೂಡ ಅಜ್ಞಾತವಾಸಕ್ಕೆ ತೆರಳಬೇಕಾದ ಪ್ರಸಂಗ ಒದಗುತ್ತದೆ. ಇಂಥ ಕಡೆ ಸಾಹಿತ್ಯವು ರಾಂಗ್ ಕಮ್ಯುನಿಕೇಟಾಗುತ್ತಿರುತ್ತದೆ. ಜಾತಿ-ಗುಂಪುಗಾರಿಕೆ-ವೋಟ್ ಬ್ಯಾಂಕ್ ರಾಜಕಾರಣಗಳೆಲ್ಲ ಸಾಹಿತ್ಯದ ಸಂವಹನವನ್ನು ನಿಯಂತ್ರಿಸುತ್ತಾ ಇರುತ್ತವೆ. ಕೃತಿಯನ್ನು ಓದದೆಯೇ ಮಾತನಾಡುವ ಭಾವನಾತ್ಮಕ ಫೆನಟಿಸಿಸಮ್ಮು ಇಂತಹ ಕಡೆ ಕಾರ್‍ಯಶೀಲವಾಗಿರುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಂಗ್ಯ ಇದು. ಯತಾಸ್ಥಿತಿವಾದಿ ಸಾಂಸ್ಕೃತಿಕ ರಾಜಕಾರಣದ ಹುನ್ನಾರ ಇದು.

ವಿಮರ್ಶೆ ಮತ್ತು ಸಾಹಿತ್ಯದ ಅನುಸಂಧಾನ
ಎಲ್ಲ ರೀತಿಯ ಸಾಹಿತ್ಯಕ ಅನುಸಂಧಾನಗಳೂ ಒಂದು ರೀತಿಯಲ್ಲಿ ವಿಮರ್ಶೆಗಳೇ. ಆದರೂ ಪ್ರತಿಷ್ಠಿತ ಸಾಹಿತ್ಯದ ವಿಮರ್ಶೆಯು ಹತ್ತೊಂಬತ್ತನೇ ಶತಮಾನದಿಂದ ಈಚೆಗೆ ಉದ್ಭವಿಸಿದೆ. ಸರಿಸುಮಾರು ೧೮೫೦ರಿಂದ ೧೬೩೦ರ ನಡುವಿನ ಕಾಲವನ್ನು ಆಧುನಿಕ ವಿಮರ್ಶೆಯ ಸಂಭವಕಾಲ ಎಂದು ಕರೆಯಬಹುದು. ಪ್ರಚಾರೋಪನ್ಯಾಸಗಳು, ಸಾಹಿತ್ಯ ಚರಿತ್ರೆ ರಚನೆಗಳು, ಗ್ರಂಥಸಂಪಾದನಾ ಶಾಸ್ತ್ರ, ಟೀಕು, ವ್ಯಾಖ್ಯಾನ, ಸರಳಾನುವಾದ, ವಿಚಾರ ಸಂಕಿರಣ, ಕಮ್ಮಟ, ಸಂಶೋಧನೆ, ಶಿಕ್ಷಣಪಠ್ಯ ರಚನೆ, ಅಭಿನಂದನೆ-ಸಂಭಾವನಾ ಗ್ರಂಥ ನಿರ್ಮಾಣ, ಶತಮಾನೋತ್ಸವ, ಸುವರ್ಣ ಕರ್ನಾಟಕ ಉತ್ಸವಗಳು ಹೀಗೆ ಹತ್ತು ಹಲವು ರೀತಿಗಳಲ್ಲಿ ವಿಮರ್ಶೆಯು ಸಂಭವಿಸಿ ಸಾಹಿತ್ಯದ ಅನುಸಂದಾನವನ್ನು ನಡೆಸಿದೆ. ಅಥವಾ ಇಂಥ ಹತ್ತು ಹಲವು ರೀತಿಯ ಸಾಹಿತ್ಯದ ಅನುಸಂಧಾನಗಳಲ್ಲಿ ವಿಮರ್ಶೆಯು ಸೃಷ್ಠಿಯಾಗುತ್ತಲಿದೆ. ಇಂಥ ಕಡೆ ಆಧುನಿಕ ಶಿಕ್ಷಣ ಪಡೆದ ಸಾಹಿತ್ಯದ ಪ್ರತಿಷ್ಠಿತ ಓದುಗರು ವಿಮರ್ಶೆಯನ್ನು ಸೃಷ್ಠಿಸುತ್ತಿದ್ದಾರೆ. ಈ ವಿಮರ್ಶೆಗಳು ಒಳಗೊಳ್ಳುವುದು ಮತ್ತು ತಲುಪುವುದು ನಿರ್ಧಿಷ್ಠ ಪ್ರತಿಷ್ಠಿತ ಜನವರ್ಗವನ್ನು ಮಾತ್ರ. ಹಳ್ಳಿಗಳಿಗೆ-ಸಾಮಾನ್ಯ ಜನರಿಗೆ ಪ್ರತಿಷ್ಠಿತ ಸಾಹಿತ್ಯವನ್ನು ಮುಟ್ಟಿಸುವ (ಸಂವಹನಗೊಳಿಸುವ) ಯತ್ನಗಳು ಅಲ್ಲಲ್ಲಿ ಜರುಗಿವೆ-ಜರುಗುತ್ತಿವೆ. ಆದರೂ ಅವುಗಳ ಪ್ರಮಾಣ ಮತ್ತು ಪರಿಣಾಮ ಬಹಳ ಕಡಿಮೆ.
