ಪುಟಗಳು

ಗುರುವಾರ, ಏಪ್ರಿಲ್ 14, 2011

ಕುರಿತು ಓದದೆ- ಕುರಿತೋದದೆಯುಂ



ರೇಡಿಯೋ ಚಿಂತನೆ - 3

ಕವಿರಾಜಮಾರ್ಗವನ್ನು ಬರೆದ ಶ್ರೀವಿಜಯನು ಕನ್ನಡದ ಜನಗಳ ಬಗ್ಗೆ ಹೇಳುವಾಗ 'ಕನ್ನಡದಾ ನಾಡವರ್ಗಳ್ ಕುರಿತೋದದೆಯುಂ ಕಾವ್ಯಪ್ರಯೋಗಪರಿಣತಮತಿಗಳ್' ಎಂದು ಹೇಳಿದ್ದಾನೆ. ನಾವು ನಮ್ಮ ಜನಗಳ ಹೆಗ್ಗಳಿಕೆಯನ್ನು ಹೇಳುವಾಗ ತಪ್ಪದೆ ಈ ಮಾತನ್ನು ಬಳಸುತ್ತೇವೆ. ನಮ್ಮ ಜನಪದರು ಜನ್ಮತಃ ಕವಿಗಳು-ಸೃಜನಶೀಲರು; ಓದಲು ಬರೆಯಲು ಬರದೆ ಇರುವ ಕನ್ನಡಿಗರು ಕೂಡ ಕಾವ್ಯಗಳನ್ನು ಕಟ್ಟಬಲ್ಲವರಾಗಿದ್ದರು. ಗಾದೆ, ಒಗಟು, ಹಾಡು, ತತ್ವಪದ, ಸ್ವರವವಚನಗಳೀಂದ ಹಿಡಿದು ಜನಪದ ಮಹಾಕಾವ್ಯಗಳವರೆಗೆ ನಮ್ಮವರು ಹಲವಾರು ಕಾವ್ಯಗಳನ್ನು ಕಟ್ಟಿ ಹಾಡಿದ್ದಾರೆ. ಕಟ್ಟುತ್ತ ಹಾಡುತ್ತ ಬಂದಿದ್ದಾರೆ ಎಂಬುದಕ್ಕೆ ಸಮರ್ಥನೆಯಾಗಿ ಈ ಶ್ರೀವಿಜಯನ ಮಾತನ್ನು ಬಳಸುವುದುಂಟು. ನಮ್ಮ ಜನಪದ ಕಾವ್ಯಪ್ರಯೋಗಗಳ ಪ್ರಾಚೀನತೆಯ ಸಾಕ್ಷಿಯಾಗಿಯು ನಾವು ಈ ಮಾತನ್ನು ಉದಾಹರಿಸುವುದು ಉಂಟು. ಹಾಗೆ ನೋಡಿದರೆ ಜನಪದ ಸಾಹಿತ್ಯದ ಪ್ರಾಚೀನತೆಯನ್ನು ಅಕ್ಷರದ ದಾಖಲೆಗಳಲ್ಲಿ ಹುಡುಕಿಕೊಳ್ಳುವುದು ನಮ್ಮ ಚರಿತ್ರೆ ಕಲ್ಪನೆಯ ದುರಂತವೆ ಸರಿ. ಆದರೂ ಶ್ರೀವಿಜಯನು ಸಾವಿರ ವರ್ಷಗಳ ಹಿಂದೆ ಇಂತಹ ಮಾತನ್ನು ಆಡಿದ್ದಾನೆ ಎಂಬುದನ್ನು ಗೌರವ ಮತ್ತು ಹೆಮ್ಮೆಯಿಂದಲೆ ಕಾಣಬೇಕಾಗಿದೆ. ಮಹಾಕಾವ್ಯವೆಂದರೆ ಏನು ಸಾಮಾನ್ಯವೆ? ಅದೇನು 'ಬೀದಿವರೆಯ ಬೀರನ ಕಥೆಯೆ? ಗೊರವರ ಡುಂಡುಚಿಯೆ?' ಎಂದು ಕೇಳುತ್ತಿದ್ದ ಕಾಲಕ್ಕು ಮೊದಲೆ ಕುರಿತೋದದೆಯೆ ಕಾವ್ಯಪ್ರಯೋಗ ಮಾಡುವ ಪ್ರತಿಭೆಯನ್ನು ಶ್ರೀವಿಜಯನು ಗೌರವದಿಂದ ಕಂಡ ಎಂಬುದೇ ಅಭಿನಂದನಾರ್ಹವಾದದ್ದು. ಇರಲಿ,

