ಬಿಳುಮನೆ ರಾಮದಾಸ್ ಅವರು ಪ್ರಬಂಧ, ಕತೆ, ಕಾದಂಬರಿ ಹೀಗೆ ಭಿನ್ನ ಪ್ರಕಾರಗಳಲ್ಲಿ ಕಥನವನ್ನು ತಮ್ಮ ಅಭಿವ್ಯಕ್ತಿ ಮಾಧ್ಯಮವಾಗಿ ಬಳಸಿಕೊಂಡಿರುವ ಲೇಖಕರು. ಬಾಲ್ಯದಲ್ಲಿ ಮಲೆನಾಡಿನಲ್ಲಿ ಬೆಳೆದು, ನಂತರ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಸರ್ಕಾರಿ ಸೇವೆ ಸಲ್ಲಿರುವ ರಾಮದಾಸರ ಕಥನ ಪ್ರಧಾನವಾಗಿ ಬಾಲ್ಯದ ಮಲೆನಾಡಿನ ಅನುಭವ ಲೋಕಕ್ಕೇ ಹೆಚ್ಚು ನಿಷ್ಠವಾಗಿದೆ. ಬಾಲ್ಯದ ನೆನಪುಗಳನ್ನು ಹೆಚ್ಚು ಇಷ್ಟಪಡುವ ರಾಮದಾಸರು ತಮ್ಮ ಪ್ರಬಂಧಗಳಲ್ಲಿ ಆ ನೆನಪುಗಳನ್ನು ಸವಿಯುತ್ತಾ ರಂಜಕತೆ, ಕಲ್ಪನೆಗಳನ್ನು ಸೋಕದ ವಸ್ತುಸ್ಥಿತಿಯಾಗಿ ಅನುಭವಗಳನ್ನು ಹಿಡಿಯುತ್ತಾರೆ. ಇವರ ಕಥನದಲ್ಲಿ ಕಲ್ಪನೆ ಇದ್ದರೂ ಅದು ವಾಸ್ತವಕ್ಕೆ, ವಸ್ತುನಿಷ್ಠತೆಗೆ ಹೆಚ್ಚು ಹತ್ತಿರವಾಗುವ ಶೈಲಿಯದು. ಸಾಮಾಜಿಕ ವಾಸ್ತವದ ಕಡೆಗೆ ಇವರ ಕತೆ ಕಾದಂಬರಿಗಳು ಹೆಚ್ಚು ವಾಲಿದರೆ ಅನುಭವ ಕಥನದ ಕಡೆಗೆ ಇವರ ಪ್ರಬಂಧಗಳು ಹೆಚ್ಚು ಕೇಂದ್ರಿಕೃತಗೊಂಡಿವೆ. ಇವರ ಕಥೆ ಕಾದಂಬರಿಗಳು ನಮ್ಮ ಗಂಭೀರ ಮತ್ತು ಜನಪ್ರಿಯ ಇವೆರಡರ ನಡುವಿನ ಧಾಟಿಯವು. ಗಾಮೀಣ ಸಂಸ್ಕೃತಿಯಲ್ಲಿ ಅನುಭವ ಮತ್ತು ಜ್ಞಾನ ಎರಡೂ ಒಂದೇ. ಅಥವಾ ಇಲ್ಲಿನ ಜ್ಞಾನ ಅನುಭವಜನ್ಯವಾದದ್ದು. ಇಂತಹ ಸಂಸ್ಕೃತಿಯನ್ನು ಹಿಡಿದಿಡುವ ಬಿಳುಮನೆಯವರ ಪ್ರಬಂಧ ಮತ್ತು ಕಾದಂಬರಿಗಳಲ್ಲಿ ಅನುಭವ ಮತ್ತು ಜ್ಞಾನ ಒಂದೇ ಆಗಿದೆ.
ಸಾಮಾನ್ಯವಾಗಿ ಕಥನಗಳಲ್ಲಿ ಎರಡು ರೀತಿಯ ವಸ್ತುನಿಷ್ಟತೆ ಇರುತ್ತದೆ. ೧.ಕಾಲ್ಪನಿಕ ವಸ್ತುನಿಷ್ಟತೆ ೨.ವಾಸ್ತವ ವಸ್ತುನಿಷ್ಟತೆ. ಆದರೆ ಯಾವುದೇ ಕಥನದಲ್ಲಿ ಕಾಲ್ಪನಿಕ ವಸ್ತುನಿಷ್ಟತೆ ಯಾವುದು, ವಾಸ್ತವಿಕ ವಸ್ತುನಿಷ್ಟತೆ ಯಾವುದು ಎಂದು ಬೇರ್ಪಡಿಸಲು ಆಗುವುದಿಲ್ಲ. (ಆದರೆ ಅದು ಲೇಖಕನಿಗೆ ಗೊತ್ತಿರುತ್ತದೆ) ಹೀಗೆ ಬೇರ್ಪಡಿಸಲಾಗದಂತೆ ಬೆಸೆದುಕೊಂಡ ಕಥನವೆ ಉತ್ತಮ ಕಥನವಾಗಿರುತ್ತದೆ. ಇವರ ಕೃತಿಗಳು ಅನುಭವ ಬದ್ಧತೆಗೆ ತಮ್ಮನ್ನು ಹೆಚ್ಚು ತೆತ್ತುಕೊಂಡಿವೆ; ವಾಸ್ತವ ವಸ್ತುನಿಷ್ಟತೆಗೆ ಹೆಚ್ಚು ನಿಷ್ಟವಾಗಿವೆ. ನಿಜಲೋಕದ ಪಾತ್ರಗಳು ಕೃತಿಲೋಕದಲ್ಲಿನ ತಮ್ಮ ಪಾತ್ರಗಳ ಬಗ್ಗೆ ಆಕ್ಷೇಪ ಎತ್ತಬಹುದೆಂಬ ಮುಲಾಜಿಗೆ ಲೇಖಕ ಒಳಗಾದಾಗ ಕಥೆಯು ತನಗರಿವಿಲ್ಲದೆಯೇ ವಾಸ್ತವ ವಸ್ತುನಿಷ್ಟತೆಗೆ ಸಂಪೂರ್ಣ ಬದ್ಧವಾಗುತ್ತಾ ಹೋಗುತ್ತದೆ. ಇಂತಹ ಕಡೆ ಕಥನವು ಕಲಾಕೃತಿಯಾಗದೆ ಕೇವಲ ವಾಸ್ತವದ ಪ್ರತಿಕೃತಿಯಾಗುವ ಸಾಧ್ಯತೆಗಳಿರುತ್ತವೆ. ಅಥವಾ ನಿರ್ಲಿಪ್ತ ಮೃದುತನವು ಆವರಿಸುವ ಸಾಧ್ಯತೆ ಇರುತ್ತದೆ. ಈ ಆಪಾಯವನ್ನು ಲೇಖಕರು ಹಲವೆಡೆ ಎದುರಿಸಿರುವಂತೆ ಕಾಣುತ್ತದೆ. ಉದಾಹರಣೆಗೆ ವ್ಯಾಮೋಹ ಕಾದಂಬರಿಯ ದ್ವಿತೀಯಾರ್ಧದಲ್ಲಿನ ಶ್ರೀನಿವಾಸ ಮತ್ತು ಬ್ರಾಹ್ಮಣ ವಿಧವೆ ಲಕ್ಷ್ಮಿಯರ ಸಮಾಗಮ ಕಾದಂಬರಿಗೊಂದು ಬೇರೆಯದೇ ತಿರುವು ನೀಡುವ ಹಾಗೆ ತೋರುತ್ತದೆ. ಆದರೆ ಲಕ್ಷ್ಮಿಯ ಆತ್ಮಹತ್ಯೆಯ ಮೂಲಕ ಕಾದಂಬರಿ ಮುಗಿದು ಬಿಡುವುದರಿಂದ ಶ್ರೀನಿವಾಸನ ಪ್ರಯತ್ನ ಮತ್ತು ತಳಮಳ ಹಾಗೂ ಲಕ್ಷ್ಮಿಯ ಒಳಗುದಿ ಮತ್ತು ಹೋರಾಟ ಇವ್ಯಾವೂ ಕಥನದಲ್ಲಿ ತಲೆಯನ್ನೇ ಹಾಕದಿರುವುದರಿಂದ ಇವರಿಬ್ಬರ ಪಾತ್ರ ಪೋಷಣೆಯು ಸರಿಯಾಗಿ ಆಗದೆ ಕಾದಂಬರಿಗೆ ಒದಗಿಬರಬಹುದಿದ್ದ ಕಥನ ತಲ್ಲಣವೊಂದು ಇಲ್ಲವಾಗುತ್ತದೆ. ಕಾಲ್ಪನಿಕ ವಸ್ತುನಿಷ್ಟತೆ ಮತ್ತು ವಾಸ್ತವ ವಸ್ತುನಿಷ್ಟತೆಗಳನ್ನು ಹದಕ್ಕೆ ತಕ್ಕಂತೆ ಬೆಸೆಯದೇ ಹೋದಾಗ ಪಾತ್ರ ಮತ್ತು ಸನ್ನಿವೇಶಗಳು ಬೇಡುವ ವಿಸ್ತಾರ ಮತ್ತು ವ್ಯಾಪ್ತಿಯನ್ನು ಅವುಗಳಿಗೆ ನೀಡದೇ ಹೋದಾಗ ವಾಸ್ತವಿಕತೆ ಮಾತ್ರವೇ ಪ್ರಧಾನವಾಗಿ, ಲೇಖಕ ಸಮಾಜದ ಪ್ರತಿಕೃತಿ ನಿರ್ಮಾಪಕ ಮಾತ್ರ ಆಗಬೇಕಾಗುತ್ತದೆ. ಇಂತಹ ಅಪಾಯಗಳು ಬಿಳುಮನೆ ಕಥನಗಳಲ್ಲಿವೆ.