ವಿಮರ್ಶೆಯ ಕಾರ್‍ಯ, ಉದ್ದೇಶಗಳಲ್ಲಿ ಸಾಹಿತ್ಯದ ಭಿನ್ನ ಭಿನ್ನ ಓದುಗಳನ್ನು ಪ್ರಸ್ತುತಪಡಿಸುವುದು ಕೂಡ ಒಂದು ಉದ್ದೇಶ. ಇಂತಹ ಭಿನ್ನ ಓದಿನ ಪ್ರಸ್ತುತಿಯು ಸಾಹಿತ್ಯದ ಭಿನ್ನ ರೂಪಿ ಸಂವಹನ ಕಾರ್‍ಯವೇ ಆಗಿರುತ್ತದೆ. ಹಾಗೆ ನೋಡಿದರೆ ನಮ್ಮ ಶಿಕ್ಷಣ ವ್ಯವಸ್ಥಯಲ್ಲಿನ ಓದಿ ಅರ್ಥ ಹೇಳುವ, ವಿವರಿಸಿ ತಿಳಿಸುವ ಕೆಲಸ ಕೂಡ ಸಾಹಿತ್ಯದ ಸಂವಹನವೇ ಆಗಿದೆ. ಗಮಕ-ಟೀಕು-ವ್ಯಾಖ್ಯಾನ-ಸರಳಾನುವಾದ ಮಾದರಿಯ ವಿಮರ್ಶೆಗಳಲ್ಲಿ ಸಾಹಿತ್ಯವನ್ನು ಜನಗಳೆಡೆಗೆ ಕೊಂಡೊಯ್ಯುವ ಮುಖ್ಯ ಉದ್ದೇಶ ಇರುತ್ತದೆ. ಜನಗಳಿಗೆ ಸುಲಭವಾಗಿ ಗ್ರಹಿಕೆಗೆ ದಕ್ಕುವಂತೆ ಮಾಡುವ ಉದ್ದೇಶ ಇರುತ್ತದೆ. ನಮ್ಮ ಬಹುಪಾಲು ಹಳೆಗನ್ನಡ ಪಠ್ಯಗಳು ಇಂಥ ಅನುಸಂಧಾನಗಳಿಗೆ ಗುರಿಯಾಗಿವೆ. ಹೊಸಗನ್ನಡದಲ್ಲಿ ಕುವೆಂಪು, ದೇವನೂರು ಮಹಾದೇವ ಇಂಥವರ ಕೃತಿಗಳೂ ಕೂಡ ಸರಳಾನುವಾದಕ್ಕೆ ಗುರಿಯಾಗಿವೆ. ಓದುಗರ ವಲಯವನ್ನು ವಿಸ್ತರಿಸುವ, ಸುಲಭ ಗ್ರಹಿಕೆಗೆ ಕೃತಿಗಳನ್ನು ತಲುಪಿಸುವ ಕೆಲಸಗಳಿವು.