ನಮ್ಮಲ್ಲಿ ಜನಪದ ಸಾಹಿತ್ಯವನ್ನು ಅಕ್ಷರದ ಮೂಲಕ ದಾಖಲಿಸುವ ಕೆಲಸ ಬಹು ವೇಗವಾಗಿ ಇಂದು ನಡೆಯುತ್ತ ಇದೆ. ಹಾಗಾಗಿಯೆ ಸಾವಿರಾರು ಗಾದೆಗಳು, ಒಗಟುಗಳು, ತತ್ವಪದಗಳು, ಲಾವಣಿಗಳು, ಸ್ವರಪದಗಳು, ದೇಶಿದುಂದುಮೆ ಪದಗಳು, ಅಜರ್ುನಜೋಗಿ ಹಾಡುಗಳು ಹೀಗೆ ಅಸಂಖ್ಯ ಸಾಹಿತ್ಯ ಸಂಗ್ರಹವಾಗಿದೆ. ಸಂಗ್ರಹವಾಗುತ್ತಿದೆ. ಜನಪದ ಅಕಾಡೆಮಿಯು ಜನಪದ ಕಲೆ, ಸಾಹಿತ್ಯ, ಸಂಸ್ಕೃತಿಯ ಪೋಷಣೆ-ವಿಶ್ಲೇಷಣೆ-ದಾಖಲಾತಿಗಾಗಿ ಕ್ರಿಯಾಶೀಲವಾಗಿದೆ. ಜನಪದ ವಿಶ್ವವಿದ್ಯಾಲಯ ಕೂಡ ಈಗಾಗಲೆ ಅಸ್ತಿತ್ವಕ್ಕೆ ಬಂದಿದೆ. ಹಲವಾರು ವಿಶ್ವವಿದ್ಯಾಲಯಗಳಲ್ಲಿ ಜನಪದ ಸಾಹಿತ್ಯವು ಈಗಾಗಲೆ ಸಂಶೋಧನೆ, ಅಧ್ಯಯನಗಳಿಗೆ ಗುರಿಯಾಗುತ್ತಿದೆ. ಮಂಟೆಸ್ವಾಮಿ ಕತೆ, ಮಾದಪ್ಪನ ಕತೆ, ಗೊಂಡರ ರಾಮಾಯಣ, ಜನಪದ ಮಹಾಭಾರತ, ಬಿಳಿಗಿರಿರಂಗನ ಕಾವ್ಯ, ಸಿರಿಪಾಡ್ದನ, ಜುಂಜಪ್ಪನ ಕಾವ್ಯ, ಕೃಷ್ಣಗೊಲ್ಲರ ಕಾವ್ಯ ಹೀಗೆ ಹತ್ತು ಹಲವು ಮೌಖಿಕ ಮಹಾಕಾವ್ಯಗಳು ಅಕ್ಷರದಲ್ಲಿ ದಾಖಲಾಗಿವೆ. ಶಿಷ್ಟ ಸಾಹಿತ್ಯದ ಎದುರಿಗೆ ಅದರ ನೂರಾರು ಪಟ್ಟು ದೊಡ್ಡದಾದ ಜನಪದ ಸಾಹಿತ್ಯ ನಮ್ಮೆದುರು ಅಕ್ಷರಕ್ಕೆ ಬಂದು ಬಿದ್ದಿದೆ. ಬೀಳುತ್ತ ಇದೆ. ಅದನ್ನೆಲ್ಲ ವಗರ್ೀಕರಿಸಿ, ತಾತ್ವೀಕರಿಸಿ ಶೈಕ್ಷಣಿಕ ಶಿಸ್ತೀಕರಣಕ್ಕೆ ಒಳಪಡಿಸುವ ಕೆಲಸ ಸ್ವಲ್ಪ ಮಾತ್ರ ಆಗಿದೆ. ಅಪಾರವಾದ ಕೆಲಸ ಬಾಕಿಯಿದೆ. ಹೀಗೆ ನಮ್ಮ ಕುರಿತೋದದ ಕಾವ್ಯಪ್ರಯೋಗಮತಿ ಎಂಥದ್ದು ಮತ್ತು ಎಷ್ಟು ವಿಸ್ತಾರವಾದದ್ದು ಎಂಬುದಕ್ಕೆ ನಮ್ಮಲ್ಲಿಂದು ಅಪಾರ ಉದಾಹರಣೆಗಳು ಕಣ್ಣೆದುರು ಇವೆ ಎಂಬುದು ಮಾತ್ರ ನಿಜ.