ನಂಬಿ ಕೆಟ್ಟವರಿಲ್ಲವೋ ಕಾದಂಬರಿಯಲ್ಲಿ ಕೂಡ ಹೀಗೇ ಆಗಿದೆ. ಕಾದಂಬರಿಯು ಅರ್ಧ ಭಾಗದವರೆಗೆ ಪೀಠಿಕೆಯ ಹಾಗೆ ಇದೆ. ಸುಮಾರು ೧೯೦ನೆ ಪುಟದವರೆಗೆ ಕಾದಂಬರಿಯು ಚಲಿಸುವುದೇ ಇಲ್ಲ. ತಿಳಿಯಾದ ನೀರಿನಲ್ಲಿ ಮೀನು ಪಳ್ ಎಂದು ಆಡಿದ ಹಾಗೆ ಅಲ್ಲೊಂದು ಇಲ್ಲೊಂದು ಕಥೆಯ ನಿರ್ಲಿಪ್ತತೆಯನ್ನು ಕಲಕುವ ಘಟನೆಗಳು ನಡೆಯುತ್ತವೆ. ಆದರೂ ಅವು ಇನ್ನೊಂದು ಕ್ಷಣಕ್ಕೆ ನೀರಿನ ಆಳದಲ್ಲಿ ಮರೆಯಾಗುತ್ತವೆ. ಇಲ್ಲೆಲ್ಲೂ ಕಥಾಹಂದರ ಮತ್ತು ಘಟನೆಗಳ ಮೂಲಕ ತಾತ್ವಿಕ ಜಿಜ್ಞಾಸೆಯೊಂದು ಅಥವಾ ಜಿಜ್ಞಾಸೆಗಳ ಮಾಲಿಕೆ ಹುಟ್ಟಿ ಬೆಳೆಯಲು ಅವಕಾಶವಾಗಿಲ್ಲ. ಇದರಲ್ಲಿ ವಿಷಮ ದಾಂಪತ್ಯ, ಸೋದರ ದ್ರೋಹ, ವಿದ್ಯೆ ಮತ್ತು ಮುಗ್ದತೆ, ಸ್ವಾರ್ಥ ಮತ್ತು ಮನುಷ್ಯತ್ವ ಹೀಗೆ ಭಿನ್ನ ಎಳೆಗಳು ಇದ್ದರೂ ಅವ್ಯಾವಕ್ಕೂ ಒಂದು ಗಟ್ಟಿ ನೆಲೆ ದೊರಕುವುದಿಲ್ಲ. ಇದಕ್ಕೆ ಬಹುಶಃ ಲೇಖಕರು ವಾಸ್ತವ ವಸ್ತುನಿಷ್ಟತೆಗೆ ಹೆಚ್ಚು ಬದ್ಧವಾಗಿರುವುದೇ ಕಾರಣ ಎನಿಸುತ್ತದೆ. ಕಥನವು ಓದುಗನಿಗೆ ಒದಗಿಸುವ ಅನುಭವ ಸಾಧ್ಯತೆ, ಅರ್ಥಸಾಧ್ಯತೆಗಳು ನ್ಯಾರೋ ಆದಾಗ; ಕಥನವು ನಿರ್ಲಿಪ್ತ ನಿರೂಪಣೆ ಮಾತ್ರವೆ ಆದಾಗ; ಅದಕ್ಕೆ ವರ್ಣನೆ, ವಿವರಣೆ ಭಾವವೈವಿದ್ಯಗಳನ್ನು ದಾಟಿದ ಧ್ವನಿಸಾಧ್ಯತೆ-ರೂಪಕ ಸಾಧ್ಯತೆ ಇಲ್ಲದಾದಾಗ ಅದು ಜನಪ್ರಿಯ ಧಾಟಿಯತ್ತಲೇ ಹೆಚ್ಚು ವಾಲುತ್ತಾ ಹೋಗುತ್ತದೆ. ಇಂತಹ ಸಾಧ್ಯತೆ ಬಿಳುಮನೆಯವರ ಕಥನಗಳಲ್ಲಿ ಹೆಚ್ಚು ಇದೆ.
ಮನುಷ್ಯ ಸಂಬಂಧಗಳ ಶೋಧ
ಬಿಳುಮನೆಯವರ ಕಥನಲೋಕದಲ್ಲಿ ಶಿಥಿಲಗೊಳ್ಳುತ್ತಿರುವ ಊಳಿಗಮಾನ್ಯ ವ್ಯವಸ್ಥೆ ಇದೆ. ಇಲ್ಲಿನ ಮಲೆನಾಡಿನ ಇಡೀ ಸಾಮಾಜಿಕ ವ್ಯವಸ್ಥೆ ಶಿಥಿಲಗೊಳ್ಳುತ್ತಿದೆ. ಈ ವ್ಯವಸ್ಥೆಯ ಶಿಥಿಲೀಕರಣ ಪ್ರಕ್ರಿಯೆಯಲ್ಲಿ ಮನುಷ್ಯ ಸಂಬಂಧಗಳು ಮತ್ತು ಸಾಮೂಹಿಕ ಮೌಲ್ಯಗಳು ನಿಕಶಕ್ಕೆ ಒಡ್ಡಲ್ಪಡುತ್ತವೆ. ಇವರ ಕಥನದಲ್ಲಿ ಮನುಷ್ಯ ಸಂಬಂಧಗಳ ಶೋಧವು ಒಂದು ಗುಪ್ತಗಾಮಿನಿಯಾದ ತಾತ್ವಿಕತೆಯಾಗಿದೆ. ಈ ಶೋಧವು ಎರಡು ನೆಲೆಯದ್ದಾಗಿದೆ. ೧. ಕೌಟುಂಬಿಕ ನೆಲೆಯ ಶೋಧ ೨. ಸಾಮಾಜಿಕ ನೆಲೆಯ ಶೋಧ. ಕೌಟುಂಬಿಕ ನೆಲೆಯಲ್ಲಿ ರಕ್ತಸಂಬಂಧಗಳು ಮತ್ತು ಸಾಮಾಜಿಕ ನಲೆಯಲ್ಲಿ ಇವುಗಳ ಜೊತೆಗೆ ಮಾನವೀಯ ಮೌಲ್ಯಗಳು ಬಿಕ್ಕಟ್ಟಿನ ಸಂದರ್ಭದಲ್ಲಿ ಪರೀಕ್ಷೆಗೆ ಗುರಿಯಾಗುತ್ತವೆ. ಇವರ ಕಥನದಲ್ಲಿ ಆಸ್ತಿ, ಹಣ ಮತ್ತು ಸಂಬಂಧಗಳ ಘರ್ಷಣೆ, ಸ್ವಾರ್ಥ ಮತ್ತು ನ್ಯಾಯಪರತೆಗಳ ಘರ್ಷಣೆ, ಅಂತಸ್ತು-ನಡಾವಳಿಗಳ ಘರ್ಷಣೆ, ಸಂಪ್ರದಾಯ ಮತ್ತು ಮಾನವೀಯತೆಯ ನಡುವಿನ ಘರ್ಷಣೆ ಹೀಗೆ ಹಲವಾರು ಘರ್ಷಣೆಗಳ ಮೂಲಕ ಮನುಷ್ಯ ಸಂಬಂಧಗಳ ಶೋಧದ ಹಲವು ಪಾತಳಿಗಳಿವೆ. ‘ಹತ್ತಿರ ಬಂದು ದೂರ ಸರಿದವರು’ ಕತೆಯ ಸಾವಿತ್ರಿಯ ಸುತ್ತ ಹಣಕ್ಕಾಗೇ ಸುತ್ತುವ ಭಾವ, ಅತ್ತೆ, ಮೈದುನರು; ‘ಪ್ರಶ್ನೆ’ ಕಥೇಯ ನಿರೂಪಕನ ಸುತ್ತಾ ಆಸ್ತಿಗಾಗಿ ಇರುವ ಚಿಗವ್ವ, ತಾಯಿ, ಚಿಗಪ್ಪ, ನೇರಲುಮನೆ ಮಾವ, ಮುಂತಾದವರು-ಇಲ್ಲೆಲ್ಲ ಹಣ, ಆಸ್ತಿ, ಪ್ರೀತಿ, ವಿಶ್ವಾಸಗಳ ಘರ್ಷಣೆಯಲ್ಲಿ ಹಣ, ಆಸ್ತಿಗಳೇ ಮೇಲುಗೈಯಾಗಿವೆ. ‘ನಂಬಿ ಕೆಟ್ಟವರಿಲ್ಲವೋ’ ಕಾದಂಬರಿಯ ತಮ್ಮಯ್ಯಗೌಡ ಮತ್ತು ಪುಟ್ಟಪ್ಪಗೌಡರ ವರ್ತನೆಗಳಲ್ಲಿ ತಂದೆ, ಮಗ, ಅಣ್ಣ, ತಮ್ಮನೆಂಬ ರಕ್ತ ಸಂಬಂಧಗಳು ಹಣ ಆಸ್ತಿಯ ಎದುರಿಗೆ ಉದುರಿ ಹೋಗುತ್ತವೆ. ‘ತಲೆಮಾರು’ ಕಾದಂಬರಿಯಲ್ಲಿನ ಶ್ರೀನಿವಾಸ ಮತ್ತು ಸಾವಿತ್ರಿಯ ವಿವಾಹದ ಸಂದರ್ಭವು ಸಂಪ್ರದಾಯ ಮತ್ತು ಮನುಷ್ಯತ್ವದ ಘರ್ಷಣೆಯನ್ನು ಹೇಳುತ್ತದೆ. ಕಾಲದ ಓಟದಲ್ಲಿ ಪ್ರತಿಷ್ಠೆ, ಸಂಪ್ರದಾಯ ನೀತಿಗಳೆಲ್ಲವೂ ಆನುಷಂಗಿಕ ಮತ್ತು ಮನುಷ್ಯ ಸಣಬಂಧಗಳೆ ದೊಡ್ಡವು ಎಂಬ ಧ್ವನಿ ಇಲ್ಲಿದೆ.
ಶಿಕ್ಷಣ ಮತ್ತು ನಗರ ಬದುಕುಗಳು ಸಾಮಾಜಿಕ ಸಂಬಂಧ ಮತ್ತು ರಕ್ತಸಂಬಂಧಗಳಲ್ಲಿ ಏನೆಲ್ಲ ಬದಲಾವಣೆಗಳನ್ನು ತರಬಲ್ಲವು ಎಂಬುದಕ್ಕೆ ‘ವ್ಯಾಮೋಹ’ದ ಶ್ರೀನಿವಾಸ ಮತ್ತು ‘ನಂಬಿ ಕೆಟ್ಟವರಿಲ್ಲವೋ’ದ ಬೊಮ್ಮಯ್ಯ ಈ ಪಾತ್ರಗಳು ಬಹಳ ಉತ್ತಮ ಉದಾಹರಣೆಗಳು. ಇಲ್ಲಿ ಇಬ್ಬರೂ ನಾಗರಿಕ ಜಗತ್ತಿಗೆ ತೆರೆದುಕೊಂಡಂತೆಲ್ಲ ಸಾಂಪ್ರದಾಯಿಕ ಜಗತ್ತಿನಿಂದ ದೂರವಾಗುತ್ತಾರೆ. ತಮ್ಮಯ್ಯ ಮತ್ತು ಸೇಸಿ ತಮ್ಮ ಓದಿದ ಮಗ ಬೊಮ್ಮಯ್ಯನನ್ನು ಎಷ್ಟು ಅಪಾರವಾಗಿ ಪ್ರೀತಿಸುತ್ತಾರೋ ಅಷ್ಟೇ ತೀವ್ರವಾಗಿ ಬೊಮ್ಮಯ್ಯನಿಂದ ಅನಾದರಕ್ಕೆ ಒಳಗಾಗುತ್ತಾರೆ. ಗ್ರಾಮ್ಯ ಮತ್ತು ನಗರ ಲೋಕಗಳ ನಡುವಿನ ಸಾಂಸ್ಕೃತಿಕ ಕಂದರವು ಕೌಟುಂಬಿಕ ಮತ್ತು ಸಾಮಾಜಿಕ ಸಂಬಂಧಗಳ ನಡುವಿನ ಕಂದರಕ್ಕೂ ಇಲ್ಲಿ ಕಾರಣವಾಗುತ್ತದೆ. ಸಂಪತ್ತಿನ ಲೋಭವು ಇಲ್ಲಿ ವ್ಯಕ್ತಿತ್ವಕ್ಕೆ ಘಾತುಕತನವನ್ನು, ಸಂಬಂಧಗಳ ವಿಘಟನೆಯನ್ನು ಉಂಟುಮಾಡುತ್ತದೆ. ಇದೊಂದು ಸಾಂಸ್ಕೃತಿಕ ಅಂತರ ಕೂಡ. ಎರಡು ಸಾಂಸ್ಕೃತಿಕ ಲೋಕಗಳು ಒಟ್ಟಿಗೆ ಇರಲಾರವೆಂಬ ಸತ್ಯಾಂಶವಿದು. ಇಂತಹ ಪ್ರಸಂಗಗಳ ಮೂಲಕ ವಿದ್ಯಾವಂತ-ಅವಿದ್ಯಾವಂತ, ಸುಸಂಸ್ಕೃತ-ಅಸಂಸ್ಕೃತ ಎಂಬ ಒಡಕುಗಳು ಶಿಕ್ಷಣ ಪದ್ಧತಿಯಿಂದಾಗಿ ನಮ್ಮಲ್ಲಿ ಆಳವಾಗಿ ಬೇರೂರುತ್ತಿರುವ ಪ್ರಕ್ರಿಯೆಯೊಂದು ಇವರ ಕಥನಗಳಲ್ಲಿ ಹೆಣೆದುಕೊಂಡಿದೆ. ಹಾಗೇ ಆಧುನಿಕ ಶಿಕ್ಷಣ ವ್ಯವಸ್ಥೆಯು ನಮ್ಮ ಮನುಷ್ಯ ಸಂಬಂಧಗಳ ಮೇಲೆ ಮಾಡಬಹುದಾದ ಆಘಾತಗಳ ಬಗೆಗೆ ಪ್ರತಿರೋಧವೊಂದು ಇವರ ಕಥನಗಳಲ್ಲಿ ಅಂತರ್ಗತವಾಗಿ ದಾಖಲಾಗಿದೆ.