ಕಾದಂಬರಿ, ಕತೆ ಮತ್ತು ಲೇಖಕರ ಜೀವನಗಳನ್ನು ಆಧರಿಸಿ ರಂಗಪಠ್ಯಗಳನ್ನು ನಿರ್ಮಾಣ ಮಾಡಿ ನಾಟಕ ಆಡಿಸುವ ಪರಿಪಾಠವೂ ನಮ್ಮಲ್ಲಿದೆ. ಬೇಂದ್ರೆ, ಕುವೆಂಪು, ಕೆಎಸ್‌ನ, ಮಹದೇವ, ಲಂಕೇಶ್, ಅನಂತಮೂರ್ತಿ ಇಂಥವರ ಕುರಿತಾಗಿ ನಮ್ಮಲ್ಲಿ ನಾಟಕಗಳು ತಯಾರಾಗಿ ಪ್ರಯೋಗವಾಗಿವೆ. ಇವೂ ಕೂಡ ರಂಗಭೂಮಿಯನ್ನು ಸಮೂಹ ಸಂವಹನ ಮಾದ್ಯಮದಂತೆ ಬಳಸಿ ಸಾಹಿತ್ಯವನ್ನು ಇನ್ನಷ್ಟು ಮತ್ತಷ್ಟು ಜನರಿಗೆ ತಲುಪಿಸುವ ಅನುಸಂಧಾನಗಳು. ಇಂಥ ಕಡೆ ಸಾಹಿತ್ಯ ಮತ್ತು ರಂಗಭೂಮಿಯ ಸಂಬಂಧಗಳೂ ವ್ಯಕ್ತವಾಗುತ್ತವೆ. ರಂಗಪ್ರಸ್ತುತಿಯ ಮೂಲಕ; ರಂಜನೆಯ ಮೂಲಕ ಕೆಲವು ವಿಚಾರಗಳನ್ನು ಮುಟ್ಟಿಸುವ ಕೆಲಸವು ರಂಗಚಟುವಟಿಕೆಗಳಲ್ಲಿ ನಡೆಯುವಾಗ ಸಾಹಿತ್ಯವು ಸವಹನವಾಗುತ್ತಲೆ ಅದು ಸಾಮಗ್ರಿ-ಮಾದ್ಯಮವಾಗಿ ಕೂಡ ಬಳಕೆಯಾಗುತ್ತಿರುತ್ತದೆ.
ಸಾಹಿತ್ಯ ಸಂಬಂಧಿ ಹಬ್ಬಗಳು, ಜಾತ್ರೆಗಳು ಕೂಡ ನಮ್ಮಲ್ಲಿ ನಡೆಯುತ್ತವೆ. ಪರಿಷತ್ತಿನ ಸಮ್ಮೇಳನಗಳು, ವಿಶ್ವವಿದ್ಯಾಲಯಗಳ ವಿಚಾರಸಂಕಿರಣ-ಸಾಂಸ್ಕೃತಿಕ ಮುಖಾಮುಖಿಗಳು, ಪರ್‍ಯಾಯ ಸಮ್ಮೇಳನ, ಪೂರಕ ಸಮ್ಮೇಳನಗಳು ಸಾಹಿತ್ಯವನ್ನು ಸಂಭ್ರಮದ ಸಾಮೂಹಿಕ ಆಚರಣೆಗಳನ್ನಾಗಿ ಮಾಡುತ್ತಿವೆ. ಹೊಸ ಪೀಳಿಗೆಯ ಸಾಹಿತ್ಯ ಶಿಕ್ಷಣ ಪಡೆದವರನ್ನು ಪ್ರತಿಷ್ಠಿತ ಪರಿವಾರದ ಒಳಕ್ಕೆ ಸೇರಿಸಿಕೊಳ್ಳುವ ಜೊತೆ ಜೊತೆಗೆ ಸಮಕಾಲೀನ ಸಂದರ್ಭದ ಸಾಹಿತ್ಯಕ ವಿಮರ್ಶೆಯೂ ಇಂಥ ಕಡೆ ನಡೆಯುತ್ತಿರುತ್ತದೆ. ಅನೇಕ ಸಮ್ಮೇಳನಗಳಲ್ಲಿ ಹಣಕಾಸು ಖರ್ಚು ಮಾಡುವ; ಆಡಂಬರ ಮಾಡುವ; ಸಂಘಟನಾ ಸಾಮರ್ಥ್ಯಗಳನ್ನು ಪ್ರದರ್ಶಿಸುವ; ಊಟೋಪಚಾರಗಳೇ ಮುಖ್ಯವಾಗುವ; ತಮಗೆ ಬೇಕಾದವರಿಗೆ ಮಣೆ ಹಾಕುವ ಕೆಲಸಗಳೆ ನಡೆಯುತ್ತಿರುತ್ತವೆ. ಆದಾಗ್ಯೂ ಸಾಹಿತ್ಯದ ಚರ್ಚೆ; ಸಂವಹನ ಇಲ್ಲಿ ಮುಖ್ಯ ಉದ್ದೇಶ ಅಲ್ಲವೆ ಅಲ್ಲ. ನಾಡು-ನುಡಿಯ ಎಳಿಗೆಯ ಚಿಂತನೆಗೆ ಇಂದು ಸಮ್ಮೇಳನಗಳು ಹೆಚ್ಚು ಗಮನ ಕೇಂದ್ರೀಕರಿಸುತ್ತಿವೆ.