ನಮ್ಮಲ್ಲಿಂದು ಯಾವುದನ್ನು ಸಾಹಿತ್ಯ ಪರಂಪರೆ ಎಂದು ಬಿಂಬಿಸಲಾಗುತ್ತಿದೆಯೊ ಆ ಸಾಹಿತ್ಯ ಪರಂಪರೆಯು ನಿಜವಾಗಿಯೂ ನಮ್ಮ ಪರಂಪರೆಯೊ? ಯಾವುದನ್ನು ನಮ್ಮ ಸಾಹಿತ್ಯ ಚರಿತ್ರೆ ಎಂದು ಬಿಂಬಿಸಲಾಗುತ್ತಿದೆಯೊ ಆ ಚರಿತ್ರೆ ನಿಜವಾಗಿಯೂ ನಮ್ಮೆಲ್ಲರ ಸಾಹಿತ್ಯ ಚರಿತ್ರೆಯೊ? ಇದು ನಮ್ಮ ಅಂಚಿನ ಜನರು ಸೃಷಟಿಸಿದ ಸಾಹಿತ್ಯವನ್ನು ಒಳಗೊಂಡಿದೆಯೊ? ಈ ಪರಂಪರೆ ಅಥವಾ ಸಾಹಿತ್ಯ ಚರಿತ್ರೆಯ ಕಲ್ಪನೆಯಲ್ಲಿ ಸಾಮಾಜಿಕ ನ್ಯಾಯದ ಪ್ರಶ್ನೆಗಳು ಇವೆಯೊ? ಈ ಬಗೆಗೆ ನಾವು ಗಂಭೀರವಾಗಿ ಚಿಂತಿಸಬೇಕಿದೆ. ಎಂ.ಎ.ರಾಮಾನುಜ ಅಯ್ಯಂಗಾರ್ ಆಗಲೀ, ಬಿ.ಎಂ.ಶ್ರೀ ಆಗಲೀ, ಆರ್.ನರಸಿಂಹಾಚಾರ್ ಆಗಲೀ, ರಂ.ಶ್ರೀ.ಮುಗಳಿಯವರಾಗಲೀ ಇವರೆಲ್ಲರೂ 19ನೆ ಶತಮಾನದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಗಳನ್ನು ಬರೆಯುವಾಗ ಒಗ್ಗರಣೆಗೂ ಕೂಡ ಜನಪದ ಸಾಹಿತ್ಯವನ್ನು ತಮ್ಮ ಚರಿತ್ರೆಯಲ್ಲಿ ಸೇರಿಸಿಕೊಳ್ಳಲಿಲ್ಲ! ಅಷ್ಟೇ ಅಲ್ಲ ವೈವಿಧ್ಯಮಯವಾದ ಜನಪದ ಸಾಹಿತ್ಯ ಚರಿತ್ರೆಗಳನ್ನು ಬರೆಯುವ ಕೆಲಸವನ್ನು ನಾವು ಯಾರೂ ಇನ್ನೂ ಮಾಡಿಲ್ಲ! ಸಿರಿಯಜ್ಜಿ, ಬುರ್ರಕಥಾ ಈರಮ್ಮ, ಬನ್ನೂರು ಕೆಂಪಮ್ಮ, ತಂಬೂರಿ ರಾಚಯ್ಯ, ಹೆಬ್ಬಣಿ ಮಾದಯ್ಯ, ಪುಟ್ಟಿಸಿದ್ಧಸೆಟ್ಟಿ ಮೊದಲಾದ ನೂರಾರು ಜನ ಜನಪದ ಪರಂಪರೆಯ ಕವಿಗಳು ಹಾಡಿದ ಮಹಾಕಥನಗಳನ್ನು ನಾವಿಂದು ದಾಖಲು ಮಾಡಿಕೊಂಡಿದ್ದೇವೆ. ಆದರೆ ಇವರ್ಯಾರನ್ನೂ ನಾವು ಕವಿಗಳು ಎಂದು ಕರೆಯಲು ಸಿದ್ಧರಿಲ್ಲ! ಪಂಪ, ರನ್ನ, ಲಕ್ಷ್ಮೀಶ, ಕುಮಾರವ್ಯಾಸ, ಅಲ್ಲಮ, ಅಕ್ಕ ಇಂಥವರ ಸಾಲಿನಲ್ಲಾಗಲೀ; ಕುವೆಂಪು, ಕಾರಂತ, ಬೇಂದ್ರೆ, ಅಡಿಗ, ಗೀತಾ ನಾಗಭೂಷಣ, ವೈದೇಹಿ, ಸಿದ್ಧಲಿಂಗಯ್ಯ, ದೇವನೂರು ಮಹಾದೇವ, ಪ್ರತಿಭಾ, ಶಿವಪ್ರಕಾಶ ಇಂಥವರ ಸಾಲಿನಲ್ಲಾಗಲೀ ಇವರನ್ನು ನಿಲ್ಲಿಸಿಕೊಳ್ಳಲು ಸಿದ್ಧರಿಲ್ಲ! ಯಾಕೆ?