‘ವ್ಯಾಮೋಹ’ ಕೃತಿಯಲ್ಲಿ ಓದಿದ ಶ್ರೀನಿವಾಸನನ್ನು ಜನ ಹುಚ್ಚ ಎಂದು ಆಡಿಕೊಳ್ಳುತ್ತಾರೆ. ಸಾಂಪ್ರದಾಯಿಕತೆಯ ಸುಧಾರಣೆಗೆ ಶ್ರೀನಿವಾಸ ಯತ್ನಿಸಿದಂತೆಲ್ಲ ಸಮುದಾಯದಿಂದ ದೂರವಾದಂತೆ ಆತನಿಗೆ ಅನ್ನಿಸುತ್ತದೆ. ಕಾಡಮ್ಮ ಹೆಗ್ಗಡಿತಿ ಶ್ರೀನಿವಾಸನಿಗೆ ದೈವಭಕ್ತಿ ಬರಲು ಹರಕೆ ಹೊರುತ್ತಾಳೆ. ಘಟ್ಟದ ಕೆಳಗಿನ ಮಂಜುನಾಥನಿಗೆ ಮುಡಿಪು ಕಟ್ಟುತ್ತಾಳೆ. ಇಲ್ಲಿ ರೂಡಿ, ಆಚರಣೆ, ನಂಬಿಕೆಗಳ ಬಗೆಗೆ ಶಿಕ್ಷಣವು ಅಪನಂಬಿಕೆಯನ್ನು ಹುಟ್ಟಿಸುವುದೇ ಸಾಮಾಜಿಕ ಸಂಬಂಧಗಳು ಹದಗೆಡಲು ಕಾರಣವಾಗುತ್ತದೆ. ಹೀಗೆ ಬಿಳುಮನೆಯವರ ಕಥನದಲ್ಲಿ ಸಂಪತ್ತು ಮತ್ತು ಸಂಪ್ರದಾಯಗಳಿಗೂ, ವಿದ್ಯೆ ಮತ್ತು ಮನುಷ್ಯ ಸಂಬಂಧಗಳಿಗೂ ಒಂದು ದೊಡ್ಡ ಘರ್ಷಣೆಯಿದೆ. ಶಿಕ್ಷಣವು ಆಧುನಿಕ-ಸಂಪ್ರದಾಯಿಕ, ಮುಂದುವರಿದ-ಹಿಂದುಳಿದ, ನಗರ-ಗ್ರಾಮ ಇಂತಹ ಒಡಕುಗಳನ್ನು ಗಟ್ಟಿಗೊಳಿಸುವ ಸಾಧನವೆಂಬ ಧ್ವನಿ ಕೂಡ ಇಲ್ಲಿ ಇದೆ.
ಬಿಳುಮನೆಯವರ ಕಥನಗಳ ಕಥನಗಾರಿಕೆಯ ನಿಧಾನಗತಿಯು ಎಲ್ಲೂ ಸಾಂದ್ರಗೊಳ್ಳದೆ ಎಲ್ಲ ಕಡೆಗೂ ವ್ಯಾಪಿಸಿಕೊಳ್ಳುವಂತದ್ದು. ಮನೆ ಮತ್ತು ಕೃಷಿಗಳೆರಡೂ ಕಾಡೊಳಗೇ ಇರುವ ಮಲೆನಾಡಿನ ಚಿತ್ರಣದಲ್ಲಿ ಮಾನವ ಬದುಕಿನ ಚಿತ್ರಣಕ್ಕೆ ಕೊಟ್ಟಷ್ಟೇ ಪ್ರಾಧಾನ್ಯತೆಯನ್ನು ಮಾನವೇತರ ಕಾಡು ಲೋಕಕ್ಕೂ ಇಲ್ಲಿ ಕೊಡಲಾಗಿದೆ. ಇಲ್ಲಿ ಬದುಕಿನೊಳಗೆ ಕಾಡೂ ಕಾಡಿನೊಳಗೆ ಬದುಕೂ ಒಂದಾಗಿದೆ. ಕೋಳಿ, ಹಂದಿ, ನಾಯಿಗಳ ಬಗೆಗಿನಷ್ಟೇ ಕಾಳಜಿಪೂರ್ಣ ತಾದಾತ್ಮ್ಯವನ್ನು ಬಾಲ್ಯದ ಅನುಭವಗಳಿಗೂ ಮನುಷ್ಯ ಸಂಬಂಧಗಳ ಚಿತ್ರಣಕ್ಕೂ ನೀಡಲಾಗಿದೆ. ಇವರ ಕಥನಲೋಕದಲ್ಲಿ ಕುಂಜನಂಥ ಕಲಾವಿದನಿದ್ದಾನೆ. ಮುತ್ತನಂಥ ನಿಸ್ವಾರ್ಥ ಸೇವಕನಿದ್ದಾನೆ. ತಮ್ಮಯ್ಯನಂಥ ನಿಷ್ಕಪಟ ಶ್ರಮಿಕನಿದ್ದಾನೆ. ಬೊಮ್ಮಯ್ಯನಂಥ ತಿಂದ ಮನೆಯ ಜಂತೆ ಎಣಿಸುವವನಿದ್ದಾನೆ. ಕಿಟ್ಟಯ್ಯನಂಥ ಮಾನವತಾವಾದಿ, ರೈಮನ್‌ಸಾಬಿಯಂತ ಅವಕಾಶವಾದಿ, ಮುಗ್ದೆ ಲಕ್ಷ್ಮಿ ಮತ್ತಿತರ ನಿಷ್ಪಾಪಿ ಹೆಣ್ಣುಗಳೂ ಇದ್ದಾರೆ. ಇವರೊಂದಿಗೆ ನಾಯಿ ಬೆಕ್ಕು, ಹಾವು, ಹಂದಿ, ಕೋಳಿ, ಕುರ್ಕ, ಹುಲಿ, ಮೀನು, ಮಳೆ, ಕಾಡು, ತೋಟ ಇತ್ಯಾದಿ ಎಲ್ಲವೂ ಇವೆ. ಎಲ್ಲಕ್ಕೂ ಕಥನಗಳಲ್ಲಿ ಸಮಾನ ಪೋಷಣೆ ಇದೆ. ಇಲ್ಲಿ ಎಲ್ಲವೂ ಮುಖ್ಯ ಹಾಗೇ ಎಲ್ಲವೂ ಸರಳ (ಸಿಂಪಲ್ಲಲ್ಲ)
ಬಾಲ್ಯದ ಅನುಭವಗಳ ಮೂಲಕ ಜಗತ್ತನ್ನು ಅರ್ಥೈಸುವ ಹಾಗೂ ಪ್ರಾದೇಶಿಕ ಭಾಷೆ ಮತ್ತು ವಸ್ತುವಿನ ಮೂಲಕ ಜಗತ್ತನ್ನು ವ್ಯಾಖ್ಯಾನಿಸುವ ಈ ಎರಡೂ ಕ್ರಿಯೆಗಳು ಇಲ್ಲಿವೆ. ಆ ಮೂಲಕ ಬಿಳುಮನೆಯವರ ಕಥನದಲ್ಲಿ ಅನುಭವ ಮತ್ತು ತತ್ವಜ್ಞಾನಗಳ ಒಮ್ಮುಖತೆಯನ್ನು ಸಾಧಿಸುವ ಯತ್ನಗಳೂ ಇವೆ. ಆದರೆ ಇದು ಎಷ್ಟರ ಮಟ್ಟಿಗೆ ಸಾಧ್ಯವಾಗಿದೆ? ನಿರೀಕ್ಷಿತ ಪ್ರಮಾಣದಲ್ಲಿ ಸಾಧ್ಯವಾಗಿಲ್ಲ. ಅಲ್ಲದೆ ಇವರ ಕಾದಂಬರಿಗಳಲ್ಲಿ ಕೆಲವೊಮ್ಮೆ ಸನ್ನವೇಶದಿಂದ ತಾತ್ವಿಕ ಜಿಜ್ಞಾಸೆಯು ಮೂಡಿದರೆ ಕೆಲವೊಮ್ಮೆ ಸನ್ನಿವೇಶ ಬಲದಿಂದ ಪಾತ್ರಗಳೇ ತಾತ್ವಿಕ ಜಿಜ್ಞಾಸೆಗೆ ತೊಡಗುತ್ತವೆ. ಉದಾಹರಣೆಗೆ ವ್ಯಾಮೋಹ ಕಾದಂಬರಿಯ ಆರಂಭದಲ್ಲಿ ಸನ್ನವೇಶ ಸಿಕ್ಕಾಗಲೆಲ್ಲ ತತ್ವಜ್ಞಾನವನ್ನು ನಿರೂಪಕನಿಂದ ಹೇಳಿಸುವ ನಿರೂಪಣೆಯಿದೆ. ಈ ಕಾದಂಬರಿ ಬೆಳೆದಂತೆಲ್ಲ ತತ್ವಜ್ಞಾನ ಹೇಳುವ ಕೆಲಸವನ್ನು ಶ್ರೀನಿವಾಸ ಲಕ್ಷ್ಮಿ, ಸೀತು, ನರ್ಸ, ಚೌಡ, ಕಾಡಮ್ಮ ಹೆಗ್ಗಡಿತಿ ಹೀಗೆ ಕೆಲಸದಾಳಿನಿಂದ ಹೆಗ್ಗಡಿತಿಯವರೆಗೆ ಎಲ್ಲರೂ ಮಾಡುತ್ತಾರೆ. ಇಂಥಲ್ಲಿ ತಾತ್ವಿಕತೆಯು ಕಥನದಲ್ಲಿ ಸಹಜವಾಗಿ ಉತ್ಪನ್ನವಾಗದೇ ಸರಕಾಗಿ ಮಾತ್ರ ತುಂಬಲ್ಪಟ್ಟಿದೆ.