ಪಿಎಚ್.ಡಿ ಪದವಿಗಾಗಿ, ಯು.ಜಿ.ಸಿ. ಪ್ರಾಜೆಕ್ಟುಗಳಿಗಾಗಿ ಸಂಶೋಧನೆ ನಡೆಸುವಾಗ ಸಂಶೋಧನೆಯ ಹೆಸರಿನಲ್ಲಿ ಸಾಹಿತ್ಯದ ವಿಮರ್ಶೆ ಸಾಕಷ್ಟು ಸೃಷ್ಠಿಯಾಗುತ್ತಿರುತ್ತದೆ. ಇವುಗಳಲ್ಲಿ ಕೆಲವನ್ನು ಅಧ್ಯಯನಗಳೆಂದು ಕರೆಯಬಹುದಾದರೂ ವಿಮರ್ಶೆಗಳೆಂದು ಕರೆಯಲು ಆಗುವುದಿಲ್ಲ. ಈ ಅಧ್ಯಯನಗಳನ್ನು ಸಂವಹನದ ಕಕ್ಷೆಯಲ್ಲಿ ಚರ್ಚಿಸಬಹುದೇ?

ಸಾಂಸ್ಕೃತಿಕ ಕೇಂದ್ರಗಳು ಮತ್ತು ಸಾಹಿತ್ಯಕ ಅನುಸಂಧಾನಗಳು
೧೯ನೇ ಶತಮಾನದಿಂದಲೇ ವಿಜ್ಞಾನವಾದ, ವಿಚಾರವಾದಗಳು ನಮ್ಮ ಆಲೋಚನಾ ವಿಧಾನದ ಮೇಲೆ ಮಾಡಿದ ದಾಳಿಯಿಂದಾಗಿ ನಮ್ಮ ಅನೇಕ ಸಾಂಸ್ಕೃತಿಕ ವಲಯಗಳು ಅನಾದರಕ್ಕೆ-ಅಲಕ್ಷ್ಯಕ್ಕೆ ಗುರಿಯಾಗಿ, ಕೆಲವು ಅಳಿವಿಗೆ ಸರಿಯುತ್ತಿರುವ ಆತಂಕ ಉಂಟಾಗಿದೆ. ಇಂತಹ ಸಾಂಸ್ಕೃತಿಕ ವಲಯಗಳನ್ನು ಮತ್ತೆ ಮತ್ತೆ ಬಳಸುವ ನೆಲೆಗಳನ್ನು, ಜನಮುಖಿಯಾಗಿ ಉಳಿಸುವ ನೆಲೆಗಳನ್ನು ನಮ್ಮ ಅನೇಕ ಸಾಂಸ್ಕೃತಿಕ ಕೇಂದ್ರಗಳು ಶೋಧಿಸುತ್ತಿವೆ. ಸಿನೆಮಾ, ಸಾಹಿತ್ಯ, ರಂಗಭೂಮಿ ಇವೆಲ್ಲವನ್ನೂ ಒಳಗೊಂಡಂತೆ ತಳಸಮುದಾಯಗಳ ಪ್ರದರ್ಶನ ಕಲೆ, ಜೀವನವಿಧಾನಗಳ ಪುನರುಜ್ಜೀವನ ಕೆಲಸಗಳನ್ನು ಕೈಗೆತ್ತಿಕೊಂಡಿವೆ. ಸಾಮಾಜಿಕ ಅಭಿವೃದ್ಧಿಯನ್ನು ಕೆಲ ಎನ್.ಜಿ.