'ಕನ್ನಡದಾ ನಾಡವರ್ಗಳ್ ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್' ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ ಆದರೆ ಹೀಗೆ ಕುರಿತು ಓದದೆ ಕಾವ್ಯ ಪ್ರಯೋಗಿಸಿದ ಕವಿಗಳನ್ನು ನಾವು ಯಾಕೆ ಮುಖ್ಯ ಕವಿಗಳೆಂದು ಪರಿಗಣಿಸುತ್ತಿಲ್ಲ? ಅವರು ತಲೆಮಾರಿನಿಂದ ತಲೆಮಾರಿಗೆ ಪರಂಪರಾನುಗತವಾಗಿ ರವಾನಿಸಿಕೊಂಡು ಬಂದ ಕಾವ್ಯಗಳನ್ನು ಯಾಕೆ ಮುಖ್ಯ ಕಾವ್ಯಗಳೆಂದು ಪರಿಗಣಿಸುತ್ತಿಲ್ಲ? ಈ ಹಿನ್ನೆಲೆಯಲ್ಲಿ ನಾವು ಪಶ್ಚಿಮ ಪ್ರಣೀತ ಆಧಾರವಾದಿ ಚರಿತ್ರೆ ಕಲ್ಪನೆಯಿಂದ ಬಿಡುಗಡೆ ಪಡೆಯಬೇಕಿದೆ. ಹಾಗೆಯೆ ಖಾಸಗಿ ಕಾಪಿರೈಟ್ವಾದಿ ಸಾಹಿತ್ಯ ಕಲ್ಪನೆಯಿಂದ ಬಿಡುಗಡೆ ಪಡೆಯಬೇಕಿದೆ. ಹಾಗೆ ಬಿಡುಗಡೆಗೊಂಡು ನಮ್ಮ ಜನಪದ ಸಾಹಿತ್ಯ ಮತ್ತು ಜೀವನಕ್ರಮಗಳನ್ನು ಅನುಸಂಧಾನಕ್ಕೆ ಎತ್ತಿಕೊಳ್ಳಬೇಕಿದೆ.