ಲೈಂಗಿಕ ನಿಷ್ಠೆ ಮತ್ತು ನಿರ್ಲಿಪ್ತತೆ
ದಾಂಪತ್ಯದಾಚೆಗಿನ ಸಂಬಂಧಗಳ ಬಗೆಗೆ ಅಥವಾ ನೀತಿ ಬಾಹಿರ ಎನ್ನಬಹುದಾದ ಸಂಬಂಧಗಳ ಬಗೆಗೆ ಕಥನಗಳಲ್ಲಿ ಆಕ್ರೋಶವಾಗಲೀ ಉಪದೇಶವಾಗಲೀ ಇಲ್ಲ. ಬದಲಿಗೆ ನಿರ್ಲಿಪ್ತ ಚಿತ್ರಣವಿದೆ. ಉದಾಹರಣೆಗೆ ‘ಯಾರು ದೊಡ್ಡವರು’, ‘ನ್ಯಾಯಾಂಗದ ಹೊರಗೆ’ ಇಂತಹ ಕಥೆಗಳಲ್ಲಿ ಲೈಂಗಿಕ ಸಂಬಂಧಗಳ ಕಾರ್‍ಯಕಾರಣ ಗೋಜನ್ನೂ ವಿವರಿಸದ ನಿರುದ್ವಿಗ್ನ ಬರವಣಿಗೆ ಇದೆ. ಈ ನಿರುದ್ವಿಗ್ನತೆ (ನಿರ್ಲಿಪ್ತತೆಯು) ‘ವ್ಯಾಮೋಹ’ ಕಾದಂಬರಿಯ ಶ್ರೀನಿವಾಸ-ಲಕ್ಷ್ಮಿಯರ ಕೂಡುವಿಕೆ ಮತ್ತು ‘ಕುಂಜ’ ಕಾದಂಬರಿಯ ಕಾವೇರಿ-ನರಸಿಂಹರ ಕೂಡುವಿಕೆಯಲ್ಲಿಯೂ ಇದೆ. ಕಥನದಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಬಹುದೆಂಬ ಓದುಗರ ನಿರೀಕ್ಷೆಯನ್ನು ಸಪ್ಪೆಗೊಳಿಸುವಷ್ಟು ಈ ಪ್ರಸಂಗಗಳು ನಿರ್ಲಿಪ್ತವಾಗಿವೆ. ವಿವಾಹಪೂರ್ವ, ವಿವಾಹೋತ್ತರ ಅನ್ಯಸಂಬಂಧಗಳು ಇವರ ಕಥಾಲೋಕದಲ್ಲಿ ಸಹಜವೆಂಬ ಘಟನೆಗಳಂತೆ ಚಿತ್ರಿತವಾಗಿವೆ. ನಮ್ಮಲ್ಲಿ ವಿದ್ಯಾವಂತ ಮದ್ಯಮವರ್ಗದ ಸಮುದಾಯ ಮಾತ್ರ ಇದನ್ನು ಬೆರಗುಗಣ್ಣಿಂದ ಕಾಣುತ್ತದೆ. ಆದರೆ ಬಡ ಹಾಗೂ ಹಳ್ಳಿಯದೀನ ಸಮುದಾಯಗಳು ಇವನ್ನು ಬದುಕಿನಲ್ಲಿ ತೀರಾ ತಲೆಕೆಡಿಸಿಕೊಳ್ಳಬೇಕಾದ ಚಟುವಟಿಕೆಗಳೆಂದು ಭಾವಿಸುವುದಿಲ್ಲ. ಅವರಿಗೆ ಹೊಟ್ಟೆಪಾಡೇ ನೈತಿಕತೆಯ ಮೂಲಮಾಪಕ ಮತ್ತು ತಲೆಬೇನೆ. ಹೊಟ್ಟೆಪಾಡೇ ಅವರ ದಿನನಿತ್ಯದ ಜಂಜಡ ಹಾಗೂ ಎಲ್ಲ ತಲೆಬೇನೆಗಳ ಮೂಲ ಕೂಡ. ಏನೇ ಆದರೂ ಇವರ ಕಥನಗಳ ಎಲ್ಲ ಲೈಂಗಿಕ ಸಂಬಂಧಗಳೂ ಒಂದಲ್ಲ ಒಂದು ರೀತಿಯ ಸ್ತ್ರೀ ಶೋಷಣೆಯನ್ನೇ ಪರೋಕ್ಷವಾಗಿ ಬಿಚ್ಚಿಡುವುದು ಮಾತ್ರ ನಿಜ. ಇಂಥ ಎರಡು ಲೈಂಗಿಕ ಪ್ರದಸಂಗಗಳು ಇಲ್ಲಿ ಚರ್ಚಾರ್ಹವಾಗಿವೆ.
‘ವ್ಯಾಮೋಹ’ ಕಾದಂಬರಿಯ ಶ್ರೀನಿವಾಸ ಮತ್ತು ಬ್ರಾಹ್ಮಣ ವಿಧವೆ ಲಕ್ಷ್ಮಿಯರ ಮೊದಲ ಭೇಟಿಯಲ್ಲೇ ಆಗುವ ಸಮಾಗಮವು ‘ಕುಂಜ’ ಕಾದಂಬರಿಯಲ್ಲಿನ ಕಾವೇರಿ ಮತ್ತು ನರಸಿಂಹರ ಸಮಾಗಮವನ್ನು ನೆನಪಿಗೆ ತರುತ್ತದೆ. ಹೀಗೆ ಎರಡು ಭಿನ್ನ ಹೋಲಿಕೆಯಿಲ್ಲದ ಸಮಾಗಮಗಳು ಒಂದರೊಡನೊಂದು ನೆನಪಾಗಲು ಕಾರಣ ಇವೆರಡೂ ಪೂರ್ವಭೂಮಿಕೆ ಸಿದ್ಧವಾಗದೆ ಆಗುವ ಸಮಾಗಮಗಳಾಗಿರುವುದು. ಹಾಗೆಯೇ ಸೋಜಿಗವೆಂದರೆ ಇವುಗಳಿಗೆ ಉತ್ತರ ಭೂಮಿಕೆಯೂ ಇಲ್ಲ. ಕಥನದ ಪ್ರತಿಯೊಂದು ಘಟನೆಗೂ ಒಂದೊಂದು ಚರಿತ್ರೆಯೂ ಹಾಗೇ ಭವಿಷ್ಯವೂ ಇರುತ್ತದೆ. ಚಾರಿತ್ರಿಕ ಭೂಮಿಕೆಯಿಲ್ಲದೆ ಒಂದು ಘಟನೆ ಘಟಿಸಿದರೆ ಅದು ಆಕಸ್ಮಿಕ ಅನ್ನಿಸಿಕೊಳ್ಳುತ್ತದೆ. ಆದರೆ ಈ ಎರಡೂ ಸಮಾಗಮಗಳು ಆಕಸ್ಮಿಕಗಳಲ್ಲ. ಹಾಗೇ ಚಾರಿತ್ರಿಕ ಭೂಮಿಕೆ ಇರುವಂಥವೂ ಅಲ್ಲ. ಅದೇ ರೀತಿ ಕಥನದ ಭವಿಷ್ಯದಲ್ಲಿ ಇವಕ್ಕೆ ಪ್ರಾಮುಖ್ಯತೆಯಾಗಲೀ ಫಲಿತಗಳಾಗಲೀ ಇಲ್ಲ. ಆದರೆ ‘ತಲೆಮಾರು’ ಕಾದಂಬರಿಯ ಶ್ರೀನಿವಾಸ ಸಾವಿತ್ರಿಯರ ಸಮಾಗಮವಾಗಲೀ ‘ನ್ಯಾಯಾಂಗದ ಹೊರಗೆ’ ಕಥೆಯ ನಾಗೇಶ ಸರಸ್ವತಿಯರ ಸಮಾಗಮವಾಗಲೀ ಹೀಗಲ್ಲ. ಇವೆರಡು ಪ್ರಸಂಗಗಳು ಚಾರಿತ್ರಿಕ ಭೂಮಿಕೆಯನ್ನು ಹೊಂದಿವೆ. ಭವಿಷ್ಯದ ಫಲಿತಗಳನ್ನೂ ಹೊಂದಿವೆ. ಹಾಗಾಗಿ ಈ ಘಟನೆಗಳು ನಿರ್ಲಿಪ್ತತೆಯೊಳಗೂ ಓದುಗನನ್ನು ಸೆಳೆಯುತ್ತವೆ. ಕಾಡುತ್ತವೆ.