ಒಗಳು ತಮ್ಮ ಧ್ಯೇಯ ಆಗಿಸಿಕೊಂಡಿರುವಂತೆ ಕೆಲ ಸಾಂಸ್ಕೃತಿಕ ಕೇಂದ್ರಗಳು ಸಾಹಿತ್ಯ-ಸಂಸ್ಕೃತಿಯ ಅಭಿವೃದ್ಧಿಯನ್ನು ಇಂದಿನ ಜಾಗತೀಕರಣ, ಆಧುನೀಕರಣಗಳ ಎದುರೀಜು ಎಂಬಂತೆ ನಡೆಸುತ್ತಿವೆ. ಹೆಗ್ಗೋಡಿನ ನೀನಾಸಂ, ಉಡುಪಿಯ ಪ್ರಾದೇಶಿಕ ಸಂಶೋಧನಾ ಕೇಂದ್ರ, ಮೈಸೂರಿನ ರಂಗಾಯಣ, ಸಾಣೇಹಳ್ಳಿಯ ಶಿವಸಂಚಾರ ಕೇಂದ್ರ, ಕೋಲಾರದ ಆದಿಮ ಕೇಂದ್ರ, ಬೆಂಗಳೂರಿನ ಸುಚಿತ್ರ ಫಿಲಂ ಸೊಸೈಟಿ, ರಂಗಶಂಕರ, ಮೊದಲಾದ ಕೇಂದ್ರಗಳು; ಸಮುದಾಯ, ರಂಗನಿರಂತರ ಇತ್ಯಾದಿ ರಂಗ ತಂಡಗಳು ತಮ್ಮದೇ ನೆಲೆಗಳಲ್ಲಿ ನಿರಂತರ ಸಾಹಿತ್ಯ ಸಂಸ್ಕೃತಿಯ ಅಭಿರುಚಿ ನಿರ್ಮಾಣ, ಸಂವಹನ, ಪ್ರಸಾರ ಕಾರ್‍ಯಗಳನ್ನು ನಡೆಸುತ್ತಿವೆ. ಚರ್ಚೆ, ಸಂವಾದ, ಓದು, ವೀಕ್ಷಣೆ, ವಿಚಾರಗೋಷ್ಠಿ, ರಂಗಪ್ರದರ್ಶನ, ರಂಗಸಂಚಾರ, ಜನಪದ ಕಲೆಗಳ ಅಭ್ಯಾಸ, ಪ್ರದರ್ಶನ ಮೊದಲಾದ ಬಗೆಗಳಲ್ಲಿ ಸಾಹಿತ್ಯ ಸಂವಹನದ ಹಲವು ಮಾರ್ಗಗಳನ್ನು ಶೋಧಿಸುತ್ತಿವೆ. ಆ ಮೂಲಕ ಸಮುದಾಯದ ಮೌಲ್ಯನಿರ್ಮಾಣದ ಕೆಲಸವನ್ನೂ, ವ್ಯಕ್ತಿಗಳ ವ್ಯಕ್ತಿತ್ವ-ಸಂಸ್ಕಾರಗಳ ನಿರ್ಮಾಣದ ಕೆಲಸವನ್ನೂ ಮಾಡುತ್ತಿವೆ. ಇಂಥ ಕೇಂದ್ರಗಳ ಸಾಹಿತ್ಯಕ ಅನುಸಂಧಾನಗಳು ಸಂವಹನವನ್ನು ಮಾತ್ರವೇ ತಮ್ಮ ಗುರಿಯನ್ನಾಗಿ ಹೊಂದಿಲ್ಲ. ಒಟ್ಟಾರೆ ಸಂಸ್ಕೃತಿಯ ಬೇರುಗಳನ್ನು ಬಲಪಡಿಸುವ ಕೆಲಸದಲ್ಲಿ ಸಾಹಿತ್ಯವನ್ನು ಒಂದು ಅನುಸಂಧಾನದ ವಲಯವನ್ನಾಗಿ ಪರಿಗಣಿಸುತ್ತಿವೆ. ಇಂಥ ಕಡೆ ಸಾಹಿತ್ಯದ ಸಂವಹನಕ್ಕಿಂತ ಸಾಹಿತ್ಯದ ಬಳಕೆ ಮುಖ್ಯವಾಗಿದೆ.