ಇದೇ ಸಂದರ್ಭದಲ್ಲಿ ನನ್ನ ಒಂದು ಅನುಭವವನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕು ಅನ್ನಿಸುತ್ತಿದೆ. ಕಳೆದ ವರ್ಷ ನಮ್ಮ ಕಾಲೇಜಿನ ಮೂರನೆ ಸೆಮಿಸ್ಟರ್ನ ಕನ್ನಡ ಸಾಹಿತ್ಯದ ವಿದ್ಯಾಥರ್ಿಗಳಿಗೆ ನಿಮ್ಮ ನಿಮ್ಮ ತಾಯಂದಿರನ್ನು ಕುರಿತು 'ಅವ್ವ' ಎಂದು ಹೆಸರು ಕೊಟ್ಟು ಪ್ರತಿಯೊಬ್ಬರೂ ಒಂದೊಂದು ಕವಿತೆಯನ್ನು ಬರೆದುಕೊಡಿ ಎಂದು ಹೇಳಿದೆ. ಒಂದು ಗಂಟೆಯ ನಂತರ 63 ಜನ ವಿದ್ಯಾಥರ್ಿಗಳು ತಮ್ಮ ಅವ್ವಂದಿರನ್ನು ಕುರಿತು 63 ಕವಿತೆಗಳನ್ನು ಬರೆದಿದ್ದರು. ಅವುಗಳನ್ನು ಒಂದೊಂದೆ ಓದಿದಾಗ ನನಗೆ ನಿಜಕ್ಕು ಆಶ್ಚರ್ಯವಾಯಿತು! ಯಾಕೆಂದರೆ 5-6 ಜನರನ್ನು ಬಿಟ್ಟರೆ ಮಿಕ್ಕವರೆಲ್ಲ ತಾವು ಕೇಳಿದ ಜನಪದ ಗೀತೆಯನ್ನೊ ಅಥವಾ ಚಿತ್ರಗೀತೆಯನ್ನೊ ಅನುಕರಿಸಿ ಪದ್ಯ ಬರೆದಿದ್ದರು! ಇಷ್ಟು ವರ್ಷ ಇವರು ಶಾಲೆಗಳಲ್ಲಿ ಓದಿಕೊಂಡು ಬಂದ ಕಾವ್ಯ ಇವರಿಗೆ ಯಾಕೆ ಅನುಕರಣೀಯ ಮಾದರಿ ಎನಿಸಲಿಲ್ಲ? ಕವಿತೆಯನ್ನು ಬರೆಯಲು ಹೊರಡುವ ಯಾವುದೆ ಕವಿಗೆ ನಾವು ಈಗಾಗಲೆ ಬರೆದಿರುವವರನ್ನು ಓದಿಕೊಳ್ಳಿ ಎಂದು ಹೇಳುವುದುಂಟು. ಅಲ್ಲದೆ ಯಾವುದೇ ಕವಿ ತನ್ನದೇ ವಿಶಿಷ್ಟ ಕಾವ್ಯ ನೀಡಬೇಕಾದರೆ ಅವನಿಗೆ ಮೊದಲು ಪರಂಪರೆಯ ತಿಳುವಳಿಕೆ ಚೆನ್ನಾಗಿ ಇರಬೇಕು ಎಂದು ಬಲವಾಗಿ ನಾವಿಂದು ನಂಬುತ್ತೇವೆ ಕೂಡ. ಆದರೆ ನನ್ನ ವಿದ್ಯಾಥರ್ಿಗಳು ಯಾಕೆ ಶಿಷ್ಟ ಸಾಹಿತ್ಯ ಪರಂಪರೆಯನ್ನು ತಿಳಿದಿದ್ದರೂ ಜನಪದ ಮತ್ತು ಚಿತ್ರಗೀತೆಗಳನ್ನು ಅನುಕರಿಸಿದರು? ನಾವಿಂದು ಯಾವುದನ್ನು ನಮ್ಮ ಸಾಹಿತ್ಯ ಪರಂಪರೆ ಎಂದು ಕಲಿಸುತ್ತಿದ್ದೇವೆಯೊ ಅದು ನಿಜಕ್ಕು ಅವರೆಲ್ಲರ ಪರಂಪರೆಯೊ ಅಥವಾ ಅವರ ಮೇಲೆ ನಾವು ಹೇರುತ್ತಿರುವ ಒಂದು ಪರಂಪರೆಯೊ?

