ಪುಟಗಳು

ಗುರುವಾರ, ಏಪ್ರಿಲ್ 14, 2011

ಕುರಿತು ಓದದೆ- ಕುರಿತೋದದೆಯುಂ



ರೇಡಿಯೋ ಚಿಂತನೆ - 3

ಕವಿರಾಜಮಾರ್ಗವನ್ನು ಬರೆದ ಶ್ರೀವಿಜಯನು ಕನ್ನಡದ ಜನಗಳ ಬಗ್ಗೆ ಹೇಳುವಾಗ 'ಕನ್ನಡದಾ ನಾಡವರ್ಗಳ್ ಕುರಿತೋದದೆಯುಂ ಕಾವ್ಯಪ್ರಯೋಗಪರಿಣತಮತಿಗಳ್' ಎಂದು ಹೇಳಿದ್ದಾನೆ. ನಾವು ನಮ್ಮ ಜನಗಳ ಹೆಗ್ಗಳಿಕೆಯನ್ನು ಹೇಳುವಾಗ ತಪ್ಪದೆ ಈ ಮಾತನ್ನು ಬಳಸುತ್ತೇವೆ. ನಮ್ಮ ಜನಪದರು ಜನ್ಮತಃ ಕವಿಗಳು-ಸೃಜನಶೀಲರು; ಓದಲು ಬರೆಯಲು ಬರದೆ ಇರುವ ಕನ್ನಡಿಗರು ಕೂಡ ಕಾವ್ಯಗಳನ್ನು ಕಟ್ಟಬಲ್ಲವರಾಗಿದ್ದರು. ಗಾದೆ, ಒಗಟು, ಹಾಡು, ತತ್ವಪದ, ಸ್ವರವವಚನಗಳೀಂದ ಹಿಡಿದು ಜನಪದ ಮಹಾಕಾವ್ಯಗಳವರೆಗೆ ನಮ್ಮವರು ಹಲವಾರು ಕಾವ್ಯಗಳನ್ನು ಕಟ್ಟಿ ಹಾಡಿದ್ದಾರೆ. ಕಟ್ಟುತ್ತ ಹಾಡುತ್ತ ಬಂದಿದ್ದಾರೆ ಎಂಬುದಕ್ಕೆ ಸಮರ್ಥನೆಯಾಗಿ ಈ ಶ್ರೀವಿಜಯನ ಮಾತನ್ನು ಬಳಸುವುದುಂಟು. ನಮ್ಮ ಜನಪದ ಕಾವ್ಯಪ್ರಯೋಗಗಳ ಪ್ರಾಚೀನತೆಯ ಸಾಕ್ಷಿಯಾಗಿಯು ನಾವು ಈ ಮಾತನ್ನು ಉದಾಹರಿಸುವುದು ಉಂಟು. ಹಾಗೆ ನೋಡಿದರೆ ಜನಪದ ಸಾಹಿತ್ಯದ ಪ್ರಾಚೀನತೆಯನ್ನು ಅಕ್ಷರದ ದಾಖಲೆಗಳಲ್ಲಿ ಹುಡುಕಿಕೊಳ್ಳುವುದು ನಮ್ಮ ಚರಿತ್ರೆ ಕಲ್ಪನೆಯ ದುರಂತವೆ ಸರಿ. ಆದರೂ ಶ್ರೀವಿಜಯನು ಸಾವಿರ ವರ್ಷಗಳ ಹಿಂದೆ ಇಂತಹ ಮಾತನ್ನು ಆಡಿದ್ದಾನೆ ಎಂಬುದನ್ನು ಗೌರವ ಮತ್ತು ಹೆಮ್ಮೆಯಿಂದಲೆ ಕಾಣಬೇಕಾಗಿದೆ. ಮಹಾಕಾವ್ಯವೆಂದರೆ ಏನು ಸಾಮಾನ್ಯವೆ? ಅದೇನು 'ಬೀದಿವರೆಯ ಬೀರನ ಕಥೆಯೆ? ಗೊರವರ ಡುಂಡುಚಿಯೆ?' ಎಂದು ಕೇಳುತ್ತಿದ್ದ ಕಾಲಕ್ಕು ಮೊದಲೆ ಕುರಿತೋದದೆಯೆ ಕಾವ್ಯಪ್ರಯೋಗ ಮಾಡುವ ಪ್ರತಿಭೆಯನ್ನು ಶ್ರೀವಿಜಯನು ಗೌರವದಿಂದ ಕಂಡ ಎಂಬುದೇ ಅಭಿನಂದನಾರ್ಹವಾದದ್ದು. ಇರಲಿ,

ನಮ್ಮಲ್ಲಿ ಜನಪದ ಸಾಹಿತ್ಯವನ್ನು ಅಕ್ಷರದ ಮೂಲಕ ದಾಖಲಿಸುವ ಕೆಲಸ ಬಹು ವೇಗವಾಗಿ ಇಂದು ನಡೆಯುತ್ತ ಇದೆ. ಹಾಗಾಗಿಯೆ ಸಾವಿರಾರು ಗಾದೆಗಳು, ಒಗಟುಗಳು, ತತ್ವಪದಗಳು, ಲಾವಣಿಗಳು, ಸ್ವರಪದಗಳು, ದೇಶಿದುಂದುಮೆ ಪದಗಳು, ಅಜರ್ುನಜೋಗಿ ಹಾಡುಗಳು ಹೀಗೆ ಅಸಂಖ್ಯ ಸಾಹಿತ್ಯ ಸಂಗ್ರಹವಾಗಿದೆ. ಸಂಗ್ರಹವಾಗುತ್ತಿದೆ. ಜನಪದ ಅಕಾಡೆಮಿಯು ಜನಪದ ಕಲೆ, ಸಾಹಿತ್ಯ, ಸಂಸ್ಕೃತಿಯ ಪೋಷಣೆ-ವಿಶ್ಲೇಷಣೆ-ದಾಖಲಾತಿಗಾಗಿ ಕ್ರಿಯಾಶೀಲವಾಗಿದೆ. ಜನಪದ ವಿಶ್ವವಿದ್ಯಾಲಯ ಕೂಡ ಈಗಾಗಲೆ ಅಸ್ತಿತ್ವಕ್ಕೆ ಬಂದಿದೆ. ಹಲವಾರು ವಿಶ್ವವಿದ್ಯಾಲಯಗಳಲ್ಲಿ ಜನಪದ ಸಾಹಿತ್ಯವು ಈಗಾಗಲೆ ಸಂಶೋಧನೆ, ಅಧ್ಯಯನಗಳಿಗೆ ಗುರಿಯಾಗುತ್ತಿದೆ. ಮಂಟೆಸ್ವಾಮಿ ಕತೆ, ಮಾದಪ್ಪನ ಕತೆ, ಗೊಂಡರ ರಾಮಾಯಣ, ಜನಪದ ಮಹಾಭಾರತ, ಬಿಳಿಗಿರಿರಂಗನ ಕಾವ್ಯ, ಸಿರಿಪಾಡ್ದನ, ಜುಂಜಪ್ಪನ ಕಾವ್ಯ, ಕೃಷ್ಣಗೊಲ್ಲರ ಕಾವ್ಯ ಹೀಗೆ ಹತ್ತು ಹಲವು ಮೌಖಿಕ ಮಹಾಕಾವ್ಯಗಳು ಅಕ್ಷರದಲ್ಲಿ ದಾಖಲಾಗಿವೆ. ಶಿಷ್ಟ ಸಾಹಿತ್ಯದ ಎದುರಿಗೆ ಅದರ ನೂರಾರು ಪಟ್ಟು ದೊಡ್ಡದಾದ ಜನಪದ ಸಾಹಿತ್ಯ ನಮ್ಮೆದುರು ಅಕ್ಷರಕ್ಕೆ ಬಂದು ಬಿದ್ದಿದೆ. ಬೀಳುತ್ತ ಇದೆ. ಅದನ್ನೆಲ್ಲ ವಗರ್ೀಕರಿಸಿ, ತಾತ್ವೀಕರಿಸಿ ಶೈಕ್ಷಣಿಕ ಶಿಸ್ತೀಕರಣಕ್ಕೆ ಒಳಪಡಿಸುವ ಕೆಲಸ ಸ್ವಲ್ಪ ಮಾತ್ರ ಆಗಿದೆ. ಅಪಾರವಾದ ಕೆಲಸ ಬಾಕಿಯಿದೆ. ಹೀಗೆ ನಮ್ಮ ಕುರಿತೋದದ ಕಾವ್ಯಪ್ರಯೋಗಮತಿ ಎಂಥದ್ದು ಮತ್ತು ಎಷ್ಟು ವಿಸ್ತಾರವಾದದ್ದು ಎಂಬುದಕ್ಕೆ ನಮ್ಮಲ್ಲಿಂದು ಅಪಾರ ಉದಾಹರಣೆಗಳು ಕಣ್ಣೆದುರು ಇವೆ ಎಂಬುದು ಮಾತ್ರ ನಿಜ.