ಕೊನೆಗೆ ಮೊದಲು
ಸಾಹಿತ್ಯದ ಅನುಸಂಧಾನಗಳಲ್ಲಿ ಸಂವಹನದ ಸಾಧ್ಯತೆಗಳನ್ನು ಚರ್ಚಿಸುವಾಗ ಅದರ ಅಗತ್ಯ, ಕಾರಣ, ಉದ್ದೇಶ, ವೇಗ, ವ್ಯಾಪ್ತಿ, ಕಾಲ, ಪರಿಣಾಮ ಇತ್ಯಾದಿಗಳನ್ನು ವಿವೇಚಿಸುವ ಹಾಗೇನೇ ಸಂವಹನದ ಬಗೆಗಳನ್ನು ಕುರಿತು ಕೂಡ ಯೋಚಿಸಬಹುದು. (ಅದೆಲ್ಲವನ್ನೂ ಇಲ್ಲಿ ಯೋಚಿಸಿಲ್ಲ) ಸಾಹಿತ್ಯದೊಂದಿಗೆ ಒಡನಾಟ ನಡೆಸುವಾಗ ಯಾವ ರೀತಿಯಲ್ಲಿ ನಾವು ಅದನ್ನು ನಮ್ಮ ಇಂದ್ರಿಯಾನುಭವಗಳಿಗೆ ಬರಮಾಡಿಕೊಳ್ಳುತ್ತೇವೆ ಅಥವಾ ಇನ್ನೊಬ್ಬರ ಇಂದ್ರಿಯಾನುಭವಗಳಿಗೆ ದೊರಕುವಂತೆ ಮಾಡುತ್ತೇವೆ ಎಂಬುದನ್ನು ಬಗೆ ಅಥವಾ ವಿಧಾನ ಎನ್ನಬಹುದು. ಅವುಗಳನ್ನು ಹೀಗೆ ಪಟ್ಟಿ ಮಾಡಬಹುದು. ಓದಿಕೊಳ್ಳುವುದು, ಓದಿ ಹೇಳುವುದು-ವಾಚನಮಾಡುವುದು, ಬೋಧಿಸುವುದು, ವ್ಯಾಖ್ಯಾನ ಮಾಡುವುದು, ನೋಡುವುದು, ಕೇಳುವುದು, ನೋಡುತ್ತ ಕೇಳುವುದು, ಹಾಡುವುದು, ಅಭಿನಯಿಸುವುದು, ಕೇಳುತ್ತ-ಅನುಕರಿಸುತ್ತ ಸೃಷ್ಟಿಸುವುದು, ನೆನಪಿಟ್ಟುಕೊಂಡು ದಾಟಿಸುವುದು, ಸಂವಾದಿಸುವುದು-ಚರ್ಚಿಸುವುದು, ಪಠ್ಯಗಳನ್ನು ಪ್ರತಿ ಮಾಡುವುದು, ರಂಗರೂಪಾಂತರ ಮಾಡುವುದು, ಸರಳಾನುವಾದ ಮಾಡುವುದು ಇತ್ಯಾದಿ.. ಈ ಎಲ್ಲವೂ ಕೂಡ ವ್ಯಕ್ತಿಯ ಸಕ್ರಿಯ ತೊಡಗಿಕೊಳ್ಳುವಿಕೆಯಿಂದ ಜರುಗುವ ಸಂವಹನ ಸಾಧ್ಯತೆಗಳು. ನಾವು ನಮಗೆ ಬೇಕಾದಾಗೆಲ್ಲ ಓದಲು, ಕೇಳಲು, ನೋಡಲು ನಮ್ಮದೇ ಆದ ಕೆಲವು ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ ಉದಾ: ಟೀವಿ, ರೇಡಿಯೋ, ಸಿನೆಮಾ, ಡಿ.