೧
ತಲೆಮಾಂಸವೋ ನೂಡಲ್ಸೋ ಪಿಜ್ಜಾನೋ
ಟೇಬಲ್ಲಿಗೆ ಬಂದಾಗೆಲ್ಲ ದೊಡ್ಡಿಯ ನೆನಪಾಗುತ್ತದೆ
ಅವಳೀಗ ಏನು ತಿನ್ನುತ್ತಿರಬಹುದು?
ಛೆ ಅವಳಲ್ಲಿ ಊಗುದುರಿದ ಬರಲುಗಯ್ಯಲ್ಲಿ
ಸೀಕಲು ಮುದ್ದೆ ಗೊಡ್ದುಗಾರಗಳಲ್ಲಿ ಏಗುವಾಗ
ನಾನಿಲ್ಲಿ ಹೇಗೆ ನೂಡಲ್ಸ್ ತಿನ್ನಲಿ
ಅವಳ ಕೈ ತುತ್ತು ತಿಂದ ಕೂಸು ನಾನು
ಥಿಯೇಟರಿನಲ್ಲಿ ನುಣುಸೊಂಟ ಬಳಸುವಾಗ
ಗಾನ ನಾಟ್ಯಗಳ ಎದುರೇ ಅವ್ವನ ಮುಖ ತೇಲಿ ಬರುತ್ತದೆ
ಅವಳೀಗ ಏನು ಮಾಡುತ್ತಿರಬಹುದು?
ಛೆ ಅವಳಲ್ಲಿ ಹರಿದ ಚೆಡ್ಡಿಗೆ ತೇಪೆ ಹಾಕುತ್ತ
ತೂತು ಗುಡಿಸಲಲ್ಲಿ ನೀರ ಬೋಸುತ್ತ ಒಬ್ಬಂಟಿ ಏಗುವಾಗ
ನಾನಿಲ್ಲಿ ಹೇಗೆ ಸೆಟ್ ದೋಸೆ ತಿನ್ನಲಿ?
ಅವಳ ತಗ್ಗು ನುಗ್ಗದ ಚಿಲವಾರ ಚೊಂಬು ಮುಖ
ಎದುರು ಬಂದಾಗೆಲ್ಲ ಏನೊಂದೂ ರುಚಿಸುವುದಿಲ್ಲ ಇಲ್ಲಿ
ಅವಳ ಕಣ್ಣೀರು ಉಪವಾಸಗಳ ಕೂಸು ನಾನು
ಕ್ಲಾಸಿಗೆ ಚಕ್ಕರ್ ಹೊಡೆಯುವಾಗ ಐಸ್ಕ್ರೀಮ್ ತಿನ್ನುವಾಗ
ಗ್ಲಾಸು ತುಟಿಗೆ ಇಡುವಾಗೆಲ್ಲ ಅಕ್ಕನ ಕೂಲಿನಾಲಿ ಗೇಮೆಯೂ
ಅಣ್ಣನ ದೇಸಾಂತರ ಪಾಡೂ ಎದುರು ಬಂದು ನಿಲ್ಲುತ್ತವೆ.
ನಾನು ನನ್ನನ್ನೇ ಕೇಳಿಕೊಳ್ಳುತ್ತೇನೆ
ನಾನೀಗ ಮಾಡುತ್ತಿರುವುದು ಸರಿಯೋ ?
೨
ಹೌದು ನನ್ನೊಳಗೊಬ್ಬ ಸೈನಿಕನಿದ್ದಾನೆ
ಅವನು ಭಾರೀ ಅಕಾರ ಬೆಳೆಯುತ್ತಿದ್ದಾನೆ
ತಲೆಮಾಸಿದ ಅಡ್ನಾಡಿ ಗಳಿಗೆಗಳಲ್ಲಿ
ಧುತ್ತನೆ ಒಳಗಿಂದಲೇ ಪ್ರತ್ಯಕ್ಷನಾಗುತ್ತಾನೆ
ನೀನೀಗ ಮಾಡುತ್ತಿರುವುದು ಸರಿಯೋ ಎಂದು ಕೇಳುತ್ತಾನೆ
ಮನಕೆ ರೆಕ್ಕೆಯ ಕಟ್ಟು ತೋಳುಗಳ ಆಕಾಶದಗಳ ಬೆಳೆಸು
ಗಾಗಾ ಗೀಗೀ ಎಂದು ಲಾಲಿ ಹಾಡುತ್ತ ತಲೆದೂಗಿಸುತ್ತಾನೆ
ಅವನು ಬೆಳೆದು ಬೆಳೆದು ನಾನೆ ಒಡೆದು ಹೋದೇನೆಂದು
ನಾನೀಗ ಅವನಿಗಿಂತ ಬೃಹದಾಕಾರ ಬೆಳೆಯಬೇಕೆಂದು ತೊಡಗಿದ್ದೇನೆ
ನೀವು ಯಾರ ಕೂಸು?
ನಿಮ್ಮೊಳಗೂ ಅವನಿರಬಹುದೇ?
ಹೊಸತು ಪತ್ರಿಕೆ -ಸೆಪ್ಟಂಬರ್ -2009
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