ನಮ್ಮಲ್ಲಿಂದು ಯಾವುದನ್ನು ಸಾಹಿತ್ಯ ಪರಂಪರೆ ಎಂದು ಬಿಂಬಿಸಲಾಗುತ್ತಿದೆಯೊ ಆ ಸಾಹಿತ್ಯ ಪರಂಪರೆಯು ನಿಜವಾಗಿಯೂ ನಮ್ಮ ಪರಂಪರೆಯೊ? ಯಾವುದನ್ನು ನಮ್ಮ ಸಾಹಿತ್ಯ ಚರಿತ್ರೆ ಎಂದು ಬಿಂಬಿಸಲಾಗುತ್ತಿದೆಯೊ ಆ ಚರಿತ್ರೆ ನಿಜವಾಗಿಯೂ ನಮ್ಮೆಲ್ಲರ ಸಾಹಿತ್ಯ ಚರಿತ್ರೆಯೊ? ಇದು ನಮ್ಮ ಅಂಚಿನ ಜನರು ಸೃಷಟಿಸಿದ ಸಾಹಿತ್ಯವನ್ನು ಒಳಗೊಂಡಿದೆಯೊ? ಈ ಪರಂಪರೆ ಅಥವಾ ಸಾಹಿತ್ಯ ಚರಿತ್ರೆಯ ಕಲ್ಪನೆಯಲ್ಲಿ ಸಾಮಾಜಿಕ ನ್ಯಾಯದ ಪ್ರಶ್ನೆಗಳು ಇವೆಯೊ? ಈ ಬಗೆಗೆ ನಾವು ಗಂಭೀರವಾಗಿ ಚಿಂತಿಸಬೇಕಿದೆ. ಎಂ.ಎ.ರಾಮಾನುಜ ಅಯ್ಯಂಗಾರ್ ಆಗಲೀ, ಬಿ.ಎಂ.ಶ್ರೀ ಆಗಲೀ, ಆರ್.ನರಸಿಂಹಾಚಾರ್ ಆಗಲೀ, ರಂ.ಶ್ರೀ.ಮುಗಳಿಯವರಾಗಲೀ ಇವರೆಲ್ಲರೂ 19ನೆ ಶತಮಾನದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಗಳನ್ನು ಬರೆಯುವಾಗ ಒಗ್ಗರಣೆಗೂ ಕೂಡ ಜನಪದ ಸಾಹಿತ್ಯವನ್ನು ತಮ್ಮ ಚರಿತ್ರೆಯಲ್ಲಿ ಸೇರಿಸಿಕೊಳ್ಳಲಿಲ್ಲ! ಅಷ್ಟೇ ಅಲ್ಲ ವೈವಿಧ್ಯಮಯವಾದ ಜನಪದ ಸಾಹಿತ್ಯ ಚರಿತ್ರೆಗಳನ್ನು ಬರೆಯುವ ಕೆಲಸವನ್ನು ನಾವು ಯಾರೂ ಇನ್ನೂ ಮಾಡಿಲ್ಲ! ಸಿರಿಯಜ್ಜಿ, ಬುರ್ರಕಥಾ ಈರಮ್ಮ, ಬನ್ನೂರು ಕೆಂಪಮ್ಮ, ತಂಬೂರಿ ರಾಚಯ್ಯ, ಹೆಬ್ಬಣಿ ಮಾದಯ್ಯ, ಪುಟ್ಟಿಸಿದ್ಧಸೆಟ್ಟಿ ಮೊದಲಾದ ನೂರಾರು ಜನ ಜನಪದ ಪರಂಪರೆಯ ಕವಿಗಳು ಹಾಡಿದ ಮಹಾಕಥನಗಳನ್ನು ನಾವಿಂದು ದಾಖಲು ಮಾಡಿಕೊಂಡಿದ್ದೇವೆ. ಆದರೆ ಇವರ್ಯಾರನ್ನೂ ನಾವು ಕವಿಗಳು ಎಂದು ಕರೆಯಲು ಸಿದ್ಧರಿಲ್ಲ! ಪಂಪ, ರನ್ನ, ಲಕ್ಷ್ಮೀಶ, ಕುಮಾರವ್ಯಾಸ, ಅಲ್ಲಮ, ಅಕ್ಕ ಇಂಥವರ ಸಾಲಿನಲ್ಲಾಗಲೀ; ಕುವೆಂಪು, ಕಾರಂತ, ಬೇಂದ್ರೆ, ಅಡಿಗ, ಗೀತಾ ನಾಗಭೂಷಣ, ವೈದೇಹಿ, ಸಿದ್ಧಲಿಂಗಯ್ಯ, ದೇವನೂರು ಮಹಾದೇವ, ಪ್ರತಿಭಾ, ಶಿವಪ್ರಕಾಶ ಇಂಥವರ ಸಾಲಿನಲ್ಲಾಗಲೀ ಇವರನ್ನು ನಿಲ್ಲಿಸಿಕೊಳ್ಳಲು ಸಿದ್ಧರಿಲ್ಲ! ಯಾಕೆ?