ವಿ.ಡಿ, ಪತ್ರಿಕೆ, ಪುಸ್ತಕ, ಕಂಪ್ಯೂಟರು ಇತ್ಯಾದಿ.. ಇವುಗಳನ್ನು ಸಂವಹನ ಮಾದ್ಯಮ ಅಥವಾ ಸಂವಹನದ ಮಧ್ಯವರ್ತಿಗಳೆಂದು ಕರೆಯಬಹುದು. ಇವುಗಳಲ್ಲಿ ಪುಸ್ತಕ, ಪತ್ರಿಕೆ, ಕಂಪ್ಯೂಟರು, ಡೀವಿಡಿ ಇಂಥ ಕೆಲವನ್ನು ಸ್ಮೃತಿಕೋಶಗಳೆಂದೂ ಕರೆಯಬಹುದು. ಹೀಗಾಗಿ ಸಂವಹನವು ತೀರಾ ವಯಕ್ತಿಕವಾದ ಖಾಸಗಿ ಚಟುವಟಿಕೆಯಾಗಿಯೂ, ಸಮೂಹ ಚಟುವಟಿಕೆಯಾಗಿಯೂ ಸಂಭವಿಸುವ ಸಾಧ್ಯತೆ ಎರಡೂ ಇದೆ. ಹಾಗೇ ಕಾಲಬದ್ಧ ಮತ್ತು ಕಾಲಾತೀತ, ಪ್ರದೇಶಬದ್ಧ ಮತ್ತು ಪ್ರದೇಶಾತೀತ, ವ್ಯಕ್ತಿತ್ವಾತೀತ, ಭಾಷೆ, ಜಾತಿಗಳಿಗೂ ಅತೀತವಾದ ಸಂವಹನ ಕೂಡ ಇಂದಿನ ತಾಂತ್ರಿಕತೆಯಲ್ಲಿ ಸಾಧವಿದೆ. ನಮ್ಮ ಮನಸ್ಸುಗಳಿಗೇ ಮೂಗುದಾರ ಹಾಕಬಲ್ಲ ಸಂವಹನ ತಂತ್ರ, ಜಾಹೀರಾತು ತಂತ್ರಗಳು ಇರುವುದರಿಂದ ಸಂವಹನದ ಇಂದ್ರಿಯಾನುಭವದಲ್ಲಿ ವ್ಯಕ್ತಿನಿಷ್ಠತೆ, ಸಮುದಾಯನಿಷ್ಠತೆ, ಸಂಸ್ಕೃತಿನಿಷ್ಠತೆಗಳೂ ಕೂಡ ಅಪಹರಣವಾಗುವ ಸಾಧ್ಯತೆಗಳು ಆಧುನಿಕ ತಂತ್ರಜ್ಞಾನದಿಂದ ಸಾಧ್ಯವಾಗಿವೆ.
ನಮ್ಮಲ್ಲಿ ವಸ್ತು ಸಾಮಗ್ರಿಗಳನ್ನು ಜನರಿಗೆ ಇಷ್ಟವಾಗುವಂತೆ ಮಾಡುವ ಸಂವಹನ ತಂತ್ರಗಳನ್ನು ಎಷ್ಟು ಚೆನ್ನಾಗಿ ಮಾರುಕಟ್ಟೆ ರಾಜಕಾರಣವು ಬಳಸುತ್ತಿದೆ ಎಂದರೆ ದೃಶ್ಯ ಮಾದ್ಯಮ, ಶಬ್ದ ಮಾದ್ಯಮಗಳನ್ನು ಬಳಸಿ ನಮ್ಮ ಪ್ರಜ್ಞೆಯನ್ನೇ ಮರುಳು ಮಾಡುವಂತೆ ಬಳಸುತ್ತಿದೆ. ಆದರೆ ನಮ್ಮ ಪ್ರತಿಷ್ಠಿತ ಸಾಹಿತ್ಯದ ಗತಿ ಏನಾಗಿದೆ ಎಂದರೆ ಅದು ತನ್ನದೇ ಆದ ಬಾವಿಯಲ್ಲಿ ಸಾಗರದ ಕನಸು ಕಾಣುತ್ತಿದೆ.