ಚಿತ್ರಗೀತೆಗಳು ತಮ್ಮ ಮಾರುಕಟ್ಟೆ ರಾಜಕಾರಣದ ಮೂಲಕ ಬಲವಂತವಾಗಿ ಹಾಗೂ ಅನಿವಾರ್ಯ ಎಂಬಂತೆ ಗಾಢವಾಗಿ ಹೇಗೆ ನೀಡಲ್ಪಡುತ್ತಿದ್ದಾವೊ ಹಾಗೆ ನಮ್ಮವರು ಕುರಿತೋದದೆ ಕಟ್ಟಿರುವ ಸಾಹಿತ್ಯವನ್ನು ನಾವು ನೀಡುತ್ತಿದ್ದೇವೆಯೆ? ನಮಗೆ ಯಾವುದು ಬೇಕಾಗಿದೆಯೊ ಅದನ್ನು ಪಡೆಯುವುದಕ್ಕಿಂತ ನಮಗೆ ಯಾವುದನ್ನು ನೀಡಲಾಗುತ್ತಿದೆಯೊ ಅದನ್ನೆ ಪಡೆಯಬೇಕಾದ ಅನಿವಾರ್ಯತೆಯನ್ನು ಇಂದು ಸೃಷ್ಟಿಸಲಾಗುತ್ತಿಲ್ಲವೆ? ನಮಗೇನು ಬೇಕೆಂದು ನಾವು ನಿರ್ಧರಿಸುವಷ್ಟು ಜಗತ್ತು ಸರಳವಾಗಿ ಇಂದು ಇದೆಯೆ? ನಮ್ಮ ಮನಸ್ಸಿನ ಮೂಗುದಾರಗಳನ್ನು ಯಾವ ವಾಣಿಜ್ಯದ ರಾಜಕಾರಣಗಳು ಹಿಡಿದಿವೆ? ಯಾವ ಸಾಂಸ್ಕೃತಿಕ ರಾಜಕಾರಣಗಳು ಹಿಡಿದಿವೆ? ಅಲ್ಲದೆ ಒಂದು ಸಾಹಿತ್ಯ ಪರಂಪರೆ, ಒಂದು ಸಾಹಿತ್ಯ ಚರಿತ್ರೆ ಎನ್ನುವುದು ನಮ್ಮಲ್ಲಿ ಎಂದಾದರು ಇತ್ತೆ? ಇಂದಾದರು ಇದೆಯೆ? ನಮ್ಮಲ್ಲಿನ ಹಲವು ಸಾಹಿತ್ಯ ಪರಂಪರೆಗಳನ್ನು ಸಮಾನವಾಗಿ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ನಾವು ನೋಡುತ್ತಿದ್ದೇವೆಯೆ? ಅಥವಾ ಒಂದು ಸಂಸ್ಕೃತಿ ಒಂದು ಪರಂಪರೆಯ ಕಲ್ಪನೆಯನ್ನು ಹೇರುತ್ತಿದ್ದೇವೆಯೆ? ಈ ಎಲ್ಲ ಪ್ರಶ್ನೆಗಳನ್ನೂ ಕೂಡ ನಾವಿಂದು ಗಂಭೀರವಾಗಿ ಕೇಳಿಕೊಳ್ಳಬೇಕಿದೆ.

ಡಾ.ರಾಮಲಿಂಗಪ್ಪ ಟಿ.ಬೇಗೂರು
ಮಹಾರಾಣಿ ಕಲಾ ಕಾಲೇಜು
ಶೇಷಾದ್ರಿ ರಸ್ತೆ, ಬೆಂಗಳೂರು-01
begur41@gmail.com
 

2 ಕಾಮೆಂಟ್‌ಗಳು:

  1. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  2. ಸಿನೆಮ ಗೀತೆ ಗಳ ಬಗ್ಗೆ ನಿಮಗಿರುವ ಅನಾದರ ಆಶ್ಚರ್ಯ ಹುಟ್ಟಿಸುತ್ತದೆ. ಜನಪ್ರಿಯ ಸಂಸ್ಕೃತಿ ಕೆಟ್ಟದ್ದು. ಜನಪದ ಸಂಸ್ಕೃತಿ ಒಳ್ಳೆಯದ್ದೆ? ಇದು ಶ್ರೇಷ್ಟತೆಯ ವ್ಯಸನವಲ್ಲದೆ ಇನ್ನೇನು?

    ಪ್ರತ್ಯುತ್ತರಅಳಿಸಿ