'ಕನ್ನಡದಾ ನಾಡವರ್ಗಳ್ ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್' ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ ಆದರೆ ಹೀಗೆ ಕುರಿತು ಓದದೆ ಕಾವ್ಯ ಪ್ರಯೋಗಿಸಿದ ಕವಿಗಳನ್ನು ನಾವು ಯಾಕೆ ಮುಖ್ಯ ಕವಿಗಳೆಂದು ಪರಿಗಣಿಸುತ್ತಿಲ್ಲ? ಅವರು ತಲೆಮಾರಿನಿಂದ ತಲೆಮಾರಿಗೆ ಪರಂಪರಾನುಗತವಾಗಿ ರವಾನಿಸಿಕೊಂಡು ಬಂದ ಕಾವ್ಯಗಳನ್ನು ಯಾಕೆ ಮುಖ್ಯ ಕಾವ್ಯಗಳೆಂದು ಪರಿಗಣಿಸುತ್ತಿಲ್ಲ? ಈ ಹಿನ್ನೆಲೆಯಲ್ಲಿ ನಾವು ಪಶ್ಚಿಮ ಪ್ರಣೀತ ಆಧಾರವಾದಿ ಚರಿತ್ರೆ ಕಲ್ಪನೆಯಿಂದ ಬಿಡುಗಡೆ ಪಡೆಯಬೇಕಿದೆ. ಹಾಗೆಯೆ ಖಾಸಗಿ ಕಾಪಿರೈಟ್ವಾದಿ ಸಾಹಿತ್ಯ ಕಲ್ಪನೆಯಿಂದ ಬಿಡುಗಡೆ ಪಡೆಯಬೇಕಿದೆ. ಹಾಗೆ ಬಿಡುಗಡೆಗೊಂಡು ನಮ್ಮ ಜನಪದ ಸಾಹಿತ್ಯ ಮತ್ತು ಜೀವನಕ್ರಮಗಳನ್ನು ಅನುಸಂಧಾನಕ್ಕೆ ಎತ್ತಿಕೊಳ್ಳಬೇಕಿದೆ.

ಇದೇ ಸಂದರ್ಭದಲ್ಲಿ ನನ್ನ ಒಂದು ಅನುಭವವನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕು ಅನ್ನಿಸುತ್ತಿದೆ. ಕಳೆದ ವರ್ಷ ನಮ್ಮ ಕಾಲೇಜಿನ ಮೂರನೆ ಸೆಮಿಸ್ಟರ್ನ ಕನ್ನಡ ಸಾಹಿತ್ಯದ ವಿದ್ಯಾಥರ್ಿಗಳಿಗೆ ನಿಮ್ಮ ನಿಮ್ಮ ತಾಯಂದಿರನ್ನು ಕುರಿತು 'ಅವ್ವ' ಎಂದು ಹೆಸರು ಕೊಟ್ಟು ಪ್ರತಿಯೊಬ್ಬರೂ ಒಂದೊಂದು ಕವಿತೆಯನ್ನು ಬರೆದುಕೊಡಿ ಎಂದು ಹೇಳಿದೆ. ಒಂದು ಗಂಟೆಯ ನಂತರ 63 ಜನ ವಿದ್ಯಾಥರ್ಿಗಳು ತಮ್ಮ ಅವ್ವಂದಿರನ್ನು ಕುರಿತು 63 ಕವಿತೆಗಳನ್ನು ಬರೆದಿದ್ದರು. ಅವುಗಳನ್ನು ಒಂದೊಂದೆ ಓದಿದಾಗ ನನಗೆ ನಿಜಕ್ಕು ಆಶ್ಚರ್ಯವಾಯಿತು! ಯಾಕೆಂದರೆ 5-6 ಜನರನ್ನು ಬಿಟ್ಟರೆ ಮಿಕ್ಕವರೆಲ್ಲ ತಾವು ಕೇಳಿದ ಜನಪದ ಗೀತೆಯನ್ನೊ ಅಥವಾ ಚಿತ್ರಗೀತೆಯನ್ನೊ ಅನುಕರಿಸಿ ಪದ್ಯ ಬರೆದಿದ್ದರು! ಇಷ್ಟು ವರ್ಷ ಇವರು ಶಾಲೆಗಳಲ್ಲಿ ಓದಿಕೊಂಡು ಬಂದ ಕಾವ್ಯ ಇವರಿಗೆ ಯಾಕೆ ಅನುಕರಣೀಯ ಮಾದರಿ ಎನಿಸಲಿಲ್ಲ? ಕವಿತೆಯನ್ನು ಬರೆಯಲು ಹೊರಡುವ ಯಾವುದೆ ಕವಿಗೆ ನಾವು ಈಗಾಗಲೆ ಬರೆದಿರುವವರನ್ನು ಓದಿಕೊಳ್ಳಿ ಎಂದು ಹೇಳುವುದುಂಟು. ಅಲ್ಲದೆ ಯಾವುದೇ ಕವಿ ತನ್ನದೇ ವಿಶಿಷ್ಟ ಕಾವ್ಯ ನೀಡಬೇಕಾದರೆ ಅವನಿಗೆ ಮೊದಲು ಪರಂಪರೆಯ ತಿಳುವಳಿಕೆ ಚೆನ್ನಾಗಿ ಇರಬೇಕು ಎಂದು ಬಲವಾಗಿ ನಾವಿಂದು ನಂಬುತ್ತೇವೆ ಕೂಡ. ಆದರೆ ನನ್ನ ವಿದ್ಯಾಥರ್ಿಗಳು ಯಾಕೆ ಶಿಷ್ಟ ಸಾಹಿತ್ಯ ಪರಂಪರೆಯನ್ನು ತಿಳಿದಿದ್ದರೂ ಜನಪದ ಮತ್ತು ಚಿತ್ರಗೀತೆಗಳನ್ನು ಅನುಕರಿಸಿದರು? ನಾವಿಂದು ಯಾವುದನ್ನು ನಮ್ಮ ಸಾಹಿತ್ಯ ಪರಂಪರೆ ಎಂದು ಕಲಿಸುತ್ತಿದ್ದೇವೆಯೊ ಅದು ನಿಜಕ್ಕು ಅವರೆಲ್ಲರ ಪರಂಪರೆಯೊ ಅಥವಾ ಅವರ ಮೇಲೆ ನಾವು ಹೇರುತ್ತಿರುವ ಒಂದು ಪರಂಪರೆಯೊ?