ರೂಡಿಯ ಭದ್ರತೆ
ಬಿಳುಮನೆಯವರ ಕಾದಂಬರಿಗಳು ಕಾದಂಬರಿಯ ರೂಡಿಗತ ಸ್ವರೂಪವನ್ನು ಅನುಕರಿಸುವುದಿಲ್ಲ. ಅವು ತಮ್ಮದೇ ಆದ ನಿರೂಪಣೆ, ಘಟನಾವಳಿಗಳನ್ನು ಒಳಗೊಂಡಿವೆ. ಮಲೆನಾಡಿನ ವಾಸ್ತವ ಬದುಕಿನ ಚಿತ್ರಣ ಇವುಗಳ ಮೂಲೋದ್ದೇಶ. ಯಾವುದೇ ತಾತ್ವಿಕ ಸಾಂಸ್ಕೃತಿಕ ಚಿಂತನೆ ಇಲ್ಲಿ ಆನುಷಂಗಿಕ. ವ್ಯಾಮೋಹ ಕಾದಂಬರಿಯಲ್ಲಿ ಒಂದು ಮಹತ್ವದ ಹೊಸತನವಿದೆ. ಅದು ಕಾದಂಬರಿಗೆ ಇರಬಹುದಾದ ಲಕ್ಷಣಗಳನ್ನು ಮುರಿದು ತನ್ನದೇ ಆದ ಒಂದು ಹೊಸ ಸಂಪ್ರದಾಯಕ್ಕೆ ಬಗ್ಗಿದಂತೆ ಕಾಣುತ್ತದೆ. ನಾಯಕ, ನಾಯಕಿ, ತಾತ್ವಿಕತೆ, ಕಥಾಕೇಂದ್ರ ಇವ್ಯಾವೂ ಪ್ರಾಧಾನ್ಯತೆ ಪಡೆಯದ ಸಹಜ ಬದಿಕಿನ ಮಲೆನಾಡಿನ ತುಣುಕೊಂದನ್ನು ಚಿತ್ರಿಸಲು ಇಲ್ಲಿ ಯತ್ನಿಸಲಾಗಿದೆ. ಬಿಳುಮನೆಯವರ ಇತರ ಕಾದಂಬರಿಗಳಿಗೂ ಸರಿಸುಮಾರಾಗಿ ಈ ಮಾತನ್ನು ಅನ್ವಯಿಸಬಹುದು. ಇದು ಕುವೆಂಪು ಅವರ ಕಾದಂಬರಿ ರಚನೆಯ ತಂತ್ರದ ಅನುಕರಣೆಯೋ ಅಥವಾ ಮಲೆನಾಡ ಬದುಕಿನ ವಾಸ್ತವ ಚಿತ್ರಣದ ಪರಿಣಾಮವೋ ಎಂದು ನಿರ್ಧರಿಸಿ ಹೇಳುವುದು ಕಷ್ಟ. ವಾಸ್ತವವಾದಿ ಕಾದಂಬರಿ ರಚನೆಯ ತಂತ್ರವನ್ನು ಅನುಸರಿಸಿದಾಗ ಸಹಜವಾಗಿ ಇಂತಹ ಬರವಣಿಗೆ ಉಂಟಾಗುತ್ತದೋ ಎಂಬುದು ಕೂಡ ಪರಿಶೀಲನಾರ್ಹ.
ಇವರ ಕಥೆಗಳು ಧಾಟಿಯಲ್ಲಿ ಕಾದಂಬರಿಗಳಂತಲ್ಲ. ಇವು ಪ್ರಗತಿಶೀಲ ಧಾಟಿಯ ಜನಪ್ರಿಯ ಮಾದರಿಯವು. ಥಣ್ಣಗೆ ಹರಿಯುವ ನದಿಗಳ ಹಾಗೆ ಇವರ ಕಾದಂಬರಿಗಳು ಇದ್ದರೆ ಪ್ರತ್ಯೇಕಿಸಲ್ಪಟ್ಟ ಚಿಕ್ಕ ಚಿಕ್ಕ ಹೊಂಡಗಳಂತೆ ಇವರ ಕಥೆಗಳಿವೆ. ಇವರ ಬಹುತೇಕ ಎಲ್ಲ ಕಥೆ ಕಾದಂಬರಿಗಳಲ್ಲು ಓದುಗನನ್ನು ಸೆಳೆದು ಓದಿಸಿಕೊಳ್ಳುವ ಗುಣ ಇದೆ. ‘ವ್ಯಾಮೋಹ’ವೊಂದು ಅಪವಾದ. ಕತೆ ಸಾಗುವುದೇ ಇಲ್ಲ ಎಂಬಷ್ಟು ನಿಧಾನ. (ಅದರ ಮುದ್ರಣ ವಿನ್ಯಾಸ ಮತ್ತು ಅಕ್ಷರಗಳ ಗಾತ್ರವೂ ಇದಕ್ಕೆ ಕಾರಣವಿರಬಹುದು) ಇವರ ಪ್ರಬಂಧ ಮತ್ತು ಕಾದಂಬರಿಗಳಲ್ಲಿ ಅಪ್ಪಟ ಮಲೆನಾಡಿನ ಒಂದು ಯಾನ ದೊರೆಯುತ್ತದೆ. ಮಲೆನಾಡಿಗನಲ್ಲದ ಓದುಗನೊಬ್ಬ ಅಕ್ಷರಗಳಲ್ಲಿ ಇಲ್ಲಿ ಮಲೆನಾಡಿನ ಜನಜೀವನವನ್ನು ಕಾಣಬಹುದು. ಈ ಓದುಗುಣ ಮತ್ತು ಯಾನಸಾಧ್ಯತೆ ಬಿಳುಮನೆ ಕಥನದ ಮುಖ್ಯ ಲಕ್ಷಣವಾಗಿದೆ.
ಕುವೆಂಪು-ಬಿಳುಮನೆ
ಕುವೆಂಪು ಮತ್ತು ಬಿಳುಮನೆಯವರನ್ನು ಹೋಲಿಸಬಾರದು. ಆದರೂ ಕೆಲವಂಶಗಳನ್ನಿಲ್ಲಿ ಪ್ರಸ್ತಾಪಿಸಬಹುದು. ಕುವೆಂಪು ಕಥನದಲ್ಲಿರುವ ಮಲೆನಾಡು ಮತ್ತು ಬಿಳುಮನೆಯವರಲ್ಲಿ ಇರುವ ಮಲೆನಾಡುಗಳ ನಡುವೆ ಸಾಕಷ್ಟು ಹೋಲಿಕೆ ಇರುವಂತೆಯೆ ಸಾಕಷ್ಟು ಬೆಳವಣಿಗೆಯೂ ಇದೆ. ಇದಕ್ಕೆ ಕಾರಣಗಳನ್ನು ಹೀಗೆ ಪಟ್ಟಿ ಮಾಡಬಹುದು. ೧.ಇವರಿಬ್ಬರೂ ಸಾಮಾಜಿಕ ವಾಸ್ತವದ ಚಿತ್ರಣಕ್ಕೆ ಪ್ರಧಾನ್ಯತೆ ನೀಡಿದ್ದಾರೆ. ೨.ಹಾಗೇ ಇಬ್ಬರ ಸಾಮಾಜಿಕ ಅನುಭವವೂ ಸರಿಸುಮಾರು ಒಂದೇ ಆಗಿದೆ. ೩.ಇಬ್ಬರೂ ಬಾಲ್ಯದಲ್ಲಿ ಮಲೆನಾಡಿನ ದಟ್ಟ ಅನುಭವವನ್ನು ಪಡೆದು ಮಲೆನಾಡಿನೊಂದಿಗೆ ನಾಸ್ಟಾಲ್ಜಿಕ್ ಆಗಿ ಇದ್ದಾರೆ. ಆದರೆ ಇವರಿಬ್ಬರ ಕಥನಗಳು ಘಟಿಸುವ ಕಾಲದ ನಡುವೆ ಸಾಕಷ್ಟು ಅಂತರವಿದೆ.