ಜನರಿಗೆ ತಿಳಿಯುವುದು, ಜನರ ಅರಿವು, ತಿಳುವಳಿಕೆಯ ಭಾಗವಾಗುವುದು ಸಂವಹನದ ಪ್ರಾಥಮಿಕ ಹಂತ. ನಮ್ಮ ಪ್ರತಿಷ್ಠಿತ ಸಾಹಿತ್ಯದ ಇರುವಿಕೆಯ ಬಗೆಗೇನೆ ಎಷ್ಟೋ ಜನರಿಗೆ ಅರಿವಿಲ್ಲ. ಕಾನೂರು ಹೆಗ್ಗಡಿತಿ ಎಂದರೆ ಅದು ಏನು ಎಂಬ ವಿಚಾರವೇ ನಮ್ಮಲ್ಲಿ ಅನೇಕರಿಗೆ ಗೊತ್ತಿಲ್ಲ. ಇದರಿಂದ ಅವರಿಗೆ ಏನಾದರೂ ತೊಂದರೆ ಆಗಿದೆಯಾ? ಮಧ್ಯಮವರ್ಗದ ವಿದ್ಯಾವಂತರ ಒಂದು ಚಿಕ್ಕ ಸಮುದಾಯಕ್ಕೆ, ಸಾಹಿತ್ಯದ ಗಂಭೀರ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಒಂದು ಚಿಕ್ಕ ಸಮುದಾಯಕ್ಕೆ ಮಾತ್ರ ಗೊತ್ತಿರುವ ಪ್ರತಿಷ್ಠಿತ ಸಾಹಿತ್ಯವನ್ನು ಎಲ್ಲರಿಗೆ ಸಂವಹನಗೊಳಿಸಬೇಕಾದ ತುರ್ತು ಆಧುನಿಕೋತ್ತರ ಸಂದರ್ಭದಲ್ಲಿ ಇದೆಯಾ? ಇದು ಬಹಳ ಗಂಭೀರವಾದ ಪ್ರಶ್ನೆ ಆಗಿದೆ. ಪ್ರತಿಷ್ಠಿತರ ಸಾಹಿತ್ಯ ಅವರಿಗೆ ಕೆಲವೊಮ್ಮೆ ತಲುಪಿದರೂ ತಿಳಿಯುತ್ತಿಲ್ಲ, ಬೇಕಾಗಿಲ್ಲವಲ್ಲ ಯಾಕೆ? ನಾವು ಬರೆಯುವ ಕವಿತೆ ನಮ್ಮ ಅಣ್ಣ ತಮ್ಮಂದಿರಿಗೇ ಬೇಕಾಗಿಲ್ಲವಲ್ಲ ಯಾಕೆ? ಇದರಿಂದ ಜನಸಮುದಾಯಕ್ಕೆ ಏನಾದರೂ ನಷ್ಟವಾಗುತ್ತಿದೆಯಾ? ಜನ ಸಮುದಾಯಕ್ಕೆ ಬೇಕಾದ ಸಾಹಿತ್ಯವನ್ನು ನಾವು ಸೃಷ್ಟಿಸುತ್ತಿಲ್ಲವಾ? ಅವರನ್ನು ನಮ್ಮ ಗ್ರಾಹಕರನ್ನಾಗಿ ಮಾಡಿಕೊಳ್ಳುವ ಮಾರ್ಗಗಳು ನಮಗೆ ಗೊತ್ತಿಲ್ಲವೋ? ಅವರನ್ನೆಲ್ಲ ನಮ್ಮ ಗ್ರಾಹಕರನ್ನಾಗಿ ಮಾಡಿಕೊಳ್ಳಬೇಕಾ? ಸಾಹಿತ್ಯವು ಸಂವಹನಗೊಳ್ಳಬೇಕಾದ ಸಮುದಾಯವನ್ನಾಗಿ ಮಾಡಿಕೊಳ್ಳಬೇಕೋ ಅಥವಾ ಅವರಿಗೆ ಸ್ವಯಂ ಸೃಜನಶೀಲರಾಗುವ ಅವಕಾಶಗಳನ್ನು ಸೃಷ್ಠಿಸಬೇಕೋ? ಮಾದ್ಯಮಗಳ ಒಳಗೆ ಪರ್‍ಯಾಯಗಳನ್ನು ಶೋದಿಸುವ, ಮಾದ್ಯಮಗಳ ಹೊರಗೆ ಪರ್‍ಯಾಯಗಳನ್ನು ಹುಡುಕುವುದಕ್ಕಿಂತಾ ಪರ್‍ಯಾಯ ಮಾದ್ಯಮಗಳನ್ನೇ ಶೋಧಿಸಬೇಕಾಗಿದೆಯಾ? ಇವೆಲ್ಲಾ ಮುಖ್ಯವಾದ ಮತ್ತು ಗಂಭೀರವಾದ ಪ್ರಶ್ನೆಗಳೇ ಹೌದು.

ರಾಮಲಿಂಗಪ್ಪ.ಟಿ.ಬೇಗೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