ಚಿತ್ರಗೀತೆಗಳು ತಮ್ಮ ಮಾರುಕಟ್ಟೆ ರಾಜಕಾರಣದ ಮೂಲಕ ಬಲವಂತವಾಗಿ ಹಾಗೂ ಅನಿವಾರ್ಯ ಎಂಬಂತೆ ಗಾಢವಾಗಿ ಹೇಗೆ ನೀಡಲ್ಪಡುತ್ತಿದ್ದಾವೊ ಹಾಗೆ ನಮ್ಮವರು ಕುರಿತೋದದೆ ಕಟ್ಟಿರುವ ಸಾಹಿತ್ಯವನ್ನು ನಾವು ನೀಡುತ್ತಿದ್ದೇವೆಯೆ? ನಮಗೆ ಯಾವುದು ಬೇಕಾಗಿದೆಯೊ ಅದನ್ನು ಪಡೆಯುವುದಕ್ಕಿಂತ ನಮಗೆ ಯಾವುದನ್ನು ನೀಡಲಾಗುತ್ತಿದೆಯೊ ಅದನ್ನೆ ಪಡೆಯಬೇಕಾದ ಅನಿವಾರ್ಯತೆಯನ್ನು ಇಂದು ಸೃಷ್ಟಿಸಲಾಗುತ್ತಿಲ್ಲವೆ? ನಮಗೇನು ಬೇಕೆಂದು ನಾವು ನಿರ್ಧರಿಸುವಷ್ಟು ಜಗತ್ತು ಸರಳವಾಗಿ ಇಂದು ಇದೆಯೆ? ನಮ್ಮ ಮನಸ್ಸಿನ ಮೂಗುದಾರಗಳನ್ನು ಯಾವ ವಾಣಿಜ್ಯದ ರಾಜಕಾರಣಗಳು ಹಿಡಿದಿವೆ? ಯಾವ ಸಾಂಸ್ಕೃತಿಕ ರಾಜಕಾರಣಗಳು ಹಿಡಿದಿವೆ? ಅಲ್ಲದೆ ಒಂದು ಸಾಹಿತ್ಯ ಪರಂಪರೆ, ಒಂದು ಸಾಹಿತ್ಯ ಚರಿತ್ರೆ ಎನ್ನುವುದು ನಮ್ಮಲ್ಲಿ ಎಂದಾದರು ಇತ್ತೆ? ಇಂದಾದರು ಇದೆಯೆ? ನಮ್ಮಲ್ಲಿನ ಹಲವು ಸಾಹಿತ್ಯ ಪರಂಪರೆಗಳನ್ನು ಸಮಾನವಾಗಿ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ನಾವು ನೋಡುತ್ತಿದ್ದೇವೆಯೆ? ಅಥವಾ ಒಂದು ಸಂಸ್ಕೃತಿ ಒಂದು ಪರಂಪರೆಯ ಕಲ್ಪನೆಯನ್ನು ಹೇರುತ್ತಿದ್ದೇವೆಯೆ? ಈ ಎಲ್ಲ ಪ್ರಶ್ನೆಗಳನ್ನೂ ಕೂಡ ನಾವಿಂದು ಗಂಭೀರವಾಗಿ ಕೇಳಿಕೊಳ್ಳಬೇಕಿದೆ.

ಡಾ.ರಾಮಲಿಂಗಪ್ಪ ಟಿ.ಬೇಗೂರು
ಮಹಾರಾಣಿ ಕಲಾ ಕಾಲೇಜು
ಶೇಷಾದ್ರಿ ರಸ್ತೆ, ಬೆಂಗಳೂರು-01
begur41@gmail.com
 
ರೇಡಿಯೋ     ಚಿಂತನೆ  -01 
ವಿಮರ್ಶೆಯ ಸುತ್ತ
ನಮ್ಮಲ್ಲಿ ಸಾಹಿತ್ಯವನ್ನು ವಿಮರ್ಶೆ ಮಾಡುವ ಕ್ರಿಯೆಯು ಒಂದು ಸಂಪ್ರದಾಯವಾಗಿ ಈಗಾಗಲೇ ಚಾಲ್ತಿಯಲ್ಲಿದೆ. ಪುಸ್ತಕ ವಿಮರ್ಶೆ, ಅಧ್ಯಯನ, ಸಂಶೋಧನೆ, ಸಂಗ್ರಹ-ಸಂಪಾದನೆ, ಮುನ್ನುಡಿ-ಬೆನ್ನುಡಿ, ಸಾಹಿತ್ಯ ಚರಿತ್ರೆ ರಚನೆ, ಒಡನಾಟ ಕಥನಗಳು, ಜೀವನ ಚರಿತ್ರೆಗಳು, ಸೂಕ್ತಿಸಂಗ್ರಹಗಳು, ಅಭಿನಂದನಾ ಗ್ರಂಥಗಳು, ಸಂಸ್ಮರಣ ಗ್ರಂಥಗಳು, ಪತ್ರಿಕಾ ಅಂಕಣಗಳು, ರೇಡಿಯೊ ಚಿಂತನೆಗಳು, ಭಾಷಣಗಳು, ಶಿಕ್ಷಣ ಪಠ್ಯಗಳು, ಅನುವಾದಗಳು, ತೌಲನಿಕ ಅಧ್ಯಯನಗಳು, ಮಹಿಳಾ ಅಧ್ಯಯನಗಳು, ಸಾಂಸ್ಕೃತಿಕ ಅಧ್ಯಯನಗಳು ಇತ್ಯಾದಿ ಇತ್ಯಾದಿ ಅನೇಕ ಬಗೆಗಳಲ್ಲಿ, ರೀತಿ ರಿವಾಜುಗಳಲ್ಲಿ ವಿಮರ್ಶೆಯು ಸೃಷ್ಟಿಯಾಗುತ್ತಿದೆ. ಈ ಎಲ್ಲವುಗಳೂ ಇಂದು ನಮ್ಮ ವಿಮರ್ಶೆಯ ಭಿನ್ನ ಧಾರೆಗಳಾಗಬಲ್ಲ ಶಕ್ತಿಯನ್ನೂ ಪಡೆದಿವೆ. ನಿಯತಕಾಲಿಕೆಗಳು ಮತ್ತು ಕಿರು ಸಾಹಿತ್ಯ ಪತ್ರಿಕೆಗಳು ಕೂಡ ಸಾಹಿತ್ಯ ಮತ್ತು ವಿಮರ್ಶೆಯ ಸೃಷ್ಟಿಗೆ ತಮ್ಮದೇ ಕೊಡುಗೆ ನೀಡುತ್ತ ಬಂದಿವೆ. ನೀಡುತ್ತಿವೆ. ಈ ಎಲ್ಲ ಬಗೆಗಳಲ್ಲಿ ಸೃಷ್ಟಿಯಾಗುತ್ತಿರುವ ವಿಮರ್ಶೆಯು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಸಾಹಿತ್ಯದ ಕಲ್ಪನೆಯಾದರೂ ಎಂಥದ್ದು? ಯಾವ ಸಾಹಿತ್ಯವು ಇಂದು ಹೆಚ್ಚು ವಿಮಶರ್ೆಗೆ ಗುರಿಯಾಗುತ್ತಿದೆ? ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ಯೋಚಿಸಿದರೆ ನಮ್ಮ ಪ್ರತಿಷ್ಠಿತ ಸಾಹಿತ್ಯ ಮಾತ್ರವೆ ವಿಮರ್ಶೆಗೆ ಗುರಿಯಾಗುತ್ತಿರುವುದು ಎದ್ದು ಕಾಣುತ್ತದೆ. ಶಾಸನಗಳಿಂದ ಪಂಪ ರನ್ನರಿಂದ ಹಿಡಿದು ಇಂದಿನ ಬೇಂದ್ರೆ ಕುವೆಂಪುವರೆಗಿನ ಪ್ರಿತಿಷ್ಠಿತ ಸಾಹಿತ್ಯ ಮಾತ್ರವೆ ವಿಮರ್ಶೆಗೆ ಗುರಿಯಾಗುತ್ತಿದೆ. ಆದರೆ ನಮ್ಮ ಜನಪದ ಸಾಹಿತ್ಯ, ಚಿತ್ರಸಾಹಿತ್ಯ, ಸುಗಮಸಾಹಿತ್ಯ, ಜನಪ್ರಿಯ ಸಾಹಿತ್ಯಗಳು ಅಸ್ಪೃಶ್ಯವೆಂಬಂತೆ ಆಚೆ ಇಡಲ್ಪಟ್ಟಿವೆ. ಈಗೀಗ ಜನಪದ ಸಾಹಿತ್ಯವನ್ನು ಸ್ವಲ್ಪ ಮಟ್ಟಿಗೆ ವಿಮರ್ಶೆಯು ಒಳಗೊಳ್ಳುತ್ತಿದೆ. ಮುಂದೇನಾಗುವುದೊ-ಮುಂದೇನಾಗಬೇಕೊ ಚಿಂತಿಸಬೇಕಿದೆ ಮತ್ತು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತಗೊಳ್ಳಬೇಕಿದೆ.