ಮದುಮಗಳು ಕಾದಂಬರಿಯ ಬೈರನ ವಾಲಗ ಮತ್ತು ಕುಂಜ ಕಾದಂಬರಿಯ ಕುಂಜನ ಕೊಳಲು ಇವೆರಡರ ನಡುವೆ ಒಂದು ಬೆಳವಣಿಗೆ ಇದೆ. ಹಾಗೇ ಕುವೆಂಪು ಕಥನದಲ್ಲಿನ ವಸೂಲಿ ಸಾಬರ ಕಾಟ ಮತ್ತು ಹೊನ್ನಾಳಿ ಹೊಡ್ತಗಳು ಬಿಳುಮನೆಯವರ ವಸೂಲಿ ಸಾಬರ ಕಾಟ ಹಾಗು ಹೊನ್ನಾಳಿ ಹೊಡ್ತಗಳ ನಡುವೆಯೂ ಒಂದು ಬೆಳವಣಿಗೆ ಇದೆ. ಇದಕ್ಕೆ ಕಾರಣವು ಸಾಮಾಜಿಕ ವಾಸ್ತವದಲ್ಲಿ ಆಗಿರುವ ಬೆಳವಣಿಗೆ ಮತ್ತು ಕಾಲದ ಅಂತರ. ಇದನ್ನು ಇನ್ನೊಂಚೂರು ವಿಸ್ತರಿಸುವುದಾದರೆ ಮದುಮಗಳಲ್ಲಿ ಬೈರನ ವಾಲಗವನ್ನು ಗೆಳೆಯರೊಂದಿಗೆ ಕೇಳುತ್ತಿದ್ದ ತಿಮ್ಮುವಿಗೆ ವಾಲಗ ಎಷ್ಟು ಚಂದ ಬಾರಿಸುತ್ತಿದ್ದಾನೆ ಅನ್ನಿಸುತ್ತದೆ. ಆಮೇಲೆ ವಾಲಗ ಬಾರಿಸುವವನು ಹೊಲೆಯ, ಬಾಡು ತಿನ್ನುವ ಜೀತದಾಳು ಬೈರ ಎಂದು ತಿಳಿದಾಗ ತಿಮ್ಮುವಿನ ಮುಖ ಅವಮಾನದಿಂದ ಕುಗ್ಗಿಬಿಡುತ್ತದೆ. ಇಲ್ಲಿ ಹೊಲೆಯರ ಕಲೆ ಮೆಚ್ಚುಗೆಗೆ ಹೊರತು ಎಂಬ ಭಾವನೆ ಸಣ್ಣ ಮಕ್ಕಳಲ್ಲೂ ಇರುವುದು ಜಮೀನ್ದಾರಿ ಕ್ರೌರ್‍ಯದ ಪರಾಕಾಷ್ಠೆಯಾಗಿದೆ. ಆದರೆ ಕುಂಜ ಕಾದಂಬರಿಯಲ್ಲಿ ಕುಂಜನ ಕೊಳಲನ್ನು ಜಮೀನ್ದಾರರಾದಿಯಾಗಿ ಎಲ್ಲರೂ ಕೇಳಿ ಆನಂದಿಸುತ್ತಾರೆ. ಕುಂಜನ ಕಲೆಯೇ ಇಲ್ಲಿ ಕುಂಜನಿಗೊಂದು ಅಂತಸ್ತನ್ನು ಕಟ್ಟಿಕೊಡುತ್ತದೆ. ಕುವೆಂಪು ಕಾದಂಬರಿಗಳಲ್ಲಿ ಹೊನ್ನಾಳಿ ಹೊಡ್ತದ ಚಿತ್ರಣ ಕ್ರೂರ, ಭಯಂಕರವಾಗಿದ್ದರೆ ಬಿಳುಮನೆ ಕೃತಿಗಳಲ್ಲಿ ಹೊನ್ನಾಳಿ ಹೊಡ್ತಕ್ಕೊಂದು ಇಳಿಕೆ ಉಂಟಾಗಿದೆ. ಇಲ್ಲಿ ಕುಂಜ, ವ್ಯಾಮೋಹ ಕಾದಂಬರಿಗಳಲ್ಲಿ ಹೊನ್ನಾಳಿ ಹೊಡ್ತ ಹೊಡೆಯುವ ಸಾಬರಿಗೇ ಹೊಡೆತ ಬೀಳುವ ಪ್ರಸಂಗಗಳಿವೆ. ಕೆಲಸದಾಳುಗಳಿಗೆ ಹೊಡೆದು ಬಡಿದು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವ ಕಾಲ ಇದಲ್ಲ. ಈಗ ಕಾಲ ಬದಲಾಗಿದೆ ಎಂಬ ತಿಳುವಳಿಕೆ ಇಲ್ಲಿನ ಗೌಡರುಗಳಿಗೆ ಇದೆ. ಈ ರೀತಿ ಒಬ್ಬರನ್ನೊಬ್ಬರಿಗೆ ಹೋಲಿಸಬಾರದಾದರೂ ಈ ಪ್ರಸ್ತಾಪವು ಲೇಖಕರ ನಿರ್ಮಾಣ ಪ್ರತಿಭೆ ಮತ್ತು ಸಾಮಾಜಿಕ ಅನುಭವಗಳ ನಡುವಿನ ಸಂಬಂಧಗಳನ್ನು ತಿಳಿಸುವುದರಿಂದ ಆಕ್ಷೇಪಕವಲ್ಲ ಅನಿಸುತ್ತದೆ.
ಕುವೆಂಪು ಮತ್ತು ಬಿಳುಮನೆಯವರ ಕಥನಗಳಲ್ಲಿ ಬದಲಾವಣೆ ಏನೂ ಇಲ್ಲದ ಒಂದು ಲೋಕವೆಂದರೆ ಅದು ಸ್ತ್ರೀಯರ ಲೋಕ. ಇದನ್ನು ಇನ್ನೊಂಚೂರು ವಿವರಿಸುವುದಾದರೆ; ಮದುಮಗಳಲ್ಲಿನ ಗುತ್ತಿ ಮದುವೆಯಲ್ಲಾಗುವ ಬೆಟ್ಟಳ್ಳಿ-ಸಿಂಭಾವಿ ಗೌಡರಲ್ಲಾಗುವ ಪೈಪೋಟಿ ತಾವು ತಮ್ಮ ಒಂದು ಆಳನ್ನು ಕಳೆದುಕೊಳ್ಳಬಾರದು ಎಂಬುದೇ ಆಗಿದೆ. ಇಲ್ಲಿ ಜೀತದಾಳುಗಳ ಮದುವೆ, ಖಾಸಗಿ ಪ್ರೀತಿ-ಪ್ರೇಮಗಳೂ ಗೌಡರಿಂದಲೇ ನಿರ್ಧಾರಿತವಾಗುತ್ತವೆ. ಈಗಾಗಲೇ ಒಬ್ಬ ತಾಳಿ ಕಟ್ಟಿರುವ ಹೆಂಗಸನ್ನು ಎಳೆತರಿಸಿ ತನಗೆ ಬೇಕಾದ ಆಳಿನಿಂದ ತಾಳಿ ಕಟ್ಟಿಸುವ ದಾರ್ಷ್ಟ್ಯ ಜಮೀನ್ದಾರರಿಗೆ ಇದ್ದಂತೆ ಕುವೆಂಪು ಚಿತ್ರಿಸುತ್ತಾರೆ. ಇಲ್ಲಿ ಕೆಳವರ್ಗದ ಸಂಪ್ರದಾಯ-ಸಂಸ್ಕೃತಿಗಳ ಮೇಲೂ ದಾಳಿ ಮಾಡುವ, ತಿದ್ದುವ ಅಧಿಕಾರ ಮೇಲ್ವರ್ಗಕ್ಕಿದ್ದದ್ದನ್ನು ಕಾಣಬಹುದು. ಇಲ್ಲಿ ಸಂಸ್ಕೃತಿಯೂ ಹೇಗೆ ಹಣ, ಅಧಿಕಾರದ ಕೆಳಗೆ ಜೀತದಾಳೆ ಆಗಬಲ್ಲದೆಂಬುದನ್ನು ಕಾಣಬಹುದು.