ಇಷ್ಟಕ್ಕು ನಮ್ಮಲ್ಲಿ ಇಂದು ಚಾಲ್ತಿಯಲ್ಲಿ ಇರುವ ವಿಮರ್ಶೆಯ ಪರಿಕಲ್ಪನೆಯಾದರೂ ಎಂಥದ್ದು? ವಿಮರ್ಶೆ ಎಂದರೆ ಏನು? ಸಾಹಿತ್ಯದ ಸೌಂದರ್ಯವನ್ನು ವಿವರಿಸುವುದು, ಸಾಹಿತ್ಯ ಕೃತಿಯ ಆಶಯ ತಾತ್ವಿಕತೆಗಳನ್ನು ಗುರುತಿ ವುದು, ಕೃತಿ ಕಥನದ ಅರ್ಥಸಾಧ್ಯತೆಗಳನ್ನು ವಿವರಿಸುವುದು, ಸಾಹಿತ್ಯದ ಬೆಲೆ ಕಟ್ಟುವುದು, ಮೌಲ್ಯಮಾಪನ ಮಾಡುವುದು, ಲೇಖಕರ ಸ್ಥಾನ ನಿರ್ಣಯ ಮಾಡುವುದು, ಸಾಹಿತ್ಯ ಕೃತಿಯ ಗುಣದೋಷಗಳನ್ನು ಗುರುತಿಸುವುದು, ಸಾಹಿತ್ಯದ ಒಳಿತು ಕೆಡುಕುಗಳನ್ನು ಚರ್ಚಿಸುವುದು, ಸಾಹಿತ್ಯದ ಸಾಮಾಜಿಕ ಪರಿಣಾಮಗಳನ್ನು ಗುರುತಿಸುವುದು, ಒಳ್ಳೆಯ ಸಾಹಿತ್ಯವೆಂದರೆ ಯಾವುದು ಎಂದು ವ್ಯಾಖ್ಯಾನಿಸುವುದು ಇತ್ಯಾದಿ ಇತ್ಯಾದಿ ಇವೆಲ್ಲವನ್ನೂ ವಿಮರ್ಶೆಯು ತನ್ನ ಜವಾಬ್ದಾರಿ ಎಂದೇ ಹೇರಿಕೊಂಡಿದೆ. ಈ ಜವಾಬ್ದಾರಿಯನ್ನು ಹೊರಲು ವಿಮರ್ಶೆಗೆ ಹಕ್ಕು ನೀಡಿದವರು ಯಾರು? ಇದರ ಹಿಂದಿನ ಸಾಂಸ್ಕೃತಿಕ ರಾಜಕಾರಣ ಯಾವುದು? ನಿಜಕ್ಕು ವಿಮರ್ಶೆಯ ಜವಾಬ್ದಾರಿಗಳು ಯಾವುವು? ಈ ಬಗೆಗೆ ನಾವು ಗಂಭೀರವಾಗಿ ಆಲೋಚಿಸಬೇಕಿದೆ.

ನಮ್ಮ ವಿಮಶರ್ೆಯ ಪ್ರಾಗ್ರೂಪಗಳನ್ನು-ಬೇರುಗಳನ್ನು ಒಮ್ಮೆ ಅವಲೋಕನ ಮಾಡಿದರೆ ಇಂದಿನ ವಿಮಶರ್ೆಯ ಪರಿಕಲ್ಪನೆಗಳಿಗು ಹಿಂದಣ ಕಲ್ಪನೆಗಳಿಗು ಅಪಾರ ಅಂತರವಿರುವುದು ತಿಳಿಯುತ್ತದೆ. ವಿಮಶರ್ೆ ಎಂದರೆ ಕೇವಲ ಸಾಹಿತ್ಯದ ಗುಣದೋಷಗಳನ್ನು ನಿರ್ಣಯಿಸುವ ಅಥವಾ ಅದರ ಒಳ ಅರ್ಥಗಳನ್ನು ವಿವರಿಸುವ ಅಥವಾ ಸಾಹಿತ್ಯದ ಸ್ಥಾನ ನಿರ್ಣಯ ಮಾಡುವ ಸಂಶೋಧಕ-ನ್ಯಾಯಾಧೀಶ ಪಾತ್ರದ್ದು ಮಾತ್ರ ಅಲ್ಲ. ಸಾಹಿತ್ಯ ವಿಮರ್ಶೆಯು ಅಂತಿಮವಾಗಿ ಸಮಾಜದ ವಿಮರ್ಶೆಯೆ ಆಗಿದೆ. ಸಾಹಿತ್ಯವು ಹೇಗೆ ತನ್ನದೆ ಆದ ಬೇರೆ ಬೇರೆ ಪ್ರಕಾರಗಳ ಮೂಲಕ ಸಮಾಜವನ್ನು ಅನುಸಂಧಾನಕ್ಕೆ ಗುರಿಮಾಡುತ್ತದೊ ಹಾಗೆಯೆ ವಿಮರ್ಶೆಯು ಕೂಡ ಸಮಾಜವನ್ನೆ ಅನುಸಂಧಾನಕ್ಕೆ ಗುರಿ ಮಾಡುತ್ತದೆ. ಕಾವ್ಯ, ಕತೆ, ಕಾದಂಬರಿ ಹೀಗೆ ಈ ಮೊದಲಾದುವು ಹೇಗೆ ಒಂದೊಂದು ಸಾಹಿತ್ಯ ಪ್ರಕಾರಗಳೋ ಹಾಗೆ ವಿಮರ್ಶೆ ಕೂಡ ಒಂದು ಸಾಹಿತ್ಯ ಪ್ರಕಾರ. ಹಾಗೆ ನೋಡಿದರೆ ಇದು ಒಂದು ಸಾಹಿತ್ಯ ಪ್ರಕಾರ ಮಾತ್ರ ಅಲ್ಲ; ಇದೊಂದು ಬರವಣಿಗೆಯ ವಲಯ. ಇದು ಗದ್ಯರೂಪಿಯಾಗಿ ಮಾತ್ರ ಅಥವಾ ಪ್ರಬಂಧ ರೂಪಿಯಾಗಿ ಮಾತ್ರ ಪ್ರಕಟವಾಗುವ ಒಂದು ಪ್ರಕಾರ ಅಲ್ಲ. ಹಲವು ಪ್ರಕಾರಗಳಲ್ಲಿ ಪ್ರಕಟವಾಗಬಹುದಾದ ಒಂದು ದೊಡ್ಡ ಶಿಸ್ತಾಗಿ ಇದು ಇಂದು ಬೆಳೆದಿದೆ. ನಮ್ಮ ಹಳೆಯ ಸಾಹಿತ್ಯವನ್ನು ಮತ್ತು ಸಾಹಿತ್ಯದ ಅನುಸಂಧಾನದ ಚರಿತ್ರೆಗಳನ್ನು ಗಮನಿಸಿದರೆ ಇದು ತಿಳಿಯುತ್ತದೆ.

ನಮ್ಮ ಪರಂಪರೆಗಳಲ್ಲಿ ಇರುವ ಮಲ್ಲಿಕಾರ್ಜುನನ ಸೂಕ್ತಿಸುಧಾರ್ಣವ, ಮಲ್ಲಕವಿ ಮತ್ತು ಅಭಿನವ ವಾದಿವಿದ್ಯಾನಂದರ ಕಾವ್ಯಸಾರಗಳು, ಹಲಗೆಯಾರ್ಯ, ಗೂಳೂರು ಸಿದ್ಧವೀರಣ್ಣ, ಗುಮ್ಮಳಾಪುರದ ಸಿದ್ಧಲಿಂಗಯತಿ, ಶಿವಗಣಪ್ರಸಾದಿ ಮಹದೇವಯ್ಯಾದಿಗಳ ಶೂನ್ಯಸಂಪಾದನೆಗಳು, ಕಲ್ಲುಮಠದ ಪ್ರಭುದೇವನ ಲಿಂಗಲೀಲಾವಿಲಾಸ ಚಾರಿತ್ರ್ಯ ಮೊದಲಾದ ಸಂಪಾದನಾ ಗ್ರಂಥಗಳನ್ನು ನೋಡಿದರೆ; ಹರಿಹರ, ಚಾಮರಸ, ಎಳಂದೂರ ಹರಿಹರೇಶ್ವರ, ಸಿದ್ಧನಂಜೇಶ, ರಾಘವಾಂಕಾದಿಗಳ ಶರಣಚರಿತ್ರೆಯ ಕಾವ್ಯಗಳನ್ನು ನೋಡಿದರೆ, ಪಿ.ಸಿ.ಬ್ರೌನನ ಪ್ರಭುಲಿಂಗಲೀಲೆ ಅನುವಾದ, ಬಸವಕವಿಯ ಬಸವಪುರಾಣ ಅನುವಾದ ಇತ್ಯಾದಿಗಳನ್ನು ನೋಡಿದರೆ; ಹಿರಣ್ಯಗರ್ಭನ ವಿಶ್ವಕೃತಿ ಪರೀಕ್ಷಣಂ, ದೇವಚಂದ್ರನ ರಾಜಾವಳಿ ಕಥಾಸಾರಗಳನ್ನು ನೋಡಿದರೆ ನಮ್ಮಲ್ಲಿ ಸಾಹಿತ್ಯದ ಅನುಸಂಧಾನವು ಹೇಗೆಲ್ಲ ನಡೆದಿದೆ ಎಂಬುದು ತಿಳಿಯುತ್ತದೆ. ಅಲ್ಲದೆ ನಮ್ಮ ಯಕ್ಷಗಾನಗಳು, ಗಮಕಗಳು, ತಾಳಮದ್ದಲೆಗಳು, ಕೇಳಿಕೆಗಳು, ತತ್ವಕ್ಕೆ ಹಾಕುವುದು, ಬಯಲಾಟಗಳು, ಹರಿಕತೆಗಳು ಇತ್ಯಾದಿ ಪ್ರದರ್ಶನ ಕಲೆಗಳು ಮತ್ತು ಆಚಾರಗಳೊಂದಿಗಿನ ಸಾಹಿತ್ಯದ ಸಂಬಂಧಗಳನ್ನು ನೋಡಿದರೆ ನಮ್ಮ ಸಾಹಿತ್ಯದ ಅನುಸಂಧಾನ ಹೇಗೆಲ್ಲ ನಡೆದಿದೆ ಎಂಬುದು ತಿಳಿಯುತ್ತದೆ. ಈ ಸಾಹಿತ್ಯದ ಅನುಸಂಧಾನದ ಪರಂಪರೆಗಳಲ್ಲಿ ಅನೇಕ ಬಗೆಯಲ್ಲಿ ಸಾಹಿತ್ಯವನ್ನು ಬಾಳಿಗೆ ಎತ್ತಿಕೊಳ್ಳುವ ವಿಮರ್ಶಾ  ವಿನ್ಯಾಸಗಳಿವೆ. ಆದರೆ ಈ ರೀತಿಯ ಪಾರಂಪರಿಕ ವಿಮರ್ಶಾ  ವಿನ್ಯಾಸಗಳಿಂದ ನಾವಿಂದು ಬಹಳ ದೂರ ಬಂದಿದ್ದೇವೆ. ಸಾಹಿತ್ಯವನ್ನು ಬಾಳಿನೊಂದಿಗೆ ಅನುಸಂಧಾನ ಮಾಡುವ ನಮ್ಮ ಜನಪದರ ಆಚಾರಗಳನ್ನು ಅಸಡ್ಡೆ ಮಾಡುತ್ತಿದ್ದೇವೆ. ವಿಮರ್ಶೆಎಂದರೆ ಸಾಹಿತ್ಯದ ಅನುಸಂಧಾನ ಎನ್ನುವುದಕ್ಕಿಂತ ಸಾಹಿತ್ಯವನ್ನು ಬೆಲೆಕಟ್ಟುವುದು, ದೋಷ ಹುಡುಕುವುದು, ಪರಿಭಾಷೆ-ಪರಿಕಲ್ಪನೆಗಳ ಕಗ್ಗಾಡನ್ನು ಸೃಷ್ಟಿಸುವುದು ಎಂಬ ಹಂತಕ್ಕೆ ಬಂದು ನಿಂತಿದ್ದೇವೆ. ಬಹುಮುಖಿಯಾದ ಪರಂಪರೆಯ ಅನುಸಂಧಾನದ ವಿನ್ಯಾಸಗಳನ್ನು ಆಂಗ್ಲಪ್ರಣೀತ ತತ್ವ ಸಿದ್ಧಾಂತಗಳ ಹಾವಳಿಯಲ್ಲಿ ಮರೆವಿಗೆ ಸರಿಸಿದ್ದೇವೆ. ಯಾಕೆ ಹೀಗಾಯಿತು? ವಿಮರ್ಶೆಯು ಸಾಮಾಜಿಕ ಸ್ತರದಿಂದ ಶೈಕ್ಷಣಿಕ ಶಿಸ್ತಾಗಿ ಮಾತ್ರವೆ ಹೊರಳಿಕೊಂಡ, ಯೂನಿವರ್ಸಿಟಿ -ಕಾಲೇಜು ವಿಚಾರಗೋಷ್ಠಿಗಳ ವಿದ್ವಾಂಸ ಮಹಾಶಯರ ಬೌದ್ಧಿಕ ಚಟುವಟಿಕೆಯಾಗಿ ಹೊರಳಿಕೊಂಡ ಪರಿಣಾಮವೆ ಇದಾಗಿದೆ. ಬಹುಪರಂಪರೆಗಳ ಏಕರೂಪೀಕರಣ, ಶೈಕ್ಷಣಿಕ ಶಿಸ್ತೀಕರಣಗಳ ಪರಿಣಾಮವೆ ಇದಾಗಿದೆ.