ಇದೇ ರೀತಿ ಕುಂಜ ಮತ್ತು ಕಾವೇರಿಯರ ಮದುವೆ ಕೂಡ ಒಡೆಯರ ಹಂಗಿಗೆ ಒಳಗಾಗಿದೆ. ಆಳು ಮಕ್ಕಳ ಮದುವೆ, ಬದುಕು ನಿರ್ಧಾರವಾಗುವುದು ಜಮೀನ್ದಾರರಿಂದ. ಅಲ್ಲದೆ ಗೌಡರುಗಳ ಮನೆಯ ಹೆಂಗಸರ ಸ್ಥಿತಿಯೂ ಆಳುಗಳ ಮನೆಯ ಹೆಂಗಸರ ಸ್ಥಿತಿಯೂ ಲಿಂಗರಾಜಕಾರಣದ ದೃಷ್ಟಿಯಿಂದ ಅಂಥಾ ಬೇರೆಬೇರೆಯೇನೂ ಅಲ್ಲ. ಕುವೆಂಪು ಬಿಳುಮನೆ ಇಬ್ಬರಲ್ಲು ಹೆಂಗಸು ಕೇವಲ ದುಡಿಮೆಯ ಇಲ್ಲವೆ ಲೈಂಗಿಕ ಉಪಕರಣವಾಗಿ ಮಾತ್ರ ಕಾಣುತ್ತಾಳೆ. ಮಾತನಾಡಿದರೆ ಸಾಕು ಗಂಡನಿಂದ ಒದೆ ತಿನ್ನುವ, ಸಂಘರ್ಷರಹಿತ ಶರಣಾಗತಿಯೇ ಇಲ್ಲಿನ ಹೆಣ್ಣಿನ ಸ್ಥಿತಿ. ಇಬ್ಬರಲ್ಲೂ ಹೆಗ್ಗಡಿತಿಯಾಗಿ ಯಜಮಾನತಿಯಾದವಳಿಗೆ ಮಾತ್ರ ಸ್ವಲ್ಪ ಸ್ವಾತಂತ್ರ್ಯವಿರುತ್ತದೆ. ಮಿಕ್ಕಂತೆ ಹೆಣ್ಣು ಗುಲಾಮಳೇ. (ಬಿಳುಮನೆಯವರ ಇತ್ತೀಚಿನ ಕಾದಂಬರಿ ಕರಾವಳಿ ಹುಡುಗಿಯಲ್ಲಿ ಹೆಣ್ಣೊಬ್ಬಳ ದಿಟ್ಟ ಹೋರಾಟ ಇದೆಯಾದರೂ ಇವಳು ದಾಂಪತ್ಯದ ಚೌಕಟ್ಟಿನಲ್ಲಿ ಸಿಲುಕಿದ ಹೆಣ್ಣಲ್ಲ. ಗೌಡರುಗಳ ನಿಯಂತ್ರಣದ ಜೀತದಾಳೂ ಅಲ್ಲ. ಹೆಗ್ಗಡಿತಿಯೂ ಅಲ್ಲ. ಹಾಗಾಗಿ ಇವಳಿಗೆ ಸ್ವತಂತ್ರ ಅಸ್ಥಿತ್ವವಿದೆ.)
ಕುವೆಂಪು ಅವರೇ ಹೇಳಿರುವಂತೆ ಅವರ ಎರಡೂ ಕಾದಂಬರಿಗಳು ಮಲೆನಾಡೆಂಬ ಸಾಗರದ ಎರಡು ಹನಿಗಳಷ್ಟೇ. ಬಿಳುಮನೆಯವರ ಕಥನಗಳೂ ಕೂಡ ಮಲೆನಾಡಿನ ಕೆಲವು ಹನಿಗಳಷ್ಟೆ. ಇಂತಹ ಕೆಲವೇ ಕೆಲವು ಹನಿಗಳ ಪರಿಶೀಲನೆಯಿಂದ ಇಡೀ ಸಾಗರದ ಕಾಲಾನುಗತಿಕ ಚರಿತ್ರೆಯನ್ನು ಇದಮಿತ್ಥಂ ಎಂದು ಹೇಳಲು ಆಗುವುದಿಲ್ಲ. ಅಲ್ಲದೆ ಸಾಹಿತ್ಯ ಸಾಮಗ್ರಿಯು ಚರಿತ್ರೆಯ ದಸ್ತಾವೇಜು ಏನೂ ಅಲ್ಲ. ಚರಿತ್ರೆಯ ಬಗೆಗೆ ಕೆಲವು ಎಳೆಗಳನ್ನು ಅದರಿಂದ ಪಡೆಯಬಹುದಷ್ಟೆ. ಅಲ್ಲದೆ ಸಾಹಿತ್ಯ ಕೃತಿಯು ಬರಹಗಾರನು ಕಟ್ಟಿದ ಸಂಸ್ಕೃತಿಯ ವ್ಯಕ್ತಿನಿಷ್ಟ ಕಿರುಬಿಂಬ ತಾನೆ? ಹಾಗಾಗಿ ಎಲ್ಲವೂ ವಯಕ್ತಿಕ ಚಿತ್ರಣಗಳೇ. ವಿಮರ್ಶೆಯ ವ್ಯಾಖ್ಯಾನಗಳಿಗೂ ಈ ಮಾತು ಅನ್ವಯಿಸುತ್ತದೆ. (ಈಗ ಚರಿತ್ರೆಯೂ ಸಾಹಿತ್ಯ ಬರವಣಿಗೆಯೂ ಭಿನ್ನವಲ್ಲ ಎಂಬ ವಾದವೂ ಕೇಳಿ ಬರುತ್ತಿದೆ ಎಂಬುದು ಬೇರೆ ಮಾತು) ಆದರೆ ಸಾಹಿತ್ಯ ಕಥನಗಳ ಕೆಲವು ವಿವರಗಳಿಂದ ಸಮಾಜದ ಗತಿಯ ಬಗ್ಗೆ ನಿಲುವುಗಳನ್ನು ಪ್ರಕಟಿಸುವುದು ಪೂರ್ಣ ವಾಸ್ತವ ಕೂಡ ಆಗಲಾರದು. (ಪೂರ್ಣ ವಾಸ್ತವ ಎಂಬುದೂ ಭ್ರಮೆಯೇ)
ಬಿಳುಮನೆಯವರಿಗೆ ಈಗ ೬೦ ವರ್ಷಗಳು ತುಂಬಿವೆ. ಇವರಿಗೆ ಅರವತ್ತು ತುಂಬಿದ ಸಂದರ್ಭದ ಅಭಿನಂದನೆ ಸಮಾರಂಭಕ್ಕೆ ಈ ಲೇಖನ ಬರೆಯಲಾಗಿದೆ. ಅಭಿನಂದನಾ ಸಮಾರಂಭಕ್ಕೆ ತಕ್ಕಂತೆ ಈ ಲೇಖನ ಇದೆ ಅಂದುಕೊಳ್ಳುತ್ತೇನೆ. ಇವರ ತಲೆಯಲ್ಲಿ ಇನ್ನಷ್ಟು ಕಥೆಗಳಿವೆ. ಅವುಗಳೆಲ್ಲ ಆಕೃತಿಗಿಳಿದರೆ ಈ ಲೇಖನದ ಮಾತುಗಳಿಗೆ ಇನ್ನೂ ಭಿನ್ನ ತಿರುವುಗಳು ಲಭಿಸಬಹುದು. ಹಾಗಾಗಲೆಂದೇ ಹಾರೈಸೋಣ.
ರಾಮಲಿಂಗಪ್ಪ.ಟಿ.ಬೇಗೂರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