ಜಾತಿ, ಲಿಂಗ, ಪ್ರಾದೇಶಿಕತೆ, ಸ್ವಜನ ಪಕ್ಷಪಾತದ ರಾಜಕಾರಣಗಳು; ಪಾಂಡಿತ್ಯ ಪ್ರದರ್ಶನ, ಕಡತಂದ ಅನ್ಯ ಸಿದ್ಧಾಂತಗಳ ಅನ್ವಯೀಕರಣಗಳು ಹೀಗೆ ಹತ್ತು ಹಲವು ಬಿಕ್ಕಟ್ಟುಗಳಿಂದ ನಮ್ಮ ವಿಮರ್ಶೆಯು ಇಂದು ಜರ್ಝರಿತವಾಗಿ ಹೋಗಿದೆ. ವಿಮರ್ಶೆಯೆಲ್ಲವು ಬಹುಪಾಲು ಜೈವಿಮರ್ಶೆಯಾಗಿ ಇಲ್ಲವೆ ಬೈವಿಮರ್ಶೆಯಾಗಿ ಪರಿಣಮಿಸುತ್ತಿದೆ. ಇಂದು ಕೃತಿವಿಮರ್ಶೆ ಕೂಡ ಕೃತಿಯ ವಿಶ್ಲೇಷಣೆಗೆ ಅದರ ಒಳಗಿನಿಂದಲೆ ಓದಿನ ದಾರಿಗಳನ್ನು ಸೃಷ್ಟಿಸಿಕೊಳ್ಳದೆ ಅನ್ಯ ಸಿದ್ಧಾಂತಗಳನ್ನು ಅನ್ವಯಿಸುವ ಕಡೆಗೆ ಸಾಗುತ್ತಿದೆ. ತೌಲನಿಕ ವಿಮರ್ಶೆಯಾದರೋ ತರತಮ ತುಲನೆಯ ಕಡೆಗೇ, ಸ್ಥಾನೀಕರಣದ ಕಡೆಗೇ ಸಾಗುತ್ತಿದೆ. ವಿಮರ್ಶೆಯ ಕ್ಷೇತ್ರಕ್ಕೆ ಹೊಸದಾಗಿ ಬರುವ ಹಲವರಿಗೆ ಇಂದಿನ ಸಿದ್ಧಾಂತಗಳು-ಪರಿಭಾಷೆಗಳನ್ನು ತಿಳಿದುಕೊಳ್ಳುವುದರಲ್ಲೆ ಆಯುಷ್ಯ ಸೋರಿಹೋಗಬಹುದು ಎನ್ನಿಸುತ್ತಿದೆ. ಮಾರ್ಕ್ಸ್ ವಾದಿ ವಿಮರ್ಶೆ, ಉದಾರವಾದಿ ವಿಮರ್ಶೆ, ವಿವರಣಾತ್ಮಕ ವಿಮರ್ಶೆ, ರಾಚನಿಕ ಸಿದ್ಧಾಂತ, ನಿರಚನವಾದಿ ವಿಮರ್ಶೆ, ಪೌರ್ವಾತ್ಯವಾದ , ನವಚಾರಿತ್ರಿಕ ವಾದ, ಓದುಗ ಸ್ಪಂದನ ಸಿದ್ಧಾಂತ, ಸ್ತ್ರೀವಾದ ಹೀಗೆ ಅನೇಕ ವಾದಗಳನ್ನು ತಿಳಿಯುವುದಕ್ಕೇ ಮಿದುಳಿನ ಬೆವರು ಇಳಿದುಹೋಗುತ್ತಿದೆ. ಒಂದು ಕಡೆಯಿಂದ ಸಂಸ್ಕೃತದಿಂದ ಕಡ ತಂದ ಮೀಮಾಂಸಾ ಸಿದ್ಧಾಂತಗಳು ಇನ್ನೊಂದು ಕಡೆ ಇಂಗ್ಲಿಶಿನಿಂದ ದಾಳಿ ಮಾಡುತ್ತಿರುವ ಪರಿಭಾಷೆ, ಸಿದ್ಧಾಂತಗಳು ಇವೆಲ್ಲವುಗಳಿಂದ ಇಂದಿನ ವಿಮರ್ಶೆಯ ವಿದ್ಯಾರ್ಥಿಯು  ಬಸವಳಿಯುವಂತೆ ಆಗಿದೆ. ಅಪಾರ ವಿದ್ವತ್ತು ಇರುವವರು ಮಾತ್ರವೆ ವಿಮಶರ್ೆ ಮಾಡಬಲ್ಲರು ಎಂಬಂತೆ ಆಗುತ್ತಿದೆ. ದುರಂತವೆಂದರೆ ಇದರಿಂದ ಈ ಕ್ಷೇತ್ರಕ್ಕೆ ಬರುವವರ ಸಂಖ್ಯೆಯೆ ಕ್ಷೀಣಿಸುತ್ತಿದೆ. ಈ ಎಲಿಟಿಸಮ್ಮು ಅಥವಾ ಶ್ರೇಷ್ಠತಾವಾದವನ್ನು ತೊಡೆದು ಹಾಕುವ ಬಗೆ ಹೇಗೆ? ಸಾಹಿತ್ಯವು ಅನುಸಂಧಾನಕ್ಕೆ ಗುರಿಯಾಗುವಾಗ ಅದನ್ನು ಸಿದ್ಧಾಂತಗಳ ಮೂಲಕ ಪ್ರವೇಶಿಸಬೇಕೆ? ಒಂದು ಕೃತಿಯನ್ನು ಒಳಗಿನಿಂದ ಓದುವುದು ಎಂದರೆ ಏನು? ಅನ್ಯ ಸಿದ್ಧಾಂತಗಳ ಕನ್ನಡಕದ ಮೂಲಕ ನಮ್ಮ ಸಾಹಿತ್ಯವನ್ನು ಇನ್ನೆಷ್ಟು ದಿನ ನೋಡುವುದು? ಈ ಎಲ್ಲ ಪ್ರಶ್ನೆಗಳೂ ಮುಖ್ಯವಾದುವು.

ಇಂದು ನಮ್ಮ ವಿಮರ್ಶೆಯನ್ನು ಅನೇಕ ಸಮಸ್ಯೆಗಳು ಕಾಡುತ್ತಿವೆ. ನಮ್ಮ ಕವಿ, ಅನ್ಯ ಕವಿ; ನಮ್ಮ ಪರಂಪರೆ, ಅನ್ಯ ಪರಂಪರೆ ಎಂಬ ಭಾವಗಳಿಂದ ವಸ್ತುನಿಷ್ಠತೆಯು ತೀರಾ ಕಡಿಮೆಯಾಗಿ ಇಲ್ಲಿ ವ್ಯಕ್ತಿನಿಷ್ಠತೆಯು ಇಂದು ತಾಂಡವವಾಡುತ್ತಿದೆ. ಪ್ರಾದೇಶಿಕ ಮೀಸಲಾತಿ, ಲಿಂಗಾಧಾರಿತ ಮೀಸಲಾತಿ, ಜಾತಿ ಆಧಾರಿತ ಮೀಸಲಾತಿ ಇತ್ಯಾದಿಗಳು ವಿಮರ್ಶೆಯಲ್ಲಿ ಕೂಗುಗಳಾಗಿ ಕೇಳಿಬರುತ್ತಿವೆ. ನಿರ್ಧಿಷ್ಟವಾದ ಸಂದರ್ಭಗಳು ಮತ್ತು ಸಂಬಂಧಗಳು ಇಂದು ವಿಮರ್ಶೆಯನ್ನು ಹೆಚ್ಚು ಸೃಷ್ಟಿಸುತ್ತಿರುವುದರಿಂದ ಸಾಂದರ್ಭಿಕತೆಯ ರಾಜಕಾರಣಗಳು ಮತ್ತು ಸಂಬಂಧಿಕತೆಯ ರಾಜಕಾರಣಗಳು; ಪರಿವಾರ ಪ್ರಜ್ಞೆಗಳು ವಿಮರ್ಶೆಯನ್ನು ಬಾಧಿಸುತ್ತಿವೆ. ಮುದ್ರಣ ಮಾದ್ಯಮವು ಇಂದು ಪ್ರಬಲವಾಗಿ ಬೆಳೆದಿರುವುದರಿಂದ ಸಾಹಿತ್ಯದ ಅನುಸಂಧಾನಗಳಿಗು ಮುದ್ರಣ ಮಾದ್ಯಮಕ್ಕು ಅನ್ಯೋನ್ಯವಾದ ಸಂಬಂಧಗಳು ಬೆಳೆದಿವೆ. ಹಾಗಾಗಿ ವಿಮರ್ಶೆಯನ್ನು ಒಳಗೊಂಡಂತೆ ಇಡೀ ಸಾಹಿತ್ಯವನ್ನೆ ಪ್ರಿಂಟ್ ಕ್ಯಾಪಿಟಲಿಸಮ್ಮು ಅಂದರೆ ಮುದ್ರಣ ಬಂಡವಾಳಶಾಹಿಯು ನಿಯಂತ್ರಿಸುತ್ತಿದೆ. ಈ ಎಲ್ಲವುಗಳನ್ನೂ ನಾವಿಂದು ಗಂಭೀರವಾಗಿ ಚಿಂತಿಸಬೇಕಿದೆ.

ಸಾಹಿತ್ಯದಲ್ಲಿ ಈಗಾಗಲೇ ಒಡಕುಗಳು ನಿರ್ಮಾಣವಾಗಿ  ಹೋಗಿವೆ. ಇದರಲ್ಲಿ ನಮ್ಮ ವಿಮರ್ಶೆಯ ಪಾತ್ರವೂ ಇದೆ. ಗಂಭೀರ ಸಾಹಿತ್ಯ-ಜನಪ್ರಿಯ ಸಾಹಿತ್ಯ-ಸುಗಮ ಸಾಹಿತ್ಯ-ಚಿತ್ರಸಾಹಿತ್ಯ ಹೀಗೆ ಈಗಾಗಲೇ ಮೂಡಿರುವ ಒಡಕುಗಳು ಸಾಲದು ಎಂಬಂತೆ ದಲಿತ ಮತ್ತು ದಲಿತೇತರ ಸಾಹಿತ್ಯ, ಪುರುಷ ಸಾಹಿತ್ಯ ಮತ್ತು ಮಹಿಳಾ ಸಾಹಿತ್ಯ ಮೊದಲಾದ ಒಡಕುಗಳೂ ಸೇರಿಕೊಳ್ಳುತ್ತಿವೆ. ದಲಿತ ಸಾಹಿತ್ಯ ಚರಿತ್ರೆ, ಜನಪದ ಸಾಹಿತ್ಯ ಚರಿತ್ರೆ, ಮಹಿಳಾ ಸಾಹಿತ್ಯ ಚರಿತ್ರೆ ಹೀಗೆ ಬೇರೆ ಬೇರೆ ಸಾಹಿತ್ಯ ಚರಿತ್ರೆಗಳು ಇಂದು ರಚನೆಯಾಗುತ್ತಿವೆ. ಇವುಗಳನ್ನೆಲ್ಲ ಒಡಕುಗಳೆಂದು ನೋಡಬೇಕೊ ವೈವಿಧ್ಯಗಳೆಂದು ನೋಡಬೇಕೋ? ಭಿನ್ನ ಪರಂಪರೆಗಳೆಂದು ನೋಡಬೇಕೊ? ಈ ಬಗೆಗೆ ಕೂಡ ನಾವಿಂದು ಗಂಭೀರವಾಗಿ ಯೋಚಿಸಬೇಕಿದೆ.


-ಡಾ.ರಾಮಲಿಂಗಪ್ಪ ಟಿ.ಬೇಗೂರು



 

ಮಂಗಳವಾರ, ಏಪ್ರಿಲ್ 12, 2011













ದಿನಾಂಕ ೧೨-೦೪-೨೦೧೧ ರಂದು ನಡೆದ 'ವಿಮರ್ಶೆಯ ಓದು' ಒಂದು ದಿನದ ಕಮ್ಮಟದ ಉದ್ಘಾಟನೆಯಲ್ಲಿ